ಮಕ್ಕಳು ಮಾತಾಡಲಿ, ನೀವು ವಕ್ತಾರರಾಗಬೇಡಿ

author-shamaಅವಳು ಸುಮಾರು ಐದು ವರ್ಷದ ಮಗು. ಅರಳು ಹುರಿದಂತೆ ಮಾತು, ವಯಸ್ಸಿಗೆ ತಕ್ಕಷ್ಟು ತುಂಟತನ, ಬುದ್ಧಿ ಎಲ್ಲ ಇತ್ತು. ಮನೆಗೆ ಬಂದ ನೆಂಟರು ಕೇಳಿದ್ದರು “ಪುಟ್ಟಿ ನಮ್ಮನೆಗೆ ಬರ್ತೀಯಾ ಇವತ್ತು?” “ಇಲ್ಲ ಸ್ಕೂಲಿ ದೆನ್ನು ಪುಟ್ಟಿ” ಉತ್ತರಿಸಿದ್ದು ಪಕ್ಕದಲ್ಲಿದ್ದ ಚಿಕ್ಕಮ್ಮ. “ನಾಳೆ ಸ್ಕೂಲಿನ ಹೊತ್ತಿಗೆಲ್ಲ ಮನೆಗೆ ವಾಪಸ್ ಬಿಡ್ತೀನಿ ಬಾಮ್ಮಾ” ಮತ್ತೆ ಕರೆದರೆ “ಬೇಡ ರಜ ಇದ್ದಾಗ ಬರ್ತೀನಿ ಅನ್ನು” ಚಿಕ್ಕಮ್ಮನ ಉತ್ತರ. ಇದೆಲ್ಲವನ್ನೂ ಪಿಳಿ ಪಿಳಿ ಕಣ್ ಬಿಟ್ಕೊಂಡು ನೋಡುತ್ತಿದ್ದಳು ಹೊರತು ನೆಂಟರು ಹೊರಡುವವರೆಗೂ ಏನೂ ಮಾತಾಡಲೇ ಇಲ್ಲ ಪುಟಾಣಿ. ಅಸಲಿಗೆ ಮಾತಿಗೆ ಅವಕಾಶವೇ ಇರಲಿಲ್ಲ.

—–

ಗಗನ್ ಸುಮಾರು ಆರೂವರೆ ವರ್ಷದ ಪೋರ. ಚಿತ್ರ ಬಿಡಿಸುವುದೆಂದರೆ ಎಲ್ಲಿಲ್ಲದ ಆಸಕ್ತಿ. ಮನೆಯಲ್ಲಿ ಏನೋ ಗೀಚುತ್ತಿದ್ದವನು ನಾನು ಒಳ ಬಂದಿದ್ದು ಕಂಡು ಸುಮ್ಮನಾದ. “ನೀ ಚಿತ್ರ ಬರಿ, ನಾನು ಅಮ್ಮನ ಹತ್ರ ಮಾತಾಡೋಕೆ ಬಂದಿದ್ದು ಕಂದಾ” ಹೇಳಿ ನನ್ನ ಪಾಡಿಗೆ ನಾನು ಒಳಗೆ ನಡೆದೆ. ಟೀ ಕುಡಿಯುತ್ತ ಕುತೂಹಲಕ್ಕೆ “ಏನ್ ಚಿತ್ರ ಬರೀತಿದ್ದಿ ಹೀರೋ” ಕೇಳುವ ಮೊದಲೇ ಉತ್ತರಿಸಿದ್ದರು ಅವರಮ್ಮ “ಇನ್ನೇನು ಬರೀತಾನೆ ಅದೇ ಮಾಮೂಲಿ ಬೆಟ್ಟ ಗುಡ್ಡ, ಮಲ್ಲಿಗೆಪುರದ ಅಜ್ಜಿ ಮನೆ, ಸೂರ್ಯ” ದನಿಯಲ್ಲಿ ಸಣ್ಣ ಅಸಮಾಧಾನದ ಎಳೆಯ ಜತೆ ಮಗ ತನ್ನತ್ತೆ ಮನೆ ಚಿತ್ರ ಬರಿಯೋ ಬಗ್ಗೆ ಅಸಹನೆ ಸ್ಪಷ್ಟವಿತ್ತು. ಇಷ್ಟವಾಗದಿದ್ದರೂ ಸುಮ್ಮನಿದ್ದು ಮತ್ತೆ ಕೇಳಿದೆ “ಹೀರೋ, ನಂಗೂ ಒಂಚೂರು ಹೇಳ್ಕೊಡೋ ಏನು ಬರೀತಿದ್ದೀ?” ಅಷ್ಟರಲ್ಲಾಗಲೇ ಪಾಪ ಮಗುವಿಗೆ ಅಮ್ಮನ ಮಾತಿಂದ ಬೇಜಾರಾಗಿತ್ತು. ಏನೂ ಮಾತಾಡದೇ ಎದ್ದು ಹೋದ. ಒಂದಷ್ಟು ಹೊತ್ತಿನ ನಂತರ ನಾ ಹೊರ ಬಂದರೆ ಗೇಟಿನಾಚೆ ಆಡುತ್ತಿದ್ದವನು ಓಡಿ ಬಂದು ಹೇಳಿದ್ದ “ಆಂಟೀ ಅಮ್ಮಂಗೆ ಗೊತ್ತಾಗಲ್ಲ, ನಾ ಬರೆದಿದ್ದು ತರಕಾರಿ ಅಂಗಡೀಲಿ ಎಲ್ಲರೂ ಬ್ಯಾಗ್ ಹಿಡ್ಕೊಂಡು ಕ್ಯೂ ನಿಂತಿರೋದು” ಫುಲ್ ಮುಗ್ಸಿದ್ಮೇಲೆ ತೋರಿಸ್ತೀನಿ” ಬೆನ್ನು ತಟ್ಟಿ, ವೆರಿ ಗುಡ್ ಚೆನ್ನಾಗ್ ಬರಿ ಅಂದು ವಾಪಸಾದೆ.

