ರಾಜ್ಯಸಭೆಯಲ್ಲಿ ಗ್ರೇಟ್ ಡಿಬೇಟ್: ಸ್ವಾಮಿ ಭರ್ಜರಿ ವಾದ, ಅದಕ್ಕೆ ತಕ್ಕಂತೆಯೇ ಇತ್ತು ಕಾಂಗ್ರೆಸ್ ಪ್ರತಿವಾದ

ಡಿಜಿಟಲ್ ಕನ್ನಡ ಟೀಮ್

ರಾಜ್ಯಸಭೆಯಲ್ಲಿ ಅಗುಸ್ಟಾ ವೆಸ್ಟ್ಲ್ಯಾಂಡ್ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಪರ ಅಭಿಷೇಕ್ ಮನು ಸಿಂಘ್ವಿ ಮಜುಬೂತಾದ ವಾದವನ್ನೇ ಮಂಡಿಸಿದ್ದರು.

ಆದರೆ ಪ್ರತ್ಯಾಕ್ರಮಣದಲ್ಲಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ, ಸಿಂಘ್ವಿ ವಾದಸರಣಿಯನ್ನು ಪ್ರಶ್ನೆಗೆ ಒಳಪಡಿಸಿದರಲ್ಲದೇ, ಶಂಕಿತ ರಾಜಕೀಯ ನಾಯಕರು ಸಿಬಿಐ ವಿಚಾರಣೆಗೆ ಒಳಪಡುವ ಅವಶ್ಯ ಏಕಿದೆ ಎಂಬುದನ್ನೂ ಪ್ರತಿಪಾದಿಸಿದರು. ಸ್ವಾಮಿ ಮಾತಿನ ಮುಖ್ಯಾಂಶಗಳು ಹೀಗಿದ್ದವು.

– ಜೈನ್ ಹವಾಲಾ ಪ್ರಕರಣವನ್ನು ಸಿಂಘ್ವಿ ಸರಿಯಾಗಿ ಓದಿಕೊಳ್ಳಬೇಕು. ಸಂಚು ಸಂಭವಿಸುತ್ತಿರುವಾಗ ಸಿಗುವ ನಾಮಧೇಯದ ಮೊದಲಾಕ್ಷರಗಳು ಸಾಕ್ಷಿಯೇ ಆಗಿರುತ್ತವೆ. ಆದರೆ ಹವಾಲಾ ಕೇಸಿನಲ್ಲಿ ಆಡ್ವಾಣಿ ಪ್ರಕರಣದಲ್ಲಿ ಇವೆಲ್ಲ ನಂತರ ಸೇರಿಕೊಂಡ ಅಂಶಗಳಾಗಿದ್ದವರಿಂದ ಅದನ್ನು ಸಾಕ್ಷಿಯಾಗಿ ಪರಿಗಣಿಸಲಿಲ್ಲ.

– ಹೆಲಿಕಾಪ್ಟರ್ ಕ್ಯಾಬಿನ್ ನ 1.45 ಮೀಟರ್ ಅಂತಾರಾಷ್ಟ್ರೀಯ ಪ್ರಮಾಣಕ್ಕೆ ವ್ಯತಿರಿಕ್ತವಾಗಿ 1.8 ಮೀಟರ್ ನಿಗದಿಪಡಿಸಲಾಯಿತು. ಇದರ ಉದ್ದೇಶ ಅಗುಸ್ಟಾ ಮಾತ್ರ ಅರ್ಹತೆ ಪಡೆಯಲಿ ಎಂದು.

(ಆದರೆ ಎ. ಕೆ ಆ್ಯಂಟನಿ ತಮ್ಮ ಮಾತಿನಲ್ಲಿ ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿ, ಪ್ರೆಸ್ ಇನ್ಫಾರ್ಮೆಷನ್ ದಾಖಲೆ ಉಲ್ಲೇಖಿಸುತ್ತ, 2003ರಲ್ಲಿ ಎನ್ ಡಿ ಎ ಸರ್ಕಾರವೇ ಹಾರಾಟದ ಎತ್ತರ ಕಡಿಮೆಗೊಳಿಸಿದ್ದು ಹಾಗೂ ಕ್ಯಾಬಿನ್ ಅಳತೆ ಹೆಚ್ಚು ಮಾಡಿದ್ದು. ಇದಕ್ಕೆ ಕಾಂಗ್ರೆಸ್ ಮೇಲೆ ಆರೋಪ ಕೂರಿಸಬೇಡಿ.)

