ಸುದ್ದಿ ಸಂತೆ: ಮಾಜಿ ಸಚಿವೆ ಚಂದ್ರಪ್ರಭಾ ಅರಸು ನಿಧನ, ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಕಿಂಗ್ ಪಿನ್ ಶಿವಕುಮಾರಯ್ಯ ಬಂಧನ, ನಾಯಕ್ ಹೆಸರು ಮಗದೊಮ್ಮೆ ತಿರಸ್ಕೃತ

ಡಿಜಿಟಲ್ ಕನ್ನಡ ಟೀಮ್

ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಪುತ್ರಿ, ಮಾಜಿ ಸಚಿವೆ ಚಂದ್ರಪ್ರಭಾ ಅರಸು ಅವರು ಮೈಸೂರಿನಲ್ಲಿ ಮಂಗಳವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ 70 ವರ್ಷವಾಗಿತ್ತು. ಒಬ್ಬ ಪುತ್ರ ಮತ್ತು ಪುತ್ರಿ ಇದ್ದಾರೆ. ಪತಿ ಮತ್ತೊಬ್ಬ ಪುತ್ರ ಈ ಹಿಂದೆ ನಿಧನರಾಗಿದ್ದಾರೆ.

ಅರಸು ಅವರ ಎರಡನೆ ಪುತ್ರಿಯಾದ ಚಂದ್ರಪ್ರಭಾ ಅವರು 1983 ಮತ್ತು 1989 ರಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದರು. ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ರೇಷ್ಮ ಸಚಿವರಾಗಿದ್ದರು. 1991 ರಲ್ಲಿ ಮೈಸೂರು ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಅನಾರೊಗ್ಯದಿಂದ ಬಳಲುತ್ತಿದ್ದ ಅವರು ಒಂಬತ್ತು ದಿನಗಳಿಂದ ಮೈಸೂರಿನ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಪಿಯು ಪ್ರಶ್ನೆ ಪತ್ರಿಕೆ ಪ್ರಮುಖ ಆರೋಪಿ ಶಿವಕುಮಾರಯ್ಯ ಬಂಧನ

ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಶಿವಕುಮಾರಯ್ಯ ಅವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಪ್ರಕರಣ ನಡೆದ ತಿಂಗಳ ನಂತರ ಈ ಕಿಂಗ್ ಪಿನ್ ಸಿಕ್ಕಿಬಿದ್ದಿದ್ದಾರೆ.

ಆರೋಪಿ ನಿರಂತರ ಸ್ಥಾನ ಬದಲಿಸುತ್ತಾ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದ. ಅಲ್ಲದೆ ತಮ್ಮವರ ದೂರವಾಣಿ ಸಂಪರ್ಕಕ್ಕೆ ಟೊಮ್ಯಾಟೋ ಎಂಬ ಅಡ್ಡ ಹೆಸರು ಬಳಸುತ್ತಿದ್ದ. 150 ರುಪಾಯಿ ಎಂಬ ಕೋಡ್ ವರ್ಡ್ ಹೇಳಿದರೆ ಮಾತ್ರ ಮಾತು ಮುಂದುವರಿಸುತ್ತಿದ್ದ. ದಿನಕ್ಕೆ ನಾಲ್ಕು ಕಡೆ ಸ್ಥಾನ ಬದಲಿಸುತ್ತಿದ್ದ. ಹೀಗಾಗಿ ಈತನ ಸೆರೆ ತಡವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಲೋಕಾಯುಕ್ತ ಸ್ಥಾನಕ್ಕೆ ಶಿಫಾರಸ್ಸಾಗಿದ್ದ ಎಸ್.ಆರ್ ನಾಯಕ್ ಹೆಸರು ತಿರಸ್ಕೃತ

ಖಾಲಿ ಇರುವ ಲೋಕಾಯುಕ್ತ ಸ್ಥಾನಕ್ಕೆ ಶಿಫರಾಸ್ಸು ಮಾಡಲಾದ ನ್ಯಾಯಮೂರ್ತಿ ಎಸ್.ಆರ್ ನಾಯಕ್ ಅವರ ಹೆಸರನ್ನು ರಾಜ್ಯಪಾಲರು ಮತ್ತೊಮ್ಮೆ ತಿರಸ್ಕರಿಸಿದ್ದಾರೆ. ಆ ಮೂಲಕ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಕಾನೂನು ಆಯೋಗದಲ್ಲಿ ಸೇವೆ ಸಲ್ಲಿಸುತ್ತಿರುವ ನಾಯಕ್ ವಿರುದ್ಧ ಹಲವು ಆರೋಪಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಈ ಹಿಂದೆ ಎರಡು ಬಾರಿ ಅವರ ಹೆಸರು ತಿರಸ್ಕೃತಗೊಂಡಿತ್ತು. ಆದರೆ ಪಟ್ಟಿಗೆ ಬಿದ್ದ ರಾಜ್ಯ ಸರ್ಕಾರ ಮತ್ತೊಮ್ಮೆ ಶಿಫಾರಸ್ಸು ಮಾಡಿತ್ತು.

