ತಮ್ಮ ಸಂತೋಷ ನುಂಗಿದ್ದ ಸಂತೋಷ್ ವಿರುದ್ಧ ಕೊನೆಗೂ ಸೇಡು ತೀರಿಸಿಕೊಂಡ ಯಡಿಯೂರಪ್ಪ, ಬಿಜೆಪಿ ಹೊಸ ಸಂಘಟನಾ ಕಾರ್ಯದರ್ಶಿ ಅರುಣಕುಮಾರ್

ಡಿಜಿಟಲ್ ಕನ್ನಡ ಟೀಮ್

ತಮಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ವಿಳಂಬವಾಗಲು ಕಾರಣರು ಎಂದು ಬಗೆದಿದ್ದ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ್ ವಿರುದ್ಧ ಕೊನೆಗೂ ಸೇಡು ತೀರಿಸಿಕೊಂಡಿರುವ ಬಿ.ಎಸ್. ಯಡಿಯೂರಪ್ಪ, ಅವರ ಜಾಗದಲ್ಲಿ ಆರೆಸ್ಸೆಸ್ ಪ್ರಚಾರಕ ಅರುಣಕುಮಾರ್ ಅವರನ್ನು ಪ್ರತಿಷ್ಠಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಧಾರವಾಡ ವಿಭಾಗದ ಪ್ರಚಾರಕರಾಗಿದ್ದ ಅರುಣಕುಮಾರ್ ಅವರು ನೂತನ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದು, ಹತ್ತು ವರ್ಷಗಳಿಂದ ಈ ಪದವಿ ಅಲಂಕರಿಸಿದ್ದ ಸಂತೋಷ್ ಅವರನ್ನು ವಿಮುಕ್ತಗೊಳಿಸಲಾಗಿದೆ. ಯಡಿಯೂರಪ್ಪನರು ಬಿಜೆಪಿ ರಾಜ್ಯಾಧ್ಯಕ್ಷರಾದ ಬೆನ್ನಲ್ಲೇ ಈ ಬದಲಾವಣೆ ಆಗಿರುವುದು ವಿಶೇಷ. ಅರುಣಕುಮಾರ್ ಅವರಿಗೆ ಬಿಜೆಪಿ ಮತ್ತು ಆರೆಸ್ಸೆಸ್ ನಡುವೆ ಸಮನ್ವಯಕಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಸಂತೋಷ್ ಅವರು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.

ಕೆಜೆಪಿಯಿಂದ ಬಿಜೆಪಿಗೆ ಮರಳಿದ ಕ್ಷಣದಿಂದಲೂ ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಲು ಹಂಬಲಿಸಿದ್ದರು. ಅವರು ಲೋಕಸಭೆ ಸದಸ್ಯರಾದರೂ ಮನಸ್ಸು ಮಾತ್ರ ರಾಜ್ಯ ರಾಜಕೀಯದೆಡೆಗೆ ಎಳೆಯುತ್ತಿತ್ತು. ನಾಲ್ಕು ತಿಂಗಳ ಹಿಂದೆಯೇ ಪ್ರಹ್ಲಾದ್ ಜೋಷಿ ಅವರ ರಾಜ್ಯಾಧ್ಯಕ್ಷ ಅವಧಿ ಮುಗಿದ ನಂತರವಂತೂ ಯಡಿಯೂರಪ್ಪವರು ಈ ಸ್ಥಾನವೇರಲು ಹಪಹಪಿಸುತ್ತಿದ್ದರು. ರಾಜ್ಯ ಬಿಜೆಪಿ ಸ್ಥಿತಿಯೂ ಅದಕ್ಕೆ ಇಂಬುಗೊಟ್ಟಿತ್ತು. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಚುನಾವಣೆ, ವಿಧಾನಸಭೆ ಮೂರು ಕ್ಷೇತ್ರಗಳ ಮರುಚುನಾವಣೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಘೋಷಣೆ ಆದಾಗಲೆಲ್ಲ ಯಡಿಯೂರಪ್ಪ ರಾಜ್ಯಾಧ್ಯಕ್ಷ ಆಗಿಯೇಬಿಟ್ಟರು ಎಂಬ ಮಾತು ಕೇಳಿಬಂದು ಅಷ್ಟೇ ವೇಗವಾಗಿ ತಣ್ಣಗಾಗಿತ್ತು. ಇದರಿಂದ ರೋಸೆದ್ದು ಹೋಗಿದ್ದ ಯಡಿಯೂರಪ್ಪನವರು ಬಿಜೆಪಿ ರಾಜ್ಯ ಕಾರ್ಯಕಾರಿಣಿಯನ್ನೂ ಬಹಿಷ್ಕರಿಸಿದ್ದರು.

