ಇಡೀ ದೇಶದ ರೈತರ ಬೆಳೆ ಸಾಲ ಒಂದು ತೂಕವಾದರೆ, ಅದಾನಿ ಗ್ರೂಪ್ ನ ಸಾಲವೇ ಮತ್ತೊಂದು ತೂಕ! ಇದು ಜೆಡಿಯು ಸಂಸದ ಸದನದಲ್ಲಿ ಹಂಚಿಕೊಂಡ ಮಾಹಿತಿ

ಗೌತಮ್ ಅದಾನಿ

ಡಿಜಿಟಲ್ ಕನ್ನಡ ಟೀಮ್

‘ದೇಶದಲ್ಲಿ ಬೆಳೆ ಬೆಳೆಯುವ ಸಲುವಾಗಿ ರೈತರು ಮಾಡಿರುವ ಒಟ್ಟಾರೆ ಸಾಲ ₹ 72 ಸಾವಿರ ಕೋಟಿ. ಕೇವಲ ಅದಾನಿ ಗ್ರೂಪ್ ಸರ್ಕಾರಿ ಬ್ಯಾಂಕ್ ನಿಂದ ಮಾಡಿರುವ ಸಾಲವೂ ಸಹ ₹ 72 ಕೋಟಿ’ ಹೀಗಂತಾ ಹೇಳಿರೋದು ಜೆಡಿಯು ರಾಜ್ಯಸಭೆ ಸದಸ್ಯ ಪವನ್ ವರ್ಮಾ.

ರಾಜ್ಯಸಭೆ ಕಲಾಪದ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪ ಮಾಡಿದ ಜೆಡಿಯು ಸದಸ್ಯ ಪವನ್ ವರ್ಮಾ, ‘ಅದಾನಿ ಗ್ರೂಪ್ ಬರೋಬ್ಬರಿ ₹ 72 ಸಾವಿರ ಕೋಟಿ ಸಾಲ ಹೊಂದಿದೆ. ಸರ್ಕಾರಿ ಬ್ಯಾಂಕ್  (ಪಿಎಸ್ ಯು) ಗಳಲ್ಲಿ ಒತ್ತಡ ಹಾಕುವ ಮೂಲಕ, ಸಾಲ ಮರುಪಾವತಿ ಮಾಡಲಾಗದವರಿಗೆ ಅತಿ ಹೆಚ್ಚು ಸಾಲ ಕೊಡಿಸಲಾಗಿದೆ.’ ಎಂದು ಆರೋಪಿಸಿದ್ದಾರೆ.

‘ಪಿಎಸ್ ಯು ಬ್ಯಾಂಕ್ ಗಳಲ್ಲಿ ವಿವಿಧ ಕಾರ್ಪೋರೆಟ್ ಕಂಪನಿಗಳು ಒಟ್ಟಾರೆಯಾಗಿ ₹ 5 ಲಕ್ಷ ಕೋಟಿ ಸಾಲ ಮಾಡಿವೆ. ಆ ಪೈಕಿ ಸುಮಾರು ₹ 1.4 ಲಕ್ಷ ಕೋಟಿಯಷ್ಟು ಸಾಲವನ್ನು ಲ್ಯಾಂಕೊ, ಜಿವಿಕೆ, ಸುಜ್ಲೋನ್ ಎನರ್ಜಿ, ಹಿಂದೂಸ್ಥಾನ್ ಕನ್ಸ್ ಸ್ಟ್ರಕ್ಷನ್ಸ್ ಹಾಗೂ ಅದಾನಿ ಗ್ರೂಪ್ ಎಂಬ ಕೇವಲ 5 ಕಂಪನಿಗಳು ಪಡೆದಿವೆ’ ಎಂದು ಮಾಹಿತಿ ನೀಡಿದ್ದಾರೆ ವರ್ಮಾ.

