ಜಾನ್ಸನ್ ಅಂಡ್ ಜಾನ್ಸನ್ ಪೌಡರಿಗೆ ಕ್ಯಾನ್ಸರ್ ನಂಟು, ಬಿತ್ತು 55 ಮಿಲಿಯನ್ ಡಾಲರ್ ದಂಡ!

 

ಡಿಜಿಟಲ್ ಕನ್ನಡ ಟೀಮ್

ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ಯಾರಿಗೆ ಗೊತ್ತಿಲ್ಲ ಹೇಳಿ. ಪ್ರತಿ ಮನೆಗಳಲ್ಲೂ ಪುಟ್ಟ ಮಕ್ಕಳಿಗೆ ಸ್ನಾನಕ್ಕೆ ಬಳಸುವ ಸೋಪ್ ನಿಂದ ಹಿಡಿದು, ಶಾಂಪು, ಪೌಡರ್, ಚರ್ಮಕ್ಕೆ ಹಚ್ಚುವ ಕ್ರೀಮ್ ಎಲ್ಲವೂ ಇದೇ ಕಂಪನಿಯದ್ದೇ. ಈಗ ಈ ಕಂಪನಿ 55 ಮಿಲಿಯನ್ ಅಮೆರಿಕನ್ ಡಾಲರ್ (₹ 366 ಕೋಟಿ) ನಷ್ಟು ದಂಡ ಕಟ್ಟಬೇಕು ಎಂದು ಸೆಂಟ್ ಲೂಯಿಸ್ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಇದಕ್ಕೆ ಕಾರಣ ತಿಳಿದರೆ, ನಿಮಗೆ ಗಾಬರಿಯಾಗಬಹುದು. ಏಕೆಂದರೆ, ಜಾನ್ಸನ್ ಅಂಡ್ ಜಾನ್ಸನ್ ಪೌಡರ್ ಬಳಸಿದ್ದರಿಂದ ಅಂಡಾಶಯ ಕ್ಯಾನ್ಸರ್ ಬಂದಿದೆ ಎಂಬ ಪ್ರಕರಣದಲ್ಲಿ ಈ ಕಂಪನಿ ತಪ್ಪಿತಸ್ಥವಾಗಿದೆ.

ಹೌದು, ಅಮೆರಿಕದ ಸೌಥ್ ಡಕೋಟ ಪ್ರಾಂತ್ಯದಲ್ಲಿ ಅಂಡಾಶಯ ಕ್ಯಾನ್ಸರ್ ಗೆ ತುತ್ತಾಗಿರುವ ವ್ಯಕ್ತಿಗೆ 55 ಮಿಲಿಯನ್ ಡಾಲರ್ ಪರಿಹಾರ ನೀಡುವಂತೆ ಸೆಂಟ್ ಲೂಯಿಸ್ ಕೋರ್ಟ್ ಆದೇಶ ನೀಡಿದೆ. ಕಳೆದ ಮೂರು ತಿಂಗಳಲ್ಲಿ ಸೆಂಟ್ ಲೂಯಿಸ್ ನ ನ್ಯಾಯಾಲಯ ಎರಡನೇ ಬಾರಿಗೆ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯನ್ನು ತಪ್ಪಿತಸ್ಥ ಎಂದು ನಿರ್ಧರಿಸಿ ದಂಡ ವಿಧಿಸಿದೆ. ಈ ಹಿಂದೆ ಅಂದರೆ, ಕಳೆದ ಫೆಬ್ರವರಿಯಲ್ಲಿಯೂ ಇದೇ ರೀತಿಯ ತೀರ್ಪು ಪ್ರಕಟಿಸಿತ್ತು. ಆ ತೀರ್ಪಿನಲ್ಲಿ ಕ್ಯಾನ್ಸರ್ ನಿಂದ ಮೃತಪಟ್ಟ ಅಲಬಮಾ ಪ್ರದೇಶದ ಮಹಿಳೆಯೊಬ್ಬಳ ಸಂಬಂಧಿಕರಿಗೆ 72 ಮಿಲಿಯನ್ ಡಾಲರ್ (₹ 480 ಕೋಟಿ) ಪರಿಹಾರ ನೀಡಲು ಸೂಚಿಸಿತ್ತು.

