ಡಿಜಿಟಲ್ ಕನ್ನಡ ಟೀಮ್
ಇಷ್ಟು ದಿನಗಳ ಕಾಲ ಬೆಂಗಳೂರು ಸೇರಿದಂತೆ ದೇಶದಾದ್ಯಂತ ಬಿರು ಬಿಸಿಲಿನ ಪರಿಣಾಮವನ್ನೇ ನೋಡುತ್ತಿದ್ದ ನಮಗೆ ಈಗ ತಂಪಾದ ಸುದ್ದಿ. ಕಾರಣ, ಶುಕ್ರವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ಭರ್ಜರಿ ಮಳೆ ಸುರಿದಿದೆ. ಇಷ್ಟು ದಿನಗಳ ಕಾಲ ಹಾಟ್ ಆಗಿದ್ದ ಬೆಂಗಳೂರು ಈಗ ಮತ್ತೆ ಕೂಲ್ ಆಗಿದೆ.
ಸುಮಾರು ಮಧ್ಯಾಹ್ನ 4 ಗಂಟೆಗೆ ಆರಂಭವಾದ ಮಳೆ, ಎಂ.ಜಿ ರಸ್ತೆ, ಅಶೋಕ ನಗರ, ಹಲಸೂರು, ಪದ್ಮನಾಭನಗರ ಸೇರಿದಂತೆ ಬೆಂಗಳೂರಿನಾದ್ಯಂತ ಸುರಿದಿದೆ. ಆ ಮೂಲಕ ಹಲವು ದಿನಗಳ ನಂತರ ಬೆಂಗಳೂರಿನ ಜನರು ತಣ್ಣನೆಯ ವಾತಾವರಣವನ್ನು ಆಸ್ವಾದಿಸುವಂತಾಗಿದೆ. ಬೆಂಗಳೂರು ಜತೆಗೆ ಶ್ರೀರಂಗಪಟ್ಟಣ, ಮೈಸೂರು ಸೇರಿದಂತೆ ರಾಜ್ಯದ ವಿವಿದೆಡೆಗಳಲ್ಲಿ ಮಳೆ ತಂಪೆರೆದಿದೆ.
ಈ ಬಾರಿಯ ಬೇಸಿಗೆ ಕೇವಲ ಬೆಂಗಳೂರನ್ನಷ್ಟೇ ಅಲ್ಲ, ಇಡೀ ದೇಶವನ್ನು ಕಾಡಿತ್ತು. ಹಾಗಾಗಿ ವರುಣನ ಕೃಪಾಕಟಾಕ್ಷ ಯಾರಿಗೆಲ್ಲ ಸಿಕ್ಕಿದೆ ಎಂದು ನೋಡೋಣ.
ಬೆಂಕಿ ಇಲ್ಲದೇ ಕೇವಲ ಬಿಸಿಲಿನ ತಾಪಕ್ಕೆ ನೆಲದ ಮೇಲೆಯೇ ಆಮ್ಲೆಟ್ ಬೇಯಿಸಿಕೊಳ್ಳುವ ಪರಿಸ್ಥಿತಿಯಲ್ಲಿದ್ದ ಹೈದರಾಬಾದ್ ಜನರಿಗೂ ವರುಣನ ಕರುಣೆ ಸಿಕ್ಕಿದೆ. ಅದು ಯಾವ ಮಟ್ಟಿಗೆ ಅಂದರೆ, ಕಳೆದ ದಶಕದಲ್ಲೇ ಅತಿ ದೊಡ್ಡ ಪ್ರಮಾಣದ ಮಳೆ ಬಿದ್ದಿದೆ. ಕಳೆದ 24 ಗಂಟೆಗಳಲ್ಲಿ 74 ಎಂಎಂ ನಷ್ಟು ಮಳೆ ಬಿದ್ದಿದೆ. ಆ ಮೂಲಕ ಹೈದರಾಬಾದ್ ನಲ್ಲಿ ಕನಿಷ್ಠ ತಾಪಮಾನ 18 ಡಿಗ್ರಿಗೆ ಬಂದು ನಿಂತಿದೆ.
ತಮಿಳುನಾಡಿನಲ್ಲೂ ಪೂರ್ವ ಮಾನ್ಸೂನ್ ಮಳೆಯ ಸಿಂಚನವಾಗಿದೆ. ಆ ಮೂಲಕ ಸುದೀರ್ಘ ಅವಧಿ ನಂತರ ಇಲ್ಲಿನ ತಾಪಮಾನ 35 ಡಿಗ್ರಿಗಿಂತ ಕೆಳಗಿಳಿದಿದೆ. ಇದರ ಜತೆಗೆ ಭುವನೇಶ್ವರದಲ್ಲೂ ಮಳೆ ಸುರಿದಿದ್ದು, ಮಧ್ಯಾಹ್ನ 41 ಡಿಗ್ರಿಯಷ್ಟಿದ್ದ ತಾಪಮಾನ, ಸಂಜೆ ವೇಳೆಗೆ 30 ಡಿಗ್ರಿಗೆ ಇಳಿಕೆಯಾಗಿದೆ.
ಒಟ್ಟಿನಲ್ಲಿ ಕಾದ ಕೆಂಡದಂತಿದ್ದ ಭೂಮಿಗೆ ಮಳೆ ಸುರಿದು ತಂಪಾಗಿದೆ. ಆ ಮೂಲಕ ಮಳೆಗಾಗಿ ಜನರ ಕಾಯುವಿಕೆಗೆ ತೆರೆ ಬಿದ್ದಿದೆ.