ಡಿಜಿಟಲ್ ಕನ್ನಡ ಟೀಮ್
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಾಜಿ ಸಂಸದ ಎಚ್ ವಿಶ್ವನಾಥ್ ಅವರ ‘ಟಾಕಿಂಗ್ ಶಾಪ್’ ಕೃತಿಯ ಲೋಕಾರ್ಪಣೆ. ಕಾರ್ಯಕ್ರಮಕ್ಕೂ ಮುಂಚೆ ಇರಿಸುಮುರಿಸಾಗುವ ‘ಟಾಕಿಂಗ್’ ಆಯಿತು. ಸಭಾಂಗಣದ ಮುಂದೆ ಬಂದ ರಾಜ್ಯ ಕುರುಬರ ಸಂಘದ ಕಾರ್ಯಕಾರಿ ಸದಸ್ಯ ಶಿವರಾಮಣ್ಣ ಎಂಬ ವ್ಯಕ್ತಿ ‘420 ವಿಶ್ವನಾಥ್ಗೆ ಧಿಕ್ಕಾರ’ ಎಂದು ಕೂಗಿ, ಸಮುದಾಯಕ್ಕಾಗಿ ಏನೂ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದಾಗ ಬೆಂಬಲಿಗರ ಜತೆ ತಿಕ್ಕಾಟ ನಡೆಯಿತು. ಬೆಂಬಲಿಗರಿಂದ ಗೂಸಾ ಪಡೆದು ನಿರ್ಗಮಿಸಿದ ನಂತರ ವೇದಿಕೆಯಲ್ಲಿದ್ದವರ ಮಾತು ಕೇಳುವ ಹೊತ್ತು.
‘ನಾನು ಮುಖ್ಯಮಂತ್ರಿಯಾಗಿದ್ದಾಗ ಮೂರು ವರ್ಷ ಸತತ ಬರಗಾಲವಿತ್ತು. ಅದನ್ನು ನಿಭಾಯಿಸಿದ್ದೆ ಆದರೂ ಅಧಿಕಾರ ಕಳೆದುಕೊಂಡೆ’ ಎಂದರು ಎಸ್. ಎಂ. ಕೃಷ್ಣ. ಅಲ್ಲಿಂದ ಅವರು ಸೋಲು ಗೆಲುವಿನ ವ್ಯಾಖ್ಯಾನಕ್ಕಿಳಿದರು. ‘ಮದ್ದೂರು ಜನ ನನ್ನನ್ನು ಸೋಲಿಸಿದಾಗಲೆಲ್ಲಾ ರಾಜಕೀಯವಾಗಿ ನನಗೆ ಭಡ್ತಿ ದೊರೆತಿದೆ. 1967ರಲ್ಲೂ ಸಹ ನನಗೆ ಹಾಗೇಯೇ ಆಯಿತು. ಸೋಲಿನ ನಂತರ ನಡೆದಿದ್ದ ಉಪ ಚುನಾವಣೆಯಲ್ಲಿ ಗೆದ್ದೆ. ಆವಾಗ ಇಂದಿರಾ ಗಾಂಧಿ ಅವರ ಪರಿಚಯ ಆಯಿತು. ಸೋತಾಗಲೆಲ್ಲಾ ಬೇರೆ ಬೇರೆ ತಿರುವು ಸಿಕ್ಕಿತು. ವಿಶ್ವನಾಥ್ ಅವರು ಸೋತಿರಬಹುದು. ಆದರೆ, ಎದೆಗುಂದುವ ಅವಶ್ಯಕತೆ ಇಲ್ಲ’ ಅಂದ್ರು.
