ಪಾತಾಳದಲ್ಲೂ ಗದ್ದಲ, ಅಲ್ಲಿ ಮನುಷ್ಯ ನಿಂತದ್ದು ಒಂದೇ ಸಲ… ಈಗಲೂ ಸವಾಲೆಸೆದಿದೆ ‘ಚಾಲೆಂಜರ್ ಡೀಪ್’!

author-ananthramuಬ್ರಿಟಿಷ್ ಪರ್ವತಾರೋಹಿ ಜಾರ್ಜ್ ಮಲ್ಲೋರಿ, ಎವರೆಸ್ಟ್ ಆರೋಹಣಕ್ಕೆಂದು 1923ರಲ್ಲಿ ನ್ಯೂಯಾರ್ಕಿನಲ್ಲಿ ಫಂಡ್ ಎತ್ತುವಾಗ ಒಬ್ಬ ಪ್ರಶ್ನಿಸಿದನಂತೆ ‘ಏಕೆ ಹಿಮಾಲಯದ ಎವರೆಸ್ಟ್ ಹತ್ತಬೇಕು?’ ಮಲ್ಲೋರಿ ಪಟ್ಟೆಂದು ಉತ್ತರಿಸಿದ ‘ಏಕೆಂದರೆ ಅದು ಇದೆ.’ ನ್ಯೂಯಾರ್ಕ್ ಟೈಮ್ಸ್ 1923ರ ಮಾರ್ಚ್ 18ರ ಆವೃತ್ತಿಯಲ್ಲಿ ಇದನ್ನು ಉಲ್ಲೇಖಿಸಿತ್ತು. ಅನಂತರ ಮನುಷ್ಯನ ಯಾವುದೇ ಕಠಿಣ ಸಾಧನೆಗೂ ಇದೇ ಉತ್ತರವಾಯಿತು. ಎವರೆಸ್ಟ್ ಹತ್ತುವಾಗ ಮಲ್ಲೋರಿ ಬದುಕಲಿಲ್ಲ. ಆದರೆ ಅವನ ಈ ಮೂರು ಪದಗಳು ಚಿರಾಯುವಾಗಿವೆ; ಅವಕ್ಕೆ ಸಾವಿಲ್ಲ.

ತೇನ್‍ಸಿಂಗ್ ಮತ್ತು ಹಿಲೇರಿ ಎವರೆಸ್ಟ್ ಶಿಖರವನ್ನು ಹತ್ತಿದ ಮೇಲೆ ಸಾವಿರಾರು ಮಂದಿ ಹತ್ತಿದ್ದಾರೆ. ವ್ಯೋಮದಲ್ಲಿ 3,70,300 ಕಿಲೋ ಮೀಟರ್ ದೂರದ ಚಂದ್ರನ ಮೇಲೆ ನಿಂತ ನೀಲ್ ಆರ್ಮ್‍ಸ್ಟ್ರಾಂಗ್ ಬೂಟು ಗುರುತು ಮೂಡಿಸಿದ ಮೇಲೆ ಇನ್ನೂ ಹನ್ನೆರಡು ಮಂದಿ ಚಂದ್ರನನ್ನು ತುಳಿದಿದ್ದಾರೆ. ವಿಚಿತ್ರವೆಂದರೆ ಪಶ್ಚಿಮ ಪೆಸಿಫಿಕ್ ಸಾಗರದಲ್ಲಿ ಫಿಲಿಪೀನ್ಸ್ ಗೆ ಪೂರ್ವದಲ್ಲಿರುವ ಮೇರಿಯಾನ ಎಂಬ ಕಮರಿಯಲ್ಲಿ ‘ಚಾಲೆಂಜರ್ ಡೀಪ್’ ಎಂಬ ಪಾತಾಳವಿದೆ. ಅದನ್ನು ಮನುಷ್ಯ ಮೆಟ್ಟಿದ್ದು ಒಂದೇ ಸಲ. ಇದೇನು ಕಥೆ? ಮಂಗಳ ಗ್ರಹಕ್ಕೆ ರೋಬಾಟ್ ಕಳಿಸಿ ಅದರ ಅಂಗಳದಲ್ಲಿ ಓಡಾಡಿಸಿಯಾಗಿದೆ. ಇನ್ನು ಮನುಷ್ಯ ಮೆಟ್ಟಿ ನಿಲ್ಲುವುದೊಂದೇ ಬಾಕಿ. ಆದರೆ ನಮ್ಮ ಕಾಲಡಿಯ ನೆಲದಲ್ಲಿ ಮನುಷ್ಯ ಸಾಗಿರುವ ದೂರ ದಕ್ಷಿಣ ಆಫ್ರಿಕದ ತಾವ್ ತೋನ ಚಿನ್ನದ ಗಣಿಗಳಲ್ಲಿ. ಅದು ನಾಲ್ಕು ಕಿ.ಮೀ. ದಾಟಿಲ್ಲ.. ಸಾಗರದಲ್ಲೂ ಅಷ್ಟೇ, ಎರಡನೇ ಮಹಾಯುದ್ಧದ ನಂತರವೇ ಸಾಗರ ತಳ ಹೇಗಿದೆ ಎಂಬ ಸ್ಪಷ್ಟ ಚಿತ್ರಣ ನಮಗೆ ಸಿಕ್ಕಿದ್ದು. ಅಲ್ಲೂ ಬೆಟ್ಟಗುಡ್ಡಗಳಿವೆ, ಕಣಿವೆ-ಕಂದರಗಳಿವೆ, ಅಗ್ನಿಪರ್ವತಗಳಿವೆ, ಉಪ್ಪಿನ ಚಿಲುಮೆಗಳಿವೆ.

CHALLENGER 2

ಮೇರಿಯಾನ ಕಮರಿ ಮೊದಲು ಪತ್ತೆಯಾದ್ದು ಬ್ರಿಟಿಷ್ ಹಡಗು ಎಚ್.ಎಮ್.ಎಸ್. ಚಾಲೆಂಜರ್, 1875ರಲ್ಲಿ ಪ್ರಪಂಚದ ಸಾಗರಗಳನ್ನು ಸರ್ವೇ ಮಾಡಬೇಕೆಂದು ಹೊರಟಾಗ. ಒಂದೆಡೆ ಅನುಮಾನ ಬಂತು. ಹಗ್ಗಕ್ಕೆ ಭಾರವಾದ ಗುಂಡುಕಟ್ಟಿ ಹಡಗಿನಿಂದ ಬಿಡುತ್ತಲೇ ಹೋದರು. ಅದು ಎಂಟು ಕಿಲೋ ಮೀಟರ್ ಆಳಕ್ಕೆ ಇಳಿದು ನಿಂತಿತು. ಜಗತ್ತು ದಂಗಾಯಿತು. ಅದೇ ಎಚ್.ಎಮ್.ಎಸ್. ಚಾಲೆಂಜರ್-2, ಎರಡನೇ ಮಹಾಯುದ್ಧಾನಂತರ ಪ್ರತಿಧ್ವನಿ ತಂತ್ರ ಬಳಸಿ ಅಳೆದಾಗ, ಸುಮಾರು ಹನ್ನೊಂದು ಕಿಲೋ ಮೀಟರ್ ಆಳವಿದೆ ಎಂಬುದು ಸೋಜಿಗ ತಂದಿತು (ಅದರ ಸರಿಯಾದ ಆಳ 10,994 ಮೀಟರ್).ಇಡೀ ಮೇರಿಯಾನ ಕಮರಿ ಹೆಚ್ಚುಕಡಿಮೆ ನಮ್ಮ ಹಿಮಲಯದಷ್ಟು ಉದ್ದವಿದೆ, ಅಗಲ ಬಲು ಕಿರಿದು-69 ಕಿಲೋ ಮೀಟರ್ ಅಷ್ಟೇ. ಸಾಗರದ ಬೊಚ್ಚುಬಾಯಿ ಎಂದರೂ ಆದೀತು.  