ತೆರಿಗೆ ಅಧಿಕಾರಿಗಳ ವಜಾ, ಕೇಂದ್ರದ ಅಧಿಕಾರಶಾಹಿ ಸುಧಾರಣೆ ಯಜ್ಞದ ಬಿಸಿ ಎಲ್ಲ ಹಂತಗಳನ್ನೂ ವ್ಯಾಪಿಸುವ ಸೂಚನೆಯೇ?

ಪ್ರಾತಿನಿಧಿಕ ಚಿತ್ರ

ಡಿಜಿಟಲ್ ಕನ್ನಡ ಟೀಮ್

ಸರ್ಕಾರಿ ಕೆಲಸ ಸಿಕ್ಕರೆ ಸಾಕು ನೆಮ್ಮದಿ ಜೀವನ, ನಮಗೆ ಮನಬಂದಂತೆ ಇರಬಹುದು, ಹೇಳೋರಿರಲ್ಲ ಕೇಳೋರಿರಲ್ಲ ಎಂಬ ಭಾವನೆ ಹಲವರದು. ಎಲ್ಲ ಕೆಲಸಗಳೂ ಹೀಗಾಗಿರಲಿಕ್ಕೆ ಸಾಧ್ಯವಿಲ್ಲ ಬಿಡಿ. ಆದರೆ ಜನಮಾನಸದಲ್ಲಿ ಹೀಗೊಂದು ಗ್ರಹಿಕೆಯಂತೂ ನೆಲೆಗೊಂಡುಬಿಟ್ಟಿದೆ.

ಈ ಸ್ಥಿತಿಯ ಬದಲಾವಣೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಕೆಲವು ಹೆಜ್ಜೆಗಳು ಆಶಾದಾಯಕವಾಗಿವೆ. ಅದಕ್ಕೆ ತಾಜಾ ಉದಾಹರಣೆ ಎಂದರೆ ಕೇಂದ್ರ ಹಣಕಾಸು ಇಲಾಖೆ ಬರೊಬ್ಬರಿ 33 ತೆರಿಗೆ ಅಧಿಕಾರಿಗಳಿಗೆ ನಿವೃತ್ತಿಗೂ ಮೊದಲೇ ಮನೆಯ ದಾರಿ ತೋರಿಸಿರುವುದು. ಇದೇ ಮೊದಲ ಬಾರಿಗೆ ತೆರಿಗೆ ಇಲಾಖೆಯಲ್ಲಿನ 33 ಅಧಿಕಾರಿಗಳನ್ನು ಸಿಸಿಎಸ್ 56 (ಜೆ) ನಿಯಮದ ಅಡಿಯಲ್ಲಿ ಅವಧಿಗೂ ಮುನ್ನ ನಿವೃತ್ತಿ ನೀಡಲಾಗಿದೆ. ತೆರಿಗೆ ಇಲಾಖೆಯ 7 ಗ್ರೂಪ್ ‘ಎ’ ಅಧಿಕಾರಿಗಳು ಸೇರಿದಂತೆ ಒಟ್ಟು 33 ಅಧಿಕಾರಿಗಳನ್ನು ಅವಧಿಗೂ ಮುನ್ನವೇ ನಿವೃತ್ತಿ ಕೊಟ್ಟು ಟಾಟಾ ಹೇಳಿದೆ. ಈ ಬಗ್ಗೆ ಗುರುವಾರ ಕೇಂದ್ರ ಹಣಕಾಸು ಇಲಾಖೆ ಹೇಳಿಕೆ ಹೊರಡಿಸಿದ್ದು, ‘ಕಳೆದ 2 ವರ್ಷಗಳ ಅವಧಿಯಲ್ಲಿ ಇತರೆ ಇಲಾಖೆಗಳಲ್ಲಿ 6 ಗ್ರೂಪ್ ಎ ಅಧಿಕಾರಿಗಳು ಸೇರಿದಂತೆ ಒಟ್ಟು 72 ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ತೆರಿಗೆ ಅಧಿಕಾರಿಗಳು ಏನು ಮಾಡಿದರೂ ಅವರಿಗೆ ಶಿಕ್ಷೆ ಆಗುವುದಿಲ್ಲ ಎಂಬ ಗ್ರಹಿಕೆಯೊಂದಿದೆ. ಇದನ್ನು ಬದಲಿಸುವಲ್ಲಿ ಇಂಥ ಕ್ರಮಗಳು ನೆರವಾಗಲಿವೆ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ, ಮೋದಿ ಸರ್ಕಾರವು ಅಧಿಕಾರಶಾಹಿಯ ನಿಯಂತ್ರಣಕ್ಕೆ ಏನೆಲ್ಲ ಹೆಜ್ಜೆಗಳನ್ನು ಇಡುತ್ತ ಬಂತು ಎಂಬ ಕಿರುನೋಟ ಹರಿಸೋದು ಸೂಕ್ತ. ಏಕೆಂದರೆ, ಸರ್ಕಾರಗಳು ಬದಲಾದರೂ ಕಾರ್ಯಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಅಧಿಕಾರಿಗಳ ವಲಯದಲ್ಲಿ ಬದಲಾವಣೆಗಳಾಗದಿದ್ದರೆ, ಸರ್ಕಾರದ ಮಟ್ಟದಲ್ಲಾದ ನೀತಿಗಳ ಬದಲಾವಣೆ ಯಾವ ಪ್ರಯೋಜನಕ್ಕೂ ಬಾರದು.

