ಸುದ್ದಿಸಂತೆ: ಪಾರಿಕರ್ ಹೇಳಿದ್ದೇನು?, ಸಂಪುಟ ಸಭೆಯ ನಿರ್ಣಯಗಳೇನು?, ಬಳಸಿದ ಐಫೋನ್ ಆಮದಿಗೆ ಭಾರತ ತಿರಸ್ಕಾರ…ದಿನಾಂತ್ಯಕ್ಕೆ ಒಪ್ಪಿಸಿಕೊಳ್ಳಬೇಕಾದ ಸುದ್ದಿ- ಲೇಖನಗಳ ಕಣಜ

ಬುಧವಾರ ಬೆಂಗಳೂರಲ್ಲಿ ಸಿಇಟಿ ಪರೀಕ್ಷೆ ಪರೆದ ವಿದ್ಯಾರ್ಥಿಗಳು

 

ಡಿಜಿಟಲ್ ಕನ್ನಡ ಟೀಮ್

ಹೆಲಿಕಾಪ್ಟರ್ ಹಗರಣದಿಂದ ಯಾರಿಗೆ ಲಾಭವಾಗಿದೆ ಎಂಬುದು ದೇಶಕ್ಕೆ ತಿಳಿಯಬೇಕು: ಪಾರಿಕರ್

ವಿರೋಧ ಪಕ್ಷಗಳ ಗದ್ದಲದ ನಡುವೆ ರಾಜ್ಯಸಭೆಯಲ್ಲಿ ರಕ್ಷಣಾ ಸಚಿವ ಮನೋಹರ್ ಪಾರಿಕರ್ ಅಗುಸ್ಟಾ ವೆಸ್ಟ್ಲ್ಯಾಂಡ್ ಹಗರಣದ ಕುರಿತು ರಕ್ಷಣಾ ಸಚಿವಾಲಯದಲ್ಲಿರುವ ಮಾಹಿತಿಗಳನ್ನು ಮಂಡಿಸಿದರು. ಅಲ್ಲದೆ ತಮ್ಮ ಭಾಷಣದಲ್ಲಿ ಪ್ರಕರಣದ ಕುರಿತಂತೆ ಸರ್ಕಾರದ ನಿಲುವು ತಿಳಿಸಿದರು. ಪಾರಿಕರ್ ಅವರ ಭಾಷಣ ಹೀಗಿತ್ತು.

‘ಈ ಭ್ರಷ್ಟಾಚಾರಕ್ಕೆ ಯಾರು ಬೆಂಬಲ ನೀಡಿದರು, ಕಾರಣರಾದರೂ ಹಾಗೂ ಇದರ ಲಾಭ ಪಡೆದವರಾರು ಎಂಬುದು ದೇಶಕ್ಕೆ ಗೊತ್ತಾಗಬೇಕಿದೆ. ಇದನ್ನು ನಾವು ಸುಮ್ಮನೆ ನಿರ್ಲಕ್ಷಿಸಲು ಸಾಧ್ಯವಿಲ್ಲ. ಮಿಲನ್ ನ್ಯಾಯಾಲಯದ ತೀರ್ಪಿನಲ್ಲಿ ಈ ಭ್ರಷ್ಟಾಚಾರದ ಕುರಿತು ಕೆಲವು ಪ್ರಮುಖ ಮಾಹಿತಿಗಳನ್ನು ನೀಡಿದೆ.

