ಸುದ್ದಿ ಸಂತೆ: ಆಗಸ್ಟಾ ಹಣ ಪಡೆದಿರೋದಾಗಿ ಒಪ್ಪಿಕೊಂಡ ತ್ಯಾಗಿ ಸಹೋದರರು, ಸೋನಿಯಾ ಬಂಧಿಸಲು ಮೋದಿಗೆ ಭಯ ಅಂದ ಕೇಜ್ರಿವಾಲ್, ನೀರು ಪರೀಕ್ಷೆ ಅವ್ಯವಹಾರ ತನಿಖೆಗೆ

ಡಿಜಿಟಲ್ ಕನ್ನಡ ಟೀಮ್

ಆಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿಯಲ್ಲಿ ಮಧ್ಯವರ್ತಿಗಳಿಂದ ಹಣ ಪಡೆದಿರುವುದಾಗಿ ಹಗರಣದ ಪ್ರಮುಖ ಆರೋಪಿ ಎಸ್.ಪಿ. ತ್ಯಾಗಿ ಸಹೋದರ ಸಂಬಂಧಿಗಳು ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ.

ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ವಿಚಾರಣೆ ವೇಳೆ ತ್ಯಾಗಿ ಸಂಬಂಧಿಗಳಾದ ಸಂಜೀವ್, ರಾಜೀವ್ ಮತ್ತು ಸಂದೀಪ್ ಅವರು ಮಧ್ಯವರ್ತಿಗಳಾದ ಕಾರ್ಲೊ ಗೆರೊಸಾ ಅವರಿಂದ ಹಣ ಪಡೆದಿದ್ದಾಗಿ ಒಪ್ಪಿಕೊಂಡಿದ್ದಾರೆ. ಆದರೆ ಇದನ್ನು ಸಲಹಾ ಶುಲ್ಕವಾಗಿ ಪಡೆದಿದ್ದು, ಲಂಚವಾಗಿ ಅಲ್ಲ ಎಂದೂ ತಿಳಿಸಿದ್ದಾರೆ.

ನಾಲ್ವರು ಶಂಕಿತ ಉಗ್ರರನ್ನು ಬಿಡುಗಡೆ ಮಾಡಿದ ದೆಹಲಿ ಪೊಲೀಸರು

ಇತ್ತೀಚೆಗೆ ನವದೆಹಲಿಯಲ್ಲಿ ಬಂಧಿಸಲಾಗಿದ್ದ ಹತ್ತು ಶಂಕಿತ ಜೈಷ್-ಇ-ಮೊಹಮದ್ (ಜೆಇಎಂ) ಸಂಘಟನೆಯ ಉಗ್ರರ ಪೈಕಿ ನಾಲ್ವರನ್ನು ಪೋಲೀಸರು ಶನಿವಾರ ಬಿಡುಗಡೆ ಮಾಡಿದ್ದಾರೆ. ಈ ನಾಲ್ವರು ನಿಷೇಧಿತ ಜೆಇಎಂ ಸಂಘಟನೆ ಜತೆ ಸಂಪರ್ಕ ಹೊಂದಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋನಿಯಾ ಗಾಂಧಿ ಬಂಧಿಸಲು ಮೋದಿಗೆ ಭಯ: ಕೇಜ್ರಿವಾಲ್

ಆಗಸ್ಟಾ ವೆಸ್ಟ್ಲ್ಯಾಂಡ್ ಹಗರಣದಲ್ಲಿ ಸೋನಿಯಾ ಗಾಂಧಿ ಅವರನ್ನು ಬಂಧಿಸಲು ಪ್ರಧಾನಿ ಮೋದಿ ಅವರಿಗೆ ಭಯ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟೀಕಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಅಹ್ಮದ್ ಪಟೇಲ್ ಹಾಗೂ ಇತರರ ಹೆಸರನ್ನು ಇಟಲಿ ಕೋರ್ಟ್ ಬಹಿರಂಗಪಡಿಸಿದ್ದರೂ ಅವರನ್ನು ಬಂಧಿಸುವ ತಾಕತ್ತನ್ನು ಕೇಂದ್ರ ಸರಕಾರ ಪ್ರದರ್ಶಿಸುತ್ತಿಲ್ಲ. ಅಷ್ಟೇ ಅಲ್ಲ ಅವರನ್ನು ವಿಚಾರಣೆಗೆ ಒಳಪಡಿಸಲೂ ಸಾಧ್ಯವಾಗಿಲ್ಲ. ಈ ಹಗರಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಾಲು ಹೊಂದಿವೆ’ ಎಂದು ಆರೋಪಿಸಿದ್ದಾರೆ.

