ಸುದ್ದಿ ಸಂತೆ: ಬೋಫೋರ್ಸ್ ನಲ್ಲಾಗದ್ದನ್ನು ಅಗುಸ್ಟಾದಲ್ಲಿ ಮಾಡ್ತೇವೆ- ಇದು ಪಾರಿಕರ್ ಪಂಚ್! ಕಾಂಗ್ರೆಸ್ ಮೆರವಣಿಗೆ, ನೀಟ್ ಬಗ್ಗೆ ಸುಪ್ರೀಂ… ಇವತ್ತಿನ ಎಲ್ಲ ವಿದ್ಯಮಾನಗಳು

ಮಳೆ ಎಂದರೆ ಅಷ್ಟೆ ಸಾಕೇ, ಇದಕೆ ಬೇರೆ ಕ್ಯಾಪ್ಶನ್ ಬೇಕೇ… ಆದರೆ ಮಳೆ ವರದಿ ಇಲ್ಲಿ ಓದಿ.

ಡಿಜಿಟಲ್ ಕನ್ನಡ ಟೀಮ್

ಅಗುಸ್ಟಾ ವೆಸ್ಟ್ಲಾಂಡ್ ಪ್ರಕರಣದ ಬಗ್ಗೆ ರಾಜ್ಯಸಭೆಯಲ್ಲಿ ಈ ಮೊದಲು ಮಾತನಾಡಿದ್ದ ರಕ್ಷಣಾ ಮಂತ್ರಿ ಮನೋಹರ್ ಪಾರಿಕರ್, ಲೋಕಸಭೆಯಲ್ಲಿಇನ್ನಷ್ಟು ಆಕ್ರಮಣಕಾರಿಯಾಗಿಯೇ ತಮ್ಮ ಪ್ರಸ್ತುತಿ ಇತ್ತರು.  ಕಂಪನಿಯ ಕಾರ್ಯಕಾರಿಗಳು 2012ರಲ್ಲಿ ಲಂಚ ಪ್ರಕರಣದಲ್ಲಿ ಇಟಲಿಯಲ್ಲಿ ಬಂಧಿತರಾದಾಗಲೇ ಒಪ್ಪಂದ ರದ್ದುಗೊಳಿಸುವ ಅವಕಾಶ ಯುಪಿಎಗಿತ್ತು. ಆದರೆ ಒಪ್ಪಂದ ರದ್ದುಗೊಳಿಸುವುದಕ್ಕೆ ಯುಪಿಎ 2014ರವರೆಗೂ ಕಾದಿತು. ರಕ್ಷಣಾ ಸಚಿವರಾಗಿದ್ದ ಆ್ಯಂಟನಿಯವರಿಗೆ ಈ ಹಗರಣದ ಬಗ್ಗೆ ಎಷ್ಟು ಗೊತ್ತಿತ್ತೋ ಇಲ್ಲವೋ ಆದರೆ ಅವರು ಕ್ರಮಕ್ಕೆ ಮುಂದಾಗಿದ್ದು, ಮಧ್ಯವರ್ತಿ ಒರ್ಸಿಯ ಬಂಧನವಾಗಿ ಮಾಹಿತಿಗಳು ಹೊರಬರುವಾಗ ಗಾಬರಿಗೆ ಬಿದ್ದು ಕ್ರಮಕ್ಕೆ ಮುಂದಾದರು. ಅವರಿಗೆ ತಮ್ಮ ಸಂತನ ಇಮೇಜು ಕಾಪಾಡಿಕೊಳ್ಳುವ ಧಾವಂತವಿತ್ತು. ಹಾಗೆಂದೇ ಒಂದೇ ದಿನಾಂಕದಲ್ಲಿ ಹಲವು ಕಡತಗಳು ಗಾಬರಿಯಿಂದ ಹರಿದಾಡಿದ್ದರ ಸಾಕ್ಷ್ಯ ಸಿಗುತ್ತದೆ. ಇದೀಗ ಇಟಲಿ ನ್ಯಾಯಾಲಯದ ತೀರ್ಪಿನ ನಂತರ ನಮ್ಮ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳ ತನಿಖೆ ತ್ವರಿತವಾಗಿದೆ. ಬೋಫೋರ್ಸ್ ಹಗರಣದಲ್ಲಿ ಸಾಧ್ಯವಾಗದ್ದನ್ನು ಅಗುಸ್ಟಾ ತನಿಖೆಯಲ್ಲಿ ಮಾಡುವ ಆಶಯವಿದೆ ಅಂತ ಪಂಚ್ ಹೊಡೆದರು ಪಾರಿಕರ್.