ಈ ಹೆಲಿಕಾಪ್ಟರ್ ಗಳ ಪರೀಕ್ಷೆಯನ್ನು ಇಟಲಿಯಲ್ಲಿ ನಡೆಸಲಾಗಿದೆ. ಈ ಪರೀಕ್ಷೆ ನಡೆದ ಸಂದರ್ಭದಲ್ಲಿ ಅಗಸ್ಟಾ ವೆಸ್ಟ್ಲ್ಯಾಂಡ್ ಕಂಪನಿ ಮಾರಾಟ ಮಾಡಲು ಮುಂದಾಗಿದ್ದ ಹೆಲಿಕಾಪ್ಟರ್, ನಿರ್ಮಾಣ ಹಂತದಲ್ಲಿತ್ತು. ಹಾಗಾಗಿ ಭಾರತದಲ್ಲಿ ಈ ಪ್ರಕರಣದ ಕುರಿತು ತನಿಖೆ ನಡೆಸಬೇಕಿರುವುದು ಅತ್ಯಗತ್ಯ. ಅಲ್ಲದೆ ಆಗಸ್ಟಾ ವೆಸ್ಟ್ಲ್ಯಾಂಡ್ ಗೆ ಬೆಂಬಲ ನೀಡಲು ಯುಪಿಎ ಸರ್ಕಾರ ಪಟ್ಟು ಹಿಡಿದಿತ್ತು. ಇದೇ ಕಾರಣಕ್ಕೆ ಏಕ ವ್ಯಾಪಾರಿ ವ್ಯವಸ್ಥೆ ಕಲ್ಪಿಸಿ ಕಂಪನಿಗೆ ನೆರವು ನೀಡಿತ್ತು. ಈ ಒಪ್ಪಂದದ ಹಿಂದೆ ದುರುದ್ದೇಶ ಇದೆ ಎಂದು ಇಟಲಿಯ ನ್ಯಾಯಾಲಯ ಸಹ ತಿಳಿಸಿದೆ.

ಈ ವಿಚಾರದ ತನಿಖೆ ವೇಳೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯವನ್ನು ಕಾಣದ ಕೈ ನಿಯಂತ್ರಿಸುತ್ತಿತ್ತು. ಈ ಪ್ರಕರಣದಲ್ಲಿ ಲಂಚ ಸ್ವೀಕರಿಸಲು ಐಡಿಎಸ್ ಇನ್ಫೋಟೆಕ್ ಅನ್ನು ಮಾಧ್ಯಮವಾಗಿ ಬಳಸಿಕೊಳ್ಳಲಾಗಿತ್ತು.

ಯುಪಿಎ ಸರ್ಕಾರ, ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವ ಬದಲಾಗಿ ವಿದೇಶಾಂಗ ಇಲಾಖೆ, ರಾಯಭಾರಿ ಕಚೇರಿ ಮತ್ತು ನ್ಯಾಯಾಲಯಕ್ಕೆ ಪತ್ರ ಬರೆದಿತ್ತು. ಅಲ್ಲದೆ ಈ ಹೆಲಿಕಾಪ್ಟರ್ ಖರೀದಿ ವೇಳೆ ಯಾವುದೇ ಚೌಕಾಸಿ ನಡೆಸಿಲ್ಲ. ನಿಗದಿತ ಬೆಲೆಗಿಂತ ಹೆಚ್ಚಿನ ಮೊತ್ತಕ್ಕೆ ಖರೀದಿಸಲಾಗಿದೆ.’

ಕೊನೆಯಲ್ಲಿ ಕಾಂಗ್ರೆಸ್ಸಿಗರು ಸುಪ್ರೀಂಕೋರ್ಟ್ ಅಧೀನದಲ್ಲಿ ತನಿಖೆ ಆಗ್ರಹಿಸಿ ಸಭಾತ್ಯಾಗ ಮಾಡಿದರು. ಈ ಪ್ರಕರಣದಲ್ಲಿ ತನಿಖೆ ಮಾಡುವುದಕ್ಕೇನೂ ಇಲ್ಲ ಎಂಬುದು ಶರದ್ ಯಾದವ್ ಅಭಿಮತವಾದರೆ, ಬಿಎಸ್ಪಿ ಮಾಯಾವತಿ ತನಿಖೆಯಲ್ಲಿ ಸಿಬಿಐ ಅನ್ನು ನಂಬುವಂತಿಲ್ಲವಾದ್ದರಿಂದ ಸುಪ್ರೀಂಕೋರ್ಟ್ ಅಧೀನದಲ್ಲಿ ತನಿಖೆ ನಡೆಯಲು ಎಂದರು. ಕಾಂಗ್ರೆಸ್- ಬಿಜೆಪಿಗಳೆರಡೂ ಪ್ರಕರಣವನ್ನು ಜಗ್ಗಾಡುತ್ತಿವೆ, ಯಾರಿಗೂ ಸತ್ಯ ಬೇಕಿಲ್ಲ ಎಂದು ತೃಣಮೂಲ ಸಂಸದರು ಆರೋಪಿಸಿದರು.

