ಗಾಂಧಿನಗರವೇ ಇತಿಹಾಸದ ಪುಟ ಸೇರಲು ಹೊರಟಿದೆ, ಇಲ್ಲಿ ಹಣ, ಹೆಸರು ಮಾಡಿದವರು ಒಮ್ಮೆ ಕಣ್ಣು ಬಿಟ್ಟು ನೋಡಬಾರದೇ?

sridharamurthyಎನ್.ಎಸ್.ಶ್ರೀಧರ ಮೂರ್ತಿ

ಕನ್ನಡ ಚಿತ್ರರಂಗಕ್ಕೆ ಗಾಂಧಿನಗರ ಎನ್ನುವುದು ಒಂದು ರೂಪಕ. ಚಿತ್ರರಂಗದ ಕುರಿತ ವಿಶ್ಲೇಷಣೆಯಲ್ಲಿ ಗಾಂಧಿನಗರ ಎನ್ನುವ ಪದ ಅನೇಕ ವರ್ಷಗಳಿಂದ ಬಳಕೆಯಾಗುತ್ತಲೇ ಇದೆ. ಇದಕ್ಕೆ ಕಾರಣವೂ ಇದೆ.

1960-70ರ ದಶಕದಲ್ಲಿ ಗಾಂಧಿನಗರದಲ್ಲಿ ಕೆಂಪೇಗೌಡ ರಸ್ತೆಯ ಇಕ್ಕೆಲಗಳಲ್ಲಿ 23 ಚಿತ್ರಮಂದಿರಗಳಿದ್ದವು. ಆಗ ವರ್ಷಕ್ಕೆ 60-70 ಚಿತ್ರಗಳು ನಿರ್ಮಾಣವಾಗುತ್ತಿದ್ದರಿಂದ ಇಲ್ಲಿ ಹೊಸ ಚಿತ್ರಗಳು ಮಾತ್ರವಲ್ಲದೆ ಹಳೆ ಕನ್ನಡ ಚಿತ್ರಗಳೂ ಪ್ರದರ್ಶಿತವಾಗುತ್ತಿದ್ದವು. ಬೆಂಗಳೂರಿಗರು ಮಾತ್ರವಲ್ಲದೆ ಬೇರೆ ಊರಿನಿಂದ ಬಂದವರೂ ಕೂಡ ಹತ್ತಿರದಲ್ಲಿಯೇ ಮೆಜೆಸ್ಟಿಕ್ ನ ಪ್ರಧಾನ ಬಸ್ ನಿಲ್ದಣವಿರುತ್ತಿದ್ದರಿಂದ ಚಿತ್ರಗಳನ್ನು ನೋಡುತ್ತಿದ್ದರು. ಪ್ರದರ್ಶನ ಮಾತ್ರವಲ್ಲದೆ ವಿತರಣೆ ಮತ್ತು ನಿರ್ಮಾಣಕ್ಕೂ ಕೂಡ ಗಾಂಧಿನಗರ ಕೇಂದ್ರವಾಗಿತ್ತು. ಇಂತಹ ಉದಾಹರಣೆ ಭಾರತದಲ್ಲಿಯೇ ಎಲ್ಲೂ ಇಲ್ಲವಾಗಿದ್ದರಿಂದ ಕನ್ನಡ ಚಿತ್ರರಂಗ ಎಂದರೆ ಗಾಂಧಿನಗರ ಎನ್ನುವ ಮಾತು ಸಾರ್ಥಕವಾಗಿತ್ತು.

