ಮರುಭೂಮಿ ರಾಷ್ಟ್ರಗಳಿಗೂ ಬೇಕಾಗಿದೆ ಮರಳು, ಎಂಥಾ ಮರುಳಯ್ಯಾ ಇದು ಎಂಥಾ ಮರುಳು!

ಡಿಜಿಟಲ್ ಕನ್ನಡ ಟೀಮ್

ಭಾರತದಲ್ಲಿ ಕಟ್ಟಡ ನಿರ್ಮಾಣಗಳ ಪ್ರಮಾಣ ಹೆಚ್ಚಾಗಿದೆ. ಇದರಿಂದ ಮರಳಿಗೆ ಬೇಡಿಕೆ ಎಷ್ಟಿದೆ ಎಂಬದರ ಸಾಮಾನ್ಯ ಅರಿವು ಎಲ್ಲರಿಗೂ ಇದೆ. ಈ ಬೇಡಿಕೆ, ಅಕ್ರಮ ಮರಳು ಗಣಿಕಾರಿಕೆ ಹಾಗೂ ಮಾಫಿಯಾ ತಲೆ ಎತ್ತಲು ದಾರಿಯಾಗಿರುವುದನ್ನು ನೋಡಿದ್ದೇವೆ. ಈ ಮರಳಿನ ಬೇಡಿಕೆ ಭಾರತದಲ್ಲಿ ಎಷ್ಟಿದೆಯೋ ಅಷ್ಟೇ ಪ್ರಮಾಣದಲ್ಲಿ ಜಾಗತಿಕ ಮಟ್ಟದಲ್ಲೂ ಇರೋದು ಗಮನಿಸಬೇಕಾದ ಸತ್ಯ.

ಭಾರತ, ಚೀನಾ ಮತ್ತಿತ್ತರ ದೊಡ್ಡ, ದೊಡ್ಡ ರಾಷ್ಟ್ರಗಳಲ್ಲೂ ಕಟ್ಟಡ ನಿರ್ಮಾಣ ಕಾರ್ಯಗಳು ಹೆಚ್ಚಾಗಿವೆ. ಇಲ್ಲಿ ಕೌತುಕದ ವಿಷಯ ಏನಪ್ಪಾ ಅಂದರೆ, ಈ ಮರಳು ಆಮದು ಅವಲಂಬನೆ ಮರಳುಗಾಡನ್ನೇ ಹಾಸೊದ್ದಿರುವ ಅರಬ್ ರಾಷ್ಟ್ರಗಳನ್ನೂ (ಯುಎಇ) ಬಿಟ್ಟಿಲ್ಲ. ಹೀಗಾಗಿ ಇಡೀ ಜಗತ್ತೇ ಮರಳಿನ ಆಟಕ್ಕೆ ಮರಳು-ಮರಳಾಗಿದೆ ಅರ್ಥಾತ್ ಹುಚ್ಚಿಗೆ ಬಿದ್ದಿದೆ.

ಕಣ್ಣು ಹಾಯಿಸಿದಷ್ಟೂ ದೂರ ಬರೀ ಮರಳನ್ನೇ ಹರಡಿಕೊಂಡಿರುವ ಯುಎಇಯಲ್ಲಿ ಈಗ ಮರಳು ಆಮದು ಜೋರಾಗಿಯೇ ನಡೆದಿದೆ. ಕಟ್ಟಡ ನಿರ್ಮಾಣಕ್ಕೆ ಮರುಭೂಮಿಯ ಮರಳು ಯೋಗ್ಯವಲ್ಲ. ಇವು ಸಾಕಷ್ಟು ಮೃದುವಾಗಿರುವುದರಿಂದ ನಿರ್ಮಾಣ ಕಾಮಗಾರಿಗೆ ಇದನ್ನು ಬಳಸಲು ಸಾಧ್ಯವಿಲ್ಲ. ಹೀಗಾಗಿ ಅರಬ್ ರಾಷ್ಟ್ರಗಳು ಮರಳು ಆಮದು ಮೇಲೆ ಅವಲಂಬಿತವಾಗಿದೆ. ದುಬೈನಂತದ ಅದ್ಭುತ ನಗರ ಕೂಡ ನಿರ್ಮಾಣ ಆಗಿರೋದು ಈ ರೀತಿಯ ಆಮದು ಮರಳಿನಿಂದಲೇ. ವಿಶ್ವಸಂಸ್ಥೆಯ ಮಾಹಿತಿ ಪ್ರಕಾರ ಇತ್ತೀಚೆಗೆ ಯುಎಇ 450 ಮಿಲಿಯನ್ ಅಮೆರಿಕನ್ ಡಾಲರ್ ಅಂದರೆ ₹ 3 ಸಾವಿರ ಕೋಟಿಯಷ್ಟು ಮೌಲ್ಯದ ಮರಳು ಆಮದು ಮಾಡಿಕೊಂಡಿದೆ.