——

ಬಹುತೇಕ ಮನೆಗಳಲ್ಲಿ ನೀವೂ ಗಮನಿಸಿರಬಹುದು, ಇದೊಂಥರಾ ಚಟ. ಮಕ್ಕಳ ವಕ್ತಾರರಾಗುವ ಹಪಾಹಪಿ. ಅವರು ಮಾತಾಡುವ ಮೊದಲೇ ತಾವು ಮಾತಾಡಿಬಿಡುವ ಆತುರ. ಯಾರೋ ಕೇಳಿದ ಪ್ರಶ್ನೆಗೆ ಮಕ್ಕಳು ಏನು ಹೇಳಿ ಬಿಡುತ್ತಾರೋ, ಅದರಿಂದ ಕೇಳಿದವರಿಗೆ ಹೇಗನಿಸತ್ತೋ ಎಂಬ ಕಳಕಳಿಯೂ ಇರಬಹುದು, ಮತ್ತು ಮಗುವಿಗೇನು ಗೊತ್ತಾಗತ್ತೆ ತಾವೇ ಹೇಳಿದರೆ ರಗಳೆಯಿಲ್ಲ ಎಂಬ ಭಾವವೂ ಇರಬಹುದು. ಉದ್ದೇಶ ಏನಾದರೂ ಇರಲಿ ಪರಿಣಾಮ ಮುಖ್ಯ. ಹೀಗಾದಾಗ ಮಗುವಿಗೆ ತನ್ನ ಮನಸ್ಸನ್ನು ತೆರೆದಿಡುವ ಅವಕಾಶವೇ ಇರುವುದಿಲ್ಲ. ಅಲ್ಲದೇ ಇದು ಹೀಗೇ ಮುಂದುವರೆದರೆ ‘ತನಗೆ ಗೊತ್ತಿಲ್ಲ ಅಥವಾ ತಾನು ಮಾತಾಡಿದ್ಯಾವುದೂ ಸರಿಯಾಗುವುದಿಲ್ಲ’ ಎಂಬ ಬಾವನೆ ಹುಟ್ಟಿ ಮಗುವಿನಲ್ಲಿ ಅದುವೇ ಕೀಳರಿಮೆಯಾಗಿ ಮಾರ್ಪಾಡಾಗುವ ಸಾಧ್ಯತೆಯೂ ಇಲ್ಲದಿಲ್ಲ.