ಇದು ನೆನಪಾಗಲು ಕಾರಣ ವರ್ಷದ ಏಪ್ರಿಲ್ 27ರಿಂದ ಗಾಂಧಿನಗರದ ಎರಡು ಮುಖ್ಯ ಚಿತ್ರಮಂದಿರಗಳಾದ ತ್ರಿಭುವನ್ ಮತ್ತು ಕೈಲಾಶ್ ಇತಿಹಾಸ ಪುಟವನ್ನು ಸೇರಿವೆ. 783 ಸೀಟ್‍ಗಳನ್ನು ಹೊಂದಿದ್ದ ತ್ರಿಭುವನ್‍ (ಇದು ಒಂದು ಕಾಲದಲ್ಲಿ 1150 ಸೀಟ್‍ಗಳ ಬೃಹತ್ ಚಿತ್ರಮಂದಿರ ಎನ್ನಿಸಿಕೊಂಡಿತ್ತು) ‘ಸಂಪತ್ತಿಗೆ ಸವಾಲ್’ ಚಿತ್ರದಿಂದ ಆರಂಭಿಸಿ ಇತ್ತೀಚಿನ ‘ರಂಗಿತರಂಗ’, ‘ಫಸ್ಟ್ ರಾಂಕ್ ರಾಜು’ವರೆಗೆ ಹಲವು ಮೈಲುಗಲ್ಲಾದ ಚಿತ್ರಗಳ ಶತದಿನೋತ್ಸವಕ್ಕೆ ಕಾರಣವಾಗಿತ್ತು. ಕೈಲಾಶ್, ‘ಅನುಭವ’, ‘ಮೈಸೂರು ಮಲ್ಲಿಗೆ’ಯಂತಹ ಚಿಕ್ಕ ಬಜೆಟ್ ಚಿತ್ರಗಳಿಗೆ ಸಂಜೀವಿನಿಯಾಗಿತ್ತು. ಇದು 243 ಸೀಟ್‍ಗಳ ಚಿತ್ರಮಂದಿರ. (ಇದೂ ಒಂದು ಕಾಲದಲ್ಲಿ ಮುನ್ನೂರು ಸೀಟ್‍ಗಳ ಥಿಯೇಟರ್ ಆಗಿತ್ತು.) ಈ ಬೆಳವಣಿಗೆ ನಂತರ ಕೆಂಪೇಗೌಡ ರಸ್ತೆಯಲ್ಲೀಗ ಉಳಿದಿರುವುದು ಒಂಭತ್ತೇ ಚಿತ್ರಮಂದಿರಗಳು. ಅದರಲ್ಲಿ ಮೂರು ಎಂದಿಗೂ ಕನ್ನಡದ ಪಾಲಿಗೆ ಇಲ್ಲ. ಕನ್ನಡದ ಪಾಲಿಗೆ ಇರುವ ಆರು ಚಿತ್ರಮಂದಿರಗಳಲ್ಲಿಯೂ ಎರಡು ಈ ವರ್ಷದ ಕೊನೆಯೊಳಗೆ ಇತಿಹಾಸದ ಪುಟ ಸೇರಲಿವ. ಅಲ್ಲಿಗೆ ನಾಲ್ಕೇ ಚಿತ್ರಮಂದಿರಗಳು ಗಾಂಧಿನಗರ ಎನ್ನುವ ಭವ್ಯ ಇತಿಹಾಸ ಪಳಯುಳಕೆಗಳಾಗಲಿವ. ಬಹುತೇಕ ಪ್ರಮುಖ ವಿತರಕರು, ಹಂಚಿಕೆದಾರರು ಗಾಂಧಿನಗರದಿಂದ ದೂರವಾಗಿದ್ದಾರೆ ಇಲ್ಲವೆ ಇತಿಹಾಸ ಪುಟಗಳನ್ನು ಸೇರಿದ್ದಾರೆ. ವಿಪರ್ಯಾಸವೆಂದರೆ ಇದೇ ವೇಳೆಯಲ್ಲಿ ಕನ್ನಡ ಚಿತ್ರಗಳ ಸಂಖ್ಯೆ ಹೆಚ್ಚಿದ್ದು, ವರ್ಷಕ್ಕೆ ಅದು 160ರ ಗಡಿ ದಾಟುವ ನಿರೀಕ್ಷೆ ಇದೆ.

ಗಾಂಧಿನಗರ ಎನ್ನುವುದು ರೂಪುಗೊಂಡ ರೀತಿಯೇ ಕುತೂಹಲಕರವಾಗಿದೆ. 1927 ರಿಂದ 1943 ರವರೆಗೆ ಮೂಕಿಚಿತ್ರದ ಕಾಲವೂ ಸೇರಿದಂತೆ ದಕ್ಷಿಣ ಭಾರತ ಮತ್ತು ಶ್ರೀಲಂಕಾಕ್ಕೆ ಬೆಂಗಳೂರು ಪ್ರಮುಖ ವಿತರಣಾ ಕೇಂದ್ರವಾಗಿತ್ತು. ದೇಶದ ಪ್ರಥಮ ಹಂಚಿಕೆ ಕಛೇರಿ ಆರಂಭವಾಗಿದ್ದು ಚಿಕ್ಕಪೇಟೆಯ ಆಂಜನೇಯ ಸ್ವಾಮಿ ಗುಡಿಯ ಪಕ್ಕದ ಕಟ್ಟಡದಲ್ಲಿ. ಇದೇ ಗಾಂಧಿನಗರದ ಆರಂಭಿಕ ಬಿಂದು. ಇದರ ಪಕ್ಕದಲ್ಲಿಯೇ ಗಾಂಧಿನಗರದ ಮೊದಲ ಚಿತ್ರಮಂದಿರ ‘ವಿಜಯ್’ 1929 ರಲ್ಲಿ ಆರಂಭವಾಯಿತು. ಇದನ್ನು ಆರಂಭಿಸಿದವರು ಇಂದಿನ ವಿತರಕ ಮತ್ತು ಮಾಜಿ ಕ್ರಿಕೆಟ್ ಪಟು ಸಂಜಯ್ ದೇಸಾಯಿ ಅವರ ತಾತ ಚಮನ್‍ ಲಾಲ್ ದೇಸಾಯಿ. ಗುಬ್ಬಿ ವೀರಣ್ಣನವರು 1936ರಲ್ಲಿ ‘ಶಿವಾನಂದ’ ಥಿಯೇಟರ್ ಕಟ್ಟಿದರು. ನಂತರ ಒಂದೊಂದಾಗಿ ಚಿತ್ರಮಂದಿರಗಳು ಆರಂಭವಾದವು.