ಕೇವಲ ಯುಎಇ ಮಾತ್ರ ಇದಕ್ಕೆ ಸೀಮಿತವಾಗಿಲ್ಲ. ಇದಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಚೀನಾ, ಅಮೆರಿಕ ಹಾಗೂ ಬ್ರಿಟನ್ ರಾಷ್ಟ್ರಗಳ ಅಭಿವೃದ್ಧಿ ಕಾಮಗಾರಿಗಳು ಆಮದು ಮರಳನ್ನೇ ಅವಲಂಬಿಸಿವೆ. ಬ್ರಿಟನ್ ಮೂಲದ ಯುಎಸ್ ಜಿಎಸ್ ಸಂಸ್ಥೆ ವರದಿ ಪ್ರಕಾರ 2013 ರಲ್ಲಿ ಬ್ರಿಟನ್ 2.5 ಬಿಲಿಯನ್  ಅಮೆರಿಕನ್ ಡಾಲರ್ (₹ 16,650 ಕೋಟಿ)ನಷ್ಟು ಮರಳು ಆಮದು ಮಾಡಿಕೊಂಡರೆ, ಕಳೆದ ವರ್ಷ ಅಮೆರಿಕ ಬರೋಬ್ಬರಿ 8.3 ಬಿಲಿಯನ್ ಅಮೆರಿಕನ್ ಡಾಲರ್ (₹ 55,275 ಕೋಟಿ) ನಷ್ಟು ಮರಳನ್ನು ಬೇರೆ ದೇಶಗಳಿಂದ ತರಿಸಿಕೊಂಡಿದೆ. ಇನ್ನು ಚೀನಾದಲ್ಲಿ ಅಪಾರ ಪ್ರಮಾಣದಲ್ಲಿ ಅಣೆಕಟ್ಟು, ಸೇತುವೆ, ರಸ್ತೆಯಂತಹ ಕಾಮಗಾರಿಗಳು ನಡೆಯುತ್ತಿದ್ದು, ಇದಕ್ಕೂ ಮರಳು ಆಮದಾಗುತ್ತಿದೆ. ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಜಾಗತಿಕ ಮಟ್ಟದಲ್ಲಿ ಮರಳಿಗಿರುವ ಬೇಡಿಕೆ ವೇದ್ಯವಾಗುತ್ತದೆ.

2011 ರಿಂದ ಈಚೆಗೆ ಈ ಮರಳು ಮಾರುಕಟ್ಟೆಯು ತೈಲ ಮಾರುಕಟ್ಟೆಯಷ್ಟೇ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ಇನ್ನು ಫ್ರಿಡೊನಿಯಾ ಗ್ರೂಪ್ ವರದಿ ಪ್ರಕಾರ, 2018 ರವರೆಗೂ ಪ್ರತಿ ವರ್ಷ ಮರಳು ಬೇಡಿಕೆ ಪ್ರಮಾಣ ಶೇ .5.5 ರಷ್ಟು ಏರುತ್ತಲೇ ಸಾಗುತ್ತದೆ. ಹಲವು ವರ್ಷಗಳ ಕಾಲ ಮರಳು ಮಾರುಕಟ್ಟೆ ಸ್ಥಿರವಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಬೇಡಿಕೆ ಗಗನಕ್ಕೇರಿದೆ’ ಎಂದು ಡಿ.ಎ. ಡೇವಿಡ್ಸನ್ ಇಂಧನ ಸಂಶೋಧನಾ ಸಂಸ್ಥೆ ಉಪಾಧ್ಯಕ್ಷ ಸೋನಿ ರಾಂಧವಾ ಅಭಿಪ್ರಾಯಪಟ್ಟಿದ್ದಾರೆ.

Leave a Reply