ಸಂತ್ರಸ್ತರಿಗಾಗಿ ಬಂದ ನೀರನ್ನು ಬೇಡ ಎಂದ ಅಖಿಲೇಶ್ ಯಾದವ್, ಇದೆಂಥ ಕ್ಷುಲ್ಲಕ ರಾಜಕೀಯ!

ಡಿಜಿಟಲ್ ಕನ್ನಡ ಟೀಮ್

ಈ ಬಾರಿಯ ಭೀಕರ ಬರವನ್ನು ನಿಭಾಯಿಸುವಲ್ಲಿ ರಾಜಕೀಯ ನಾಯಕರು ವಿಫಲವಾಗಿರುವ ಸಾಕಷ್ಟು ಉದಾಹರಣೆಗಳನ್ನು ನೋಡಿದ್ದೇವೆ. ಇದಕ್ಕೆ ಹೊಸದಾಗಿ ಸೇರಿಕೊಂಡಿರುವುದು ಉತ್ತರ ಪ್ರದೇಶ ಮುಂಖ್ಯಮಂತ್ರಿ ಅಖಿಲೇಶ್ ಯಾದವ್. ಬರದಿಂದ ತತ್ತರಿಸಿದ ಪ್ರದೇಶಗಳಲ್ಲಿ ಉತ್ತರ ಪ್ರದೇಶದ ಬುಂದೇಲಖಂಡ ಪ್ರಾಂತ್ಯವೂ ಒಂದು. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ರೈಲಿನ ಮೂಲಕ ಕಳುಹಿಸಿದ್ದ ಕುಡಿಯುವ ನೀರನ್ನು ಅಖಿಲೇಶ್ ಯಾದವ್ ವಾಪಸ್ ಕಳುಹಿಸಿ ತಮ್ಮ ಉದ್ಧಟತನ ಮೆರೆದಿದ್ದಾರೆ.

ಅರೆ, ಯಾವ ಕಾರಣಕ್ಕೆ ಅಖಿಲೇಶ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ. ರಾಜ್ಯದಲ್ಲಿನ ಬರದ ಪರಿಸ್ಥಿತಿಗೆ ಕೇಂದ್ರ ಸರ್ಕಾರ ಈಗ ನೆರವು ನೀಡಿದರೆ ಎಲ್ಲಿ ಜನರ ಮನ್ನಣೆ ಗಿಟ್ಟಿಸಿಕೊಳ್ಳುತ್ತದೋ ಎಂಬುದು ಅಖಿಲೇಶ್ ನ ರಾಜಕೀಯ ಲೆಕ್ಕಾಚಾರ. ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸುವ ಬದಲು ಅದರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ನಿಜಕ್ಕೂ ಶೋಚನೀಯ.

‘ನಮಲ್ಲಿ ಲಾತುರ್ ನಂತಹ ಪರಿಸ್ಥಿತಿ ಇಲ್ಲ. ಒಂದು ವೇಳೆ ನಮಗೆ ನೀರಿನ ಅಗತ್ಯ ಬಿದ್ದರೆ, ನಾವೇ ರೈಲ್ವೇ ಇಲಾಖೆಗೆ ತಿಳಿಸುತ್ತೇವೆ’ ಎಂದು ಅಖಿಲೇಶ್ ರೈಲ್ವೇ ಇಲಾಖೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಬುಂದೇಲಖಂಡದ ಮಹೊಬಾ ಪ್ರದೇಶದ 40 ಹಳ್ಳಿಗಳಿಗಳಲ್ಲಿ ನೀರಿನ ಶೇಖರಣೆಯ ಕೊರತೆ ಇದೆ. ಆ ಕಾರಣದಿಂದ ಕೇಂದ್ರ ಸರ್ಕಾರ ರೈಲಿನ ಮೂಲಕ ನೀರು ಸರಬರಾಜು ಮಾಡಿತ್ತು. ಈ ಹಿಂದೆ ನಡೆಸಿದ ಅಧ್ಯಯನದ ಪ್ರಕಾರ ಬಂಡೆಲ್ ಖಂಡ ಪ್ರದೇಶದಲ್ಲಿ 13 ಜಿಲ್ಲೆಗಳು ಬರುತ್ತವೆ. 2011ರ ಜನಗಣತಿ ಪ್ರಕಾರ ಇಲ್ಲಿ 1.83 ಕೋಟಿ ಜನ ವಾಸಿಸುತ್ತಿದ್ದಾರೆ. 2003 ರಿಂದ ಬರದಲ್ಲಿ ಈ ಪ್ರದೇಶದ ಜನರ ಪರಿಸ್ಥಿತಿ ದುಸ್ತರ ಎಂದು ತಿಳಿದು ಬಂದಿದೆ. ಈ ಬಾರಿಯ ಬರದಿಂದ ಸುಮಾರು 1.60 ಕೋಟಿ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಶೇ.40ರಷ್ಟು ರೈತರು ಬೆಳೆ ಬೆಳೆಯಲು ಬಿತ್ತನೆ ಮಾಡಲಾಗಿಲ್ಲ. ಪರಿಣಾಮ ಆಹಾರ ಉತ್ಪಾದನೆಯಲ್ಲಿ ಶೇ.30ರಷ್ಟು ಕುಸಿತ ಕಂಡಿದೆ. ಇಲ್ಲಿನ ಶೇ.70ರಷ್ಟು ಕೆರೆ ಕಟ್ಟೆಗಳು ಒಣಗಿ ನಿಂತಿವೆ. ಅಂತರ್ಜಲ ಮಟ್ಟ ಸಹ ಕುಸಿದಿದೆ. ಇದು ಈ ಪ್ರಾಂತ್ಯದ ನೈಜ್ಯ ಸ್ವರೂಪ.