ನಾಯಕ್ ಹೆಸರನ್ನು ಲೋಕಾಯುಕ್ತ ಹುದ್ದೆಗೆ ಶಿಫಾರಸು ಮಾಡುವಾಗ ಸರ್ಕಾರ ಅವರ ಮೇಲಿರುವ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸ್ವತಃ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳೇ ಈ ಹೆಸರಿಗೆ ವಿರೋಧ ವ್ಯಕ್ತಪಡಿಸಿರುವಾಗ ಸರ್ಕಾರ ಯಾವ ಕಾರಣಕ್ಕಾಗಿ ಶಿಫಾರಸು ಮಾಡಿದೆ ಎಂದು ರಾಜ್ಯಪಾಲರು ತಮ್ಮ ಪತ್ರದಲ್ಲಿ ಸರಕಾರವನ್ನು ಪ್ರಶ್ನೆ ಮಾಡಿದ್ದಾರೆ.

ಒಲಿಂಪಿಕ್ಸ್ ರಾಯಭಾರಿಯಾಗಲು ಸಚಿನ್ ಒಪ್ಪಿಗೆ

ಮುಂಬರುವ ಆಗಸ್ಟ್ ನಲ್ಲಿ ನಡೆಯಲಿರುವ ಪ್ರತಿಷ್ಠಿತ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭಾರತದ ರಾಯಭಾರಿಯಾಗಲು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಒಪ್ಪಿಗೆ ನೀಡಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ರನ್ನು ರಾಯಭಾರಿಯಾಗಿ ಆಯ್ಕೆ ಮಾಡಿದ್ದು ವ್ಯಾಪಕ ವಿವಾದಕ್ಕೆ ಕಾರಣವಾಗಿತ್ತು. ನಂತರ ಐಒಎ ಖ್ಯಾತ ಶೂಟರ್ ಅಭಿನವ್ ಬಿಂದ್ರಾ, ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಜತೆಗೆ ಸಚಿನ್ ತೆಂಡೂಲ್ಕರ್ ಅವರಿಗೆ ರಾಯಭಾರಿಯಾಗಲು ಆಹ್ವಾನ ನೀಡಲಾಗಿತ್ತು. ಇದಕ್ಕೆ ಬಿಂದ್ರಾ ಈ ಹಿಂದೆಯೇ ಒಪ್ಪಿಗೆ ಸೂಚಿಸಿದ್ದು, ಸಚಿನ್ ಮಂಗಳವಾರ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದರೊಂದಿಗೆ ಸಚಿನ್ ಮೂರನೇ ರಾಯಭಾರಿಯಾಗಿದ್ದಾರೆ.

ಉತ್ತರಖಂಡ: ಬಹುಮತ ಸಾಬಿತಿಗೆ ಅವಕಾಶ, ಕೇಂದ್ರಕ್ಕೆ ಸುಪ್ರೀಂ ಸೂಚನೆ

ಉತ್ತರಖಂಡದಲ್ಲಿ ಕೇಂದ್ರ ಸರ್ಕಾರ ಹೇರಿರುವ ರಾಷ್ಟ್ರಪತಿ ಆಳ್ವಿಕೆ ವಿರುದ್ಧದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಬಹುಮತ ಸಾಬಿತಿಗೆ ಅವಕಾಶ ಮಾಡಿಕೊಡುವಂತೆ ಕೇಂದ್ರಕ್ಕೆ ಸೂಚಿಸಿದೆ. ನ್ಯಾಯಾಧೀಶರಾದ ದೀಪಕ್ ಮಿಶ್ರಾ ಮತ್ತು ಶಿವಕಾರ್ತಿ ಸಿಂಗ್ ನೇತೃತ್ವದ ದ್ವಿಸದಸ್ಯ ಪೀಠ, ಈ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಅಟಾರ್ನಿ ಜನರಲ್  ಮುಕುಲ್ ರೋಹಟಗಿ ಅವರಿಗೆ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.

