ಬರ ನೀಗಲು ನೀರು ಬೇಡ್ವಂತೆ, ಆದರೆ ದುಡ್ಡು ಬೇಕಂತೆ! ಹೇಗಿದೆ ನೋಡಿ ಸಿಎಂ ಅಖಿಲೇಶ್ ಯಾದವ್ ಆಟಾಟೋಪ?

ಡಿಜಿಟಲ್ ಕನ್ನಡ ಟೀಮ್

ಬರದಿಂದ ತತ್ತರಿಸಿರುವ ಉತ್ತರ ಪ್ರದೇಶದ ಬುಂದೆಲಖಂಡ ಪ್ರದೇಶಕ್ಕೆ ₹ 11 ಸಾವಿರ ಕೋಟಿ ರುಪಾಯಿ ಪರಿಹಾರ ನೀಡಬೇಕು – ಇದು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪ್ರಧಾನಿ ನರೇಂದ್ರ ಮೋದಿಗೆ ಮಾಡಿರುವ ಮನವಿ. ಮೊನ್ನೆಯಷ್ಟೇ ಕೇಂದ್ರ ಸರ್ಕಾರ ರೈಲಿನಲ್ಲಿ ಕಳುಹಿಸಿದ್ದ ನೀರನ್ನು ಬೇಡ ಎಂದಿದ್ದ ಅಖಿಲೇಶ್ ಯಾದವ್ ಈಗ ಅನುದಾನ ಸ್ವರೂಪದಲ್ಲಿ ಪರಿಹಾರ ಕೇಳುತ್ತಿರುವುದು ನಿಜಕ್ಕೂ ಅಚ್ಚರಿ ಹಾಗೂ ಅನುಮಾನ ಮೂಡಿಸಿದೆ.

ಪ್ರಧಾನಿ ಅವರನ್ನು ಶನಿವಾರ ಭೇಟಿ ಮಾಡಿದ್ದ ಅಖಿಲೇಶ್, ನಮ್ಮ ಜಲಾಶಯಗಳು ಭರ್ತಿಯಾಗಿವೆ. ಜಲಾಶಯದಿಂದ ಹಳ್ಳಿಗಳಿಗೆ ನೀರು ಕಳುಹಿಸಲು ಟ್ಯಾಂಕರ್ ಗಳ ಅಗತ್ಯವಿದೆ. ಅದಕ್ಕೆ 10 ಸಾವಿರ ಟ್ಯಾಂಕರ್ ಖರೀದಿಸಬೇಕಿದ್ದು, ಇದಕ್ಕೆ ₹ 11 ಸಾವಿರ ಕೋಟಿ ರುಪಾಯಿ ಅನುದಾನ ನೀಡಬೇಕು ಎಂಬ ಮನವಿಯನ್ನಿಟ್ಟಿದ್ದಾರೆ.

ಬರ ಪರಿಸ್ಥಿತಿಯಲ್ಲಿ ಯಾವುದೇ ರಾಜ್ಯವಾದರೂ ಕೇಂದ್ರದ ಬಳಿ ನೆರವು ಕೋರುವುದು ಸಹಜ. ಅದು ತಪ್ಪಲ್ಲ. ಆದರೆ, ಅಖಿಲೇಶ್ ಯಾದವ್ ಕೇಂದ್ರ ನೀಡಿದ ನೆರವು ತಿರಸ್ಕರಿಸಿ ಹಣದ ರೂಪದಲ್ಲಿ ಪರಿಹಾರ ಕೇಳುತ್ತಿರೋದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ನೀರಲ್ಲಿ ದುಡ್ಡು ಹೊಡೆಯೋಕೆ ಆಗಲ್ಲ ಅಂತಾ ಧನ ಸ್ವರೂಪದಲ್ಲಿ ಅನುದಾನ ಕೇಳ್ತಿದ್ದಾರೆ ಅನ್ನೋ ಮಾತೂ ಕೇಳಿಬಂದಿವೆ. ಈ ನಡುವೆ ಅಖಿಲೇಶ್ ಯಾದವ್ ಬರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಉತ್ತರ ಪ್ರದೇಶ ಬಿಜೆಪಿ ಮುಖಂಡರು ಹರಿಹಾಯ್ದಿದ್ದಾರೆ.

