ಮಹಾರಾಷ್ಟ್ರದಲ್ಲಿ ಗೋ ಹತ್ಯೆ ನಿಷೇಧ ಮುಂದುವರಿಕೆ, ಗೋಮಾಂಸ ಸಂಗ್ರಹಣೆ ಅಪರಾಧವಲ್ಲ, ಇದು ಬಾಂಬೆ ಹೈಕೋರ್ಟ್ ತೀರ್ಪು

ಡಿಜಿಟಲ್ ಕನ್ನಡ ಟೀಮ್

ಮಹಾರಾಷ್ಟ್ರ ರಾಜ್ಯ ಸರ್ಕಾರದ ಗೋ ಹತ್ಯೆ ನಿಷೇಧ ನಿರ್ಧಾರವನ್ನು ಬಾಂಬೆ ಹೈಕೋರ್ಟ್ ಮಾನ್ಯಗೊಳಿಸಿದೆ. ಇದೇ ವೇಳೆ ಗೋ ಹತ್ಯೆ ನಿಷೇಧವಿಲ್ಲದ ಹೊರ ರಾಜ್ಯಗಳಿಂದ, ಮಾಂಸವನ್ನು ತಂದು ಹಾಗೂ ಅವುಗಳನ್ನು ಇಟ್ಟುಕೊಂಡಿದ್ದರೆ ಅದು ಅಪರಾಧವಲ್ಲ ಎಂದು ನ್ಯಾಯಾಲಯ ಆದೇಶ ಹೊರಡಿಸಿದೆ.

ಹಿಂದೂ- ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಒಟ್ಟು 29 ಕುಟುಂಬಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್ ಒಕಾ ಮತ್ತು ಎಸ್.ಸಿ ಗುಪ್ಟೆ ಅವರನ್ನೊಳಗೊಂಡ ಪೀಠ ಶುಕ್ರವಾರ ಈ ತೀರ್ಪು ನೀಡಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮಹಾರಾಷ್ಟ್ರ ಪ್ರಾಣಿ ರಕ್ಷಣಾ ಕಾಯ್ದೆ ತಿದ್ದುಪಡಿಗೆ ಸಮ್ಮತಿ ಸೂಚಿಸಿದ ನಂತರ ರಾಜ್ಯ ಸರ್ಕಾರ ಮಹಾರಾಷ್ಟ್ರದಲ್ಲಿ ಗೋ ಹತ್ಯೆಗೆ ನಿಷೇಧ ಹೇರಿತ್ತು. 1976ರ ಮಹಾರಾಷ್ಟ್ರ ಪ್ರಾಣಿ ರಕ್ಷಣಾ ಕಾಯ್ದೆಯ ಅಡಿಯಲ್ಲಿ ಹಸುಗಳ ಹತ್ಯೆಗೆ ನಿರ್ಬಂಧ ಹೇರಲಾಗಿತ್ತು. ಆದರೆ, ಈ ಹೊಸ ತಿದ್ದುಪಡಿಯ ನಂತರ ಎತ್ತು ಮತ್ತು ಗೂಳಿಗಳ ಹತ್ಯೆಗೂ ನಿಷೇಧ ಹೇರಿದೆ.

ಈ ಹೊಸ ಕಾಯ್ದೆ ಪ್ರಕಾರ ಗೋ ಹತ್ಯೆ ಮಾಡಿದವರಿಗೆ 5 ವರ್ಷ ಜೈಲು ಹಾಗೂ ₹ 10 ಸಾವಿರ ದಂಡ ವಿಧಿಸಲಾಗುವುದು. ಇನ್ನು ಗೋ ಮಾಂಸ ಇಟ್ಟುಕೊಂಡಿದ್ದರೆ, 1 ವರ್ಷ ಜೈಲು ಮತ್ತು ₹ 2 ಸಾವಿರ ದಂಡ ಎಂದು ವಿಧಿಸಲಾಗಿತ್ತು.

ಆದರೆ, ಬಾಂಬೆ ಹೈಕೋರ್ಟ್ ತೀರ್ಪಿನಲ್ಲಿ ಮಹಾರಾಷ್ಟ್ರ ಪ್ರಾಣಿ ಸಂರಕ್ಷಣೆ ಕಾಯ್ದೆಯ 5 (ಡಿ) ಅನುಚ್ಛೇದಕ್ಕೆ ತಡೆ ನೀಡಿದ್ದು, ಹೊರ ರಾಜ್ಯಗಳಿಂದ ತಂದ ಗೋ ಮಾಂಸವನ್ನು ಇಟ್ಟುಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಿದೆ.

Leave a Reply