ಸೌರ ವಿದ್ಯುತ್ ಅಳವಡಿಕೆಗೆ ಬ್ಯಾಂಕ್ ಗಳಲ್ಲಿ ಸಾಲ ಕೊಡಿಸಲು ಸಂಪುಟ ನಿರ್ಧಾರ

ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮನೆ ಮನೆಗಳಲ್ಲಿ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಕೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರ ಗುತ್ತಿಗೆ ನೌಕರರ ವೇತನ ಹೆಚ್ಚಳ ಸೇರಿದಂತೆ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಆ ಪೈಕಿ ಪ್ರಮುಖ ನಿರ್ಣಯಗಳು ಹೀಗಿವೆ.

  • ರಾಜ್ಯದಲ್ಲಿ ವಿದ್ಯುತ್ ಕೊರತೆ ನೀಗಿಸಲು ರಾಜ್ಯಾದ್ಯಂತ ಮನೆಗಳು ಹಾಗೂ ಸಾರ್ವಜನಿಕ ಕಟ್ಟಡಗಳ ಮೇಲೆ ಸೋಲಾರ್ ವಿದ್ಯುತ್ ವ್ಯವಸ್ಥೆ ಅಳವಡಿಸಲು ಸರ್ಕಾರವೇ ಬ್ಯಾಂಕ್ ಸಾಲ ಕೊಡಿಸಲು ಮುಂದಾಗಿದೆ. ಮನೆಯ ಮೇಲು ಛಾವಣಿಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದಿಸುವವರಿಗೆ ಈ ಮುಂಚೆ ಪ್ರತಿ ಯೂನಿಟ್‍ಗೆ 56 ರೂ ನೀಡುವುದಾಗಿ ಹೇಳಿದ್ದೆವು.ಆದರೆ ಈಗ ಅದನ್ನು 7.08 ರೂಪಾಯಿಗೆ ಇಳಿಸಲು ತೀರ್ಮಾನಿಸಲಾಗಿದೆ. ಹತ್ತು ಕೆವಿ ಜತೆಗೆ ಇನ್ನೂ ಐದು ಕೆವಿಯಷ್ಟು ಹೆಚ್ಚುವರಿಯಾಗಿ ವಿದ್ಯುತ್‍ನ್ನು ಉತ್ಪಾದಿಸಲು ಅನುಮತಿ ನೀಡಲಾಗಿದೆ ಎಂದು ಇಂಧನ ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
  • ಬೃಹತ್ ಮಹಾನಗರ ಪಾಲಿಕೆಯು ಸೇರಿದಂತೆ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಳೆದ ಹತ್ತು ಹಲವು ವರ್ಷಗಳಿಂದ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ವೇತನ ಶ್ರೇಣಿ ಹೆಚ್ಚಳ ಸೇರಿದಂತೆ ಇನ್ನಿತರ ಕೆಲವು ಸೌಲಭ್ಯಗಳನ್ನು ನೀಡಲು ಸಮ್ಮತಿಸಿದೆ. ರಾಜ್ಯ ಹೈ ಕೋರ್ಟ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ನೌಕರರಿಗೆ ಕೇಂದ್ರ ವೇತನ ಶ್ರೇಣಿ ನೀಡಲು ನಿರ್ಧಾರ.
  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವೈದ್ಯಕೇತರ 2144 ಹುದ್ದೆಗಳನ್ನು ನೇಮಕಾತಿ, ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿರುವ ವ್ಯಕ್ತಿಗಳನ್ನು ವಿಧಾನ ಪರಿಷತ್ತಿಗೆ ನಾಮಕರಣ ಮಾಡುವ ಅಧಿಕಾರವನ್ನು ಮುಖ್ಯಮಂತ್ರಿಯವರಿಗೆ ನೀಡಿದೆ.
  • ಸರ್ಕಾರಿ ಮತ್ತು ಅರೆ ಸರ್ಕಾರಿ ಶಾಲೆಗಳಲ್ಲಿ ಎಂಟನೇ ತರಗತಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪ್ರಸಕ್ತ ವರ್ಷವೂ ಉಚಿತ ಬೈಸಿಕಲ್ ನೀಡಲು ಸಮ್ಮತಿಸಲಾಗಿದೆ.
  • ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣಕ್ಕೆ ಎರಡನೇ ಹಂತದ ನೀರು ಸರಬರಾಜು ಸುಧಾರಣೆ ಯೋಜನೆ ಅನುಷ್ಠಾನಕ್ಕೆ 20 ಕೋಟಿ, ತಿಪಟೂರು ನಗರಕ್ಕೆ ಸುಧಾರಿತ ನೀರು ಸರಬರಾಜು ಯೋಜನೆಯ 127.91 ಕೋಟಿ ರೂ. ಮೊತ್ತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಒಪ್ಪಿಗೆ.
  • ಗುಜರಾತ್ ಅಹಮದಾಬಾದ್ ಕಾಲೇಜುವೊಂದರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಆರ್.ಬಿ. ಸಾಗರ್ ಎಂಬುವವರನ್ನು ರಾಜ್ಯಪಾಲ ವಿ.ಆರ್.ವಾಲಾ ಅವರಿಗೆ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲು ಅನುಮತಿ.