ಈ ಪ್ರದೇಶದಲ್ಲಿ ನೀರಿನ ಪೂರೈಕೆ ಮತ್ತು ಶೇಖರಣೆ ಸೇರಿದಂತೆ ಹಲವು ಯೋಜನೆಗಳಿಗಾಗಿ 2016-17ನೇ ಸಾಲಿನ ಬಜೆಟ್ ನಲ್ಲಿ ಅಖಿಲೇಶ್ ಯಾದವ್ ಸರ್ಕಾರ ₹ 1400 ಕೋಟಿ ಮೀಸಲಿಟ್ಟಿದೆ. ಆದರೆ, ವಾಸ್ತವ ಪರಿಸ್ಥಿತಿಯಲ್ಲಿ ಯಾವುದೇ ಪ್ರಯೋಜನ ಇಲ್ಲಿನ ಜನರಿಗೆ ಸಿಕ್ಕಿಲ್ಲ.ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರಕ್ಕೆ ನೀರು ಕಳುಹಿಸಿ ಎಂದು ಕೇಳುವ ಮೂಲಕ ಜನರ ವಿಶ್ವಾಸವನ್ನು ಸಮಾಜವಾದಿ ಪಕ್ಷದಿಂದ ಕಿತ್ತುಕೊಳ್ಳುವ ಪ್ರಯತ್ನ ನಡೆಸುತ್ತಿದೆ ಎಂದು ಸಮಾಜವಾದಿ ಪಕ್ಷ ದೂರಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.

ಒಂದೆಡೆ ಕುಡಿಯಲು ನೀರಿಲ್ಲ, ವ್ಯವಸಾಯ ಮಾಡದ ಪರಿಸ್ಥಿತಿಯಲ್ಲಿ ರೈತ ಕಂಗಾಲಾಗಿದ್ದು, ಜನರು ನಿತ್ಯ ಜೀವನ ಸಾಗಿಸಲು ಪರದಾಡುತ್ತಿದ್ದರೆ, ಮತ್ತೊಂದೆಡೆ ರಾಜಕೀಯ ನಾಯಕರು ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ ಬಗ್ಗೆ ಚಿಂತಿಸುತ್ತಿದ್ದಾರೆ. ಈ ಹಂತದಲ್ಲಿ ನಮ್ಮ ಮೇಲಿರುವ ಜನರ ವಿಶ್ವಾಸವನ್ನು ಎಲ್ಲಿ ಬಿಜೆಪಿ ಕಿತ್ತುಕೊಳ್ಳುತ್ತೋ ಎಂಬ ಯೋಚನೆ ಸಮಾಜವಾದಿ ಪಕ್ಷದ್ದಾಗಿದೆ. ಒಟ್ಟಿನಲ್ಲಿ ಜನ ಸಾಮಾನ್ಯ ನರಳಿ ಸಾಯುತ್ತಿದ್ದರೂ ನಾವು ಮಾತ್ರ ನಮ್ಮ ಲಾಭವನ್ನಷ್ಟೇ ನೋಡಿಕೊಳ್ಳುತ್ತೇವೆ ಎಂಬ ರಾಜಕೀಯ ನಾಯಕರ ನಿಲುವು ಮತ್ತೊಮ್ಮೆ ಜಗಜ್ಜಾಹೀರಾಗಿದೆ.

Leave a Reply