ಇದಕ್ಕೂ ಮೊದಲು ಕಾಂಗ್ರೆಸ್ ಪರ ಮಾತನಾಡಿದ ಜ್ಯೋತಿರಾದಿತ್ಯ ಸಿಂಧಿಯಾ, ‘ಸೋನಿಯಾ ಗಾಂಧಿ ಹಣ ಪಡೆದಿರುವ ಬಗ್ಗೆ ಒಂದಕ್ಷರದ ಸಾಕ್ಷಿಯೂ ಇಲ್ಲ. ಸೋನಿಯಾ ಅಂತಂದ್ರೆ ಸಿಂಹಿಣಿ. ಸಿಂಹಿಣಿಯನ್ನು ಕೆಣಕಿದ್ರೆ ಏನಾಗುತ್ತೆ ಗೊತ್ತಾ’ ಅಂತ ಆಕ್ರೋಶ ಹೊರಹಾಕಿದರು.

ಸುಪ್ರೀಂಕೋರ್ಟ್ ಉಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಯಲಿ ಎಂದು ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು.

ಅಂದಹಾಗೆ, ಲೋಕಸಭೆಯಲ್ಲಿ ದಿವಾಳಿ ಮತ್ತು ಸಾಲದ ಮಸೂದೆ ಶುಕ್ರವಾರ ಪಾಸಾಯಿತು. ಇದರ ಮಹತ್ವದ ಬಗ್ಗೆ ಡಿಜಿಟಲ್ ಕನ್ನಡ ಈ ಹಿಂದೆ ಪ್ರಕಟಿಸಿದ್ದ ಲೇಖನ ಇಲ್ಲಿದೆ.

ಕಾಂಗ್ರೆಸ್ ಮೆರವಣಿಗೆ

ಆಗಸ್ಟಾ ವೆಸ್ಟ್ಲ್ಯಾಂಡ್ ಹಗರಣದ ಕುರಿತಂತೆ ಬಿಜೆಪಿ ಸರ್ಕಾರದ ನಿರ್ಧಾರ ಖಂಡಿಸಿ ಕಾಂಗ್ರೆಸ್ ಶುಕ್ರವಾರ ಪ್ರಜಾಪ್ರಭುತ್ವ ರಕ್ಷಣಾ ಮೆರವಣಿಗೆ ನಡೆಸಿದೆ. ನವದೆಹಲಿಯ ಜಂತರ್ ಮಂತರ್ ನಿಂದ ಆರಂಭವಾದ ಈ ಮೆರವಣಿಗೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಹಿರಿಯ ಮುಖಂಡರು ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಸೋನಿಯಾ ಗಾಂಧಿ ಕೇಂದ್ರದ ವಿರುದ್ಧ ಟೀಕಿಸಿದ್ದಾರೆ. ‘ಪ್ರಜಾಪ್ರಭುತ್ವ ವಿರುದ್ಧ ಬಿಜೆಪಿ ಎಷ್ಟೇ ಹೋರಾಡಿದರೂ ಅವರು ಯಶಸ್ವಿಯಾಗಲು ನಾವು ಬಿಡುವುದಿಲ್ಲ. ಮನುಷ್ಯತ್ವದ ಮೌಲ್ಯ ಕಾಪಾಡಲು ನಮ್ಮವರು ರಕ್ತ ಹರಿಸಿದ್ದಾರೆ. ಉತ್ತರಾಖಂಡದಲ್ಲಿ ಸರ್ಕಾರವೇ ಇಲ್ಲವಾಗಿದೆ. ಹಾಗಾಗಿ ಕಾಡ್ಗಿಚ್ಚು ಹೊತ್ತಿ ಉರಿಯುತ್ತಿದ್ದರೂ ಏನು ಮಾಡಲಾಗಲಿಲ್ಲ’ ಎಂದು ತಿಳಿಸಿದ್ದಾರೆ.