ಪಠಾಣ್ ಕೋಠ್ ಉಗ್ರರ ದಾಳಿಯಲ್ಲಿ ಸರ್ಕಾರ ವೈಫಲ್ಯ ಪ್ರಶ್ನಿಸಿದ ಸಂಸತ್ ಸಮಿತಿ

ಪಠಾಣ್ ಕೋಠ್ ವಾಯುನೆಲೆ ಮೇಲೆ ಉಗ್ರರ ದಾಳಿ ತಡೆಯಲು ವಿಫಲವಾದ ಹಿನ್ನೆಲೆಯಲ್ಲಿ ಸಂಸತ್ ಸಮಿತಿ ಸರ್ಕಾರವನ್ನು ಟೀಕಿಸಿದೆ. ಭಯೋತ್ಪಾದನೆ ವಿರುದ್ಧ ಹೇರಾಡಲು ದೇಶ ಎಡವಿದೆ ಎಂದು ಅದು ಖಾರವಾಗಿ ತಿಳಿಸಿದೆ. ಜ. 2 ರಂದು ನಡೆದ ಈ ದಾಳಿಯ ವೇಳೆ ಪಂಜಾಬ್ ಪೊಲೀಸರ ಕಾರ್ಯಾಚರಣೆಯೂ ಸಂಶಯಾಸ್ಪದವಾಗಿದ್ದು, ಅವರ ಕಾರ್ಯವೈಖರಿ ಪ್ರಶ್ನಾರ್ಹವಾಗಿದೆ ಎಂದು ಸಮಿತಿ ವರದಿಯಲ್ಲಿ ತಿಳಿಸಿದೆ.

ನಾನು ಉದ್ದೇಶಿತ ಸುಸ್ಥಿದಾರನಲ್ಲ: ಮಲ್ಯ

ನಿನ್ನೆಯಷ್ಟೇ ತಮ್ಮ ರಾಜ್ಯಸಭೆ ಸದಸ್ಯತ್ವಕ್ಕೆ ರಾಜಿನಾಮೆ ನೀಡಿರುವ ಉದ್ಯಮಿ ವಿಜಯ್ ಮಲ್ಯ, ‘ನನ್ನನ್ನು ಉದ್ದೇಶಿತ ಸುಸ್ಥಿದಾರ ಎಂದು ಬಿಂಬಿಸುವ ಮುನ್ನ ಸಂತ್ಯಾಂಶ ತಿಳಿಯಿರಿ’ ಎಂದು ತಿಳಿಸಿದ್ದಾರೆ. ಕಿಂಗ್ ಫಿಶರ್ ಏರ್ ಲೈನ್ಸ್ ಬ್ಯಾಂಕ್ ಗಳಿಗೆ ಸಾಲ ಮರುಪಾವತಿ ಮಾಡಬೇಕಾಗಿದೆ ಎಂದು ಒಪ್ಪಿಕೊಂಡಿರುವ ಮಲ್ಯ, ‘ನಾನು ಸಾಲ ಮರುಪಾವತಿಗೆ ಮುಂದಾಗಿದ್ದರೂ ನನ್ನನ್ನು ಸುಸ್ಥಿದಾರ ಎಂದು ಕರೆಯುತ್ತಿರುವುದೇಕೆ’ ಎಂದು ಪ್ರಶ್ನಿಸಿದ್ದಾರೆ.

ಇನ್ನುಳಿದಂತೆ ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲುಗಳು..

  • ಮುಂದಿನ ತಿಂಗಳು ಭಾರತ ಕ್ರಿಕೆಟ್ ತಂಡ ಜಿಂಬಾಬ್ವೆ ಪ್ರವಾಸ ಮಾಡಲಿದೆ. 12 ದಿನಗಳ ಈ ಪ್ರವಾಸದಲ್ಲಿ ಭಾರತ ತಂಡ ಆತಿಥೇಯರ ವಿರುದ್ಧ 3 ಏಕದಿನ ಪಂದ್ಯಗಳ ಸರಣಿ ಹಾಗೂ 3 ಟಿ20 ಪಂದ್ಯಗಳ ಸರಣಿಯನ್ನಾಡಲಿದೆ.
  • ಉತ್ತರ ಸ್ಪೈನ್ ನಲ್ಲಿ 230 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಡೈನೋಸಾರ್ ಹೆಜ್ಜೆ ಗುರುತು ಇದೀಗ ಪತ್ತೆಯಾಗಿದೆ.
  • ಕ್ರಿಕೆಟಿಗರಾದ ವಿರಾಟ್ ಕೋಹ್ಲಿ ಮತ್ತು ಅಜಿಂಕ್ಯ ರಹಾನೆ ಅವರನ್ನು ಕ್ರಮವಾಗಿ ಪ್ರತಿಷ್ಟಿತ ರಾಜೀವ್ ಗಾಂಧಿ ಕೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಕೇಂದ್ರ ಕ್ರೀಡಾ ಇಲಾಖೆಗೆ ಶಿಫಾರಸ್ಸು ಮಾಡಿದೆ.

Leave a Reply