ಮಕ್ಕಳದು ವರ್ಣಮಯ ಜಗತ್ತು ಎನ್ನುತ್ತಾರೆ ಸಂಶೋಧಕರು. ಅವರಿಗೆ ಬರುವಷ್ಟು ಹೊಸ ಯೋಚನೆ, ಭಾವನೆ, ಕಲ್ಪನೆಗಳು ಪೂರ್ವಾಗ್ರಹಗಳು ತುಂಬಿದ ದೊಡ್ಡವರ ಮನೋಲೋಕದಲ್ಲಿಲ್ಲ. ಮಕ್ಕಳು ತಪ್ಪಾಗಿಯೇ ಉತ್ತರಿಸಬಹುದು ಅದು ವಯೋ ಸಹಜ ಕೂಡ. ಹಾಗೆ ನೋಡಿದರೆ ಅವರಿಂದ “Perfect” ಉತ್ತರ ಬಯಸುವುದು, ತಾವಂದುಕೊಂಡ ಹಾಗೇ ಮಾತಾಡಲೆಂಬ ನಿರೀಕ್ಷೆ ಇಟ್ಟುಕೊಳ್ಳುವುದೇ ತಪ್ಪು. ಹಾಗೊಮ್ಮೆ ಏನೋ ಸಹ್ಯವಲ್ಲದ ಅಥವಾ ಅನಪೇಕ್ಷಿತ ಮಾತು ಬಂದರೂ ಅದು ತಿದ್ದುವ ಸಮಯ, ತಿಳಿ ಹೇಳಿದರಾಯ್ತು. ಅದು ಇತರರ ಮೇಲೆ ಬೀರುವ ಪರಿಣಾಮದ ಕಾಳಜಿಗಿಂತ ಮಕ್ಕಳ ವಿಕಸನ ಹೆಚ್ಚು ಮುಖ್ಯವಾಗಬೇಕು. ತಮಗನ್ನಿಸಿದ್ದನ್ನು ಎಳೆಯ ವಯಸ್ಸಿನಿಂದಲೇ ಹೇಳುವುದು ಕಲಿತಾಗಷ್ಟೇ ಅವರು ಮುಂದೆಯೂ ಎಗ್ಗಿಲ್ಲದೇ ಮಾತಾಡಲು ಕಲಿಯುತ್ತಾರೆ.

ಮನೆಯಲ್ಲಿ ಇಂಥ ಸ್ವಾತಂತ್ರ್ಯ ಕೊಟ್ಟಾಗ ಪೋಷಕರಿಗೂ ಮಗುವನ್ನರಿಯಲು ಅವಕಾಶ ಸಿಗುತ್ತದೆ. ಅವರ ಯೋಚನಾ ಧಾಟಿ, ಬೆಳೆಯುತ್ತಿರುವ ದಿಕ್ಕಿನ ಬಗ್ಗೆ ಸಣ್ಣದೊಂದು ಸುಳಿಹು, ಗುರಿ ಮತ್ತು ದಾರಿಯ ಬಗ್ಗೆ ಪರಿ ಕಲ್ಪನೆ ಎಲ್ಲ ದಕ್ಕುವುದು ಇದರಿಂದಲೇ. ಅಷ್ಟು ಮಾತ್ರವಲ್ಲದೇ ಮಗುವಿಗೆ ತನ್ನ ಮಾತಿಗೊಂದು ಬೆಲೆಯಿದೆ, ಹೇಳುವುದಕ್ಕೂ, ಕೇಳುವುದಕ್ಕೂ ಮನೆಯಲ್ಲೇ ಅವಕಾಶವಿದೆ ಎನಿಸಿದಾಗ ಮಕ್ಕಳು ಹೊರ ಜಗತ್ತಿಗಿಂತ ಮನೆಯನ್ನೇ ಹೆಚ್ಚು ನೆಚ್ಚಿಕೊಳ್ಳುತ್ತಾರೆ. ಅವರು ಬೆಳೆಯುತ್ತಿದ್ದಂತೆ ಈ ಅನುಬಂಧವೂ ಬೆಳೆಯುತ್ತದೆ. ಅಂತರ ಕಡಿಮೆಯಾಗಿ ಅವರನ್ನು ಅರಿತುಕೊಳ್ಳುವುದು ಸುಲಭವಾಗುತ್ತದೆ.