‘ಅಚ್ಛೆ ದಿನದ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ, ದೇಶದ ಶೇ.40ರಷ್ಟು ಭಾಗ ಬರಕ್ಕೆ ತತ್ತರಿಸಿದ್ದರೂ ಏನು ಮಾತನಾಡಿಲ್ಲ. ಅರುಣಾಚಲ ಪ್ರದೇಶದಲ್ಲಿ ಜನರಿಂದ ಆಯ್ಕೆಯಾದ ಸರ್ಕಾರವನ್ನು ಕಿತ್ತುಹಾಕಿ ಕಾನೂನು ಉಲ್ಲಂಘನೆ ಮಾಡಿದೆ. ಮೋದಿ ವಿರುದ್ಧ ಮಾತನಾಡುವವರ ವಿರುದ್ಧ ಸುಳ್ಳು ಆರೋಪ ಹೊರಿಸಲಾಗುತ್ತದೆ’ ಎಂದಿದ್ದಾರೆ ರಾಹುಲ್ ಗಾಂಧಿ.

ಕಾಂಗ್ರೆಸ್ ಪಕ್ಷ ಹರಿಯುವ ನದಿಯಂತೆ. ಎಷ್ಟೇ ಆರೋಪಗಳನ್ನು ಹೊರಿಸಿದರೂ ತನ್ನ ಹಾದಿಯಲ್ಲಿ ಪಕ್ಷ ಸಾಗುತ್ತಲೇ ಇರುತ್ತದೆ ಎಂದು ಮನಮೋಹನ್ ಸಿಂಗ್ ತಿಳಿಸಿದ್ದಾರೆ.

ಈ ವೇಳೆ ಕಾಂಗ್ರೆಸ್ ಮುಖಂಡರಾದ, ಸೋನಿಯಾ, ರಾಹುಲ್, ಮನಮೋಹನ್ ಸಿಂಗ್, ಎ.ಕೆ ಆ್ಯಂಟನಿ ಸೇರಿದಂತೆ ಪ್ರಮುಖರನ್ನು ಕೆಲಕಾಲ ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು. ನಂತರ ಸಂಸತ್ತಿನ ಹೊರಗೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮುಂದುವರಿಸಿದರು.

ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಅವ್ಯವಹಾರ: ಶೆಟ್ಟರ್ ಆರೋಪ

 ಶುದ್ಧ ನೀರಿನ ಘಟಕ ಸ್ಥಾಪನೆ ಹಾಗೂ ನೀರಿನ ಪರೀಕ್ಷೆ ನಡೆಸುವ ಪ್ರಯೋಗಾಲಯ ಗುತ್ತಿಗೆ ನೀಡುವಿಕೆಯಲ್ಲಿ ನೂರಾರು ಕೋಟಿ ರೂ. ಅವ್ಯವಹಾರ ನಡೆದಿದೆ ಎಂಬುದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪ. ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಹೇಳಿದ್ದು-  ‘198 ಕೋಟಿ ರೂ. ಮೊತ್ತದ ಪ್ರಯೋಗಾಲಯ ಗುತ್ತಿಗೆ ಏಕ ವ್ಯಕ್ತಿಗೆ  ನೀಡುವ ಸಲುವಾಗಿಯೇ ನಿಯಮಾವಳಿ ಗಾಳಿಗೆ ತೂರಲಾಗಿದೆ. ಅದೇ ರೀತಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ತಲಾ 10 ಲಕ್ಷ ರೂ. ಹೆಚ್ಚುವರಿ ವೆಚ್ಚ  ಮಾಡಲಾಗಿದೆ. ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಗುಣಮಟ್ಟವನ್ನು ಪರೀಕ್ಷಿಸುವ ಪ್ರಯೋಗಾಲಯಗಳನ್ನು ಸ್ಥಾಪಿಸುವುದಾಗಿ ಹೇಳಿದ ಸರ್ಕಾರ ಎಂಬತ್ತು ತಾಲ್ಲೂಕುಗಳಲ್ಲಿ 190 ಕೋಟಿ ರೂ ವೆಚ್ಚದಲ್ಲಿ ಪ್ರಯೋಗಾಲಯಗಳ ನಿರ್ಮಾಣಕ್ಕೆ ಟೆಂಡರ್ ಕರೆಯಿತು. ಈ ಟೆಂಡರ್ ಪಡೆಯಲು ಐದು ವರ್ಷಗಳಲ್ಲಿ ಸಂಸ್ಥೆ ಐವತ್ತೇಳು ಕೋಟಿ ರೂಗಳ ವಹಿವಾಟು ನಡೆಸಿರಬೇಕಿತ್ತು. ಆದರೆ ವೈಯಕ್ತಿಕವಾಗಿ ತಮ್ಮ ಹೆಸರಿನಲ್ಲಿ ಪ್ರಯೋಗಾಲಯ ಸ್ಥಾಪನೆಗೆ ಟೆಂಡರ್ ಪಡೆದ ಪ್ರಸಾದ್ ರಾಯಪಾಟಿ ಎಂಬ ವ್ಯಕ್ತಿ ಆನಂತರ ಮೂರು ಕಂಪನಿಗಳ ಹೆಸರನ್ನು ನಮೂದಿಸಿ,ಆ ಕಂಪನಿಗಳು ತನ್ನವೇ ಎಂದು ಬಿಂಬಿಸಿದರು. ಈ ಕುಡಿಯುವ ನೀರಿನ ಪರೀಕ್ಷೆ ಮಾಡುವ ಪ್ರಯೋಗಾಲಯಗಳು ಎಲ್ಲೂ ಸರಿಯಾಗಿ ಕಾರ್ಯಾರಂಭ ಮಾಡಿಲ್ಲ. ಅದೇ ರೀತಿ ಕುಡಿಯುವ ನೀರಿನ ಗುಣಮಟ್ಟವನ್ನು ಅಳೆಯಲು ಕನಿಷ್ಟ ಮೂವತ್ತಾರು ಗಂಟೆ ಬೇಕು. ಆದರೆ ಇವರು ಕೆಲವೇ ತಾಸಿನೊಳಗೆ ವರದಿ ನೀಡುವ ನಾಟಕ ಮಾಡಿ ಬೋಗಸ್ ಬಿಲ್ ಸೃಷ್ಟಿಸುತ್ತಾರೆ. ಒಂದು ಪರೀಕ್ಷೆಗೆ 930 ರೂಗಳನ್ನು ಪಡೆಯಲಾಗುತ್ತದೆ. ಬಿಜೆಪಿ ಅವಧಿಯಲ್ಲಿ ಪ್ರಯೋಗಾಲಯಗಳನ್ನು ತಲಾ 2.89 ಲಕ್ಷ ರೂಪಾಯಿಗಳನ್ನು ಬಳಸಿ ಆರಂಭಿಸಲಾಗಿತ್ತು.ಆದರೆ ಇವರು ಮರುವರ್ಷ ಅಧಿಕಾರಕ್ಕೆ ಬಂದವರೇ ಒಂದು ಘಟಕವನ್ನು 17.33 ಲಕ್ಷ ರೂ ವೆಚ್ಚದಲ್ಲಿ ಪ್ರಾರಂಭಿಸಲು ಟೆಂಡರ್ ಕೊಟ್ಟರು.ಹೀಗೆ ಒಂದೇ ವರ್ಷದಲ್ಲಿ ಹದಿನಾಲ್ಕೂವರೆ ಲಕ್ಷ ರೂಪಾಯಿ ಹೆಚ್ಚಳವಾಗಿದ್ದು ಹೇಗೆ? ಇದಕ್ಕೆ ಗ್ರಾಮೀಣಾಭಿವೃದ್ದಿ ಸಚಿವ ಹೆಚ್.ಕೆ.ಪಾಟೀಲ್ ಉತ್ತರದಾಯಿಯಾಗಬೇಕು. ಕುತೂಹಲದ ಸಂಗತಿ ಎಂದರೆ 2014-15 ರಲ್ಲಿ ಈ ಪ್ರಯೋಗಾಲಯಗಳನ್ನು ತಲಾ 8.5 ಲಕ್ಷಕ್ಕಿಳಿಸಲಾಯಿತು. ಒಂದೇ ವರ್ಷದಲ್ಲಿ ದರವನ್ನು ಹೇಗೆ ಇಳಿಸಲು ಸಾಧ್ಯ? ಇವರು ಹೇಳಿದಂತೆ ರಾಜ್ಯದಲ್ಲಿ 7000 ಶುದ್ದ ಕುಡಿಯುವ ನೀರಿನ ಘಟಕಗಳು ಸ್ಥಾಪನೆಯಾಗಿದ್ದರೆ ಬರಗಾಲದ ಪರಿಸ್ಥಿತಿಯನ್ನು ದೊಡ್ಡ ಮಟ್ಟದಲ್ಲಿ ಎದುರಿಸಲು ಸಾಧ್ಯವಾಗುತ್ತಿತ್ತು. ಆದರೆ ಹಾಗಾಗಿಲ್ಲ’ ಎಂದು ಆರೋಪಿಸಿದರು.