ಸದ್ಯಕ್ಕೆ ನಾವು ಇದನ್ನೇ ಪಾತಾಳ ಎನ್ನೋಣ. ಇದಕ್ಕಿಂತ ಆಳವಾದ ಭಾಗ ಭೂಗೋಳದಲ್ಲಿ ಯಾವುದೂ ಇಲ್ಲ. ಈ ಮೇರಿಯಾನ ಕಮರಿಯ ಬಹು ಆಳ ಭಾಗವೇ ಚಾಲೆಂಜರ್ ಡೀಪ್. ಇದು ಪಾತಾಳದ ಒಳಗೊಂದು ಪಾತಾಳ. ಒಂದುವೇಳೆ ಇಡೀ ಎವರೆಸ್ಟ್ ಶಿಖರವನ್ನು ಒಂದು ಕಂಬ ಎಂದು ಭಾವಿಸಿ, ಇದರಲ್ಲಿ ಇಳಿಯಬಿಟ್ಟರೆ ಅದನ್ನು ಮುಚ್ಚಿ ಮೇಲೆ ಇನ್ನೂ 2,147 ಮೀಟರ್ ನೀರು ನಿಂತಿರುತ್ತದೆ.

ಸಾಗರದ ನಾಲ್ಕೈದು ಕಿಲೋ ಮೀಟರ್ ಆಳದಲ್ಲೇ ಗಾಡಾಂಧಕಾರ ಕಾಡುತ್ತದೆ. ಅಲ್ಲಿ ಬೆಳಕು ಎಷ್ಟು ಕ್ಷೀಣವಾಗಿರುತ್ತದೆಂದರೆ ಭೂಮಿಯ ಮೇಲೆ ನೋಡಿದಾಗ ನಕ್ಷತ್ರಗಳು ಬೆಳಕು ಸೂಸುವಷ್ಟು. ಅದೇನೇ ಇರಲಿ, ಮನುಷ್ಯ ಮೊದಲಿನಿಂದಲೂ ಸಾಹಸಜೀವಿ, ಅವನ ಜೀನ್ಸ್ ನಲ್ಲೇ ಇದು ಇರಬಹುದೋ ಏನೋ. 1960ರಲ್ಲಿ ಅಮೆರಿಕದ ನೇವಿ ವಿಭಾಗದ ಟ್ರಿಯೆಸ್ಟ ಎಂಬ ಸಬ್ ಮೇರೀನ್‍ನಲ್ಲಿ ಕೂತು ಜಾಕ್ಸ್ ಪಿಕರ್ಡ್, ಡಾನ್ ವಾಲ್ಷ್ ಎಂಬ ಇಬ್ಬರು 4ಗಂಟೆ, 47 ನಿಮಿಷದಲ್ಲಿ ಚಾಲೆಂಜರ್ ಡೀಪ್‍ನ ತಳವನ್ನು ಮುಟ್ಟಿದರು. ಎಷ್ಟು ಒತ್ತಡವಿತ್ತೆಂದರೆ ಕಿಟಕಿಯ ಪ್ಯಾನಲ್ ಜಜ್ಜಿಹೋಗಿತ್ತು. ಅವರು ಅಲ್ಲಿ ಯಾವ ಫೋಟೋ ತೆಗೆಯಲಾಗಲಿಲ್ಲ, ಸಬ್‍ಮರ್ಸಿಬಲ್ ತಳಮುಟ್ಟುತ್ತಲೇ ನೀರು ಕದಡಿ ರಾಡಿಯಂತಾಗಿ ಏನೂ ಕಾಣಿಸಲಿಲ್ಲ. ಉಷ್ಣತೆ 4 ಡಿಗ್ರಿ ಸೆಂ. ಗಿಂತ ಕಡಿಮೆ ಇತ್ತು. ಚಾಕೊಲೋಟ್ ಜಗಿದು ಇಪ್ಪತ್ತೇ ನಿಮಿಷ ಅಲ್ಲಿದ್ದು ಪಾತಾಳದಿಂದ ಎದ್ದುಬಂದರು.