ಬರಪೀಡಿತ ಪ್ರದೇಶಗಳಲ್ಲಿ ಅನುದಾನ ಬಳಕೆ ಬಗ್ಗೆ ಶ್ವೇತಪತ್ರ ಹೋರಡಿಸಲು ಯಡಿಯೂರಪ್ಪ ಆಗ್ರಹ

ಕೇಂದ್ರ ಸರ್ಕಾರ ಬರ ಪೀಡಿತ ಪ್ರದೇಶಗಳಲ್ಲಿ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಲು ನೀಡಿರುವ ಅನುದಾನವನ್ನು ಯಾವ ಪ್ರಮಾಣದಲ್ಲಿ ರಾಜ್ಯ ಸರ್ಕಾರ ಬಳಸಿಕೊಂಡಿದೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲದ ಪರಿಸ್ಥಿತಿ ಅರಿತು, ಪ್ರಧಾನಿ ನರೇಂದ್ರ ಮೋದಿ ಅವರೇ ಖುದ್ದಾಗಿ ಹಂತ ಹಂತವಾಗಿ ಮೂರು ಸಾವಿರ ಕೋಟಿ ರೂ.ಗೂ ಹೆಚ್ಚು ಹಣ ಬಿಡುಗಡೆ ಮಾಡಿದ್ದಾರೆ. ವಿವಿಧ ಯೋಜನಾಡಿಯಲ್ಲಿ ಬಿಡುಗಡೆಗೊಂಡಿರುವ ಹಣವನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದೇ ಕೇಂದ್ರದ ಮೇಲೆ ಗೂಬೆ ಕೂರಿಸಿದೆ. ರಾಜ್ಯದ ಜನತೆಗೆ ವಾಸ್ತವ ಸ್ಥಿತಿ ತಿಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬರ ಪರಿಹಾರಕ್ಕಾಗಿ ಮಾಡಿದ ವೆಚ್ಚದ ಬಗ್ಗೆ ಅಂಕಿ ಅಂಶಗಳ ಸಮೇತ ಶ್ವೇತಪತ್ರ ಹೊರಡಿಸಲಿ’ ಎಂದು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರ ಬರ ಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಲು ಶಾಸಕರ ಅಧ್ಯಕ್ಷತೆಯಲ್ಲಿರುವ ಕಾರ್ಯಪಡೆಗಳಿಗೆ ಎರಡು ಕಂತಿನಲ್ಲಿ ₹ 180.39 ಕೋಟಿ ವಿಶೇಷ ಅನುದಾನ, ಬರ ಪೀಡಿತ ತಾಲೂಕುಗಳಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿ ಅನುಷ್ಠಾನಕ್ಕಾಗಿ ₹ 74.06 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.