ಹೀಗೆ ಬಂದ ಚಿತ್ರಮಂದಿರಗಳಲ್ಲಿ ‘ಸೂಪರ್ ಟಾಕೀಸ್’ ಗೆ ವಿಶೇಷ ಮಹತ್ವವಿದೆ. ಇಲ್ಲಿ ಬಿಡುಗಡೆಯಾದ ಕನ್ನಡ ಚಿತ್ರಗಳೆಲ್ಲವೂ ಮೈಲುಗಲ್ಲು ಎನ್ನಿಸಿಕೊಂಡಿವೆ. 1944 ರಲ್ಲಿ ಆರಂಭವಾಸ ‘ಸ್ಟೇಟ್ಸ್’ ತನ್ನ ಬಾಲ್ಕನಿಯಿಂದ ಹೆಸರು ಮಾಡಿದರೆ 1946 ರಲ್ಲಿ ಆರಂಭವಾದ ‘ಮೂವಿಲ್ಯಾಂಡ್’ ಕ್ಯೂ ಪದ್ದತಿ ಆರಂಭಿಸಿದ ಮೊದಲ ಚಿತ್ರಮಂದಿರ ಎನ್ನಿಸಿಕೊಂಡಿತು. 1957 ರಲ್ಲಿ ಸುಂದರ ವಿನ್ಯಾಸದೊಂದಿಗೆ ‘ಅಲಂಕಾರ್’ ಚಿತ್ರಮಂದಿರ ಬಂದಿತು. ಪ್ಲಾಸ್ಟಿಕ್ ತೆರೆಯ ಸೌಂದರ್ಯ, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಹೀಗೆ ಇದರ ಹೆಗ್ಗಳಿಕೆಗಳು ಹಲವು. ನಂತರ ಸಾಲು ಸಾಲಾಗಿ ಚಿತ್ರಮಂದಿರಗಳು ಕೆಂಪೇಗೌಡ ರಸ್ತೆಯಲ್ಲಿ ಬಂದವು. 1968 ರಲ್ಲಿ ಏಷ್ಯಾದಲ್ಲಿಯೇ ಅತಿ ದೊಡ್ಡ ಚಿತ್ರಮಂದಿರ ಎಂಬ ಹೆಗ್ಗಳಿಕೆಗಳೊಂದಿಗೆ ‘ಕಪಾಲಿ’ ಬಂದಿತು. ಮುಂದೆ ಬಂದ ಚಿತ್ರಮಂದಿರಗಳ ಪೈಕಿ ‘ಅಭಿನಯ’ ಚೆಲಿಸುವ ಮೆಟ್ಟಿಲುಗಳುಳ್ಳ ಮೊದಲ ಚಿತ್ರಮಂದಿರ ಎನ್ನುವ ಹೆಗ್ಗಳಿಕೆಯನ್ನು ಪಡೆಯಿತು. ಗಾಂಧಿನಗರದಲ್ಲಿ ಕನ್ನಡ ಸಾರ್ವಭೌಮತೆಗೆ ನಾಂದಿ ಹಾಡಿದ ಚಿತ್ರಮಂದಿರ ‘ಭಾರತ್’. ಇಲ್ಲಿ ಕನ್ನಡ ಕಲಾವಿದರು ನಿರ್ಮಿಸಿದ ‘ರಣಧೀರ ಕಂಠೀರವ’ ಬಿಡುಗಡೆ ಕಂಡು ಯಶಸ್ಸನ್ನು ಪಡೆಯಿತು. ‘ಹಿಮಾಲಯ’ ಕೂಡ ಕೆಲಕಾಲ ಕನ್ನಡಿಗರ ಪರವಾಗಿ ನಿಂತ ಚಿತ್ರಮಂದಿರ. ಆ ದಿನಗಳು ಕನ್ನಡ ಚಿತ್ರರಂಗದ ಪಾಲಿಗೆ ಸುವರ್ಣದಿನಗಳು. 1980 ರಿಂದಲೇ ಅವಸಾನದ ಕಾಲ ಆರಂಭವಾಯಿತು. ‘ಅಲಂಕಾರ್’ ವಾಣಿಜ್ಯ ಮಳಿಗೆಯಾಯಿತು. ಒಂದೊಂದಾಗಿ ಚಿತ್ರಮಂದಿರಗಳು ಮುಚ್ಚುತ್ತಾ ಈಗ ಬೆರಳಿಣಿಕೆಯಷ್ಟು ಚಿತ್ರಮಂದಿರಗಳು ಉಳಿದುಕೊಂಡಿವೆ. ‘ತ್ರಿಭುವನ್’ ಮತ್ತು ‘ಕೈಲಾಶ್’ ಚಿತ್ರಮಂದಿರದ ಗುತ್ತಿಗೆದಾರರಾದ ಜ್ಞಾನೇಶ್ವರ್ ಐತಾಳ್ ಅವರು ಹೇಳುವಂತೆ “ ಚಿತ್ರಮಂದಿರಗಳು ಮುಚ್ಚಲು ಪ್ರೇಕ್ಷಕರ ಕೊರತೆ ಕಾರಣವಲ್ಲ. ಚಿತ್ರಮಂದಿರಗಳ ಕುರಿತು ಸರ್ಕಾರದ ಬಿಗಿ ನೀತಿ ಮತ್ತು ಉದ್ಯಮದ ಒಳಜಗಳಗಳು ಕಾರಣ.