ಈ ಕಂಪನಿಯ ಪೌಡರ್ ಗೂ ಹಾಗೂ ಅಂಡಾಶಯ ಕ್ಯಾನ್ಸರ್ ಗೂ ಇರುವ ಸಂಬಂಧ ವೈಜ್ಞಾನಿಕ ಬಿಕ್ಕಟ್ಟಾಗಿದ್ದರೂ ನ್ಯಾಯಾಲಯ ಈ ಮಹತ್ವದ ತೀರ್ಪು ಪ್ರಕಟಿಸಿದೆ. ಪ್ರತಿ ಬಾರಿ ಸ್ನಾನದ ವೇಳೆ ಈ ಕಂಪನಿಯ ಉತ್ಪನ್ನ ಬಳಸುವವರ ಪೈಕಿ ನೂರಾರು ಮಂದಿ ಕಂಪನಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದು, ಈ ಉತ್ಪನ್ನಗಳಿಂದ ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಆರೋಪಿಸಿದ್ದಾರೆ.

ಈ ಎರಡು ಪ್ರಕರಣಗಳನ್ನು ಸೆಂಟ್ ಲೂಯಿಸ್ ಮೂಲದ ಒಂಡರ್ ಕಾನೂನು ಸಂಸ್ಥೆ ನಿಭಾಯಿಸಿದ್ದು, ದೇಶದಾದ್ಯಂತ ಈ ರೀತಿ ತೊಂದರೆ ಅನುಭವಿಸಿರುವವರು ಮುಂದೆ ಬರಬೇಕು ಎಂದು ಕರೆ ನೀಡಿದೆ.

‘ಈ ಕಂಪನಿ ಹೆಚ್ಚು ತೂಕಹೊಂದಿರರುವ ಮಹಿಳೆಯರು, ಕರಿಯರು ಮತ್ತು ಹಿಸ್ಪಾನಿಕ್ (ಲ್ಯಾಟಿನ್ ಅಮೆರಿಕನ್ನರು) ರನ್ನು ಹೆಚ್ಚು ಗುರಿಯಾಗಿಸಿ ಮಾರ್ಕೆಟಿಂಗ್ ಮಾಡುತ್ತದೆ. ಈಗ ಈ ವರ್ಗದ ಜನರು ಹೆಚ್ಚು ಅಂಡಾಶಯ ಕ್ಯಾನ್ಸರ್ ಗೆ ಒಳಗಾಗುತ್ತಿದ್ದು, ಇದು ಪೌಡರ್ ಗೆ ಸಂಬಂಧಿಸಿದ್ದಾಗಿದೆ. ಈ ಪೌಡರ್ ಗೂ ಹಾಗೂ ಅಂಡಾಶಯ ಕ್ಯಾನ್ಸರ್ ನಡುವಣ ಸಂಬಂಧ ಕುರಿತಂತೆ 1970ರಿಂದ ಸಂಶೋಧನೆ ನಡೆಯುತ್ತಿದೆ. ಆ ಪೈಕಿ ಕೆಲವು ವಿಷಯ ಅಧ್ಯಯನಗಳಿಂದ ಬಂದ ಫಲಿತಾಂಶದಲ್ಲಿ, ಮಹಿಳೆಯರು ತಮ್ಮ ಗುಪ್ತಾಂಗದ ಜಾಗದಲ್ಲಿ ನಿರಂತರವಾಗಿ ಈ ಪೌಡರ್ ಬಳಸಿದರೆ, ಶೇ.40 ರಷ್ಟು ಅಂಡಾಶಯ ಕ್ಯಾನ್ಸರ್ ಗೆ ತುತ್ತಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ’ ಎಂಬುದು ನ್ಯಾಯವಾದಿ ಜಿಮ್ ಒಂಡರ್ ವಾದ.

Leave a Reply