-ಎಪಿ ಎಂದರೆ ಆನಂದಿಬೆನ್ ಪಟೇಲ್ ಆಗಿರಬಹುದಲ್ವಾ ಅಂತ ವಾದಿಸುವವರನ್ನು ನಂಬುವುದಾದರೆ ಇಟಲಿಯಿಂದ ಡೀಲ್ ಮಾಡುತ್ತಿದ್ದವರಿಗೆ ಹುಚ್ಚು ಇದ್ದಿರಬೇಕು ಎನ್ನಬೇಕಾಗುತ್ತದೆ. ಏಕೆಂದರೆ ಯುಪಿಎ ಸರ್ಕಾರಕ್ಕೆ ಸಂಬಂಧವೇ ಪಡದವರ ಬಳಿ ಅವರೇಕೆ ಚೌಕಾಶಿ ಮಾಡ್ತಾರೆ? ಇನ್ನು, ಆಗಿನ ಮಂತ್ರಿ ರಕ್ಷಣಾ ಮಂತ್ರಿ ಆ್ಯಂಟನಿ ಅವರೇ ಪತ್ರಿಕೆಗಳಿಗೇ ನೀಡಿದ ಹೇಳಿಕೆಗಳಲ್ಲಿ ಅಗುಸ್ಟಾ ವೆಸ್ಟ್ಲ್ಯಾಂಡ್ ಖರೀದಿಯಲ್ಲಿ ಹಗರಣ ಆಗಿರುವುದು ಹೌದು ಎಂದಿದ್ದಾರೆ. ಅತ್ತ, ಇಟಲಿ ಕೋರ್ಟಿನಲ್ಲಿ ಲಂಚ ಕೊಟ್ಟವರಿಗೆ ಶಿಕ್ಷೆ ಆಗಿದೆ. ಈ ಲಂಚವನ್ನು ಕೇವಲ ವಾಯುಸೇನೆಯ ಒಬ್ಬ ವ್ಯಕ್ತಿ ಪಡೆಯುವುದಕ್ಕೆ ಸಾಧ್ಯವಿಲ್ಲ. ಒಂದು ಒಪ್ಪಂದವನ್ನು ಸಾಕಾರಗೊಳಿಸುವ ಪೂರ್ಣಶಕ್ತಿಅವರೊಬ್ಬರ ಬಳಿಯೇ ಇಲ್ಲ. ಇಟಲಿ ನ್ಯಾಯಾಲಯ ಹೇಳಿರುವುದು ಲಂಚ ಪಡೆದಿರುವವರಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿವರ್ಗವೂ ಇದೆ ಎಂದು. ಹೀಗಾಗಿ ಇಟಲಿ ಕೋರ್ಟಿನ ಎದುರು ಬಂದಿರುವ ದಾಖಲೆಗಳಲ್ಲಿ ಹೆಸರು ಇದ್ದವರು ಇಲ್ಲಿ ಸಿಬಿಐ ತನಿಖೆಗೆ ಒಳಗಾಗಲೇಬೇಕು.

-ಅಗುಸ್ಟಾವೇ ಅಂತಿಮ ಎಂದು ಗೊತ್ತಾದಕೂಡಲೇ 8 ಹೆಲಿಕಾಪ್ಟರ್ ಗಿದ್ದ ಪ್ರಸ್ತಾಪ 4ಕ್ಕೆ ಹೆಚ್ಚಳವಾಗಿತ್ತು. ಹಿಂದಿನ ಎಂ ಶ್ರೇಣಿಯೇ ಸರಿಯಾಗಿ ಉಪಯೋಗವಾಗಿಲ್ಲ ಎಂಬ ಸಿಎಜಿ ವರದಿ ಇರುವಾಗ 1200 ಕೋಟಿ ಹೆಚ್ಚುವರಿ ವೆಚ್ಚದಲ್ಲಿ ಮತ್ತೆ ನಾಲ್ಕು ಹೆಲಿಕಾಪ್ಟರ್ ಪ್ರಸ್ತಾವ ಏಕಾಯಿತು? ಆ್ಯಂಟನಿ ಅವರು 793 ಕೋಟಿಗೆ ಅಖೈರುಗೊಳಿಸಿದ್ದ ಒಪ್ಪಂದ ನಂತರ ಆರುಪಟ್ಟು ಹೆಚ್ಚೇಕಾಯಿತು?

(ಆದರೆ, ಹೆಚ್ಚುವರಿ 4 ವಿಐಪಿ ಬಳಕೆಗೆ ಆಗಿರಲೇ ಇಲ್ಲ. ಅದೇ ಬೇರೆ ಎಂಬುದು ಆ್ಯಂಟನಿ ಸ್ಪಷ್ಟನೆ.)

– ಖರೀದಿಸಬೇಕಿದ್ದ ಹೆಲಿಕಾಪ್ಟರ್ ಗಳ ಪರೀಕ್ಷೆ ಹಾರಾಟ ಇಟಲಿಯಲ್ಲಾಯಿತು. ಅಲ್ಲೂ ಯಾವುದನ್ನು ಖರೀದಿ ಮಾಡಲಾಗುತ್ತಿದೆಯೋ ಅದನ್ನು ಬಿಟ್ಟು ಬೇರೆಯದರಲ್ಲಿ ಪರೀಕ್ಷೆ ಮಾಡಲಾಯಿತು.