ಹಿಮಾಲಯದ ಎವರೆಸ್ಟ್ ಏರುವಾಗ ಒತ್ತಡ ಕಡಿಮೆಯಾಗುತ್ತ ಹೋಗುತ್ತದೆ. ಆದರೆ ಇಲ್ಲಿ ಉಲ್ಟಾಪಲ್ಟಾ. ಚಾಲೆಂಜರ್ ಡೀಪ್ ಒಳಗೆ ಆಳ ಹೋದಂತೆ ನೀರಿನ ಒತ್ತಡ ಜಾಸ್ತಿಯಾಗುತ್ತದೆ. ಒಂದು ಚದರ ಇಂಚಿನ ಮೇಲೆ ಎಂಟು ಟನ್ನು ಭಾರ ಬೀಳುತ್ತಿರುತ್ತದೆ. ಸಮುದ್ರ ಮಟ್ಟದ ಒತ್ತಡಕ್ಕಿಂತ ಸಾವಿರ ಪಾಲು ಜಾಸ್ತಿ. ಇನ್ನೂ ಸರಳಗೊಳಿಸಿ ಹೇಳುವುದಾದರೆ ಸಾಧಾರಣ ಮನುಷ್ಯನ ತಲೆಯ ಮೇಲೆ 50 ಜಂಬೋ ಜೆಟ್‍ಗಳನ್ನು ಕೂಡಿಸಿದಷ್ಟು. ಸಬ್‍ಮರ್ಸಿಬಲ್ ಇಲ್ಲದೆ ಇಳಿಯುವಂತೆಯೇ ಇಲ್ಲ. ಈ ಆಳದಲ್ಲಿ ತಿಮಿಂಗಿಲಗಳಾಗಲಿ, ಷಾರ್ಕ್‍ಗಳಾಗಲಿ ಎಂದೂ ಸುಳಿಯುವುದಿಲ್ಲ. 2012ರಲ್ಲೇ ಕ್ಯಾಮೆರಾನ್ ಎಂಬ ಸಿನಿಮಾ ನಿರ್ದೇಶಕ ಸಬ್ ಮರ್ಸಿಬಲ್‍ನಲ್ಲಿ ಇದರ ಆಳಕ್ಕಿಳಿದ,  ತಳಮುಟ್ಟಿದಿದ್ದರೂ ದೊಡ್ಡ ಸಾಹಸವನ್ನೇ ಮಾಡಿದ್ದ. ‘ಇದೇನು ಏಕಾಂತವಾಗಿದೆ, ಬರಡು ಭೂಮಿಯಂತಿದೆ’ ಎಂದು ಬೇಸರಿಸಿಕೊಂಡಿದ್ದ. ಆದರೆ ಟ್ರಿಯೆಸ್ಟ ಯಾನದಲ್ಲಿ ಹೋದ ಸಾಹಸಿಗರು ಅಲ್ಲಿ ಮೀನುಗಳನ್ನು ಕಂಡೆವು ಎಂದದ್ದನ್ನು ಈಗಲೂ ಯಾರೂ ಒಪ್ಪುತ್ತಿಲ್ಲ. ಏಕೆಂದರೆ ಆ ಒತ್ತಡದಲ್ಲಿ ಕ್ಯಾಲ್ಸಿಯಂ ದ್ರಾವಣವಾಗಿಬಿಡುತ್ತದೆ. ಮೀನು ಮೂಳೆಯನ್ನು ಉಳಿಸಿಕೊಳ್ಳುವುದು ಹೇಗೆ? ಆದರೆ ಆಳದ ಕೆಸರಲ್ಲಿ ಸಲ್ಫರ್ ಮತ್ತು ಮೀಥೇನ್ ತಿನ್ನುವ ಸೂಕ್ಷ್ಮಜೀವಿಗಳನ್ನು ಪತ್ತೆಹಚ್ಚಿದ್ದಾರೆ. ಸಾಗರ ಸೌತೆ (ಸೀ ಕುಕುಂಬರ್) ಅಲ್ಲೂ ಬಾಳುವೆ ಮಾಡಿದೆಯಂತೆ.

