ಹೆಲಿಕಾಪ್ಟರ್ ಹಗರಣದಲ್ಲಿ ಗಟ್ಟಿಯಾಗುತ್ತಿರುವ ‘ಸಿಗ್ನೋರಾ ಸೋನಿಯಾ’- ರಾಹುಲ್ ಕೊಂಡಿ, ರಾಜ್ಯಸಭೆಯಲ್ಲಿ ಪಾರಿಕರ್ ಏನ್ ಮಾತಾಡ್ತಾರೆ ಎಂಬ ಬಗ್ಗೆ ಕೆರಳಿದೆ ಕುತೂಹಲ!

ಡಿಜಿಟಲ್ ಕನ್ನಡ ಟೀಮ್

ಅಗುಸ್ಟಾ ವೆಸ್ಟ್ಲಾಂಡ್ ಹೆಲಿಕಾಪ್ಟರ್ ಹಗರಣದ ಮುಖ್ಯ ಮಧ್ಯವರ್ತಿ ಕ್ರಿಶ್ಚಿಯನ್ ಮಿಶಲ್. ಭಾರತಕ್ಕೆ ಬೇಕಿರುವ ಕ್ರಿಮಿನಲ್. ಈತನ ಲಾಯರ್ ಟೈಮ್ಸ್ ನೌ ವಾಹಿನಿಗೆ ನೀಡಿರುವ ಸಂದರ್ಶನವು ಇದೀಗ ಸೋನಿಯಾ ಗಾಂಧಿ ಮೇಲಿನ ಒತ್ತಡವನ್ನು ಹೆಚ್ಚು ಮಾಡಿದೆ. ಈ ವಕೀಲೆ ಎಲ್ಲರಿಗೂ ಮನದಟ್ಟಾಗಿದ್ದ ತಥ್ಯವನ್ನೇ ಮತ್ತಷ್ಟು ಗಟ್ಟಿಮಾಡುವ ಮಾತುಗಳನ್ನಾಡಿದ್ದಾಳೆ. ಕ್ರಿಶ್ಟಿಯನ್ ಮಿಶಲ್ ತನ್ನ ಲಾಬಿ ಪರ್ವದಲ್ಲಿ ‘ಸಿಗ್ನೋರಾ ಸೋನಿಯಾ’ ಈ ಒಪ್ಪಂದದ ಚಾಲಕ ಶಕ್ತಿ ಅಂತ ಟಿಪ್ಪಣಿಯೊಂದರಲ್ಲಿ ವರ್ಣಿಸಿರುವುದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಉಲ್ಲೇಖಿಸಿಯೋ ಅಂತ ಆಕೆ ಸ್ಪಷ್ಟಪಡಿಸಿದ್ದಾಳೆ.

ರಾಜ್ಯಸಭೆಯಲ್ಲಿ ಇವತ್ತು (ಬುಧವಾರ) ರಕ್ಷಣಾ ಮಂತ್ರಿ ಮನೋಹರ ಪಾರಿಕ್ಕರ್ ಅವರು ಅಗಸ್ಟಾ ಒಪ್ಪಂದದ ಕುರಿತು ಲಭ್ಯವಿರುವ ಮಾಹಿತಿಗಳನ್ನು ಮಂಡಿಸಲಿರುವುದಕ್ಕೆ ಮೊದಲು ನಡೆದ ವಿದ್ಯಮಾನ ಇದಾಗಿದೆ.