ವಿಜೇಂದರ್ ಮುಂದಿನ ಎದುರಾಳಿ ಆಂಡ್ರೆಜ್ ಸೊಲ್ಡ್ರಾ

ವೃತ್ತಿಪರ ಬಾಕ್ಸಿಂಗ್ ನಲ್ಲಿ ಆಡಿರುವ ಐದೂ ಪಂದ್ಯಗಳಲ್ಲಿ ಗೆದ್ದು ಅಜೇಯವಾಗುಳಿದಿರುವ ಭಾರತದ ವಿಜೇಂದರ್ ಸಿಂಗ್ ತಮ್ಮ ಮುಂದಿನ ಪಂದ್ಯದಲ್ಲಿ ಪೊಲೆಂಡ್ ನ ಆಂಡ್ರೆಜ್ ಸೊಲ್ಡ್ರಾ ವಿರುದ್ಧ ಸೆಣಸಲಿದ್ದಾರೆ. ಮೇ 13ರಂದು ಬೊಲ್ಟನ್ ನಲ್ಲಿರುವ ಮ್ಯಾಕ್ರೊನ್ ಕ್ರೀಡಾಂಗಣದಲ್ಲಿ ತಮ್ಮ ಆರನೇ ಪಂದ್ಯವನ್ನಾಡಲಿದ್ದಾರೆ. ಈ ಪಂದ್ಯದ ನಂತರ ವಿಜೇಂದರ್ ಜೂನ್ ನಲ್ಲಿ ಮೊದಲ ಬಾರಿಗೆ ತವರಿನ ಪ್ರೇಕ್ಷಕರ ಮುಂದೆ ಡಬ್ಲ್ಯೂಬಿಒ ಏಷ್ಯಾ ಟೈಟಲ್ ಕಾದಾಟ ನಡೆಸಲಿದ್ದಾರೆ.

ದ್ವಿದಳ ಧಾನ್ಯ ಬೆಲೆ ಏರಿಕೆ ಸಾಧ್ಯತೆ: ಸಚಿವ ಕೃಷ್ಣಭೈರೇಗೌಡ

ಬರಗಾಲದಿಂದ ರಾಜ್ಯದಲ್ಲಿ ಆಹಾರ ಉತ್ಪಾದನೆ ಗಣನೀಯವಾಗಿ ಕುಸಿದಿದ್ದು, ಮುಂದಿನ ದಿನಗಳಲ್ಲಿ ದ್ವಿದಳಧಾನ್ಯಗಳ ಬೆಲೆ ಗಗನಕ್ಕೇರುವ ಸಾಧ್ಯತೆ ಇದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಮುನ್ಸಾಚನೆ ನೀಡಿದ್ದಾರೆ.

ಕಳೆದ ಸಾಲಿನಲ್ಲಿ 126 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಗುರಿ ಹೊಂದಲಾಗಿತ್ತು. ಆದರೆ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದ್ದರಿಂದ 110 ಲಕ್ಷ ಟನ್ ಉತ್ಪಾದನೆ ಆಗಲಿದೆ. ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆ ನಿರೀಕ್ಷೆ ಇದ್ದು, ರೈತರಿಗೆ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರಗಳನ್ನು ಶೇಖರಣೆ ಮಾಡಲಾಗಿದೆ ಎಂದು ಸುದ್ದಿಗಾರರಿಗೆ ಶನಿವಾರ ತಿಳಿಸಿದರು.

ಈ ಮುಂಗಾರಿನಿಂದಲೇ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ನೀಡಲು 325 ಕೇಂದ್ರಗಳನ್ನು ಆರಂಭಿಸಲಾಗುವುದು ಎಂದರು.

ನೀರು ಪರೀಕ್ಷಾ ಪ್ರಯೋಗಾಲಯದಲ್ಲಿ ಅವ್ಯವಹಾರ ತನಿಖೆ ಸಿಐಡಿಗೆ

ಕುಡಿಯುವ ನೀರು ಪರೀಕ್ಷೆ ಪ್ರಯೋಗಾಲಯಗಳ ಸ್ಥಾಪನೆಯಲ್ಲಿ ಭಾರೀ ಅವ್ಯವಹಾರ ನಡೆದಿರುವುದನ್ನು ಒಪ್ಪಿಕೊಂಡಿರುವ ಗ್ರಾಮೀಣ ಅಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್,  ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರಯೋಗಾಲಯ ಸ್ಥಾಪನೆ, ನಿರ್ವಹಣೆ ವಿಚಾರದಲ್ಲಿ ಸ್ವಜನಪಕ್ಷಪಾತ ನಡೆದಿಲ್ಲ. ನಾನು ಇಲಾಖೆಯ ಹೊಣೆ ಹೊತ್ತಿರುವವರೆಗೂ ಇಂತಹದ್ದಕ್ಕೆ ಅವಕಾಶ ನೀಡುವುದಿಲ್ಲ. ಆದರೆ ನೀರು ಪರೀಕ್ಷೆ ಪ್ರಯೋಗಾಲಯ ಸ್ಥಾಪನೆ ಗುತ್ತಿಗೆ ವಿಚಾರ ನನ್ನ ಗಮನಕ್ಕಾಗಲೀ, ಸಂಪುಟದ ಗಮನಕ್ಕಾಗಲಿ ಬಂದಿಲ್ಲ. ಇಲಾಖೆ ಮಟ್ಟದಲ್ಲಿ ಅಕ್ರಮ ಗುತ್ತಿಗೆ ನೀಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ’ ಎಂದು ತಿಳಿಸಿದ್ದಾರೆ.