ಇಂದಿನ ಬಹಳಷ್ಟು ಪೋಷಕರು ಮಗ/ಮಗಳು ಸ್ನೇಹಿತರ ಬಳಿ ಹೇಳಿಕೊಂಡಷ್ಟು ತಮ್ಮ ಬಳಿ ಹೇಳುವುದಿಲ್ಲ ಎನ್ನುವದನ್ನ ಕೇಳುತ್ತಲೇ ಇರುತ್ತೇವೆ. ಬಹುತೇಕ ಪ್ರತಿಯೊಬ್ಬನ ವ್ಯಕ್ತಿತ್ವದ ಬೇರು ಕೂಡ ಇರುವುದು ಬಾಲ್ಯದ ಭೂಮಿಯಲ್ಲಿ. ಆವಾಗಿನ ಪ್ರತಿ ಹೆಜ್ಜೆ, ಅಭಿವ್ಯಕ್ತಿಯ ಅವಕಾಶ, ಸಿಕ್ಕಿದ ಗೌರವ ಎಲ್ಲವೂ ಮಕ್ಕಳನ್ನು ರೂಪಿಸುವ ಇಟ್ಟಿಗೆಗಳಾಗಿ ಕೆಲಸ ಮಾಡುತ್ತವೆ. ತನಗೊಂದು ಗೌರವ ಇದೆ ಎಂಬ ಖಾತ್ರಿಯೇ ತಾನದನ್ನು ಇನ್ನೂ ಹೆಚ್ಚು ಬೆಳೆಸಿಕೊಳ್ಳಬೇಕು ಎಂಬ ಆಸೆಯನ್ನು ಹುಟ್ಟು ಹಾಕುತ್ತದೆ.

ಹಾಗಂತ ಅವರು ಮನಸ್ಸಿಗೆ ಬಂದದ್ದೆಲ್ಲ ಮಾತಾಡಲಿ, ತಪ್ಪು ಒಪ್ಪುಗಳ ಪ್ರಜ್ಞೆಯಿಲ್ಲದೇ ಬೆಳೆಯಲಿ ಅಂತಲ್ಲ. ಮಕ್ಕಳ ಮಾತಿನ ಮೇಲೆ ನಿಗಾ ಇರಲೇ ಬೇಕು. ಆದರೆ ಅವರ ಪರವಾಗಿ ಮಾತಾಡುವುದು ತರವಲ್ಲ. ಎಲ್ಲ ಪ್ರಶ್ನೆಗಳಿಗೂ ಮಕ್ಕಳಲ್ಲಿ ಅವರದೇ ಉತ್ತರಗಳಿರುತ್ತವೆ. ಬಹಳಷ್ಟು ಸಲ ಅವು ದೊಡ್ಡವರ ಉತ್ತರಕ್ಕಿಂತ ಹೆಚ್ಚು ಲಾಜಿಕಲ್ ಆಗಿಯೂ ತಮಾಷೆಯಾಗಿಯೂ ಇರುತ್ತವೆ. ಎಷ್ಟೋ ಸಂದರ್ಭಗಳಲ್ಲಿ ಅವರಿಂದ ನಮಗೂ ಹೊಸದೇನೋ ದಕ್ಕುವುದುಟು. ಅವುಗಳನ್ನು ಆಲಿಸೋಣ, ಅನುಕರಣೀಯ ಎನಿಸಿದರೆ ಪಾಲಿಸೋಣ. ಇವೆಲ್ಲ ಬದುಕಿನಲ್ಲಿ ಮತ್ತೆ ಮತ್ತೆ ಸಿಗದಂಥ ದೈನಂದಿನ ಖುಷಿಗಳು. ತಪ್ಪಿದ್ದಲ್ಲಿ ತಿದ್ದಿ ಒಪ್ಪಿದ್ದಲ್ಲಿ ಮುದ್ದಿಸಿ ಮಕ್ಕಳನ್ನು ಮನುಜರಾಗಿಸುವತ್ತ ಗಮನ ಹರಿಸೋಣ.