(ಈ ಅಂಶವನ್ನು ನಂತರ ಕಾಂಗ್ರೆಸ್ ಸಂಸದ ಆನಂದ ಶರ್ಮ ಸದನದಲ್ಲಿ ಅಲ್ಲಗೆಳೆದರು. ಬೇರೆ ದೇಶಗಳಲ್ಲಿ ಫೀಲ್ಡ್ ಟ್ರಾಯಲ್ ಆಗುವುದು ರಕ್ಷಣಾ ಸಚಿವಾಲಯದ ನಿರ್ದೇಶನಗಳ ಪ್ರಕಾರ ತಪ್ಪಲ್ಲ, ಅದೇ ಹೆಲಿಕಾಪ್ಟರ್ ಗಳಲ್ಲೇ ಪರೀಕ್ಷೆ ಮಾಡಲಾಗಿದೆ ಎಂದರು. ಅಲ್ಲದೇ ಪರೀಕ್ಷೆ ಹಾರಾಟ ಆಗಿದ್ದು ಯುಕೆಯಲ್ಲೇ ವಿನಃ ಸ್ವಾಮಿ ಹೇಳುವಂತೆ ಇಟಲಿಯಲ್ಲಲ್ಲ ಎಂದರು.)

– ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಇಟಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕಾದ ದಾಖಲೆಗಳನ್ನು ವಿಳಂಬಗೊಳಿಸಿದರು. ಇದೇಕೆ ಎಂದು ಪ್ರಶ್ನಿಸಬೇಡವೇ? ಈ ಒಪ್ಪಂದದ ಚಾಲನ ಶಕ್ತಿ ಎಂದು ಮಧ್ಯವರ್ತಿಗಳು ಹೇಳಿರುವ ಸೋನಿಯಾ ಗಾಂಧಿ ಸಿಬಿಐ ತನಿಖೆಗೆ ಒಳಗಾಗಲೇಬೇಕು. ಎಪಿ ಎಂದಷ್ಟೇ ಸಂಕೇತಾಕ್ಷರ ಇಲ್ಲ, ಬದಲಿಗೆ ಅವರನ್ನು ರಾಜಕೀಯ ಕಾರ್ಯದರ್ಶಿ ಎಂದು ನಮೂದಿಸಲಾಗಿದೆ. ಯಾರ ರಾಜಕೀಯ ಕಾರ್ಯದರ್ಶಿ ಎಂದು ತಿಳಿಯಬೇಕಲ್ಲವೇ? ಯಾರದ್ದು ಎಂದು ಗೊತ್ತಿರುವ ಹೆಸರು ಹೇಳಿದರೆ ನೀವದನ್ನು ಕಡತದಿಂದ ತೆಗೆದುಹಾಕುತ್ತೀರಾದ್ದರಿಂದ ಹೇಳುವುದಿಲ್ಲ! ಅಲ್ಲದೇ ಕೋರ್ಟಿನಲ್ಲಿ ಎಪಿ ಂತ್ತು ಇ್ನನೊಬ್ಬರ ಚಿತ್ರವನ್ನು ತೋರಿಸಿದಾಗ ಸಾಕ್ಷಿ ಅದನ್ನು ಗುರುತಿಸಿರುವುದು ಗಮನಾರ್ಹ.

ಈ ಹಂತದಲ್ಲಿ ಸುಬ್ರಮಣಿಯನ್ ಸ್ವಾಮಿ ಉಲ್ಲೇಖಿಸುತ್ತಿರುವ ದಾಖಲೆ ಸರ್ಕಾರದಿಂದ ಅಧಿಕೃತವಾಗಿಲ್ಲ ಎಂಬ ಆಕ್ಷೇಪ ಎದ್ದಿತು. ಸಿಂಘ್ವಿ ತಮ್ಮ ಭಾಷಣದಲ್ಲಿ ಅದನ್ನು ಉಲ್ಲೇಖಿಸಬಹುದಾದರೆ ತಾವೇಕಿಲ್ಲ ಎಂದು ಸ್ವಾಮಿ ಹಠಕ್ಕೆ ಬಿದ್ದರು. ನಂತರ ಅಧಿಕೃತಗೊಳಿಸುವುದಾಗಿ ಒಪ್ಪಿಕೊಂಡರು.

