ಬೂದಿಮನೆಯಲ್ಲಿ ಬದುಕು ಬಟಾಬಯಲಾದ ಉತ್ತರಖಂಡ ಕಾನನ ಸುಂದರಿ ನಿಟ್ಟುಸಿರಲ್ಲಿ ಹೊಮ್ಮುತ್ತಿದೆ ಸಮಸ್ಯೆಗಳ ಸರಮಾಲೆ

ಡಿಜಿಟಲ್ ಕನ್ನಡ ಟೀಮ್

ನಾಲ್ಕು ದಿನಗಳ ಹಿಂದೆ ಇಲ್ಲಿದ್ದುದ್ದು ಬರೀ ಹಸಿರೇ. ಎಲ್ಲಿ ನೋಡಿದರೂ ಅದರದೇ ಉಸಿರು. ಹಸಿರು ಬಿಟ್ಟು ಬೇರೆ ಮಾತೂ ಇಲ್ಲ, ನೋಟವೂ ಇಲ್ಲ. ಆದರೆ ಈಗ ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ಬೆಂಕಿ-ಬೂದಿಯ ಓಡಾಟ, ಒಡನಾಟ. ಸುಟ್ಟು ಕರಕಲಾದ ಮರಗಿಡಗಳ ನಡುವೆ ಬದುಕು ಬಟಾ ಬಯಲು ಮಾಡಿಕೊಂಡಿರುವ ಈ ಮುಗ್ದ ಕಾನನ ಸುಂದರಿಗೀಗ ನಿಟ್ಟುಸಿರೇ ಸಂಗಾತಿ.

ನಿಜ, ಮೂರ್ನಾಲ್ಕು ದಿನಗಳಿಂದ ಹೊತ್ತಿ ಉರಿಯುತ್ತಿರುವ ಉತ್ತರಖಂಡದ ಅರಣ್ಯ ಪ್ರದೇಶವೀಗ ಬರೀಯ  ಬೂದಿಮನೆ. ಕರಿಛಾಯೆಯಡಿಯ ಅದರ ಮೌನರೋದನ ಭವಿಷ್ಯದ ಆನಾಹುತಗಳ ಪ್ರತಿಬಿಂಬ. ಆ ಹಸಿರು ಸಾಮ್ರಾಜ್ಯವನ್ನು ಎಲ್ಲಿಂದ ತರುವುದು ಹೇಗೆ ಕಟ್ಟುವುದು ಎನ್ನುವ ಉತ್ತರವಿಲ್ಲದ ಪ್ರಶ್ನೆಗಳ ಸಂಕೇತ.

ಹೌದು, ತಜ್ಞರು ಹೇಳುತ್ತಾರೆ – ಉತ್ತರಖಂಡ ಅರಣ್ಯ ಅಗ್ನಿಕುಂಡವಾಗಿರುವುದು ನೇರ ಪರಿಣಾಮ ಆಗುವುದು ಹಿಮಾಲಯದ ಮೇಲೆ. ಅದರ ಬೇಗೆಗೆ ಹಿಮಚ್ಛಾದಿತ ಪರ್ವತಗಳು ತ್ವರಿತಗತಿಯಲ್ಲಿ ಕರಗಿ ಹೋಗುತ್ತವೆ. ಕಾಡ್ಗಿಚ್ಚಿನ ಹೊಗೆ ಮತ್ತು ಬೂದಿ ಹೊರಸೂಸುವ ಕಪ್ಪು ಇಂಗಾಲ (ಬ್ಲಾಕ್ ಕಾರ್ಬನ್) ಇದಕ್ಕೆ ಕಾರಣ. ಅಷ್ಟೇ ಅಲ್ಲ, ಈ ಕಪ್ಪು ಇಂಗಾಲದ ಪರಿಣಾಮವಾಗಿ ನದಿಗಳ ನೀರು ಹೆಚ್ಚು ಮಲೀನವಾಗಲಿದೆ. ಉತ್ತರ ಭಾರತಾದ್ಯಂತ ತಾಪಮಾನ 0.2 ರಷ್ಟು ಹೆಚ್ಚಾಗಲಿದೆ. ಇದರ ಪ್ರತಿಕೂಲ ಪರಿಣಾಮ ಮುಂಗಾರು ಮಳೆಯ ಮೇಲೂ ಆಗಲಿದೆ. ಕಡಿಮೆ ಎತ್ತರದ ಹಿಮಪರ್ವತಗಳ ಮೇಲೆ ಹೆಚ್ಚು ಪ್ರಭಾವ ಬೀರಲಿದ್ದು, ಪ್ರಮುಖವಾಗಿ ಗಂಗೊತ್ರಿ, ಮಿಲಂ, ಸುಂದರ್ ದುಂಗ, ನೆವ್ಲಾ ಮತ್ತು ಚೀಪಾ ಹಿಮನದಿಗಳು ಶೀಘ್ರ ಅನಾಹುತಕ್ಕೆ ಒಳಗಾಗಲಿವೆ.