3 COMMENTS

 1. ಯಾರಲ್ಲಿ ಹೇಳುವುದು …! ಯಾರಿಗೆ ಹೇಳುವುದು …!
  ಹಿರಿಯರಿಗೆ ಅರ್ಥವೇ ಆಗುವುದಿಲ್ಲವಲ್ಲ ..!…..
  ಈಗ ಕೆಲವು ವರ್ಷಗಳಿಂದ ನಡೆಯುತ್ತಿರುವ ಮಕ್ಕಳ ಸಾಹಿತ್ಯ ಸಮ್ಮೇಳನಗಳು … ಬಹಳ ದೊಡ್ಡ ಸಂಗತಿ ಎನ್ನುವ ಭ್ರಮೆ …ಹೆಚ್ಚಾಗ್ತಾ ಇದೆ. ವೇಧಿಕೆಯಲ್ಲಿರುವುದು …ಹೆಚ್ಚಿನವರು ಹಿರಿಯರೇ …
  ಅಧ್ಯಕ್ಷರೋ …ಉದ್ಘಾಟಕರೋ …ಆಗಿ ಮಕ್ಕಳನ್ನೇ ಆರಿಸಿ …. ಅವರಿಂದ ಭೀಕರ ಭಾಷಣ ಮಾಡಿಸುತ್ತಾರೆ…..
  ಇನ್ನು ಕೆಲವು ಶಾಲೆಗಳಲ್ಲಿ … ನಮ್ಮಲ್ಲಿ …
  ಕಾರ್ಯಕ್ರಮ ಎಲ್ಲಾ ಮಕ್ಕಳೇ …ನಡೆಸುವುದು ….ಅಂತಾರೆ. ಕೇಳುವಾಗಲೇ ಗೊತ್ತಾಗ್ತದೆ …ದೊಡ್ಡವರು ಬರೆಸಿ ಕಂಠಪಾಠ ಮಾಡಿಸಿದ್ದು ಅಂತ …ಅದರಲ್ಲೂ ..ಅಲ್ಲಿ ಇಲ್ಲಿ ರೆಫರ್ ಮಾಡಿದ ವಿಷಯ.
  ಮಕ್ಕಳೇ ಮಾತಾಡಲಿ ಎಂದದ್ದನ್ನು ಒಂದು ಅತಿಗೆ ಕೊಂಡು ಹೋಗುವವ್ರೂ ಇದ್ದಾರೆ. ಮಕ್ಕಳು ಅಧಿಕ ಪ್ರಸಂಗದ ಮಾತಾಡಿದರೂ,
  ಅದು ಸರಿ ಎಂದೇ ಸಮರ್ಥಿಸಿಕೊಳ್ಳುತ್ತಾರೆ…..
  ಮಕ್ಕಳಿಗೆ ಅದ್ಭುತರಮ್ಯ ವಿಷಯಗಳು ಬೇಡಾ ಅಂತ …
  ವೈಚಾರಿಕ ವಿಷಯಗಳನ್ನೇ ತುರುಕುವವರಿದ್ದಾರೆ…..
  ಒಟ್ಟಾರೆ ಇದೆಲ್ಲಾ …ಕಲೆಯಲ್ಲಿ, ಶಿಕ್ಷಣದಲ್ಲಿ ಮತ್ತು
  ಬದುಕಿನಲ್ಲಿನ ಸ್ಪರ್ದೆಯ ಪ್ರಭಾವ……. ಅಲ್ಲವೇ …
  (ಪ್ರತಿಕ್ರಿಯೆ ಉದ್ದವಾಯ್ತೇನೋ …! ಕ್ಷಮಿಸಿ …)