ಈ ಎಲ್ಲದರ ನಡುವೆ ಅಖಿಲೇಶ್ ಮತ್ತು ಪ್ರಧಾನಿ ಭೇಟಿ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಕೆರೆ, ಕಟ್ಟೆ ಸೇರಿದಂತೆ ಒಟ್ಟು 78 ಸಾವಿರ ನೀರಿನ ಮೂಲ ಸೃಷ್ಠಿಸಲು ನಿರ್ಧರಿಸಿವೆ. ಸಭೆ ನಂತರ ಮಾತನಾಡಿದ ಅಖಿಲೇಶ್ ಅವರು ಪ್ರಧಾನಿ ಅವರ ಸ್ಪಂದನೆಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಆದರೆ, ಇಲ್ಲಿ ಮುಖ್ಯವಾಗಿ ಗಮನಿಸಬೇಕಿರುವ ಅಂಶ ಎಂದರೆ, ‘ನಮ್ಮಲ್ಲಿ ಲಾತುರ್ ನಂತಹ ಪರಿಸ್ಥಿತಿ ಇಲ್ಲ. ನಮಗೆ ನೀರು ಬೇಕಿದ್ದರೆ ನಾವೇ ಕೇಳುತ್ತೇವೆ’ ಎಂದು ಹೇಳುವ ಮೂಲಕ ನೀರು ತಂದಿದ್ದ ರೈಲನ್ನು ಅಖಿಲೇಶ್ ವಾಪಸ್ ಕಳುಹಿಸಿದ್ದರು. ಇದಾದ ಬಳಿಕ ಲೋಕಸಭೆಯಲ್ಲೂ ಈ ವಿಷಯ ಚರ್ಚೆಯಾಗಿತ್ತು. ಆ ಸಂದರ್ಭದಲ್ಲಿ ನಮ್ಮ ಭಾಗದ ನೀರನ್ನೇ ಕೇಂದ್ರ ಸರ್ಕಾರ ಮಧ್ಯಪ್ರದೇಶ ಮೂಲಕ ತಂದುಕೊಟ್ಟಿದೆ ಎಂದು ಸಮಾಜವಾದಿ ಪಕ್ಷದ ನಾಯಕರು ವಾದಿಸಿದ್ದರು.

ನೀರು ಯಾರದ್ದೇ ಆಗಿರಲಿ ಅದನ್ನು ಅಗತ್ಯ ಸಂದರ್ಭದಲ್ಲಿ ಸಂತ್ರಸ್ತರಿಗೆ ತಲುಪಿಸುವುದು ಮುಖ್ಯ ಎಂಬುದನ್ನು ಉತ್ತರ ಪ್ರದೇಶ ನಾಯಕರು ಮರೆತಿದ್ದರು. ಇಷ್ಟೇ ಅಲ್ಲದೆ ಬುಂದೆಲಖಂಡದ ಅಣೆಕಟ್ಟು ನೀರಿನಿಂದ ತುಂಬಿರುವ ಫೋಟೊವನ್ನು ಮುಖ್ಯಮಂತ್ರಿ ಕಚೇರಿಯಿಂದ ಟ್ವೀಟ್ ಮಾಡಲಾಗಿತ್ತು. ಆ ಫೋಟೊ ಐದು ವರ್ಷಗಳ ಹಳೆಯದು, ವಾಸ್ತವದಲ್ಲಿ ಡ್ಯಾಮ್ ಗಳು ಬರಿದಾಗಿವೆ ಎಂಬ ವರದಿಗಳು ಬಂದವು.

ಇಲ್ಲಿ ಸಾಮಾನ್ಯವಾಗಿ ಯೋಚಿಸುವುದಾದರೆ, ಡ್ಯಾಮ್ ನಲ್ಲಿ ನೀರಿದ್ದರೆ ಬರದ ಪರಿಸ್ಥಿತಿ ಎದುರಾಗಲು ಹೇಗೆ ಸಾಧ್ಯ? ಡ್ಯಾಮ್ ನಲ್ಲಿರುವ ನೀರನ್ನು ಕಾಲುವೆಗಳ ಮೂಲಕ ಹಳ್ಳಿಗಳಿಗೆ ಹರಿಯಬಿಡುವುದು ಸಾಮಾನ್ಯ ವಿಧಾನ. ಡ್ಯಾಮ್ ನಲ್ಲಿ ನೀರಿದ್ದೂ ಆ ಪ್ರದೇಶದ ಜನ ಕುಡಿಯುವ ನೀರಿಗೆ ತತ್ತರಿಸುತ್ತಿದ್ದಾರೆಂದರೆ ಇಷ್ಟು ದಿನಗಳ ಕಾಲ ಈ ಹಳ್ಳಿಗಳಿಗೆ ನೀರಿನ ಪೂರೈಕೆ ಏಕೆ ಆಗಲಿಲ್ಲ ಎಂಬ ಗೊಂದಲಗಳು ಮೂಡುತ್ತಿವೆ.

Leave a Reply