ಇದೀಗ ತೆರಿಗೆ ಅಧಿಕಾರಿಗಳವರೆಗೆ ಬಂದು ತಲುಪಿರುವ ಮೋದಿ ಸರ್ಕಾರದ ಸುಧಾರಣಾ ಕಂಪನ ಶುರುವಾಗಿದ್ದು ಬಹಳ ಉನ್ನತ ಹಂತದಲ್ಲಿ. ಸಚಿವರು ತಮ್ಮ ಇಲಾಖೆಗಳಿಗೆ ಬೇಕಾದ ಅಧಿಕಾರಿಗಳನ್ನು ತಾವೇ ಆಯ್ಕೆ ಮಾಡಿಕೊಳ್ಳುವ ಅದುವರೆಗಿನ ಪದ್ಧತಿಗೆ ವಿದಾಯ ಹಾಡಿ, ಪ್ರಧಾನಿ ಕಚೇರಿಯಲ್ಲೇ ಎಲ್ಲ ಅಧಿಕಾರವನ್ನು ಕೇಂದ್ರೀಕರಿಸಲಾಯಿತು. ಇದಕ್ಕೆ ನಿವೃತ್ತ ಮಹಾಲೇಖಪಾಲ ವಿನೋದ್ ರಾಯ್, ಮಾಜಿ ಸಂಪುಟ ಕಾರ್ಯದರ್ಶಿ ಟಿಎಸ್ ಆರ್ ಸುಬ್ರಮಣಿಯನ್ ಇಂಥವರ ಪ್ರಶಂಸೆಗೆ ಪಾತ್ರವಾದ ನಡೆ ಇದು. ಪಿಎಂಒದ (ಪ್ರಧಾನಿ ಕಚೇರಿ) ಈ ಗುರುತರ ಹೊಣೆ ನಿಭಾವಣೆಗೆ ಜೂನ್ 2014ರಲ್ಲಿ ಪಿ. ಕೆ. ಮಿಶ್ರ ಎಂಬ ಗುಜರಾತ್ ಕೇಡರಿನ ನಿವೃತ್ತ ಐಎಎಸ್ ಅಧಿಕಾರಿ, ಪಿಎಂಒದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಬಂದು ಕುಳಿತರು. 2001ರಿಂದ 2004ರ ಅವಧಿಯಲ್ಲಿ ಗುಜರಾತಿನಲ್ಲಿ ಮುಖ್ಯಮಂತ್ರಿ ಮೋದಿಗೆ ಪ್ರಧಾನ ಕಾರ್ಯದರ್ಶಿ ಆಗಿದ್ದವರು ಇವರು. ಈ ಪ್ರಾಮಾಣಿಕ ಅಧಿಕಾರಿಗೆ ಇನ್ನಿಬ್ಬರ ಸಾಥ್ ಸಿಕ್ಕಿತು. ಆಯಕಟ್ಟಿನ ಹುದ್ದೆಗಳಿಗೆ ಅಧಿಕಾರಿಗಳನ್ನು ತರುವಾಗ, ಮಾಮೂಲಿ ಸರ್ಕಾರಿ ದಾಖಲೆಗಳ ಸಹವಾಸ ಬಿಟ್ಟು, ಆ ವ್ಯಕ್ತಿಯ ಬ್ಯಾಚ್ ಮೇಟ್, ಸಹೋದ್ಯೋಗಿ, ಸೀನಿಯರ್, ಜ್ಯೂನಿಯರ್ ಹೀಗೆ ಏನಿಲ್ಲವೆಂದರೂ 10-15 ಕರೆಗಳು ಪ್ರಧಾನಿ ಕಾರ್ಯಾಲಯದಿಂದ ಹೋಗುವುದಕ್ಕೆ ಶುರುವಾಯಿತು. ಹೀಗೆ ನಾನಾ ಮೂಲಗಳಿಂದ ಹಿನ್ನೆಲೆ ಪ್ರಮಾಣೀಕರಿಸಿದ ನಂತರವಷ್ಟೇ ಹುದ್ದೆ.

