ಸರ್ಕಾರದ ಮೇಲಿನ ಸಿನಿಕತನ ಸುಲಭ, ಸ್ವಂತದ ಕೆಲಸದಲ್ಲಿಶ್ರದ್ಧೆ ದುರ್ಲಭ!

author-geetha‘ಯಾರು ರಾಜ್ಯ ಆಳಿದರೇನು? ನಮಗೆ ರಾಗಿ ಬೀಸೋದು ತಪ್ಪುತ್ತದೆಯೇ? ಅನ್ನೋದು ಗಾದೆ ಕೇಳಿಲ್ಲವೇ ನೀನು?..’

‘ಕೇಳಿದ್ದೇನೆ, ಈಗ್ಯಾಕೆ ಹೇಳ್ತಾ ಇದೀರಿ?’

‘ಕೇಂದ್ರದಲ್ಲಿ ಯಾವ ಪಕ್ಷವೇ ಅಧಿಕಾರಕ್ಕೆ ಬರಲಿ.. ರಾಜ್ಯದಲ್ಲಿ ಯಾರೇ ಆಳಲಿ.. ನಮ್ಮ ಕೆಲಸ ನಮಗೆ! ಕೆಲಸ ಮಾಡಲೇಬೇಕಲ್ಲವೇ?’

‘ಹೂಂ, ಮಾಡಬೇಕು. ಕೆಲಸವೇ ಮಾಡದೆ ಇರಬೇಕು ಅನ್ನೋ ಇರಾದೆ ಇದೆಯೇ?’

ನನ್ನ ಪ್ರಶ್ನೆಗೆ ಉತ್ತರಿಸದೆ ನನ್ನತ್ತ ಉಡಾಫೆಯಿಂದ ನೋಡಿದ ನನ್ನ ಹೊಸ ಸ್ನೇಹಿತ. ವಿದ್ಯಾವಂತ ಯುವಕ. ತಕ್ಕಮಟ್ಟಿಗೆ ಓದಿಕೊಂಡಿರುವವನು. ಚೆನ್ನಾಗಿ ಮಾತನಾಡುವ ತಾಕತ್ತು ಇರುವವನು. ಗಾದೆ, ವಚನ, ಕಗ್ಗ ಉದ್ಧರಿಸುವ ತಿಳುವಳಿಕೆ ಇರುವವನು.. ಅವನ ಅನುಮಾನ ನನ್ನ ಕಾಡಲಾರಂಭಿಸಿತು.