ಬಸ್ ಹಾಗೂ ರೈಲ್ವೇ ನಿಲ್ದಾಣಗಳಲ್ಲಿ ಆರೋಗ್ಯ ಕೇಂದ್ರ: ಖಾದರ್

ರಾಜ್ಯದ ಪ್ರಮುಖ ಬಸ್ ಹಾಗೂ ರೈಲು ನಿಲ್ದಾಣಗಳಲ್ಲಿ ಆರೋಗ್ಯ ಸೇವಾ ಕೇಂದ್ರಗಳನ್ನು ಪ್ರಾರಂಭಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಬುಧವಾರ ನಡೆದ ಬಸ್ ಡೇ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಸಾರಿಗೆ ಸಂಸ್ಥೆ ಮತ್ತು ಕೇಂದ್ರ ರೈಲ್ವೆ ಇಲಾಖೆ ಸಹಯೋಗದೊಂದಿಗೆ ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು. ಇಂತಹ ಕೇಂದ್ರ ಪ್ರಾರಂಭಿಸಲು ಎರಡು ಇಲಾಖೆಗಳು ಸ್ಥಳಾವಕಾಶ ನೀಡಬೇಕು. ಸ್ಥಳಾವಕಾಶ ನೀಡಿದರೆ ತುರ್ತು ಚಿಕಿತ್ಸೆ ಮತ್ತು ಸಾಮಾನ್ಯ ವೈದ್ಯಕೀಯ ಸೇವೆಯನ್ನು ಪ್ರಯಾಣಿಕರಿಗೆ ಒದಗಿಸಲು ಇಲಾಖೆ ಸಿದ್ಧವಿದೆ. ದೊಡ್ಡ ನಿಲ್ದಾಣಗಳಲ್ಲಿ ವೈದ್ಯರ ತಂಡವೇ ಇರುವಂತೆ ನೋಡಿಕೊಳ್ಳಲಾಗುವುದು. ಅಷ್ಟೇ ಅಲ್ಲ ಅಲ್ಲಿಯೇ ತಾತ್ಕಾಲಿಕ ಚಿಕಿತ್ಸೆ ಮತ್ತು ಔಷಧಿಗಳನ್ನು ಒದಗಿಸಲು ನಾವು ಸಿದ್ಧರಿದ್ದೇವೆ’ ಎಂದರು.

ಮಲ್ಯ ಉಚ್ಛಾಟನೆಗೆ ರಾಜ್ಯಸಭೆ ನೈತಿಕ ಸಮಿತಿ ಶಿಫಾರಸ್ಸು

ವಿವಿಧ ಬ್ಯಾಂಕ್ ಗಳಲ್ಲಿ ₹ 9 ಸಾವಿರ ಕೋಟಿ ಸಾಲ ಪಡೆದು ಉದ್ದೇಶಿತ ಸುಸ್ಥಿದಾರನಾಗಿ ತಲೆ ಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯರನ್ನು ರಾಜ್ಯಸಭೆಯಿಂದ ಉಚ್ಛಾಟಿಸಬೇಕು ಎಂದು ಮೇಲ್ಮನೆಯ ನೈತಿಕ ಸಮಿತಿ ಸಲಹೆ ನೀಡಿದೆ.

ಬುಧವಾರ ರಾಜ್ಯಸಭೆಯಲ್ಲಿ ನೈತಿಕ ಸಮಿತಿ ಅಧ್ಯಕ್ಷರಾದ ಕರಣ್ ಸಿಂಗ್, 10ನೇ ವರದಿ ಸಲ್ಲಿಸಿ ಸಮಿತಿಯ ನಿಲುವು ತಿಳಿಸಿದರು. ‘ಈ ಸಂಸತ್ತಿನ ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ಕಳಂಕಿತನಾಗಿರುವ ವಿಜಯ್ ಮಲ್ಯರ ವಿರುದ್ಧ ಈ ಕಠಿಣ ಕ್ರಮ ಕೈಗೊಳ್ಳಬೇಕು. ಇದರಿಂದ ಜನ ಸಾಮಾನ್ಯರಲ್ಲಿ ಸಂಸತ್ತಿನ ಬಗ್ಗೆ ಗೌರವ ಹೆಚ್ಚುತ್ತದೆ’ ಎಂದು ತಿಳಿಸಿದ್ದಾರೆ.