ವರ್ಷದ ಹಿಂದೆ ವಿದೇಶ ಕಾರ್ಯದರ್ಶಿ ಸುಜಾತಾ ಸಿಂಗ್ ಅವರನ್ನು ವಜಾಗೊಳಿಸಿ ಅವರ ಸ್ಥಾನಕ್ಕೆ ಜೈಶಂಕರ್ ಅವರನ್ನು ತಂದಾಗ, ಇಂಡಿಯನ್ ಫಾರಿನ್ ಸರ್ವೀಸ್ ವಲಯ ಬೆಚ್ಚಿಬಿದ್ದಿತ್ತು. ಶಾರದಾ ಚಿಟ್ ಫಂಡ್ ಹಗರಣದಲ್ಲಿ ಮಾಜಿ ಸಚಿವರೊಬ್ಬರನ್ನು ರಕ್ಷಿಸುತ್ತಿದ್ದ ಆರೋಪ ಎದುರಿಸುತ್ತಿದ್ದ ಗೃಹಖಾತೆ ಕಾರ್ಯದರ್ಶಿ ಅನಿಲ್ ಗೋಸ್ವಾಮಿ ಅವರನ್ನುವಜಾ ಮಾಡಲಾಯಿತು. ಸುಜಾತಾ ವಜಾಗೊಳ್ಳುವುದಕ್ಕೂ ಪೂರ್ವದಲ್ಲಿ ಡಿಆರ್ ಡಿಒದ ಮುಖ್ಯಸ್ಥ ಅವಿನಾಶ್ ಚಂದರ್ ಅವರ ನೇಮಕವನ್ನು ಇನ್ನೂ 15 ತಿಂಗಳ ಅವಧಿಗೆ ಮೊದಲೇ ಮೊಟಕುಗೊಳಿಸಲಾಯಿತು. ಇಲ್ಲೆಲ್ಲ ಕ್ಷಮತೆಯ ಕೊರತೆ, ಆಲಸ್ಯಗಳೇ ಬಿಸಿ ಮುಟ್ಟಿಸುವುದಕ್ಕೆ ಕಾರಣವಾಗಿರುವ ಅಂಶಗಳಾಗಿವೆ. ಏಕೆಂದರೆ ವಜಾಗೊಂಡವರ ಹುದ್ದೆಗೆ ಬಂದು ಕುಳಿತವರೆಲ್ಲಕೆಲಸದಿಂದ ಹೆಸರು ಮಾಡಿದವರೇ ಹೊರತು ಲಾಬಿಯಿಂದಲ್ಲ. ಉದಾಹರಣೆಗೆ ಜೈಶಂಕರ್ ನೇಮಕ.

ಅದು ಡಿಆರ್ ಡಿಒ ಇರಬಹುದು, ತೆರಿಗೆ ಇಲಾಖೆಯಾಗಿರಬಹುದು… ಅಧಿಕಾರಿ ವಲಯದ ಹಲವು ವಿಭಾಗಗಳಲ್ಲಿ ಜಡತ್ವ, ನಿರೀಕ್ಷೆಗೆ ತಕ್ಕ ಕೆಲಸಗಳಾಗದೇ ಕುಳಿತಿರುವುದು ಇಂಥ ಎಲ್ಲ ಸಮಸ್ಯೆಗಳಿವೆ. ಆದರೆ ಅಧಿಕಾರಿ ವರ್ಗದ ನಿಭಾವಣೆ ತುಂಬ ಸೂಕ್ಷ್ಮ ಕೆಲಸ. ಸರ್ಕಾರಕ್ಕೇ ಪ್ರತಿರೋಧ ಬರದಂತೆಯೂ ಎಚ್ಚರವಹಿಸುವುದು, ನಿಯಮಗಳ ಪ್ರಕಾರವೇ ಉತ್ತರ ಕಂಡುಕೊಳ್ಳುವುದು ಇಂಥ ಎಲ್ಲ ನಾಜೂಕುತನಗಳು ಬೇಕಾಗುತ್ತವೆ. ಆದರೆ ತೆರಿಗೆ ಇಲಾಖೆ ಅಧಿಕಾರಿಗಳ ಜಾಡ್ಯಕ್ಕೆ ಬಿಸಿ ಮುಟ್ಟಿಸಿರೋದನ್ನು ನೋಡಿದರೆ ಹಂತ ಹಂತವಾಗಿ ಒಂದೊಂದೇ ಪದರವನ್ನು ರಿಪೇರಿ ಮಾಡುವ ಯತ್ನದಲ್ಲಿರುವಂತೆ ಭಾಸವಾಗುತ್ತಿದೆ.

Leave a Reply