ಆಡಳಿತ ನಡೆಸುವವರು ಆಳುವವರು ಎಂಬ ಕಲ್ಪನೆ ನಮ್ಮ slave mentalityಯ ಸಂಕೇತ. ಪ್ರಜಾಪ್ರಭುತ್ವ ಎಂದು ಅರವತ್ತು ವರ್ಷಗಳಿಗೂ ಮೇಲ್ಪಟ್ಟು ವರ್ಷಗಳಿಂದ ಘಂಟಾಘೋಷವಾಗಿ ಕೂಗಿಕೊಂಡು ಬಂದರೂ, ಐದು ವರ್ಷಕ್ಕೊಮ್ಮೆ ಮತ ಚಲಾಯಿಸಿ ತೋರು ಬೆರಳಿಗೆ ಕಪ್ಪು ಮಸಿ ಮೆತ್ತಿಸಿಕೊಂಡರೂ ತಲೆಯಲ್ಲಿ ತುಂಬಿರುವ ರಾಜ-ಪ್ರಜೆ ಎಂಬ ಭಾವನೆ ಸ್ಥಿರವಾಗಿ ಕೂತಿದೆ. (ಕಪ್ಪು ಮಸಿ ಮಾತ್ರ ನಮ್ಮ ಬೆರಳಿನಿಂದ ಅಳಿಸಿ ಹೋಗುತ್ತದೆ). ಪ್ರಜಾಪ್ರಭುತ್ವದ ಅಡಿ ನಾವೇ ಆರಿಸಿ ಕಳುಹಿಸಿರುವವರು ನಮ್ಮ ಪ್ರತಿನಿಧಿಗಳಾದ ಕಾರ್ಪೋರೇಟರ್, ಎಂಎಲ್ಎ, ಎಂಪಿಗಳು.. ರಾಜರಂತೆ ವರ್ತಿಸಲು ಆರಂಭಿಸುತ್ತಾರೆ. ದೊಡ್ಡ ದೊಡ್ಡ ಮನೆಗಳಲ್ಲಿ ವಾಸ, ಕೆಂಪು ಗೂಟದ ಕಾರಿನಲ್ಲಿ ಓಡಾಟ, ಸುತ್ತಾ ಸೆಕ್ಯುರಿಟಿ ಎಂದು ಸ್ಪೆಷಲ್ ಪೊಲೀಸಿನವರು.. ನಾವು, ಸಾಮಾನ್ಯ ಜನರೂ ಕೂಡ ಅವರು ಪ್ರಭುಗಳು, ನಾವು ಪ್ರಜೆಗಳು ಎಂಬಂತೆ ತಗ್ಗಿಬಗ್ಗಿ ನಡೆಯುತ್ತೇವೆ. ಅಹವಾಲು ಕೊಡುತ್ತೇವೆ. ಆ ಭಾಗ್ಯ ಈ ಭಾಗ್ಯ ಎಂದು ನಮ್ಮ ಹಕ್ಕನ್ನು ಭಾಗ್ಯವಾಗಿ ಮಾರ್ಪಡಿಸಿ ಕೊಡುವ ಸರ್ಕಾರಕ್ಕೆ ಕೈಯೊಡ್ಡಿ ನಿಲ್ಲುವ ಪಾತ್ರಧಾರಿಗಳಾಗುತ್ತೇವೆ. ಭಾಗ್ಯಗಳ ಹಂತ ಮೀರಿದವರು ಆ ಪ್ರಶಸ್ತಿ, ಈ ಪ್ರಶಸ್ತಿ, ಆ ಮಂಡಳಿ, ಈ ಬೋರ್ಡು ಎಂದು ಸರ್ಕಾರದ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ತಲೆಬಾಗಿ ನಿಲ್ಲುತ್ತೇವೆ. ಪ್ರಜಾಪ್ರಭುತ್ವ ಅಂದರೇನು ಎಂಬುದು ನಮಗೆ ಅರ್ಥವೇ ಆಗಿಲ್ಲ. ಅರ್ಥವಾದರೂ ಅರ್ಥ ಮಾಡಿಕೊಂಡಿರದ ಇತರರಿಗೆ ಅರ್ಥ ಮಾಡಿಸುವ ಗೋಜಿಗೆ ಹೋಗುವುದಿಲ್ಲ. ಮತದಾನ ಮಾಡಲು ಸಿಗುವ ದುಡ್ಡು ಎಣಿಸಿಕೊಂಡು, ಕೊಟ್ಟ ಸೀರೆ ಉಟ್ಟುಕೊಂಡು, ಕೊಟ್ಟ ಮಿಕ್ಸಿಯಲ್ಲಿ ಚಟ್ನಿ ಮಾಡಿಕೊಂಡು ತಿಂದು.. ಮುಂದಿನ ಎಲೆಕ್ಷನ್ ಯಾವಾಗ ಎಂದು ದಿನ ಏಣಿಸುತ್ತಾ ಕೂರುತ್ತೇವೆ. ಕೆಲಸ ಮಾಡುವುದು ಹೊರೆ ಎಂಬ ಭಾವನೆ ಭದ್ರವಾಗಿ ತಳವೂರಿದೆ ನಮ್ಮಲ್ಲಿ.. ‘ಯಾರು ಆಳಿದರೇನು.. ರಾಗಿ ಬೀಸುವುದು ತಪ್ಪುತ್ತದೆಯೇ?’  ರಾಗಿ ಬೀಸದೆ, ಕಸ ಗುಡಿಸದೆ.. ನೇಗಿಲು ಹೂಡದೆ, ಯಾವ ಕೆಲಸವೂ ಮಾಡದೆ ಸೋಮಾರಿಗಳಂತೆ ಇರುವುದು ನಮ್ಮ ಜೀವನ ಶೈಲಿಯಾಗಬೇಕು. ಎಂಬ ಹಂಬಲವೇ ನಮಗೆ? ರಾಜನಿಗೆ, ಮಂತ್ರಿಗೆ, ರಾಜಕುಮಾರನಿಗೆ, ವ್ಯಾಪಾರಿಗೆ, ರೈತನಿಗೆ.. ಎಲ್ಲರಿಗೂ ಅವರದೇ ಕೆಲಸಗಳಿರುತ್ತದೆಯಲ್ಲವೇ? ಇರಬೇಕು ಕೂಡ ಅಲ್ಲವೇ? ಆ ಕೆಲಸಕ್ಕೆ ಮನ್ನಣೆ ಇರಬೇಕು.. ಗೌರವ ಕೊಡಬೇಕು.. ಇತರರೂ ಕೊಡುವಂತೆ ಕೆಲಸ ಮಾಡಬೇಕು. ಕೊಡದಿದ್ದರೆ, ಅದನ್ನು ಪಡೆದುಕೊಳ್ಳಬೇಕು. ಹಾಗೆಯೇ ನಾವು ಇತರರ ಕೆಲಸವನ್ನು ಗೌರವಿಸಬೇಕು.