ತಾನು ರಾಜ್ಯಸಭೆ ಸದಸ್ಯತ್ವಕ್ಕೆ ರಾಜಿನಾಮೆ ನೀಡಿರುವುದಾಗಿ ಕಳೆದ ಸೋಮವಾರ ವಿಜಯ್ ಮಲ್ಯ ಹೇಳಿಕೊಂಡಿದ್ದರು. ಆದರೆ ಇದು ಅಧಿಕೃತ ಸಹಿ ಹೊಂದಿಲ್ಲವಾದ್ದರಿಂದ ತಿರಸ್ಕೃತವಾಗಿತ್ತು. ಬುಧವಾರ ಅವರ ರಾಜೀನಾಮೆ ಅಂಗೀಕೃತವಾಗಿದೆ.

ಬಳಸಿದ ಐಫೋನ್ ಆಮದು ಯೋಜನೆಯನ್ನು ತಿರಸ್ಕರಿಸಿದ ಭಾರತ

ಅಮೆರಿಕಾದ ಟೆಕ್ ದೈತ್ಯ ಆಪಲ್ ಕಂಪನಿಯು ಬಳಸಿದ ಐಪೋನುಗಳನ್ನು ಭಾರತಕ್ಕೆ ಆಮದು ಮಾಡುವ ಯೋಜನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಈ ಮೂಲಕ ತನ್ನ ಮಾರಾಟವನ್ನು ವೃದ್ಧಿಸಿಕೊಳ್ಳುವ ಉತ್ಸಾಹದಲ್ಲಿದ್ದ ಆಪಲ್ ಕಂಪನಿಗೆ ನಿರಾಸೆಯಾಗಿದೆ. ಅಮೆರಿಕಾ ಸೇರಿದಂತೆ ಇತರ ದೇಶಗಳಲ್ಲಿ ರಿಯಾಯಿತಿ ದರದಲ್ಲಿ ಮಾರಾಟಮಾಡುತ್ತಿರುವ ಐಪೋನ್ ಗಳನ್ನು ಭಾರತದಲ್ಲೂ ಮಾರಾಟ ಮಾಡಿದರೆ ಮಾರುಕಟ್ಟೆ ಮತ್ತಷ್ಟು ವಿಸ್ತರಿಸಲು ಸಹಕಾರಿಯಾಗುತ್ತಿತ್ತು.

ಭಾರತದ ಮೇಕ್ ಇನ್ ಇಂಡಿಯಾ ಯೋಜನೆಯ ಉತ್ಪಾದನಾ ಕ್ಷೇತ್ರವನ್ನು ಬಲಗೊಳಿಸುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಯೋಜನೆಯನ್ನು ತಿರಸ್ಕರಿಸಲು ಪ್ರಮುಖ ಕಾರಣ, ಬಳಸಿದ ಎಲೆಕ್ಟ್ರಾನಿಕ್ ವಸ್ತುಗಳಿಗೆ ಅನುಮತಿ ನೀಡುವುದು ಆಮದು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಕಂಪನಿಗೆ ತಿಳಿಸಿದೆ.

ಉತ್ತರಾಖಂಡದ ಹೈಕೋರ್ಟಿನ ಸಿಜೆ ಆಂಧ್ರಕ್ಕೆ ವರ್ಗಾವಣೆ

ಉತ್ತರಾಖಂಡದಲ್ಲಿ ಕೇಂದ್ರ ಹೇರಿದ್ದ ರಾಷ್ಟ್ರಪತಿ ಆಳ್ವಿಕೆಯನ್ನು ವಜಾಗೊಳಿಸಿದ್ದ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಕೆ ಎಂ ಜೋಸೆಫ್ ಅವರನ್ನು ಆಂಧ್ರ ಪ್ರದೇಶದ ಹೈಕೋರ್ಟಿನ ಮುಖ್ಯಸ್ಥ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. ಉತ್ತರಖಂಡದ ಕಾಂಗ್ರೆಸ್ ಸರ್ಕಾರದಲ್ಲಿ 9 ಮಂದಿ ಶಾಸಕರು ಪಕ್ಷದಿಂದ ಹೊರಬಂದು, ಅತಂತ್ರ ಪರಿಸ್ಥಿತಿ ಉಂಟುಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಲ್ಲಿನ ಸರ್ಕಾರ ಅಲ್ಪ ಸಂಖ್ಯೆಗೆ ಕುಸಿಯಿತು. ಈ ವೇಳೆ ಕೇಂದ್ರ ಸರ್ಕಾರದ ಸಂಪುಟ ಶಿಫಾರಸ್ಸಿನಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಉತ್ತರಾಖಂಡದ ಕಾಂಗ್ರೆಸ್ ಸರ್ಕಾರ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸಿದರು. ಇದರ ವಿರುದ್ಧ ಕಾಂಗ್ರೆಸ್ ಪಕ್ಷ ಹೈಕೋರ್ಟಿಗೆ ಮನವಿ ಸಲ್ಲಿಸಿತ್ತು. ಈ ಪ್ರಕರಣವನ್ನು ವಿಚಾರಣೆ ನಡೆಸಿದ ಮುಖ್ಯನ್ಯಾಯಾಧೀಶ ಕೆ ಎಂ ಜೋಸೆಪ್ ಕೇಂದ್ರ ಸರ್ಕಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಎಲ್ ಪಿಜಿ ಸಬ್ಸಿಡಿ ಬ್ಯಾಂಕಿಗೆ: ₹ 21 ಸಾವಿರ ಕೋಟಿ ಸರ್ಕಾರದ ಖಜಾನೆಗೆ

