ಚಂದ್ರನ ಮೇಲೆ ಹಳ್ಳಿ ನಿರ್ಮಾಣಕ್ಕೆ ಇಎಎಸ್ ತಯಾರಿ, ಅಲ್ಲಿ ಟೂರಿಸಂ, ಗಣಿಗಾರಿಕೆಗೂ ಅವಕಾಶ ಉಂಟೂರೀ!

ಡಿಜಿಟಲ್ ಕನ್ನಡ ಟೀಮ್

ಚಂದ್ರನ ಮೇಲೆ ವಾಸ ಮಾಡಬೇಕು, ಅಲ್ಲೊಂದು ಕಾರ್ಯನಿರ್ವಹಣೆ ಕೇಂದ್ರ ಸ್ಥಾಪಿಸಬೇಕು ಅನ್ನೋದು ವಿಜ್ಞಾನದ ಒಂದು ಕಲ್ಪನೆ. ಈ ಕಲ್ಪನೆಯ ಸಾಕಾರಕ್ಕೆ ಯೂರೋಪ್ ಬಾಹ್ಯಾಕಾಶ ಸಂಸ್ಥೆ (ಇಎಸ್ಎ) ಮುಂದಾಗಿದೆ. ಚಂದ್ರನ ಮೇಲೆ ಶಾಶ್ವತ ಕಾರ್ಯನಿರ್ವಹಣೆ ಕೇಂದ್ರ ನಿರ್ಮಿಸಿ, ಅದಕ್ಕೆ ‘ಮೂನ್ ವಿಲೇಜ್’ (ಚಂದ್ರವಳ್ಳಿ) ಎಂದು ಹೆಸರಿಡಲು ಉದ್ದೇಶಿಸಿದೆ.

ಇಲ್ಲಿ ಹಳ್ಳಿ ಎಂದರೆ ನಮ್ ಭೂಮಿ ಮೇಲಿರೋ ಹಳ್ಳಿಗಳಂತೆ ಅಲ್ಲ. ಒಂದಷ್ಟು ಮನೆಮಠ, ಚರ್ಚ್, ಮಸೀದಿ ಕಟ್ಟೋದು, ಬೇಸಾಯ ಮಾಡೋದಲ್ಲ. ಬದಲಿಗೆ ವಿಜ್ಞಾನ ಹಾಗೂ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಸಂಶೋಧನೆಗಳನ್ನು ಮಾಡಲು ಕಾರ್ಯಸ್ಥಾನ ನಿರ್ಮಾಣ ಮಾಡಿ, ನಿರ್ವಹಣೆ ಮಾಡಲಾಗುತ್ತದೆ.

‘ನ್ಯೂ ಜನರೇಷನ್ಸ್ ಸ್ಪೇಸ್ ಲೀಡರ್ಸ್ ಪ್ಯಾನೆಲ್: ದ ಫ್ಯೂಚರ್ ಆಫ್ ಹ್ಯೂಮನ್ಸ್ ಸ್ಪೇಸ್ ಲೈಟ್’ ಕುರಿತ ವಿಚಾರ ಸಂಕಿರಣದಲ್ಲಿ ಇಎಸ್ಎ ಪ್ರಧಾನ ನಿರ್ದೇಶಕ ಜೊಹಾನ್ ಡೈರಿಚ್ ವಾರ್ನರ್ ಈ ವಿಷಯ ಅರುಹಿದ್ದಾರೆ.

ನಿಜ, ಚಂದ್ರನ ಮೇಲೆ ಮನುಷ್ಯ ಕಾಲಿಟ್ಟು 50 ವರ್ಷಗಳು ಕಳೆದಿವೆ. ಈಗ ಮುಂದಿನ ಹೆಜ್ಜೆ, ಚಂದ್ರನ ಮೇಲೆ ನೆಲೆ ಕಂಡುಕೊಳ್ಳುವುದು. ಇದನ್ನು ಪೂರ್ಣ ಪ್ರಮಾಣದಲ್ಲಿ ಸಾಧಿಸಲು ಎಲ್ಲ ದೇಶಗಳ ಕೊಡುಗೆ ಮಹತ್ವದ್ದಾಗಲಿದೆ. ಇಲ್ಲಿ ಕೇವಲ ವಿಜ್ಞಾನ ಅಷ್ಟೇ ಅಲ್ಲ, ಗಣಿಗಾರಿಕೆ, ಪ್ರವಾಸೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳನ್ನು ಒಂದೆಡೆ ಕಲೆಹಾಕುವುದು ಈ ಹಳ್ಳಿ ನಿರ್ಮಾಣದ ಹಿಂದಿನ ಗುರಿ. ಈ ಹಳ್ಳಿ ನಿರ್ವಹಣೆಗೆ ಮಾನವಸಹಿತ ಹಾಗೂ ರೊಬೊಟ್ ಆಧರಿತ ಕಾರ್ಯವ್ಯವಸ್ಥೆ ರೂಪಿಸಲಾಗುವುದು. ಚಂದ್ರನಲ್ಲಿರುವ ಸಂಪನ್ಮೂಲಗಳನ್ನೇ ಬಳಸಿಕೊಂಡು 3ಡಿ ಪ್ರಿಂಟ್  ಕೇಂದ್ರ, ಬಾಹ್ಯಾಕಾಶ ತಜ್ಞರು ತೆರಳಿ ಕೆಲಸ ನಿರ್ವಹಿಸಲು ಬೇಕಾದ ತಾಣ ನಿರ್ಮಾಣ ಸದ್ಯದ ಯೋಜನೆ. ಒಂದೇ ಸ್ಥಳದಲ್ಲಿ ಬಹುಪಯೋಗಿ ವ್ಯವಸ್ಥೆ ಕಲ್ಪಿಸುವ ಜಾಗತಿಕ ಮಟ್ಟದ ಯೋಜನೆ ಇದಾಗಿದ್ದು, ಇದಕ್ಕೆ ಎಲ್ಲರೂ ಶ್ರಮಿಸಬೇಕು ಎಂಬುದು ಇಎಸ್ಎ ಅಭಿಮತ.

ಸದ್ಯಕ್ಕೆ, 2030ರ ವೇಳೆಗೆ ಮಂಗಳನ ಮೇಲೆ ಮಾನವನನ್ನು ಕಳಿಸುವ ಯೋಜನೆಯಲ್ಲಿ ನಾಸಾ ತಲ್ಲೀನವಾಗಿದೆ. ಚಂದ್ರ ಭೂಮಿಗೆ ಹತ್ತಿರವಿರುವ ಗ್ರಹ. ಹಾಗಾಗಿ ಮೊದಲು ಚಂದ್ರನ ಮೇಲೆ ಮನುಷ್ಯ ಪೂರ್ಣ ಪ್ರಮಾಣದಲ್ಲಿ ನೆಲೆ ಕಂಡುಕೊಳ್ಳಬೇಕು. ನಂತರ ಚಂದ್ರನ ಮೂಲಕ ಮಂಗಳನತ್ತ ಸಾಗಬೇಕು. ಆದರೆ ಮಾನವನಿಹೆ ಮಂಗಳನೇ ಅಂತಿಮ ಗುರಿಯಲ್ಲ. ಮನುಷ್ಯ ಮನಸ್ಸು ಮಾಡಿದರೆ ಇನ್ನು ದೂರಕ್ಕೆ ಸಾಗಬಹುದು. ಈ ಪ್ರಕ್ರಿಯೆ ಹಂತಹಂತವಾಗಿ ಸಾಗಬೇಕು’ ಎಂಬುದು ವಾರ್ನರ್ ವಾದ.

Leave a Reply