‘ಅದಾನಿ ಗ್ರೂಪ್ ಹಾಗೂ ಪ್ರಸ್ತುತ ಸರ್ಕಾರದ ನಡುವೆ ಏನು ಸಂಬಂಧವಿದೆಯೋ ಗೊತ್ತಿಲ್ಲ. ಅವರು ಯಾರೆಂದು ಸರ್ಕಾರಕ್ಕೆ ತಿಳಿದಿದೆಯೋ ಇಲ್ಲವೊ ಅದೂ ಗೊತ್ತಿಲ್ಲ. ಆದರೆ, ಅದಾನಿ ಗ್ರೂಪ್ ಮಾಲೀಕ (ಗೌತಮ್) ಮಾತ್ರ ಪ್ರಧಾನಿ ಮಂತ್ರಿಯವರು ಚೀನಾ, ಬ್ರಿಟನ್, ಅಮೆರಿಕ, ಯುರೋಪ್, ಜಪಾನ್ ಹೀಗೆ ಯಾವುದೇ ದೇಶಕ್ಕೆ ತೆರಳಿದರೂ ಅಲ್ಲಿ ಕಾಣಿಸಿಕೊಳ್ಳುತ್ತಾರೆ.

ಈ ಕಂಪನಿಗೆ ಸರ್ಕಾರದಿಂದ ಸಿಕ್ಕಿರುವ ನೆರವು ಊಹೆಗೂ ಮೀರಿದೆ. ಗುಜರಾತ್ ನಲ್ಲಿ ಹೈಕೋರ್ಟ್ ಆಕ್ಷೇಪಣೆಯ ನಡುವೆಯೂ ಕಂಪನಿಯ ಎಸ್ಇ ಜಡ್ ಗೆ ಅನುಮತಿ ನೀಡಲಾಗಿದೆ’ ಎಂದು ಆರೋಪಿಸಿದ್ದಾರೆ.

ಈ ವೇಳೆ ಉಪಾಧ್ಯಕ್ಷ ಪಿ.ಜೆ ಕುರಿಯನ್, ಸದನದಲ್ಲಿ ಕೇವಲ ಆರೋಪ ಮಾಡುವಂತಿಲ್ಲ ಎಂದು  ವರ್ಮಾ ಅವರಿಗೆ ಎಚ್ಚರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವರ್ಮಾ, ‘ನಾನು ಅಧಿಕೃತ ಅಂಕಿ ಅಂಶಗಳನ್ನೇ ನೀಡುತ್ತಿದ್ದೇನೆ. ಇದು ಹೈಕೋರ್ಟ್ ನ ತೀರ್ಪು. ಉಳಿದ ವಿಷಯ ರಾಜ್ಯ ಸರ್ಕಾರಕ್ಕೆ ಬಿಟ್ಟದ್ದು. ಅದಾನಿ ಗ್ರೂಪ್ ಈ ಸಾಲವನ್ನು ಮರುಪಾವತಿ ಮಾಡುವ ಸಾಮರ್ಥ್ಯ ಇದೆಯೋ ಇಲ್ಲವೊ ಮುಖ್ಯವಲ್ಲ. ಆದರೆ, ಕಳೆದ 2-3 ವರ್ಷದಲ್ಲಿ ಈ ಕಂಪನಿಯ ಮೌಲ್ಯ ಶೇ.85ರಷ್ಟು ಹೆಚ್ಚಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಸರ್ಕಾರ ಉತ್ತರಿಸಬೇಕು. ಒಂದು ವೇಳೆ ಅರಿವಿದ್ದರೆ, ದೇಶದ ರೈತರ ಸಾಲದಷ್ಟು ಒಂದು ಕಂಪನಿ ಸಾಲ ಮಾಡಿರುವ ವಿಷಯದಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಲಿದೆ ಎಂಬುದನ್ನು ತಿಳಿಸಬೇಕು’ ಎಂದು ಆಗ್ರಹಿಸಿದ್ದಾರೆ.

Leave a Reply