ಎಲ್ ಪಿ ಜಿ ಅಡುಗೆ ಅನಿಲದ ಸಹಾಯಧನ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿರುವುದರಿಂದ ಕಳೆದ ಎರಡು ವರ್ಷಗಳಿಂದ ಸರ್ಕಾರಕ್ಕೆ ₹ 21 ಸಾವಿರ ಕೋಟಿ ಉಳಿತಾಯವಾಗಿದೆ ಎಂದು ತೈಲ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ. ಇದರಿಂದ ನಕಲಿ ಅನಿಲ ಸಂಪರ್ಕ ಹೊಂದಿರುವವರನ್ನು ಪತ್ತೆ ಹಚ್ಚಲು ಸಹಕಾರಿಯಾಗಿದೆ.

ಇನ್ನುಳಿದಂತೆ ನೀವು ತಿಳಿಯಬೇಕಿರುವ ಸುದ್ದಿ ಸಾಲುಗಳು..

  • ಉತ್ತರಾಖಂಡ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವ ಪ್ರಕ್ರಿಯೆ ಕುರಿತು ಪ್ರತಿಕ್ರಿಯೆ ನೀಡಲು ಮತ್ತೆ ಎರಡು ದಿನ ಕಾಲಾವಕಾಶ ಬೇಕು ಎಂದು ಕೇಂದ್ರ ಸರ್ಕಾರದ ಅರ್ಜಿಯನ್ನು ಪುರಸ್ಕರಿಸಿದೆ. ಆ ಮೂಲಕ ಮೇ 6ರಂದು ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಉನ್ನತ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿದೆ.
  • ತಮ್ಮ ಉತ್ಪನ್ನಗಳ ಪ್ಯಾಕೆಟ್ ಮೇಲೆ ಆರೋಗ್ಯ ಎಚ್ಚರಿಕೆ ಸಂದೇಶದ ಪ್ರಮಾಣವನ್ನು ಹೆಚ್ಚಿಸುವ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಸಿಗರೇಟ್ ಕಂಪನಿಗಳಿಗೆ ಹಿನ್ನಡೆಯಾಗಿವೆ. ‘ಸಿಗರೇಟ್ ಪ್ಯಾಕೆಟ್ ಮೇಲೆ ದೊಡ್ಡ ಪ್ರಮಾಣದಲ್ಲಿ ಆರೋಗ್ಯ ಎಚ್ಚರಿಕೆ ಸಂದೇಶಗಳನ್ನು ಪ್ರಕಟಿಸಬೇಕು’ ಎಂದು ಬುಧವಾರ ನಡೆದ ವಿಚಾರಣೆಯಲ್ಲಿ ಉನ್ನತ ನ್ಯಾಯಾಲಯ ಕಂಪನಿಗಳಿಗೆ ಸೂಚನೆ ನೀಡಿದೆ.
  • ಐಸಿಸಿ ಬುಧವಾರ ಬಿಡುಗಡೆ ಮಾಡಿದ ನೂತನ ಏಕದಿನ ಹಾಗೂ ಟಿ20 ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ತಂಡ ಕುಸಿತ ಕಂಡಿದೆ. ಏಕದಿನ ಮಾದರಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿರುವ ಭಾರತ, ಟಿ20ಯಲ್ಲಿ ಅಗ್ರಸ್ಥಾನವನ್ನು ಕಳೆದುಕೊಂಡಿದ್ದು, ನ್ಯೂಜಿಲೆಂಡ್ ನಂತರ ಎರಡನೇ ಸ್ಥಾನದಲ್ಲಿದೆ.

