ರಾಜ್ಯಸಭೆಯಲ್ಲಿ ಸಿಂಘ್ವಿ ವಕಾಲತ್ತು, ಕಾಂಗ್ರೆಸ್ ಗೆ ಸಿಕ್ತು ತುಸು ತಾಕತ್ತು

ಡಿಜಿಟಲ್ ಕನ್ನಡ ಟೀಮ್

ರಾಜ್ಯಸಭೆಯಲ್ಲಿ ಅಗುಸ್ಟಾ ವೆಸ್ಟ್ಲ್ಯಾಂಡ್ ಪ್ರಕರಣದಲ್ಲಿಕಾಂಗ್ರೆಸ್ ಪರ ಆಕ್ರಮಣಕಾರಿ ವಾದ ಮಂಡಿಸಿ ಸೈ ಎನಿಸಿಕೊಂಡರು ಅಭಿಷೇಕ್ ಮನು ಸಿಂಘ್ವಿ. ಅವರ ವಾದದ ಪ್ರಮುಖಾಂಶಗಳು ಹೀಗಿದ್ದವು.

– ಡೈರಿಯಲ್ಲಿರುವ ಸಂಕೇತಾಕ್ಷರಗಳನ್ನು ಬಳಸಿಕೊಂಡು ಇಂಥವರೇ ದುಡ್ಡು ತೆಗೆದುಕೊಂಡಿದ್ದಾರೆ ಎಂದು ಆರೋಪಿಸುವುದೇ ಮೂರ್ಖತನ. ಎಪಿ ಎಂದರೆ ಅಹ್ಮದ್ ಪಟೇಲ್ ಮಾತ್ರವೇ ಎಂದೇಕೆ ಅಂದುಕೊಳ್ಳುತ್ತೀರಿ? ಇದೇ ತರ್ಕದಿಂದ ಈಗ ಗುಜರಾತ್ ಸರ್ಕಾರ ಮುನ್ನಡೆಸುತ್ತಿರುವವರ ನಾಮಧೇಯದ ಮೊದಲೆರಡು ಅಕ್ಷರಗಳೂ ಇದೇ ಇವೆಯಲ್ಲ? ಎಲ್ಲಕ್ಕಿಂತ ಹೆಚ್ಚಾಗಿ ಜೈನ್ ಹವಾಲಾ ಕೇಸಿನಲ್ಲೇ ಹೆಸರಿನ ಸಂಕೇತಾಕ್ಷರಗಳನ್ನಿಟ್ಟುಕೊಂಡು ಯಾರನ್ನೂ ದೋಷಿ ಎಂದು ಹೇಳಲಾಗುವುದಿಲ್ಲ ಎಂದು ತೀರ್ಪು ಬಂದಿದೆ. ಇದು ಆ ವ್ಯಕ್ತಿ ( ಲಾಲಕೃಷ್ಣ ಆಡ್ವಾಣಿ) ಮಾರ್ಗದರ್ಶಿ ಮಂಡಲ ಸೇರುವುದಕ್ಕಿಂತ ಮೊದಲಾಗಿದ್ದು. ಬಿಜೆಪಿಯವರು ಅಲ್ಲೊಂದು ನೀತಿ, ಇಲ್ಲೊಂದು ನೀತಿ ತೋರಿಸುತ್ತಿರುವುದೇಕೆ?

– ಇಟಲಿ ಕೋರ್ಟಿನ ಎದುರು ಬಂದ ವಿಚಾರಣೆಯಲ್ಲಿ ಆಗಿನ ಸರ್ಕಾರದ ಪ್ರಭಾವಶಾಲಿಗಳ ಪಟ್ಟಿ ಇದೆ ನಿಜ. ಅದನ್ನು ಯಾವ ದೃಷ್ಟಿಯಲ್ಲಿ ನೋಡಬೇಕು? ಹೆಲಿಕಾಪ್ಟರ್ ಇದ್ದಿದ್ದೇ ವಿವಿಐಪಿಗಳ ಸಲುವಾಗಿ. ಹೀಗಾಗಿ ಇದನ್ನು ಉಲ್ಲೇಖಿಸುವಾಗ ಯಾವೆಲ್ಲ ವಿವಿಐಪಿಗಳು ಈ ಹೆಲಿಕಾಪ್ಟರ್ ಉಪಯೋಗಿಸಲಿದ್ದಾರೆ ಎಂಬ ಮಾತು ಅಲ್ಲಿ ಬಂದಿದೆ. ಯಾವುದಾದರೂ ದಾಖಲೆ, ಹಾಗೆ ಹೆಸರಿಸಲಾದವರಿಗೆ ಹಣ ಸಂದಾಯವಾಗಿದೆ ಎಂದು ಹೇಳಿದೆಯೇ? ಇಟಲಿಯ ಮಿಲನ್ ನ ನ್ಯಾಯಾಲಯ ಹಾಗೆ ಹೇಳಿದೆಯೇ? ಇಲ್ಲ. ಯಾವ ಮಧ್ಯವರ್ತಿ ಹಾಚ್ಕೆ ಬಗ್ಗೆ ಚರ್ಚೆಯಾಗುತ್ತಿದೆಯೋ ಆತನಿಗೆ ‘ಎಪಿ’ ಅಂದರೆ ಯಾರೆಂದು ಕೇಳಿದಾಗ ಗೊತ್ತಿಲ್ಲ ಎಂದೇ ಉತ್ತರಿಸಿದ್ದಾನೆ. ಎಪಿ ಎಂದರೆ ಅಹ್ಮದ್ ಪಟೇಲ್ ಎಂದು ವ್ಯಾಖ್ಯಾನಿಸಿರುವುದು ವಿಚಾರಣೆ ನಡೆಸುತ್ತಿದ್ದ ವಕೀಲನೇ ಹೊರತು ಸಾಕ್ಷಿ ಅಲ್ಲ. ಇದು ಕೋರ್ಟ್ ತೀರ್ಪಿನಲ್ಲಿ ಸ್ಪಷ್ಟವಾಗಿದೆ.

