ಲಂಡನ್ ಗೆ ಮೊದಲ ಮುಸ್ಲಿಂ ಮೇಯರ್, ದಶಕದ ಅಪಪ್ರಚಾರದ ನಡುವೆಯೂ ಗೆದ್ದು ಸ್ಥಾನ ಅಲಂಕರಿಸಿದ ಸಾದಿಕ್

ಡಿಜಿಟಲ್ ಕನ್ನಡ ಟೀಮ್

ಲಂಡನ್ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಲೇಬರ್ ಪಕ್ಷದ ಅಭ್ಯರ್ಥಿ ಹಾಗೂ ಪಾಕಿಸ್ತಾನ ಮೂಲದ ಸಾದಿಕ್ ಖಾನ್ ಭರ್ಜರಿ ಜಯ ಸಾಧಿಸಿ ಇತಿಹಾಸ ನಿರ್ಮಿಸಿದ್ದಾರೆ. ಚುನಾವಣೆಗೂ ಮುನ್ನ ಸಾದಿಕ್ ಗೆ ಉಗ್ರರ ನಂಟಿದೆ, ಆತ ಹಿಂದೂ, ಸಿಖ್ ಹಾಗೂ ಇತರರ ರಕ್ಷಣೆಗೆ ನಿಲ್ಲುವುದಿಲ್ಲ ಎಂದು ವಿರೋಧಿ ಪಾಳೆಯದವರು ಪ್ರಚಾರ ಮಾಡಿದ್ದರು. ರಾಜಕೀಯ ಪಕ್ಷಗಳಷ್ಟೇ ಅಲ್ಲ, ಕೆಲ ಮಾಧ್ಯಮಗಳ ಅಭಿಪ್ರಾಯವೂ ಇದೇ ಆಗಿತ್ತು. ಈ ಎಲ್ಲದರ ನಡುವೆ ಲಂಡನ್ ಮತದಾರರು ಅಂತಿಮವಾಗಿ ಸಾದಿಕ್ ಅವರನ್ನೇ ಆರಿಸಿಕೊಂಡಿದ್ದಾರೆ.

ತಮ್ಮ ಪ್ರತಿಸ್ಪರ್ಧಿ ಜಾಕ್ ಗೋಲ್ಡ್ ಸ್ಮಿತ್ ವಿರುದ್ಧ ಶನಿವಾರ ಭರ್ಜರಿ ಜಯ ಸಾಧಿಸಿದ 45 ವರ್ಷದ ಸಾದಿಕ್ ಖಾನ್, ಈ ಸ್ಥಾನ ಅಲಂಕರಿಸಿದ ಮೊದಲ ಮುಸ್ಲಿಂ ಅಭ್ಯರ್ಥಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಸುಮಾರು 11 ಲಕ್ಷ ಮತಗಳನ್ನು ಪಡೆದ ಸಾದಿಕ್, 8 ವರ್ಷಗಳ ನಂತರ ಲೇಬರ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ.

ಸಾದಿಕ್ ಈ ಸ್ಥಾನಕ್ಕೆ ಸ್ಪರ್ಧಿಸಿದಾಗಿನಿಂದಲೂ ಆತ ಮುಸ್ಲಿಂ, ಉಗ್ರವಾದದ ವಿರುದ್ಧ ಹೋರಾಡುವುದಿಲ್ಲ ಎಂಬ ಟೀಕೆಗಳು ಕೇಳುತ್ತಲೇ ಬಂದಿದ್ದವು. ಸಾದಿಕ್ ಹಿಂದು, ಸಿಖ್ ವಿರೋಧಿ. ತಮಿಳರು ರಕ್ಷಣೆ ಬಯಸಿದರೆ, ಅವರ ಆಭರಣಗಳನ್ನು ದೋಚುತ್ತಾರೆ ಎಂದೆಲ್ಲ ಅಪಪ್ರಚಾರ ಮಾಡಲಾಗಿತ್ತು. ಇದನ್ನು ದಶಕದ ಅತ್ಯಂತ ಕೆಟ್ಟ ಪ್ರಚಾರ ಶೈಲಿ ಎಂತಲೂ ಬಣ್ಣಿಸಲಾಗಿತ್ತು.

ಲಂಡನ್ ಮೇಯರ್ ಸ್ಥಾನ ಅಲಂಕರಿಸಿರುವ ಸಾದಿಕ್ ತಂದೆ ಅಮಾನುಲ್ಲಾ ಖಾನ್ ಒಂದು ಕಾಲದಲ್ಲಿ ಪಾಕಿಸ್ತಾನದ ಬಸ್ ಡ್ರೈವರ್. ಅಲ್ಲಿ ಅವರು 25 ವರ್ಷ ಚಾಲಕರಾಗಿ ಕೆಲಸ ಮಾಡಿದ್ದರು ಎಂಬುದು ಮತ್ತೊಂದು ವಿಶೇಷ. ಸಾದಿಕ್ ತಾತಾ 1947ರಲ್ಲಿ ಭಾರತ ಮತ್ತು ಪಾಕಿಸ್ತಾನ ವಿಭಜನೆ ವೇಳೆ ಭಾರತದಿಂದ ಪಾಕಿಸ್ತಾನಕ್ಕೆ ತೆರಳಿದ್ದರು. ಅಮಾನುಲ್ಲಾ ಕುಟುಂಬ ಪಾಕಿಸ್ತಾನದಿಂದ ಲಂಡನ್ ಗೆ ತೆರಳಿದ ನಂತರ ಸಾದಿಕ್ ಜನಿಸಿದರು.

ಅಲ್ಲಿಯೇ ಹುಟ್ಟಿ ಬೆಳೆದ ಸಾದಿಕ್, 1994 ರಿಂದ ಸುಮಾರು 10 ವರ್ಷಗಳ ಕಾಲ ನ್ಯಾಯವಾದಿಯಾಗಿ ಕಾರ್ಯ ನಿರ್ವಹಿಸಿದ್ದರು. 2005 ರಲ್ಲಿ ರಾಜಕೀಯ ಪ್ರವೇಶಿಸಿದರು. ನಂತರ ಕೆಲ ಕಾಲ ಸಚಿವರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

Leave a Reply