 

ಇಂದಿನ ರಾಜ್ಯಸಭೆಯ ಅಗುಸ್ಟಾ ವೆಸ್ಟ್ಲ್ಯಾಂಡ್ ಡಿಬೇಟ್ ಮಾತ್ರ ಯಾರೂ ಮಿಸ್ ಮಾಡಿಕೊಳ್ಳಬಾರದ್ದು. ಆಗೀಗ ಗದ್ದಲಗಳಾದರೂ ಚರ್ಚೆ ಎರಡೂ ಕಡೆ ತುರುಸಿನಿಂದ ನಡೆಯಿತು. ಕಾಂಗ್ರೆಸ್ ಪರ ಅಭಿಷೇಕ್ ಮನು ಸಿಂಘ್ವಿ ವಾದ ಮಜಬೂತಾಗಿಯೇ ಇತ್ತು. ನಂತರ ಅದನ್ನು ಬಿಜೆಪಿ ಸುಬ್ರಮಣಿಯನ್ ಸ್ವಾಮಿ ಕೆಡವುವ ರೀತಿಯ ವಾದ ಮುಂಡಿಸಿದರು. ಆದರೆ ಎ. ಕೆ. ಆ್ಯಂಟನಿ ಸಮಚಿತ್ತದ ವಾದವೂ ಗಟ್ಟಿಯಾಗಿಯೇ ಇತ್ತು. ಸ್ವಾಮಿಯ ಹಲವು ಅಂಶಗಳನ್ನು ಕಾಂಗ್ರೆಸ್ ನ ಆನಂದ ಶರ್ಮ ಮತ್ತು ಆ್ಯಂಟನಿ ತಿರಸ್ಕರಿಸಿದರು.

 

ಬಿಸಿನೆಸ್ ಚೆನ್ನಾಗಾಗುತ್ತೆ ಅಂತಾದರೆ ಲಾಲು ಪ್ರಸಾದರಿಗೆ ಪೂಸಿ ಹೊಡೆಯೋಕೂ ಬಾಬಾ ರಾಮ್ದೇವ್ ತಯಾರು. ಇದು ಬುಧವಾರದ ಸಾರ.

 

ಅಗುಸ್ಟಾ ಪ್ರಕರಣದಲ್ಲಿ ಸೋನಿಯಾ- ರಾಹುಲ್ ಕೊಂಡಿಯ ಹೊಸ ಆಯಾಮಗಳು…

 

12 ಜೈಶೆ ಉಗ್ರರ ಬಂಧನವಾಗಿ ದೊಡ್ಡ ಅವಘಡ ತಪ್ಪಿದ್ದಕ್ಕೆ ನಾವು ದೆಹಲಿ ಪೋಲೀಸರಿಗೆ ಕೃತಜ್ಞರಾಗಿರಬೇಕು.

 

‘ರಾಗಿ ಬೀಸುವುದು ತಪ್ಪುತ್ತದೆಯೇ?’ ಎಂದು ಕೊನೆಗೊಳ್ಳುವ ಗಾದೆಯ ಅಸಹಾಯಕತೆಯನ್ನು ರಾಗಿ ಬೀಸುವುದು ಕೀಳು ಎಂಬ ಭಾವನೆಯನ್ನು ಕಿತ್ತೊಗೆಯೋಣ. ನಾವು ಬೀಸುವ ರಾಗಿಯ ನಿಣುಪು ಎಷ್ಟು ನೋಡಿ ಎಂದು ಹೆಮ್ಮೆಯಿಂದ ತೋರಿಸೋಣ ಅಂತ ತಮ್ಮ ಅಂಕಣದಲ್ಲಿ ಪ್ರತಿಪಾದಿಸಿದ್ದಾರೆ ಗೀತಾ ಬಿ. ಯು.

 

Leave a Reply