ಇತ್ತೀಚೆಗೆ ದೆಹಲಿಗೆ ಹೋಗಿದ್ದೆ. ಅಲ್ಲಿ ನ್ಯಾಷನಲ್ ಮ್ಯುಸಿಯಂಗೆ ಹೋಗಿದ್ದೆ. ನಾಲ್ಕು ಮಳಿಗೆಗಳ ಕಟ್ಟಡ. ಪ್ರತಿಯೊಂದು ಮಳಿಗೆಯಲ್ಲೂ ಮಹಿಳೆಯರಿಗೆ ಹಾಗೂ ಪುರುಷರಿಗೆ ಶೌಚಾಲಯ. ಮಾಮೂಲಾಗಿ ಸಾರ್ವಜನಿಕ ಶೌಚಾಲಯಕ್ಕೆ ಹೋಗಲು ಹಿಂದೇಟು ನನಗೆ. ಆದರೆ ಅಲ್ಲಿ ಅನಿವಾರ್ಯವಾಗಿ ಹೋಗಬೇಕಾಗಿ ಬಂತು.

ಶೌಚಾಲಯವೇನೋ ಹಳೆಯದು ಆದರೆ ಶುಚಿಯಾಗಿ ತಳಫಳ ಎಂದು ಹೊಳೆಯುತ್ತಿತ್ತು.

‘ಫ್ಲಶ್ ಕಿಯಾ? ಬೆಹನ್ ಜೀ ಪಾನಿ ಟೀಕ್ ಸೇ ಬಂದ್ ರಕೋ.’ (ಫ್ಲಶ್ ಮಾಡಿದ್ರಾ? ನಲ್ಲಿ ಗಟ್ಟಿಯಾಗಿ ನಿಲ್ಲಿಸಿ ಅಕ್ಕಾ..)

ಬಾಗಿಲ ಬಳಿ ನಿಂತಿದ್ದ ಹೆಂಗಸು ಆಚೆ ಬಂದಾಕೆಯನ್ನು ವಿಚಾರಿಸುತ್ತಿದ್ದಳು ನಿಂತಿದ್ದ ಹೆಂಗಸು. ಅಲ್ಲಿಯ ಸಿಬ್ಬಂದಿ ಎಂದು ಅವಳ ಸಮವಸ್ತ್ರದಿಂದ ವೇದ್ಯವಾಗಿತ್ತು. ಅವಳೊಂದಿಗೆ ಎರಡು ನಿಮಿಷ ನನ್ನ ಹರಕು ಮುರುಕು ಹಿಂದಿಯಲ್ಲಿ ಮಾತನಾಡಿ ಅಭಿನಂದಿಸಿದೆ.

‘ಯೇ ಮೇರಿ ಕಾಮ್.. ಆಪ್ ಭಿ ಟೀಕ್ ಸೇ ಫ್ಲಶ್ ಕರೋ’ (ಇದು ನನ್ನ ಕೆಲಸ. ನೀವು ಕೂಡ ಫ್ಲಶ್ ಮಾಡಿ ಬನ್ನಿ!) ಎಂದಾಗ ನಗುತ್ತಾ ಬಂದೆ.

ನಮ್ಮ ನಮ್ಮ ಕೆಲಸ.. ಮೇಲು, ಕೀಳು ಎಂದು ಭಾವಿಸಿದೆ ಅಚ್ಚುಕಟ್ಟಾಗಿ ಮಾಡಿದರೆ.. ಪ್ರತಿಯೊಬ್ಬರೂ ಹಾಗೆ ಮಾಡಿದರೆ.. ಪ್ರತಿಫಲ ಹಾಗೂ ಗೌರವ ಸರಿಯಾಗಿ ಇದ್ದರೆ.. ರಾಗಿ ಬೀಸುವುದು ತಪ್ಪುತ್ತದೆಯೇ ಎಂದು ಬೇಸರಿಸುವ ಪ್ರಮೇಯವೇ ಬರುವುದಿಲ್ಲ.