ಕೆಂಪಯ್ಯ ವಿರುದ್ಧ ನಕಲಿ ಜಾತಿ ಪ್ರಮಾಣಪತ್ರದ ಆರೋಪ

ರಾಜ್ಯ ಗೃಹ ಸಚಿವರ ಸಲಹೆಗಾರರ ಹುದ್ದೆಯಲ್ಲಿರುವ ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರು ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿ ಹುದ್ದೆ ಪಡೆದಿದ್ದಾರೆ ಎಂದು ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಎಸ್ ಟಿ ಘಟಕದ ಮಾಜಿ ಉಪಾಧ್ಯಕ್ಷ ಎಚ್. ಎಸ್. ಸುಭಾಷ್ ದೂರಿದ್ದಾರೆ. ಈ ಮೂಲಕ ಎಸ್ಟಿ ಸಮುದಾಯಕ್ಕೆ ಅನ್ಯಾಯವಾಗಿದೆ. ಹೀಗಾಗಿ ಕೆಂಪಯ್ಯ ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕು ಹಾಗೂ ಈ ನಿಟ್ಟಿನಲ್ಲಿ ತಾವು ಕಾನೂನು ಸಮರಕ್ಕೆ ಸಿದ್ಧ ಎಂಬುದು ಸುಭಾಷ್ ನಿಲುವು.

ಪಶುವೈದ್ಯರ ನೇಮಕದ ಭರವಸೆ

250 ಪಶುವೈದ್ಯರನ್ನು ಹೊಸದಾಗಿ ನೇಮಕ ಮಾಡಿಕೊಳ್ಳಲಾಗುವುದೆಂದು ಪಶುಸಂಗೋಪನಾ ಸಚಿವ ಎ. ಮಂಜು ಇಂದಿಲ್ಲಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಪಶು ವೈದ್ಯಕೀಯ ಸಹಾಯಕರ ಸಂಘ ಏರ್ಪಡಿಸಿದ್ದ ರಾಜ್ಯಮಟ್ಟದ ತಾಂತ್ರಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ಹೇಳಿದ್ದು- ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಹೊಸ ನೇಮಕಾತಿಗೆ ಅನುಮೋದನೆ ದೊರೆಯಲಿದೆ. ಇಲಾಖೆಯಲ್ಲಿ 2140 ವೈದ್ಯರ ಮಂಜೂರಾತಿ ಹುದ್ದೆಗಳಿವೆ. ಅವುಗಳಲ್ಲಿ 1140 ಹುದ್ದೆಗಳು ಖಾಲಿ ಇವೆ. 660 ಹುದ್ದೆಗಳು ಈಗಾಗಲೇ ಭರ್ತಿಯಾಗಿದ್ದು, ಇತ್ತೀಚೆಗೆ 350 ಹುದ್ದೆಗಳಿಗೆ ವೈದ್ಯರನ್ನು ನೇಮಿಸಲಾಗಿದೆ. ಇನ್ನೂ 250 ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