ಇಷ್ಟಕ್ಕೆಲ್ಲ ಕಾರಣ ಹಿಂದೆ ತಾವೇ ಆರೆಸ್ಸಸ್ ಪ್ರಚಾರಕ ಸ್ಥಾನದಿಂದ ರಾಜ್ಯ ಸಂಘಟನಾ ಕಾರ್ಯದರ್ಶಿ ಹುದ್ದೆಗೆ ಕರೆದು ತಂದಿದ್ದ ಸಂತೋಷ್ ಅವರೇ ಎಂಬುದು ಯಡಿಯೂರಪ್ಪನವರು ನಂಬಿಕೆ ಆಗಿತ್ತು. ಹಿಂದೆ ರಾಜ್ಯ ಬಿಜೆಪಿ ಸರಕಾರ ಪಡೆದ ಹಲವು ತಿರುವು ಸಂದರ್ಭಗಳ ಲಾಭ ಪಡೆದುಕೊಳ್ಳಲು ಹವಣಿಸಿದ ಸಂತೋಷ್ ಅವರು ತಮ್ಮ ಪದಚ್ಯುತಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದರು. ಅಲ್ಲದೇ, ತಾವು ಬಿಜೆಪಿ ರಾಜ್ಯಾಧ್ಯಕ್ಷರಾಗಲು ಅಡ್ಡಗಾಲಾಗಿದ್ದಾರೆ ಎಂಬ ಸಿಟ್ಟು ಯಡಿಯೂರಪ್ಪ ಅವರಲ್ಲಿತ್ತು. ಈ ಬಗ್ಗೆ ಡಿಜಿಟಲ್ ಕನ್ನಡ ವರದಿ (ಯಡಿಯೂರಪ್ಪ ಅವರ ಸಂತೋಷ ಕಳೆದು ದೂರ್ವಾಸ ಮುನಿ ಮಾಡಿಟ್ಟಿರುವ ಸಂತೋಷ್!) ಮಾಡಿತ್ತು. ಅದೆಲ್ಲವನ್ನೂ ಜೀರ್ಣಿಸಿಕೊಂಡ ಯಡಿಯೂರಪ್ಪ ಅಂತೂ-ಇಂತೂ ರಾಜ್ಯ ಬಿಜೆಪಿ ಅಧ್ಯಕ್ಷರಾದರು. ಅವರು ಅಧ್ಯಕ್ಷರಾದಾಗಲೇ ಸಂತೋಷ್ ಅವರ ರಾಜ್ಯ ಸಂಘಟನಾ ಕಾರ್ಯದರ್ಶಿ ಹುದ್ದೆಗೆ ಸಂಚಾಕಾರ ಬರಲಿದೆ ಎಂದು ನಿರೀಕ್ಷಿಸಲಾಗಿತ್ತು. ಅದೀಗ ನಿಜವಾಗಿದೆ. ಯಡಿಯೂರಪ್ಪನವರು ಕೊನೆಗೂ ಮುಯ್ಯಿ ತೀರಿಸಿಕೊಂಡಿದ್ದಾರೆ.

Leave a Reply