ನಮ್ಮನ್ನು ತಾಗಬೇಕಾದ ಕೇರಳದ ನಿರ್ಭಯ ಪ್ರಕರಣ, ಲೋಕಸಭೆಯಲ್ಲಿ ಅನುರಣನ

ಡಿಜಿಟಲ್ ಕನ್ನಡ ಟೀಮ್

2012ರ ದೆಹಲಿ ನಿರ್ಭಯಾ ಪ್ರಕರಣಕ್ಕಿಂತ ಕ್ರೂರವಾಗಿ ಕಳೆದವಾರ ಕೇರಳದ ಪೆರುಂಬವೂರ್ ಎಂಬಲ್ಲಿ 30 ವರ್ಷದ ಕಾನೂನು ವಿದ್ಯಾರ್ಥಿನಿಯನ್ನು ಅಮಾನುಷವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಗುಪ್ತಾಂಗವನ್ನು ಸೀಳಿ, ಕಿಬ್ಬೊಟ್ಟೆಯಿಂದ ಕರಳು ಹೊರಬರುವಂತೆ ದೊಡ್ಡ ಆಯುಧವನ್ನು ದೇಹದೊಳಕ್ಕೆ ತುರುಕಿದ್ದರು. ಜೊತೆಗೆ ದೇಹದ ವಿವಿಧ ಭಾಗಗಳಲ್ಲಿ ಸುಮಾರು 20 ಭಾರಿ ಸೀಳಿದ್ದರು. ತಲೆಯನ್ನು ಜಜ್ಜಿ, ವೇಲ್ ನಿಂದ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿದ್ದರು. ಇಂತಹ ಕ್ರೂರ ವಿಕೃತಿ ಘಟನೆಯ ವಿರುದ್ಧ ಕೇರಳದ ಸಂಘಟನೆಗಳು ಪ್ರತಿಭಟಿಸುತ್ತಿವೆ, ಆರೋಪಿಗಳನ್ನು ಬಂಧಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ. ಆಕ್ರೋಶದ ಕಟ್ಟೆ ಒಡೆದಿರುವಾಗಲೇ ಕೇರಳದಲ್ಲಿ 19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯನ್ನು ಆಕೆಯ ಸ್ನೇಹಿತ ಮತ್ತು ಈತನ ಸ್ನೇಹಿತರು ಸೇರಿ ಸಾಮೂಹಿಕವಾಗಿ ಅತ್ಯಾಚಾರ ವೆಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ವರ್ಕಲದ ಅಯಾಂಥಿ ಸೇತುವೆಯ ಬಳಿ ಅತ್ಯಾಚಾರ ನಡೆದಿದ್ದು, ಸಂತ್ರಸ್ತೆ ಮೂವರ ಮೇಲೆ ದೂರು ನೀಡಿದ್ದಾರೆ. ಈ ಮಾಹಿತಿ ಆಧಾರದಲ್ಲಿ ಆರೋಪಿಗಳಿಗಾಗಿ ಪೊಲೀಸರು ಪತ್ತೆ ಕಾರ್ಯ ನಡೆಸುತ್ತಿದ್ದಾರೆ.

ಎರಡನೆ ವರ್ಷದ ಬಿಎಸ್ ಸಿ ನರ್ಸಿಂಗ್ ಕೋರ್ಸ್ ಮಾಡುತ್ತಿದ್ದ ಈಕೆ ಪರಿಚಯವಿರುವ ಆಟೋರಿಕ್ಷಾ ಚಾಲಕನೊಂದಿಗೆ ಆಟೋದಲ್ಲಿ ಹೊರಡುತ್ತಾಳೆ, ಮಾರ್ಗ ಮಧ್ಯೆ ಈ ಆಟೋ ಚಾಲಕನ ಇಬ್ಬರು ಸ್ನೇಹಿತರನ್ನು ವಾಹನದಲ್ಲಿ ಹತ್ತಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ.

ಘಟನೆಯ ವೇಳೆ ಈಕೆ ಆಘಾತಕ್ಕೆ ಒಳಗಾಗಿ ಸಹಾಯಕ್ಕೆ ಮೊರೆ ಇಡುತ್ತಾಳೆ. ಈ ವೇಳೆ ಘಟನೆಯ ಸ್ಥಳದ ಕಡೆಗೆ ಆಗಮಿಸುತ್ತಿದ್ದ ಜನರನ್ನು ನೋಡಿ ಆರೋಪಿಗಳು ಪರಾರಿಯಾಗಿದ್ದಾರೆ. ನಂತರ ಈಕೆಯನ್ನು ತಿರುವಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸುತ್ತಾರೆ.

ವಾರದ ಹಿಂದೆ ಎರ್ನಾಕುಲಂನಲ್ಲಿ ನಡೆದ ಕಾನೂನು ವಿದ್ಯಾರ್ಥಿನಿಯ  ಕ್ರೂರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಳಂಬ ಮಾಡುತ್ತಿದ್ದಾರೆ ಎಂದು ಎಲ್ ಡಿ ವೈ ಎಫ್ ಸಂಘಟನೆ ಸೇರಿ ರಾಜ್ಯದ್ಯಂತ ಪ್ರತಿಭಟನೆಗಳು ಪ್ರಾರಂಭವಾಗಿವೆ. ಇದಕ್ಕೆ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ್ದು, ಸಂತ್ರಸ್ತ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಿದ್ದಾರೆ.

ಈ ವಿಚಾರ ಲೋಕಸಭೆಯಲ್ಲೂ ಸದ್ದು ಮಾಡಿದ್ದು, ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು. ‘ಹೈದರಾಬಾದ್, ಉತ್ತರಪ್ರದೇಶಗಳಲ್ಲಿ ದಲಿತ- ಅಲ್ಪಸಂಖ್ಯಾತ ಕಾರ್ಡ್ ಪ್ರಯೋಗಿಸಿ ರಾಜಕೀಯ ಭೇಟಿ ನೀಡಿದ್ದ ರಾಹುಲ್ ಗಾಂಧಿ ಕೇರಳಕ್ಕೇಕೆ ಹೋಗಿಲ್ಲ’ ಎಂದು ಚುಚ್ಚಿದರು. ಈ ವೇಳೆ ಉತ್ತರಿಸಿದ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯನಾಯ್ಡು, ಈ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಹೇಳಿ  ಪ್ರಕರಣದ ಸಂಪೂರ್ಣ ವರದಿಯನ್ನು ಕೇರಳ ಸರ್ಕಾರದಿಂದ ಪಡೆದುಕೊಳ್ಳವಂತೆ ಗೃಹ ಇಲಾಖೆಗೆ ತಿಳಿಸಿದರು.

Leave a Reply