ಗೊಂದಲಕ್ಕೆ ಕಾರಣವಾಯ್ತು ವಾಯು ಸೇನೆ ಕಾರ್ಯಾಚರಣೆ

ಹಿಂಡನ್ ವಾಯುನೆಲೆ ಆವರಣಕ್ಕೆ ಮಾನಸಿಕ ಅಸ್ವಸ್ತ ಪ್ರವೇಶಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ಮುಂಜಾಗ್ರತ ಕ್ರಮವಾಗಿ ಆವರಣದಲ್ಲಿದ್ದ ಎರಡು ಶಾಲೆಯನ್ನು ಬಲವಂತವಾಗಿ ಮುಚ್ಚಿಸಲಾಗಿತ್ತು. ಶುಕ್ರವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಈ ವಾಯುನೆಲೆ ಆವರಣದಲ್ಲಿ ಅಪರಿಚಿತ ವ್ಯಕ್ತಿ ಇಬ್ಬರು ಕಾಣಿಸಿಕೊಂಡಿದ್ದರು. ಈ ಇಬ್ಬರು ಆವರಣಕ್ಕೆ ಪ್ರವೇಶಿಸುತ್ತಿದ್ದಂತೆ ಒಬ್ಬನನ್ನು ಅಧಿಕಾರಿಗಳು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಮತ್ತೊಬ್ಬ ತಪ್ಪಿಸಿಕೊಂಡಿದ್ದ.  ನಂತರ ಆ ವ್ಯಕ್ತಿ ಮಾನಸಿಕ ಅಸ್ವಸ್ತ ಎಂಬುದು ತಿಳಿದುಬಂದಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಜೆಇಎಂ ಉಗ್ರ ಸಂಘಟನೆಯ ಸದಸ್ಯರ ಬಂಧನದ ವೇಳೆ ಹಿಂಡನ್ ವಾಯು ನೆಲೆ ಮೇಲೆ ದಾಳಿಯ ಸಂಚು ಬಯಲಾಗಿತ್ತು. ಹಾಗಾಗಿ ಅಧಿಕಾರಿಗಳು ಕಾರ್ಯಾಚರಣೆಗೆ ಮುಂದಾಗಿದ್ದು, ಗೊಂದಲಕ್ಕೆ ಕಾರಣವಾಗಿತ್ತು.

ನೀಟ್ ಪರೀಕ್ಷೆ ಅಳವಡಿಸಿಕೊಳ್ಳುವಂತೆ ಖಾಸಗಿ ಕಾಲೇಜುಗಳಿಗೆ ಸುಪ್ರೀಂ ಸೂಚನೆ

ಹಲವು ಗೊಂದಲಗಳಿಗೆ ಕಾರಣವಾಗಿದ್ದ ವೈದ್ಯ ಶಿಕ್ಷಣ ಪ್ರವೇಶ ಪರೀಕ್ಷೆ ನೀಟ್ ಕುರಿತಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಖಾಸಗಿ ಕಾಲೇಜುಗಳಿಗೆ ಸೂಚನೆ ನೀಡಿದೆ. ತಮ್ಮ ವೈಯಕ್ತಿಕ ಪರೀಕ್ಷೆಗಳನ್ನು ಕೈಬಿಟ್ಟು ನೀಟ್ ಪರೀಕ್ಷೆಯನ್ನು ಅಳವಡಿಸಿಕೊಳ್ಳುವಂತೆ ಸುಪ್ರೀಂ ಮೌಖಿಕ ಆದೇಶ ನೀಡಿದೆ.

ದ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ತನ್ನ ನಿರ್ಧಾರ ಬದಲಿಸಿಕೊಂಡಿದ್ದು, 2016-17ನೇ ಸಾಲಿನಲ್ಲಿ ಪ್ರತ್ಯೇಕ ಪರೀಕ್ಷೆ ನಡೆಸಲು ರಾಜ್ಯಗಳಿಗೆ ಅವಕಾಶ ಮಾಡಿಕೊಡುವಂತೆ ಕೇಳಿಕೊಂಡಿದೆ. ಈ ಬಗ್ಗೆ ಕೇಂದ್ರ ಸೋಮವಾರದ ವರೆಗೂ ಕಾಲಾವಧಿ ನೀಡುವಂತೆ ಕೇಳಿಕೊಂಡಿದೆ. ಹಾಗಾಗಿ ಕೇಂದ್ರ ಸರ್ಕಾರ ಮುಂದಿನ ವಿಚಾರಣೆ ಮೇ 9ರ ಒಳಗಾಗಿ ರಾಜ್ಯ ಸರ್ಕಾರಗಳೊಂದಿಗೆ, ನೀಟ್ ಪರೀಕ್ಷೆಯಿಂದ ವಿನಾಯಿತಿ ಪಡೆದು ಬೇರೆ ಪರೀಕ್ಷೆ ನಡೆಸಲು ಅವಕಾಶ ನೀಡುವ ಬಗ್ಗೆ ಚರ್ಚೆ ನಡೆಸಿ ತೀರ್ಮಾನಕ್ಕೆ ಬರುವಂತೆ ತಿಳಿಸಿದೆ.