ಟಾಕಿಂಗ್ ಶಾಪ್ ಪುಸ್ತಕ ಸಂಸತ್ತಿನ ವೈಖರಿ ಕುರಿತು ಇರುವಂಥದ್ದು ಎಂಬುದನ್ನು ವಿವರಿಸಿದ ಎಚ್. ವಿಶ್ವನಾಥ್ ‘ಸಂಸತ್ ಎಂದರೆ ಚರ್ಚೆ, ಸಂವಾದ, ವಿಶ್ಲೇಷಣೆ ಮತ್ತು ನಿರ್ಧಾರವಾಗಬೇಕಾದ ಸ್ಥಳ. ಇಲ್ಲಿ ಮಾತಿನ ಮೂಲಕ ಕಾನೂನು ಮಾಡುತ್ತೇವೆ’ ಅಂತ ಪುಸ್ತಕದ ಹೂರಣ ಬಿಚ್ಚಿಟ್ಟರು.
ಇದು ಪುಸ್ತಕ ಬಿಡುಗಡೆ ಕತೆಯಾಯಿತು. ಈಗ ಇಲ್ಲಿಂದ ಮುಂದಕ್ಕೆ ತೆರಳಿ, ಬೇರೆ ಬೇರೆ ಪತ್ರಿಕಾಗೋಷ್ಠಿಗಳಲ್ಲಿ ರಾಜಕೀಯ ಪ್ರಮುಖರು ಏನೆಂದರು ಗಮನಿಸೋಣ.
——–
ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ನೋಡಲು ರಾಜ್ಯದ ಜನತೆ ಬಯಸಿದ್ದಾರೆ ಎಂದಿದ್ದಾರೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ. ಪಕ್ಷದಲ್ಲಿ ಭಿನ್ನಮತ ಇರೋದು ಹೌದಾದರೂ ಅವನ್ನೆಲ್ಲ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದು. ಈ ಭಿನ್ನಮತ ಶಮನದ ಕೆಲಸವನ್ನು ತಾವು ಇನ್ಯಾರಿಗೂ ವಹಿಸಿಲ್ಲ ಎಂದ ಗೌಡರು, ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಜತೆ ವೇದಿಕೆ ಹಂಚಿಕೊಂಡಿದ್ದರಲ್ಲಿ ಯಾವ ರಾಜಕೀಯವೂ ಇಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.
—————
ಸುದ್ದಿಗಾರರ ಜತೆ ಮಾತನಾಡುತ್ತ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಹೇಳಿದ್ದು- ದಲಿತ ಸಮುದಾಯದವರನ್ನು ಮುಂದಿನ ವಿಧಾನಸಭಾ ಚುನಾವಣೆಯ ನಂತರ ಮುಖ್ಯಮಂತ್ರಿ ಹುದ್ದೆಗೆ ತರಲು ಬೆಂಬಲಿಸಬೇಕು. ದಲಿತರು ಮುಖ್ಯಮಂತ್ರಿ ಆಗಲಿ ಎಂದು ರಾಜ್ಯದ ಜನ ಆಶೀರ್ವಾದ ಮಾಡಿದರೆ ನಿಶ್ಚಿತವಾಗಿಯೂ 2018 ರ ವಿಧಾನಸಭಾ ಚುನಾವಣೆಯ ನಂತರ ದಲಿತರು ಮುಖ್ಯಮಂತ್ರಿಯಾಗಲಿದ್ದಾರೆ. ಹಾಗಂತ ಪಕ್ಷಕ್ಕೆ ಗೆಲುವು ತಂದುಕೊಟ್ಟ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ದಲಿತ ಮುಖ್ಯಮಂತ್ರಿ ತರುವ ಪ್ರಶ್ನೆ ಇಲ್ಲ, ಮುಂದಿನ ಅವಧಿಗೆ ದಲಿತರು ಮುಖ್ಯಮಂತ್ರಿ ಆಗಬೇಕು ಎಂದರು.
ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲರಾಗಿರುವ ಅರಣ್ಯವಾಸಿಗಳಿಗೆ ಶೇ 1 ರಷ್ಟು ಒಳಮೀಸಲಾತಿ ಕಲ್ಪಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವುದಾಗಿಯೂ ಆಂಜನೇಯ ಹೇಳಿದ್ದಾರೆ.