ನವದೆಹಲಿಯಲ್ಲಿ 12 ಶಂಕಿತ ಜೈಶ್ ಇ ಮೊಹಮದ್ ಉಗ್ರರ ಬಂಧನ

ಡಿಜಿಟಲ್ ಕನ್ನಡ ಟೀಮ್

ಉಗ್ರಕೃತ್ಯಗಳಾದಾಗ ಸರ್ಕಾರಗಳನ್ನು, ವ್ಯವಸ್ಥೆಯನ್ನು ಬಯ್ದುಕೊಳ್ಳುತ್ತೇವೆ. ಆದರೆ, ಪೋಲೀಸ್- ಗುಪ್ತಚರ ವಿಭಾಗದ ಪ್ರಯತ್ನದಿಂದ ಹಲವು ಅನಾಹುತಗಳು ತಪ್ಪಿರುತ್ತವೆ. ಅಂಥ ಪ್ರಶಂಸನೀಯ ಕಾರ್ಯಗಳ ಸಾಲಿಗೆ ಈ ಕಾರ್ಯಾಚರಣೆಯೂ ಸೇರುತ್ತದೆ.

ದೇಶದ ರಾಜಧಾನಿ ಹಾಗೂ ವಿವಿಧ ನಗರಗಳಲ್ಲಿ ಸ್ಫೋಟ ನಡೆಸಲು ಯೋಜನೆ ರೂಪಿಸುತ್ತಿದ್ದ ಶಂಕಿತ ಉಗ್ರರನ್ನು ಭಾರತ ಗುಪ್ತಚರ ದಳ ಹಾಗೂ ದೆಹಲಿ ಪೊಲೀಸರ ವಿಶೇಷ ಪಡೆ ಬಂಧಿಸಿದೆ.

ಬುಧವಾರ ಬೆಳಗ್ಗೆ ನಡೆದ ಕಾರ್ಯಾಚರಣೆಯಲ್ಲಿ ಕನಿಷ್ಠ 12 ಶಂಕಿತ ಜೈಶ್ ಇ ಮೊಹಮದ್ ಸಂಘಟನೆಯ ಉಗ್ರರನ್ನು ವಶಕ್ಕೆ ಪಡೆಯಲಾಗಿದೆ. ದೆಹಲಿಯಲ್ಲಿ 8 ಹಾಗೂ ದೆಬಾನ್ ನಲ್ಲಿ 4 ಉಗ್ರರನ್ನು ಬಂಧಿಸಲಾಗಿದೆ. ದೆಹಲಿಯ ಪೂರ್ವ ಭಾಗದಲ್ಲಿರುವ ಗೋಕುಲಪುರಿ ಪ್ರದೇಶದಲ್ಲಿ ಸ್ಫೋಟಕವನ್ನು ತಯಾರಿಸುವ ವೇಳೆ ಇಬ್ಬರು ಉಗ್ರರು ಸಿಕ್ಕಿಬಿದ್ದಿದ್ದಾರೆ. ಈ ಇಬ್ಬರ ವಿಚಾರಣೆ ನಡೆಸಿದ ನಂತರ ಉಳಿದವರನ್ನು ಒಬ್ಬೊಬ್ಬರಂತೆ ಸೆರೆ ಹಿಡಿಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

‘ಬಂಧಿತರು ಜೆಇಎಂ ಸಂಘಟನೆಯ ನಾಯಕ ಯೂಸುಫ್ ಅಲ್ ಹಿಂದಿ ಜತೆ ನಿಕಟ ಸಂಪರ್ಕದಲ್ಲಿದ್ದರು. ಅಲ್ಲದೆ ಉಗ್ರ ಸಂಘಟನೆಯ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಕಾರ್ಯಾಚರಣೆಯಲ್ಲಿ ಬಾಂಬ್ ತಯಾರಿಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಬಂಧಿತರು ಪೊಲೀಸರ ವಿಚಾರಣೆಗೆ ಒಳಪಟ್ಟಿದ್ದಾರೆ. ಇವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಕಾರ್ಯಾಚರಣೆ ಮುಂದುವರಿಯಲಿದ್ದು, ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ಬಂಧನಗಳಾಗುವ ಸಾಧ್ಯತೆಗಳಿವೆ.

Leave a Reply