ಸುಪ್ರೀಂ ಕೋರ್ಟ್ ನ ಈ ತೀರ್ಪಿಗೆ ಖಾಸಗಿ ಕಾಲೇಜು ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದು, ‘ಕಾಲೇಜುಗಳು ಸಂಸ್ಥೆ ಸ್ಥಾಪಿಸಿ ಆಡಳಿತ ನಡೆಸುವ ಮೂಲಭೂತ ಹಕ್ಕಿಗೆ ಧಕ್ಕೆಯುಂಟಾಗಿದೆ. ಆ ಮೂಲಕ ಕಾನೂನು ಉಲ್ಲಂಘಿಸಿದಂತಾಗಿದೆ’ ಎಂದು ಪ್ರತಿಭಟನೆ ನಡೆಸಿದರು. ಈ ವೇಳೆ ಹಿರಿಯ ನ್ಯಾಯವಾದಿ ರಾಜೀವ್ ಧವನ್ ಮಾತನಾಡಿ, ‘ಖಾಸಗಿ ಕಾಲೇಜುಗಳು ನೀಟ್ ಪರೀಕ್ಷೆ ಅಳವಡಿಸಿಕೊಳ್ಳಲೇಬೇಕಾದರೆ, ಪ್ರತಿ ವರ್ಷ ರಾಜ್ಯ ಸರ್ಕಾರ ನಡೆಸುವ ಪರೀಕ್ಷೆಯಿಂದ ಬರುವ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ನೀಡಲಾಗುವ ಶೇ.50ರಷ್ಟು ಮೀಸಲಾತಿಯನ್ನು ಕೈಬಿಡುತ್ತೇವೆ’ ಎಂದು ತಿಳಿಸಿದರು.

ಉತ್ತರಾಖಂಡದಲ್ಲಿ ಮೇ 10ಕ್ಕೆ ಬಹುಮತ ಸಾಬೀತು

ಉತ್ತರಾಖಂಡ ವಿಧಾನಸಭೆ ಬಹುಮತ ಸಾಬೀತು ಪ್ರಕ್ರಿಯೆಯನ್ನು ಮೇ 10 ರಂದು ನಡೆಸಲು ಸುಪ್ರೀಂ ಕೋರ್ಟ್ ಮುಹೂರ್ತ ನಿಗದಿಪಡಿಸಿದೆ. ಕೇಂದ್ರ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್ ಮುಂದೆ ತನ್ನ ಒಪ್ಪಿಗೆ ಸೂಚಿಸಿದ ನಂತರ ಹರೀಶ್ ರಾವತ್ ಸರ್ಕಾರ ಬಹುಮತ ಸಾಬೀತುಪಡಿಸಲು ದಿನಾಂಕ ಗೊತ್ತು ಮಾಡಿತು. ಅಲ್ಲದೆ ಈ ವೇಳೆ ಅನರ್ಹಗೊಂಡಿರುವ 9 ಕಾಂಗ್ರೆಸ್ ಶಾಸಕರು ಮತ ಚಲಾಯಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಇನ್ನುಳಿದಂತೆ ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲುಗಳು..