ಇನ್ನು, ಅಹ್ಮದ್ ಪಟೇಲ್ ತಮ್ಮ ಮಾತಿನಲ್ಲಿ ರೋಷಾವೇಶ ವ್ಯಕ್ತಪಡಿಸಿ- ‘ಪ್ರಭಾವಿಗಳೆಂದು ಗುರುತಿಸಿದ ಮಾತ್ರಕ್ಕೆ ನಾವು ಲಂಚ ತೆಗೆದುಕೊಂಡಿರೋದು ಸಾಬೀತಾಗುತ್ತಯೇ? ಆರೋಪ ಸಾಬೀತಾದರೆ ಸಾರ್ವಜನಿಕ ಜೀವನದಿಂದಲೇ ನಿವೃತ್ತನಾಗುವೆ. ಆದರೆ ಈ ರೀತಿ ಸುಳ್ಳು ಆರೋಪ ಹೊರೆಸುವವರಿಗೆ ಏನು ಶಿಕ್ಷೆಯಾಗುತ್ತದೆ’ ಅಂತ ಪರೋಕ್ಷವಾಗಿ ಸ್ವಾಮಿ ವಿರುದ್ಧ ಕಿಡಿಕಾರಿದರು.

ಮಾಜಿ ರಕ್ಷಣಾ ಸಚಿವ ಎ. ಕೆ. ಆ್ಯಂಟನಿ ತುಂಬ ಸಮಚಿತ್ತದಿಂದ ವಾದ ಮಂಡಿಸಿ, ಮಾಧ್ಯಮ ವರದಿಗಳು ಬರುತ್ತಲೇ ಹೇಗೆ ತಮ್ಮ ಸರ್ಕಾರ ಪ್ರತಿಸ್ಪಂದಿಸಿತು ಎಂಬುದನ್ನು ಸವಿವರವಾಗಿ ಹಂಚಿಕೊಂಡರು. ರಕ್ಷಣಾ ಖಾತೆ ಪ್ರತಿ ಹಂತದಲ್ಲೂ ಹೇಗೆ ತ್ವರಿತವಾಗಿ ಕಾರ್ಯ ಕೈಗೊಂಡಿತು, ಅಗಸ್ಟಾ ಜತೆಗಿನ ಒಪ್ಪಂದ ರದ್ದುಗೊಳಿಸುವುದಕ್ಕೆ, ಹಣ ಹಿಂಪಡೆಯುವುದಕ್ಕೆ ಶೀಘ್ರವಾಗಿ ಕ್ರಮ ಕೈಗೊಂಡೆವು ಎಂಬುದನ್ನು ವಿವರಿಸಿದರು. ಸಾಮಾನ್ಯವಾಗಿ ಜಂಟಿ ಸದನ ಸಮಿತಿ ತನಿಖೆಗೆ ಪ್ರತಿಪಕ್ಷಗಳು ಆಗ್ರಹಿಸುತ್ತವೆ. ಆದರೆ ಈ ಪ್ರಕರಣದಲ್ಲಿ ನಾವೇ ಜೆಪಿಸಿಗೆ ಒತ್ತಾಯಿಸಿದರೆ, ಪ್ರತಿಪಕ್ಷದಲ್ಲಿದ್ದ ನೀವು ವಿರೋಧಿಸಿದಿರಿ ಎಂದರು ಆ್ಯಂಟನಿ. ಅಲ್ಲದೇ ಕೋರ್ಟಿನಲ್ಲಿ ಕುಟುಂಬ ಎಂಬುದಕ್ಕೆ ಸಾಕ್ಷಿ ಹೇಳುವವ ತ್ಯಾಗಿ ಕುಟುಂಬ ಎಂದೇ ಹೇಳಿದ್ದಾನೆ.

ಇಷ್ಟು ಹೇಳಿ ಈಗ ಮಾಡಬೇಕಿರುವುದೇನು ಎಂಬುದನ್ನು ಆ್ಯಂಟನಿ ಆಗ್ರಹಿಸಿದರು. ಮೊದಲಿಗೆ ಕಂಪನಿ ಭ್ರಷ್ಟ ಎಂದು ನ್ಯಾಯಾಲಯದಲ್ಲಿ ಸಾಬೀತಾಗಿರುವುದರಿಂದ ಅದರ ಮೇಲೆ ಕೇಸು ಹಾಕಿ ಹಣ ವಸೂಲಿ ಮಾಡಿ. ಮೇಕ್ ಇನ್ ಇಂಡಿಯಾದಿಂದ ಹೊರಹಾಕಿ. ಲಂಚ ತೆಗೆದುಕೊಂಡವರ ವಿರುದ್ಧ ಕ್ರಮ ಕೈಗೊಳ್ಳಿ, ನಮ್ಮನ್ನು ಸುಮ್ಮನೇ ಹೆದರಿಸಬೇಡಿ. ಅಧಿಕಾರ ನಿಮ್ಮ ಕೈಯಲ್ಲಿದೆ.

Leave a Reply