ಗೈದೊ ರಾಲ್ಫ್ ಹಚ್ಕೆ ಎಂಬಾತ ಈ ಒಪ್ಪಂದದ ಇನ್ನೊಬ್ಬ ಮಧ್ಯವರ್ತಿ. ಈ ಮನುಷ್ಯನನ್ನು ರಾಹುಲ್ ಗಾಂಧಿ ಸಹಾಯಕ ಕನಿಷ್ಕಾ ಸಿಂಗ್ ಜತೆ ಮೇಳೈಸಿ, ಬಿಜೆಪಿಯ ಸಂಸದ ಕಿರಿತ್ ಸೋಮಯ್ಯ ಇನ್ನೊಂದು ಆಯಾಮವನ್ನು ಎಬ್ಬಿಸುತ್ತಿದ್ದಾರೆ. ಅವರ ಆರೋಪ ಹೀಗಿದೆ- ‘ಸಾಕೆತ್ ನ ಎಂಜಿಎಫ್ ಮೆಟ್ರೊಪಾಲಿಟನ್ ಮಾಲ್ ನಲ್ಲಿ ರಾಹುಲ್ ಗಾಂಧಿ ಎರಡು ಅಂಗಡಿಗಳ ಮಾಲಿಕತ್ವ ಹೊಂದಿದ್ದಾರೆ. ಈ ಎಂಜಿಎಫ್ ಅನ್ನೋದು ಎಮ್ಮಾರ್ ಎಂಜಿಎಫ್ ನ ಒಂದು ಭಾಗ. ಈ ಎಮ್ಮಾರ್ ಎಂಜಿಎಫ್ ಗೆ 2009ರ ಸೆಪ್ಟೆಂಬರ್ ನಲ್ಲಿ ಇದೇ ಗೈದೊ ರಾಲ್ಫ್ ಹಚ್ಕೆ ಮತ್ತು ಗೌತಮ್ ಕೈತಾನ್ ನಿರ್ದೇಶಕರಾಗಿದ್ದರು. ಕಾಮನ್ ವೆಲ್ತ್ ಗೇಮ್ಸ್ ಆಯೋಜನೆಯಲ್ಲಿ ಪಾಲುದಾರಿಕೆ ಹೊಂದಿದ್ದ ಈ ಕಂಪನಿ ಆ ಸಂದರ್ಭದಲ್ಲಿ ಹಗರಣ- ಅವ್ಯವಸ್ಥೆಗಳಿಂದಲೇ ಸುದ್ದಿ ಮಾಡಿತ್ತು. ಹೀಗಾಗಿ ರಾಹುಲ್ ನಂಟಿನ ಆಯಾಮವೂ ಜಾರಿ ನಿರ್ದೇಶನಾಲಯದಿಂದ ಸೂಕ್ತ ತನಿಖೆಗೆ ಒಳಪಡಬೇಕು’ ಎಂಬುದು ಸೋಮಯ್ಯ ಆಗ್ರಹ.

ಆದರೆ ರಾಹುಲ್ ಎಂಜಿಎಫ್ ಮಾಲಿನಲ್ಲಿ ಅಂಗಡಿ ಹೊಂದಿದ್ದು, ನಂತರ ಎಂಜಿಎಫ್ ಗೆ ಅದನ್ನು ಲೀಸಿಗೆ ಕೊಟ್ಟು, ಕೊನೆಯಲ್ಲಿ ಎಂಜಿಎಫ್ ಗೆ ಮಾರಿದ್ದು…. ಈ ವಿದ್ಯಮಾನಕ್ಕೂ ಹೆಲಿಕಾಪ್ಟರ್ ಹಗರಣಕ್ಕೂ ತಳುಕು ಹಾಕುವ ತಂತುಗಳೇನೂ ಇಲ್ಲ. ಆದರೆ ಹೆಲಿಕಾಪ್ಟರ್ ಹಗರಣದ ಮಧ್ಯವರ್ತಿಗಳು ಕಾಂಗ್ರೆಸ್ ನ ಅಗ್ರ ನಾಯಕರ ಮೇಲೆ ಪ್ರಭಾವ ಬೀರುವ ಜಾಗದಲ್ಲಿದ್ದರು ಎಂಬುದಂತೂ ಸ್ಪಷ್ಟವಾಗುತ್ತದೆ.

ಇವೆಲ್ಲದರ ಹಿನ್ನೆಲೆಯಲ್ಲಿ ರಕ್ಷಣಾ ಮಂತ್ರಿ ಪರಿಕ್ಕರ್ ಅವರು ರಾಜ್ಯಸಭೆಯಲ್ಲಿಂದು ಸೋನಿಯಾ ಗಾಂಧಿ ಹೆಸರು ತೆಗೆದುಕೊಳ್ಳುತ್ತಾರಾ? ಕಾಂಗ್ರೆಸ್ ಇದಕ್ಕೆಲ್ಲ ಉತ್ತರಿಸುವ ಗೋಜಿಗೆ ಹೋಗುತ್ತಾ, ಅಥವಾ ಎಂದಿನಂತೆ ರಾಜ್ಯಸಭೆ ನಡೆಯದಂತೆ ಗದ್ದಲ ಎಬ್ಬಿಸುವುದನ್ನೇ ತನ್ನ ಉತ್ತರವಾಗಿಸುತ್ತಾ?

ಮಧ್ಯಾಹ್ನ 2 ಗಂಟೆಗೆ ಉತ್ತರ ಸಿಗಲಿದೆ.

Leave a Reply