  • ಶುಕ್ರವಾರ ಬೆಳಗಿನ ಜಾವ ಸಹರಾ ಗ್ರೂಪ್ ಮುಖ್ಯಸ್ಥ ಸುಬ್ರತಾ ರಾಯ್ ತಾಯಿ ಚಬ್ಬಿ ರಾಯ್ ಮೃತಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಜೈಲು ವಾಸ ಅನುಭವಿಸುತ್ತಿರುವ ಸುಬ್ರತಾ ಅವರಿಗೆ 4 ವಾರಗಳ ತಾತ್ಕಾಲಿಕ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ತಮ್ಮ ತಾಯಿ ಅವರ ಅಂತಿಮ ಕಾರ್ಯ ನಡೆಸಲು 3 ವಾರಗಳ ಬಿಡುಗಡೆ ಬೇಕು ಎಂದು ರಾಯ್ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಉನ್ನತ ನ್ಯಾಯಾಲಯ ತಾತ್ಕಾಲಿಕ ಬಿಡುಗಡೆಗೆ ಅನುಮತಿ ನೀಡಿದೆ.
  • ಶುಕ್ರವಾರ ಲೋಕಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕರ್, ಆಗಸ್ಟಾ ವೆಸ್ಟ್ಲ್ಯಾಂಡ್ ಪ್ರಕರಣದಲ್ಲಿ ಇಟಲಿ ಕಂಪನಿಗೆ ಯುಪಿಎ ಸರ್ಕಾರ ಎಲ್ಲ ರೀತಿಯ ನೆರವು ನೀಡಿದೆ ಎಂದು ಹೇಳಿದ ಪರಿಣಾಮ ಕಾಂಗ್ರೆಸ್ ಸದಸ್ಯರು ಸದನದಿಂದ ಹೊರ ನಡೆದು ಪ್ರತಿಭಟಿಸಿದರು.
  • ಮಹಾರಾಷ್ಟ್ರ ರಾಜ್ಯ ಸರ್ಕಾರದ ಗೋ ಹತ್ಯೆ ನಿಷೇಧ ನಿರ್ಧಾರವನ್ನು ಬಾಂಬೆ ಹೈಕೋರ್ಟ್ ಮಾನ್ಯಗೊಳಿಸಿದೆ. ಇದೇ ವೇಳೆ ಗೋ ಹತ್ಯೆ ನಿಷೇಧವಿಲ್ಲದ ಹೊರ ರಾಜ್ಯಗಳಿಂದ, ಮಾಂಸವನ್ನು ತಂದು ಹಾಗೂ ಅವುಗಳನ್ನು ಇಟ್ಟುಕೊಂಡಿದ್ದರೆ ಅದು ಅಪರಾಧವಲ್ಲ ಎಂದು ನ್ಯಾಯಾಲಯ ಆದೇಶ ಹೊರಡಿಸಿದೆ.

 

ಉತ್ತರಾಖಂಡ ಅಂತಲ್ಲ, ಕೆನಡಾದಂಥ ಮುಂದುವರಿದ ದೇಶಕ್ಕೂ ಪ್ರಕೃತಿ ಮುನಿದಾಗ ಏನೂ ಮಾಡಲಾಗದು. ಕೆನಡಾ ಕಾಳ್ಗಿಚ್ಚಿನ ವರದಿ- ಚಿತ್ರ ಇಲ್ಲಿ.

ಕನ್ನಡ ಸಿನಿಮಾ ಎಂದರೆ ಗಾಂಧಿನಗರ ಅಂತೀವಿ. ಆದರೆ ಗಾಂಧಿನಗರದ ಥಿಯೇಟರುಗಳೆಲ್ಲ ಮುಚ್ಚಿಕೊಳ್ಳುತ್ತಿವೆ. ಎಲ್ಲರೂ ಕೈಕಟ್ಟಿಕೊಂಡಿರಬೇಕಾ… ಪ್ರಶ್ನಿಸಿದ್ದಾರೆ. ಎನ್. ಎಸ್. ಶ್ರೀಧರಮೂರ್ತಿ.

ಇದೇ ಮೊದಲ ಬಾರಿಗೆ ತೆರಿಗೆ ಇಲಾಖೆಯಲ್ಲಿನ 33 ಅಧಿಕಾರಿಗಳನ್ನು ಸಿಸಿಎಸ್ 56 (ಜೆ) ನಿಯಮದ ಅಡಿಯಲ್ಲಿ ಅವಧಿಗೂ ಮುನ್ನ ನಿವೃತ್ತಿ ನೀಡಲಾಗಿದೆ. ಆದರೆ ಈ ಜಾಡ್ಯ ನಿವಾರಣೆ ಶುರುವಾಗಿದ್ದೆಲ್ಲಿಂದ? ಉನ್ನತ ಹಂತದಲ್ಲಿ ಶುರುವಾದ ಸರ್ಜರಿ ಅಧಿಕಾರಿ ವಲಯದ ಎಲ್ಲ ಹಂತಗಳನ್ನು ತಲುಪುವ ಯತ್ನದಲ್ಲಿದೆ. ಅಧಿಕಾರಶಾಹಿ ಜತೆಗೆ ಮೋದಿ ಸರ್ಕಾರದ ನಡೆಯ ಕಿರುದಾರಿ ಇಲ್ಲಿದೆ..

 

Leave a Reply