ಒಂದು ಸಂಸ್ಥೆಯಲ್ಲಿ ದುಡಿದರೆ ಗೌರವ, ಸಂಬಳ, ಸವಲತ್ತು ಎಲ್ಲಾ ಸಹಜವಾಗಿ ದೊರೆಯಬೇಕು. ಸರಕಾರದಿಂದ ಸಿಗುವ ಸವಲತ್ತುಗಳು ಕೂಡ ಜನರ ಹಕ್ಕು. ಅದಕ್ಕೆ ಭಾಗ್ಯ ಎಂದು ಹೆಸರಿಟ್ಟು ಜನ ಕೈಯೊಡ್ಡುವಂತೆ ಮಾಡುವುದನ್ನು ನಿಲ್ಲಿಸಬೇಕು.

ಕೆಲಸ, ಅನುಕೂಲ, ದುಡ್ಡು, ಅಂತಸ್ತು ಎಲ್ಲ ಮುಖ್ಯ. ಹಾಗೆಯೇ ಗೌರವ, ಸ್ವಾಭಿಮಾನ, ಛಲ ಕೂಡ ಅಷ್ಟೇ ಮುಖ್ಯ. ದುಡಿದು ತಿನ್ನಬೇಕು. ದುಡಿದು ಮುಂದೆ ಬರಬೇಕು ಎಂಬ ಆಕಾಂಕ್ಷೆ, ಛಲ ಇರಬೇಕು.

ಮಕ್ಕಳಿಗೆ ಅಕ್ಷರ, ಕಾಗುಣಿತ, ಲೆಕ್ಕ, ವಿಜ್ಞಾನ, ಇತಿಹಾಸ, ಭೌಗೊಳ ಕಲಿಸುತ್ತಾರೆ ನಮ್ಮ ಶಾಲೆಗಳಲ್ಲಿ. ನಮ್ಮ ನಡೆ, ನುಡಿ ಹೇಗಿರಬೇಕು ಎಂದು ಮನೆಯಲ್ಲಿ ಕಲಿಸುತ್ತೇವೆ. ಮನೆ, ಶಾಲೆ ಎರಡೂ ಕಡೆ ಇವೆಲ್ಲದರ ಜತೆಗೆ ಮಕ್ಕಳು ಆತ್ಮಗೌರವ ಬೆಳೆಸಿಕೊಳ್ಳುವಲ್ಲಿ ಸಹಕಾರವಿರಬೇಕು. ಹಿರಿಯರಲ್ಲಿ ಅದು ಮೊದಲು ಇರಬೇಕು.

ಇದರ ಪರಿಣಾಮವನ್ನು ಕೂಡಲೆ ಕಾಣಲಾಗುವುದಿಲ್ಲ.. ಪಾಠ ಹೇಳುವ ಅಧ್ಯಾಪಕರಿಗೆ ಅವರ ಕೆಲಸ ಪ್ರಿಯವಾಗಿರಬೇಕು. ಮನೆಯಲ್ಲಿ ಅಡುಗೆ ಮಾಡುವ ತಾಯಿಗೆ ಅವಳ ಕೆಲಸದ ಬಗ್ಗೆ ಹೆಮ್ಮೆಯಿರಬೇಕು.. ನಾವು ಹೀಗೆ ಇದ್ದರೂ ಸರಿಯೇ.. ನಮ್ಮ ಮುಂದಿನ ಪೀಳಿಗೆಯಾದರೂ ಸದೃಢಚಿತ್ತರಾಗಿ ಆತ್ಮಗೌರವದಿಂದ ಇರಲಿ. ಅದಕ್ಕೆ ಬೇಕಾಗುವುದನ್ನು ನಾವು ಮಾಡೋಣ.

‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ಎಂಬ ಗಾದೆಯಿದೆ. ‘ರಾಗಿ ಬೀಸುವುದು ತಪ್ಪುತ್ತದೆಯೇ?’ ಎಂದು ಕೊನೆಗೊಳ್ಳುವ ಗಾದೆಯ ಅಸಹಾಯಕತೆಯನ್ನು ರಾಗಿ ಬೀಸುವುದು ಕೀಳು ಎಂಬ ಭಾವನೆಯನ್ನು ಕಿತ್ತೊಗೆಯೋಣ. ನಾವು ಬೀಸುವ ರಾಗಿಯ ನಿಣುಪು ಎಷ್ಟು ನೋಡಿ ಎಂದು ಹೆಮ್ಮೆಯಿಂದ ತೋರಿಸೋಣ.

‘If you are a sweeper, be the best sweeper in the world. No corner spared’

Leave a Reply