ಇದರಿಂದ ಚಿತ್ರಪ್ರದರ್ಶಿಸುವುದಕ್ಕಿಂತ ವಾಣಿಜ್ಯಿಕ ಚಟುವಟಿಕೆ ನಡೆಸುವುದು ಲಾಭಧಾಯಕ ಎನ್ನಿಸಿದೆ.’ ಕಾಲ ಬದಲಾಗಿದೆ ಎಂದು ಕೈಚೆಲ್ಲಿ ಕುಳಿತು ಕೊಳ್ಳುವುದು ಇದಕ್ಕೆ ಪರಿಹಾರವಲ್ಲ. ಶಂಕರ್ ನಾಗ್ ಬಹಳ ವರ್ಷಗಳ ಹಿಂದೆಯೇ ‘ಗಾಂಧಿನಗರ’ ಎನ್ನುವ ಚಿತ್ರ ಸಂಕೀರ್ಣದ ಕನಸನ್ನು ಕಂಡಿದ್ದರು. ಈಗ ಅದನ್ನು ಮಲ್ಟಿಪ್ಲಕ್ಸ್ ಆಗಿ ನಿರೂಪಿಸಬಹುದು. ಅಲ್ಲಿನ ಹದಿನಾರು ಪರದೆಯಲ್ಲಿಯೂ ಕನ್ನಡ ಚಿತ್ರಗಳೇ ಪ್ರದರ್ಶಿತವಾದರೆ ಮರೆಯಾಗುತ್ತಿರುವ ಸುವರ್ಣಯುಗ ಮತ್ತೆ ಮರುಳಲಿದೆ. ಅಲ್ಲಿ ಚಿತ್ರೀಕರಣ, ಡಬ್ಬಿಂಗ್, ಎಡಿಟಿಂಗ್ ಮೊದಲಾದ ಚಿತ್ರರಂಗದ ಚಟುವಟಿಕೆಗಳೂ ನಡೆಯುವಂತಾದರೆ ಕನ್ನಡ ಚಿತ್ರರಂಗಕ್ಕೆ ಮರಳಿ ಚೇತರಿಕೆ ದೊರಕುತ್ತದೆ. ಇದನ್ನು ಸರ್ಕಾರ ಮಾಡಲಿ ಎಂದು ನಿರೀಕ್ಷಿಸುವುದು ತಪ್ಪು, ಎಲ್ಲವನ್ನೂ ಸರ್ಕಾರವೇ ಮಾಡಲಾಗುವುದಿಲ್ಲ ಅಥವಾ ಮಾಡುವಂತಹ ಕಾಲವೂ ಇದಲ್ಲ. ಚಿತ್ರರಂಗದಿಂದ ಸಾಕಷ್ಟು ಹೆಸರು ಕೀರ್ತಿ, ಹಣ ಪಡೆದವರು ಅದನ್ನು ಮರಳಿಸಲು ಇದು ಸಕಾಲ.

ಇಲ್ಲದಿದ್ದರೆ ಬಹುಶ: ಇತಿಹಾಸ ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ.

Leave a Reply