ಪರಿಣಾಮ ಮತ್ತು ಪರಿಹಾರಗಳ ಹಿನ್ನೆಲೆಯಲ್ಲಿ ಹಿಮಾಲಯ ಪರಿಸರ ಮತ್ತು ಅಭಿವೃದ್ಧಿ ಸಂಸ್ಥೆಯ ವಿಜ್ಞಾನಿ ವಲ್ಲಭ್ ಪಂತ್ ನೇತೃತ್ವದ ತಂಡ ಹಲವು ಹಿಮನದಿಗಳ ಪ್ರದೇಶಗಳಿಗೆ ಭೇಟಿ ಕೊಟ್ಟು, ಅಧ್ಯಯನ ನಡೆಸಲಿದ್ದಾರೆ.

ಈ ದುರಂತದಲ್ಲಿ ಭಾರೀ ಹಾನಿ ಉಂಟಾಗಿದ್ದು, ಐವರು ಬೆಂಕಿಗೆ ಬಲಿಯಾಗಿದ್ದಾರೆ. ಸೋಮವಾರ ಬೆಂಕಿ ನಂದಿಸಲು ಬಂದಿದ್ದ ಪೊಲೀಸ್ ಪೇದೆಯೊಬ್ಬ ಬೆಟ್ಟದಿಂದ ಕೆಳಗೆ ಜಾರಿಬಿದ್ದು ಸಾವಿಗಿಡಾಗಿದ್ದಾರೆ. ಬೇಸಿಗೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಬರುತ್ತಿದ್ದ ಪ್ರವಾಸಿಗರು ಈಗ ವಿಮುಖರಾಗುವುದರಿಂದ ಪ್ರವಾಸೋದ್ಯಮಕ್ಕೆ ಪೆಟ್ಟು ಬೀಳಲಿದೆ. ಜೀವನೋಪಾಯಕ್ಕೆ ಪ್ರವಾಸೋದ್ಯಮ ನೆಚ್ಚಿಕೊಂಡಿದ್ದ ಉತ್ತರಖಂಡ ಮತ್ತು ಹಿಮಾಚಲ ಪ್ರದೇಶದ ಜನರು ಚಿಂತಿತರಾಗಿದ್ದಾರೆ. ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ಇಲ್ಲಿನ ಬೆಟ್ಟಪ್ರದೇಶಗಳು ವಾಯುಮಾಲಿನ್ಯಕ್ಕೆ ಈಡಾಗಿರುವುದರಿಂದ ಸ್ಥಳೀಯ ಜನರೂ ಆರೋಗ್ಯಹಾನಿ ಸಾಧ್ಯತೆಗಳ ಬಗ್ಗೆ ಭೀತರಾಗಿದ್ದಾರೆ.

Leave a Reply