ಅತ್ಯಾಚಾರದ ಭೀಕರ ಸುದ್ದಿಗಳ ಮಡುವಲ್ಲಿ ನಿಂತಿರುವ ನಮಗೆ ಈ ತೀರ್ಪು ಆಶಾಕಿರಣ

ಡಿಜಿಟಲ್ ಕನ್ನಡ ಟೀಮ್

ಕೀನನ್ ಸ್ಯಾಂಟೋಸ್ ಮತ್ತು ರುಬೆನ್ ಫರ್ನಾಂಡಿಸ್ ಅವರನ್ನು ನಾಲ್ಕೂವರೆ ವರ್ಷಗಳ ಹಿಂದೆ ಕೊಲೆಗೈದ ನಾಲ್ವರಿಗೂ ಜೀವನಪರ್ಯಂತ ಜೈಲುಶಿಕ್ಷೆಯನ್ನು ಮುಂಬೈ ನ್ಯಾಯಾಲಯ ವಿಧಿಸಿದೆ.

ಕೇವಲ ಮೃತರ ಕುಟುಂಬ ಮಾತ್ರವಲ್ಲದೇ ಪ್ರತಿ ನಾಗರಿಕ ಸಮಾಧಾನಪಡಬೇಕಾದ, ಧೈರ್ಯ ತಂದುಕೊಳ್ಳಬೇಕಾದ ತೀರ್ಪು ಇದು. ಏಕೆಂದರೆ ಕೀನನ್ ಮತ್ತು ರುಬೆನ್ ಕೊಲೆಯಾಗಿದ್ದು ಯುವತಿಯೊಬ್ಬಳ ಮಾನರಕ್ಷಣೆಗೆ ಮುಂದಾದಾಗ, ಮುಂಬೈನ ಜನದಟ್ಟಣೆ ಪ್ರದೇಶದಲ್ಲಿ ಎಲ್ಲರೆದುರಿಗೆ! ಅವತ್ತು ಪಾತಕಿಗಳಿಂದ ಚಾಕು ಹಾಕಿಸಿಕೊಂಡು ರಕ್ತದ ಮಡುವಿನಲ್ಲಿದ್ದವರನ್ನು ನೋಡಿಯೂ ಸಾರ್ವಜನಿಕರು ನೆರವಿಗೆ ಬಂದಿರಲಿಲ್ಲ ಎಂಬುದನ್ನು ನೋವಿನಿಂದಲೇ ನೆನಪಿಸಿಕೊಳ್ಳಬೇಕಾಗುತ್ತದೆ. ಮೊನ್ನೆ ಬೆಂಗಳೂರಿನ ಪಿಜಿ ಹೊರಗಡೆ ಯುವತಿಯನ್ನು ಹೊತ್ತೊಯ್ದು ಅತ್ಯಾಚಾರಕ್ಕೆ ಯತ್ನಿಸಿದಾಗಲೂ ನೋಡಿದವರ್ಯಾರೂ ಸಹಾಯಕ್ಕೆ ಬಂದಿರಲಿಲ್ಲ.

ಅತ್ಯಾಚಾರಿಗಳ ವಿರುದ್ಧ ನಾವು ನಿಲ್ಲಲಾರೆವೆಂಬ ಹೆದರಿಕೆಯೇ ಸಮಾಜವನ್ನು ಹೀಗೆ ಮಾಡುತ್ತಿರಬಹುದು. ಕೊನೆಪಕ್ಷ ಇಂಥ ತೀರ್ಪುಗಳು ಸಮಾಜಕ್ಕೆ ಧೈರ್ಯ ತುಂಬಿದರೆ ಅಷ್ಟರಮಟ್ಟಿಗೆ ಸಮಾಧಾನ ತಂದುಕೊಳ್ಳಬಹುದು.

2011ರ ಅಕ್ಟೋಬರ್ 20. ಅಂಬೋಲಿಯ ರೆಸ್ಟೊರೆಂಟ್ ಒಂದರಲ್ಲಿ ಸ್ನೇಹಿತರೊಂದಿಗೆ ಭೋಜನಕೂಟ ಮುಗಿಸಿ ಹೊರಬಂದ ಕೀನನ್ ಮತ್ತು ರುಬೆನ್ ರಿಗೆ ಪಾನಮತ್ತರ ಗುಂಪೊಂದು ಎದುರಾಗಿ ಇವರ ಗುಂಪಿನ ಹುಡುಗಿಯ ಮೇಲೆ ಮುಗಿಬಿತ್ತು. ಆ ಗುಂಪನ್ನು ವಿರೋಧಿಸುತ್ತ ಹುಡುಗಿಯ ರಕ್ಷಣೆಗೆ ಧಾವಿಸಿದವರಿಗೆ ಸಿಕ್ಕಿದ್ದು ಚಾಕುವಿನ ಇರಿತ. ಕೀನನ್ ಮತ್ತು ರುಬೆನ್ ಪ್ರಾಣಕ್ಕಾಗಿ ಹೋರಾಡುತ್ತಿದ್ದರೆ ಈ ಹುಡುಗಿ ಪೋಲೀಸರಿಗೆ ಫೋನು ಮಾಡಿ ಸೋತಳು. ಯಾರೂ ಕರೆ ಸ್ವೀಕರಿಸಲಿಲ್ಲ. ಸಾರ್ವಜನಿಕರು ಸಹಾಯಕ್ಕೆ ಬರಲಿಲ್ಲ. ಪರಿಣಾಮ, ಕೀನನ್ ಅದೇ ದಿನ ತೀರಿಕೊಂಡರೆ, ಹತ್ತು ದಿನಗಳ ನಂತರ ರುಬೆನ್ ಇರಿತಗಳ ತೀವ್ರತೆಗೆ ಪ್ರಾಣತೆತ್ತ.

ಉಜ್ವಲ್ ನಿಕಂರಂಥ ಸಮರ್ಥ ಸರ್ಕಾರಿ ವಕೀಲರು ವಾದ ಮಂಡಿಸಿದ್ದರ ಪರಿಣಾಮವೆಂಬಂತೆ ಈ ಪ್ರಕರಣದ ನಾಲ್ವರು ಆರೋಪಿಗಳ ಅಪರಾಧ ಸಾಬೀತಾಗಿ ಜೀವನಪರ್ಯಂತ ಜೈಲುಶಿಕ್ಷೆ ಆಗಿದೆ. ಈ ಬಗ್ಗೆ ಕೀನನ್ ಮತ್ತು ರುಬೆನ್ ಕುಟುಂಬವೂ ತೃಪ್ತಿ ವ್ಯಕ್ತಪಡಿಸಿದೆ. ಬಹುಶಃ ಅಪರಾಧಿಗಳು ಮೇಲ್ಮನವಿಗೆ ಹೋಗಬಹುದು. ಆ ಸಂದರ್ಭದಲ್ಲಾದರೂ ಸಮಾಜವು ಸಂತ್ರಸ್ತರ ಬೆನ್ನಿಗೆ ನಿಲ್ಲಬೇಕು.  ನ್ಯಾಯದಾನ ತ್ವರಿತವಾಗುವಂತೆ ಒತ್ತಾಯಗಳಾಗಬೇಕು. ಅತ್ಯಾಚಾರಿಗಳಿಗೆ ಶಿಕ್ಷೆ ಖಂಡಿತ ಎಂಬುದು ಪದೇ ಪದೆ ದೃಢಪಟ್ಟರೆ ಮಾತ್ರ ಸ್ವಸ್ಥ ಸಮಾಜ ಸಾಧ್ಯ.

Leave a Reply