 2. Moorthy Deraje Sir, ನೀವಂದಿದ್ದು ಅಕ್ಷರಶಃ ನಿಜ. ಎಲ್ಲ ಕಡೆಯೂ ಅದೇ ಕಾಣುತ್ತದೆ. ಅನುಸರಣೆಗೂ ಅನುಕರಣೆಗೂ ವ್ಯತ್ಯಾಸವೇ ಗೊತ್ತಿಲ್ಲ ಮಕ್ಕಳಿಗೆ. ಯಾವುದೋ ‘ದೊಡ್ಡ’ ಸ್ಟಾರ್ ಹೊಡೆಯುವ ಬಡಿಯುವ ಮತ್ತು ಜತೆಗೆ ಮಾತಾಡುವ ಶಬ್ದಗಳು ರಿಯಾಲಿಟಿ ಶೋಗಳಲ್ಲಿ ಮಕ್ಕಳ ಬಾಯಲ್ಲಿ ಬಂದರೆ ಅರೆ ನಗ್ನತೆಗೆ ಬಹಳ ಪ್ರಸಿದ್ಧವಾದ ಹಾಡಿಗೆ ಪುಟಾಣಿ ಮಕ್ಕಳು ಅರ್ಥವೇ ಗೊತ್ತಿಲ್ಲದೇ ನೃತ್ಯ ಮಾಡುತ್ತಾರೆ !!! ಪ್ರತಿ ತಂದೆ ತಾಯಿ ಅರ್ಥ ಮಾಡಿಕೊಂಡಾಗಷ್ಟೇ ಬದಲಾವಣೆ ಸಾಧ್ಯ.

  ಅಂದ ಹಾಗೆ ಪ್ರತಿಕ್ತಿಯೆ ಉದ್ದವಾಗಲಿಲ್ಲ. ನೀವು ಓದುಗ ಪ್ರಭುಗಳು. ನಿಮ್ಮ ವಿಶ್ವಾಸವೇ ನಮಗೆ ಶ್ವಾಸ. ಒಪ್ಪಿದಾಗ ಬೆನ್ನು ತಟ್ಟಿ ತಪ್ಪು ಕಂಡಾಗ ತಿದ್ದುವವರೂ ನೀವುಗಳೇ. ದಯವಿಟ್ಟು ಓದಿ ಮತ್ತು ಬರೆಯಿರಿ. ಧನ್ಯವಾದಗಳು.

 3. ಇಂತಹ ವಿಚಾರವನ್ನು ತಾವು ಚಿಂತನೆಗೆ ಆಯ್ದುಕೊಂಡಿರುವುದೇ ಸಂತೋಷಕರವಾದದ್ದು. ಬದುಕಿನಲ್ಲಿ ಇಂತಹ ವಿಚಾರಗಳನ್ನು ನಾವು ಹೆಚ್ಚು ಗೌಣವಾಗಿಸಿ ನೋಡುವುದನ್ನೇ ಅಭ್ಯಾಸ ಮಾಡಿಕೊಂಡು ಬಿಟ್ಟಿದ್ದೇವೆ.

  ನಾವು ನಮ್ಮ ಪೂರ್ವಸಿದ್ಧತಾ ಉತ್ತರಗಳನ್ನೇ ಲೋಕದಲ್ಲಿ ಕೇಳುವ (selective listening) ಮನೋಭಾವದವರಾಗಿದ್ದು, ಉಳಿದಂತೆ ಹೊಮ್ಮುವ ಸೃಜನಶೀಲ ಅಭಿವ್ಯಕ್ತಿಗಲಿಗೆಲ್ಲಾ ನಮ್ಮ ಕಿವಿಗಳನ್ನು ಬಂದ್ ಮಾಡಿಕೊಂಡು ಬದುಕುವುದರಿಂದ, ನಮ್ಮ ಮಕ್ಕಳು ಆಡುವ ತೊದಲು ನಮ್ಮ ಕುರಿತಾದ ಇತರರಲ್ಲಿನ ಮನದಲ್ಲಿನ ಚಿತ್ರಣ ಇದರಿಂದ ಹಾನಿಗೊಳಗಾಗಿ’ಬಿಡಬಹುದು ಎಂಬ ಪೂರ್ವಾಗ್ರಹದಿಂದ ಬೇಡದ ನಿಯಂತ್ರಣಕ್ಕೆ ತೊಡಗಿ, ಬೆಳೆಯುವ ಕುಸುಮದಂತ ಮನವನ್ನು ಹೇಗೆ ಚಿವುಟಿ ಹಾಕಿಬಿಡುತ್ತಿದ್ದೇವೆ ಎಂಬ ವಿಚಾರದಲ್ಲಿ ಕುರುಡುತನವನ್ನೂ ಬೆಳೆಸಿಕೊಳ್ಳುತ್ತಿರುತ್ತೇವೆ.

  ಉತ್ತಮ ವಿಚಾರದ ಆಯ್ಕೆ. ಮೆಚ್ಚುಗೆಗಳು.

Leave a Reply