– ಕಪ್ಪುಪಟ್ಟಿಗೆ ಸೇರಿಸುವುದು ಹಾಗೂ ಪ್ರತಿಬಂಧಕ ಕ್ರಮ ತೆಗೆದುಕೊಳ್ಳುವುದು ಇವೆರಡರ ನಡುವೆ ತೀರ ಚೌಕಾಶಿ ಮಾಡಬೇಕಿಲ್ಲ. ಫಿನ್ ಮೆಕೆನ್ಶಿಯಾ ಕಂಪನಿಯ ಮೇಲೆ ಪ್ರತಿಬಂಧ ಕ್ರಮ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಅನೌಪಚಾರಿಕವಾಗಿ ಯುಪಿಎ ಪ್ರಾರಂಭಿಸಿತ್ತು. ಆದರೆ ಆಗ ಅಟಾರ್ನಿ ಜನರಲ್ ಅವರನ್ನು ಸಂಪರ್ಕಿಸಿದಾಗ, ಇಟಲಿ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವಾಗ ಈಗಲೇ ಪ್ರತಿಬಂಧಕ ಕ್ರಮ ಸರಿಯಲ್ಲವೆಂಬ ಅಭಿಪ್ರಾಯ ಬಂದಿದ್ದರಿಂದ ತಡೆ ಹಿಡಿದೆವು. ನಂತರ ಎನ್ ಡಿ ಎ ಸರ್ಕಾರ ಪ್ರತಿಬಂಧದ ಆದೇಶವೇನ್ನನೋ ಹೊರಡಿಸಿತು. ಆದರೆ ಅದು ಎಂಥ ವಿಚಿತ್ರ ಪ್ರತಿಬಂಧ ಎಂದರೆ, ಮುಖ್ಯ ಕಂಪನಿಗೆ ಪ್ರತಿಬಂಧವಿದೆಯಾದರೂ ಅದರ ಛತ್ರದಡಿ ಬರುವ ಅಧೀನ ಸಂಸ್ಥೆಗಳ್ಯಾವುದಕ್ಕೂ ಪ್ರತಿಬಂಧವಿರಲಿಲ್ಲ. ಹೀಗಾಗಿ ಆರೋಪಿತರಾದವರು ಯಲಹಂಕದ ಏರೋಶೋದಲ್ಲೂ ಭಾಗವಹಿಸುವಂತಾಯಿತು. ಇದೆಂಥ ಪ್ರತಿಬಂಧ?

– ಹೆಲಿಕಾಪ್ಟರ್ ವಿಷಯದಲ್ಲಿ ಎತ್ತರದ ಹಾರಾಟ ಪ್ರಮಾಣಗಳ ಮೇಲೆ ಗೊಂದಲ ಅನಗತ್ಯ. ಇದನ್ನು ನಾವು ಅಧಿಕಾರದಲ್ಲಿದ್ದಾಗ ಪ್ರಮಾಣ ಬದಲಾಯಿಸಿದೆವೆಂಬ ಆರೋಪ ಸರಿಯಲ್ಲ. ವಾಜಪೇಯಿ ಅವರ ಕಾಲದಲ್ಲೇ ಆಲ್ಟಿಟ್ಯೂಡ್ ಕಡಿಮೆಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಎಂಐ ಶ್ರೇಣಿಯ ಹೆಲಿಕಾಪ್ಟರ್ ಗಳು ವಿವಿಐಪಿಗಳ ಹಾರಾಟಕ್ಕೆ ಸಕ್ಷಮವಾಗಿಲ್ಲವಾದ್ದರಿಂದ ಹೊಸ ಹೆಲಿಕಾಪ್ಟರ್ ಗಳನ್ನು ಖರೀದಿಸಬೇಕು ಎಂಬ ನಿರ್ಧಾರವಾಗಿದ್ದೂ ವಾಜಪೇಯಿಯವರ ಕಾಲದಲ್ಲೇ.

-ಕೇವಲ ತನಗಾಗದ ವ್ಯಕ್ತಿಗಳನ್ನು ಸಿಕ್ಕಿಸಬೇಕೆಂಬ ಧಾವಂತದ ಅಧಿಕಾರೂಢ ಬಿಜೆಪಿಯಿಂದಾಗಿ ನಿಜವಾದ ಅಪರಾಧಿಗಳು ತಪ್ಪಿಸಿಕೊಳ್ಳುವಂತಾಗುತ್ತಿದೆ ಎಂದು ಅನ್ನಿಸದೇ? ತನಿಖೆ ಆಗಲಿ ಎಂಬುದು ನಮ್ಮದೂ ಆಶಯ. ಒಬ್ಬ ವ್ಯಕ್ತಿಯ ಬಗ್ಗೆ ಕೇಂದ್ರಿತವಾಗದೇ ಸಮಗ್ರ ತನಿಖೆ ಆಗಲಿ. ಆದರೆ ಬಿಜೆಪಿಗೆ ಬೊಬ್ಬೆ ಎಬ್ಬಿಸಿ ರಾಜಕೀಯ ಲಾಭ ತೆಗೆದುಕೊಳ್ಳೋದರಲ್ಲಿ ಮಾತ್ರ ಆಸಕ್ತಿ.

Leave a Reply