ಸರ್ಕಾರಿ ಸೇವೆಗೆ ಆನ್ ಲೈನ್ ನಲ್ಲಿ ಅರ್ಜಿ

ಜಾತಿ, ಆದಾಯ, ವಾಸ ಪ್ರಮಾಣ ಪತ್ರ ಸೇರಿದಂತೆ 28 ವಿವಿಧ ಸರ್ಕಾರಿ ಸೇವೆಗಳನ್ನು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆವ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ.

ನಾಡ ಕಚೇರಿ ಅಥವಾ ಯಾವುದೇ ಸೈಬರ್ ಕೆಫೆಯಲ್ಲಿ ಅರ್ಜಿ ಸಲ್ಲಿಸಿ ಪ್ರಮಾಣ ಪತ್ರ ಪಡೆಯಬಹುದಾಗಿದೆ. ಈ ಪ್ರಕ್ರಿಯೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದ್ದು, ಕೆಳಹಂತದ ಅಧಿಕಾರಿಗಳು ಸಾರ್ವಜನಿಕರಿಗೆ ಕಿರುಕುಳ ನೀಡುತ್ತಾರೆ ಎಂಬ ಆರೋಪಗಳು ಬಂದಿವೆ. ಹೀಗಾಗಿ ಈ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ. ಪ್ರತಿ ಸೆರ್ಟಿಫಿಕೇಟ್‍ಗೆ 15 ರೂ. ವೆಚ್ಚ ಭರಿಸಬೇಕು. ಹಣವನ್ನು ಆನ್ ಲೈನ್ ಮೂಲಕವೇ ತುಂಬಬೇಕು. ಅರ್ಜಿ ಸಲ್ಲಿಸಿದ 21 ದಿನದಲ್ಲಿ ಪ್ರಮಾಣ ಪತ್ರ ಲಭ್ಯವಾಗುತ್ತದೆ ಎಂದು ಕಂದಾಯ ಇಲಾಖೆ ಆಯುಕ್ತ ಮುನೀಷ್ ಮೌದ್ಗಿಲ್ ಸುದ್ದಿಗಾರರಿಗೆ ಶನಿವಾರ ತಿಳಿಸಿದರು.

ಇಂಡಿ ಶಾಖಾ ಜಲಾಶಯದಿಂದ ಭೀಮಾ ನದಿಗೆ ನೀರು

ಕುಡಿಯುವ ನೀರಿನ ಭೀಕರ ಸಮಸ್ಯೆ ಎದುರಿಸುತ್ತಿರುವ ಕರ್ನಾಟಕ ಮತ್ತು ಮಹಾರಾಷ್ಟ್ರ ಹಳ್ಳಿಗಳಿಗೆ ಅನುಕೂಲ ಕಲ್ಪಿಸಲು ನಾರಾಯಣಪುರದ ಇಂಡಿ ಶಾಖಾ ಜಲಾಶಯದ ಮೂಲಕ ಭೀಮಾ ನದಿಗೆ ಒಂದು ಟಿಎಂಸಿ ನೀರು ಹರಿಸಲು ಕರ್ನಾಟಕ ಸರಕಾರ ನಿರ್ಧರಿಸಿದೆ.

ಮಹಾರಾಷ್ಟ್ರ ಹಾಗೂ ಕರ್ನಾಟಕದ ಹಲವು ಹಳ್ಳಿಗಳು ಕುಡಿಯುವ ನೀರಿನ ಕ್ಷಾಮ ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ಕೊಯ್ನಾ ನದಿಯ ಮೂಲಕ ಮಹಾರಾಷ್ಟ್ರ ಎರಡು ಟಿಎಂಸಿ ನೀರು ಬಿಡುಗಡೆ ಮಾಡಿದೆ. ಅದೇ ರೀತಿ ಮಹಾರಾಷ್ಟ್ರದ ಅಕ್ಕಲಕೋಟೆ ಮತ್ತು ಸೋಲ್ಲಾಪುರ ಪಟ್ಟಣಗಳ ನೀರಿನ ಸಮಸ್ಯೆ ನೀಗಿಸಲು ಆಲಮಟ್ಟಿ ಜಲಾಶಯದಿಂದ ಭೀಮಾನದಿಗೆ ನೀರು ಹರಿಸುವಂತೆ ಮಹಾರಾಷ್ಟ್ರ ಸರ್ಕಾರ ಮನವಿ ಮಾಡಿತ್ತು. ಈ ಮನವಿ ಹಿನ್ನೆಲೆಯಲ್ಲಿ ಮಾನವೀಯತೆ ದೃಷ್ಠಿಯಿಂದ ಭೀಮಾ ನದಿಗೆ ಇಂಡಿ ಶಾಖಾ ಕಾಲುವೆಯಿಂದ 2000 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಸುದ್ದಿಗಾರರಿಗೆ ಶನಿವಾರ ತಿಳಿಸಿದರು.

1 COMMENT

Leave a Reply