ಏನಾಗುತ್ತಿದೆ ಈ ಆಳದಲ್ಲಿ? ಎಂದು ಕುತೂಹಲ ತಳೆದು ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ವಾಯುಗೋಳ ನಿರ್ವಹಣಾ ಸಂಸ್ಥೆ (NOAA) ಒಂದು ಹೊಸ ಪ್ರಯೋಗವನ್ನು ಮಾಡಿತು. ಹೈಡ್ರೋಫೋನ್,  ಅಂದರೆ ನೀರಿನಲ್ಲಿ ಶಬ್ದ ರೆಕಾರ್ಡ್ ಮಾಡುವ ಸಾಧನವನ್ನು ಸಾಗರದ ಆ ಆಳದಲ್ಲಿ ಬಿಡಲು ಯೋಚಿಸಿತು. ಕೋಸ್ಟ್ ಗಾರ್ಡ್ ಎಂಬ ಹಡಗಿನಲ್ಲಿ ಕೂತು ಇದನ್ನು ನಿರ್ವಹಿಸಿತು. 23 ದಿನ ಅದು ಚಾಲೆಂಜರ್ ಡೀಪ್‍ನ ತಳದಲ್ಲಿ ಸದ್ದಿಲ್ಲದೆ ಕೂತು ರೆಕಾರ್ಡ್ ಮಾಡಿತು. ಅದನ್ನು ಆಲಿಸಿ ತಜ್ಞರೇ ಸುಸ್ತಾದರು. ಅದರಲ್ಲಿ ಹೊರಬರುತ್ತಿದ್ದುದು ತಿಮಿಂಗಿಲಗಳು ಮಾಡುತ್ತಿದ್ದ ಶಬ್ದ, ಭೂಕಂಪನವಾಗುತ್ತಿರುವ ಶಬ್ದ, ಬಿರುಗಾಳಿ ರೊಯ್ಯನೆ ಬೀಸಿಹೋಗುತ್ತಿರುವ ಶಬ್ದ, ಹಡಗು ನಡೆಸುವ ಶಬ್ದ, ಸಾಗರದಲ್ಲಿ ಎಲ್ಲೋ ಬೃಹತ್ ರಚನೆ ಕಟ್ಟುತ್ತಿರುವ ಕಟಕಟ ಶಬ್ದ. ಭೂಮಿಯ ಈ ಆಳ ಭಾಗದ ಪ್ರಶಾಂತವಾಗಿರುತ್ತದೆಂದು ಭಾವಿಸಿದ್ದ ಲೆಕ್ಕಾಚಾರವೆಲ್ಲ ತಲೆಕೆಳಗಾಯಿತು. ನಿಜ. ತಿಮಿಂಗಿಲಗಳು ಅಲ್ಲಿರಲಿಲ್ಲ, ನೀರು ಶಬ್ದವನ್ನು ಅತ್ಯಂತ ಸಮರ್ಥವಾಗಿ ವಹನೆ ಮಾಡುತ್ತದಲ್ಲ. ಗಾಳಿಯಲ್ಲಿ ಸೆಕೆಂಡಿಗೆ 340 ಮೀಟರು ಸಾಗಿದರೆ, ನೀರಿನಲ್ಲಿ ಅದು ಸೆಕೆಂಡಿಗೆ 1500 ಮೀಟರ್. ಮೇರಿಯಾನ ಕಮರಿಯಲ್ಲೇ 21 ಜೀವಂತ ಜ್ವಾಲಾಮುಖಿಗಳು ನೆಲೆಯಾಗಿವೆ. ಎಲ್ಲೋ ಒಂದು ಕಡೆ ಕಮರಿಯ ಗೋಡೆ ಕಳಚಿದರೂ ಸಾಧಾರಣ ಪ್ರಮಾಣದ ಭೂಕಂಪನವಾಗುತ್ತದೆ. ಮೇಲ್ಮೈನಲ್ಲಿ ಹಡಗುಗಳ ಸಂಚಾರ ಇದ್ದೇ ಇದೆ. ಹೈಡ್ರೋಫೋನ್ ಇವೆಲ್ಲವನ್ನೂ ನಿಚ್ಚಳವಾಗಿ ರೆಕಾರ್ಡ್ ಮಾಡಿಕೊಂಡಿತ್ತು. ಬಹುಶಃ ಪ್ರಶಾಂತವಾದ ಜಾಗ ಭೂಮಿಯಲ್ಲೂ ಇಲ್ಲ, ಸಾಗರ ತಳದಲ್ಲೂ ಇಲ್ಲ. ಆದರೆ ಈ ರೆಕಾರ್ಡರ್ ನೀಡಿದ ಮಾಹಿತಿಯಿಂದ ಡಾಲ್ಫಿನ್, ತಿಮಿಂಗಿಲಗಳು ಶಬ್ದವನ್ನು ಹೇಗೆ ಗ್ರಹಿಸುತ್ತವೆ, ಹೇಗೆ ತಮ್ಮ ವಲಸೆಯನ್ನು ಯೋಜಿಸುತ್ತವೆ ಎಂಬುದನ್ನು ಅರಿಯಲು ನೆರವಾಗಿದೆ. ಮುಂದಿನ ಐವತ್ತು ವರ್ಷಗಳಲ್ಲಿ ಸಾಗರದ ಕೆಳಗೆ ಶಬ್ದದ ಪ್ರಮಾಣ ಹೆಚ್ಚುತ್ತದೆ. ಅಲ್ಲಿನ ಜೀವಿಕೋಟಿ ಹೇಗೆ ಇದನ್ನು ನಿಭಾಯಿಸುತ್ತದೋ ತಿಳಿಯದು ಎನ್ನುತ್ತಿದ್ದಾರೆ ತಜ್ಞರು.

ಸದ್ಯ ಈ ಭಾಗ ಅಮೆರಿಕದ ಸ್ವಾಮ್ಯದಲ್ಲಿದೆ. ಯಾರೇ ಸಂಶೋಧನೆಗೆ ಬರಲಿ ಅಮೆರಿಕದ ಮತ್ಸ್ಯ ಮತ್ತು ವನ್ಯಜೀವಿ ಸಂಸ್ಥೆಯ ಪರವಾನಗಿ ಪಡೆಯಬೇಕು. ಏಕೆಂದರೆ ಅದನ್ನೀಗ ರಾಷ್ಟ್ರೀಯ ಸ್ಮಾರಕವಾಗಿ ಅಮೆರಿಕ ಪರಿಗಣಿಸಿದೆ. ಹಾಗೆ ಮಾಡದೆ ಹೋಗಿದ್ದಲ್ಲಿ ನ್ಯೂಕ್ಲಿಯರ್ ರಾಷ್ಟ್ರಗಳು ವಿಕಿರಣಶೀಲ ತ್ಯಾಜ್ಯವನ್ನು ಇಲ್ಲಿ ಶಾಶ್ವತವಾಗಿ ಸುರಿಯಲು ಯೋಚಿಸಿದ್ದವು. ಅವು ಮತ್ತಷ್ಟು ಪಾತಾಳಕೆ ಇಳಿಯುತ್ತವೆ, ನಾವು ಸುರಕ್ಷಿತವಾಗಿರುತ್ತೇವೆ ಎಂಬ ಕಾರಣದಿಂದ. ಈಗ ಆ ಭಯವಿಲ್ಲ.

Leave a Reply