ಬಲಪಂಥೀಯ ನಾಯಕರ ಹತ್ಯೆ, ಚರ್ಚ್ ದಾಳಿ ಗುರಿ, ದಾವೂದ್ ಗ್ಯಾಂಗ್ ನ ಹತ್ತು ಮಂದಿ ವಿರುದ್ಧ ಆರೋಪಪಟ್ಟಿ

ಡಿಜಿಟಲ್ ಕನ್ನಡ ಟೀಮ್

ಭೂಗತ ಪಾತಕಿ ದಾವೂದ್ ಇಬ್ರಾಹಿಂ ನೇತೃತ್ವದ ‘ಡಿ’ ಕಂಪನಿಯ 10 ಸಹಚರರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಹ್ಮದಾಬಾದ್ ಕೋರ್ಟ್ ನಲ್ಲಿ ಚಾರ್ಜ್ ಶೀಟ್ ಸಲ್ಲಿಸಿದೆ. ಇದರ ಪ್ರಕಾರ, ಬಲಪಂಥಿಯ ನಾಯಕರು ಹಾಗೂ ಚರ್ಚ್ ಮೇಲಿನ ದಾಳಿ ಈ ಗ್ಯಾಂಗ್ ನ ಪ್ರಮುಖ ಟಾರ್ಗೆಟ್.

2015 ರಲ್ಲಿ ಗುಜರಾತ್ ನ ಭರುಚ್ ನಲ್ಲಿ ಇಬ್ಬರು ಬಿಜೆಪಿ ಮುಖಂಡರ ಹತ್ಯೆಗೆ ಸಂಬಂಧಿಸಿದಂತೆ ಎನ್ಐಎ ತನಿಖೆ ನಡೆಸುತ್ತಿದೆ. ಈ ವೇಳೆ ಕೇಸರಿ ಸಂಘಗಳ ಪ್ರಮುಖ ನಾಯಕರನ್ನು ಹತ್ಯೆ ಮಾಡುವುದು ದಾವೂದ್ ಗ್ಯಾಂಗ್ ನ ಗುರಿ ಎಂಬ ಅಂಶ ಬೆಳಕಿಗೆ ಬಂದಿದೆ. ಭರುಚ್ ನ ಬಿಜೆಪಿ ಮಾಜಿ ಅಧ್ಯಕ್ಷ ಶಿರಿಶ್ ಬಂಗಾಲಿ ಮತ್ತು ಯುವಸಂಘಟನೆ ಕಾರ್ಯದರ್ಶಿ ಪ್ರಜ್ಞೇಶ್ ಮಿಸ್ತ್ರಿ ಅವರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಪ್ರಕರಣದ 10 ಆರೋಪಿಗಳ ಪೈಕಿ 7 ಮಂದಿ ಈಗಾಗಲೇ ಬಂಧಿತರಾಗಿದ್ದಾರೆ. ಮುಂಬೈ ಸರಣಿ ಸ್ಫೋಟದಲ್ಲಿ ಯಾಕೂಬ್ ಮೆನನ್ ಗೆ ಗಲ್ಲು ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ಪ್ರತೀಕಾರಕ್ಕಾಗಿ ಈ ಕೃತ್ಯ ನಡೆಸಲಾಗಿದೆ ಎಂದು ಚಾರ್ಜ್ ಶೀಟ್ ನಲ್ಲಿ ಆರೋಪಿಸಲಾಗಿದೆ.

ದಾವೂದ್ ಗುಂಪಿನಲ್ಲಿರುವ ದಕ್ಷಿಣ ಆಫ್ರಿಕಾದ ಜಾವೇದ್ ಮಿಯಾ, ಪಾಕಿಸ್ತಾನದ ಜಾವಿದ್ ಪಟೇಲ್ ಪ್ರಕರಣದ ಪ್ರಮುಖ ಆರೋಪಿಗಳು. ಜಾವಿದ್ ದುಬೈನಿಂದ ಹವಾಲ ಮೂಲಕ ಗುಜರಾತ್ ಗೆ ಹಣ ರವಾನಿಸುತ್ತಿದ್ದ. ಆರೆಸ್ಸಸ್ ಸೇರಿದಂತೆ ಬಲಪಂಥಿಯ ಸಂಘಟನೆಗಳ ಮುಖಂಡರು ಇವರ ಗುರಿ. ಇನ್ನು ಚರ್ಚ್ ಗಳ ಮೇಲೆ ದಾಳಿ ನಡೆಸಿ ಕೋಮುಗಲಭೆ ಸೃಷ್ಟಿಸುವುದು ಇವರ ಯೋಜನೆ ಎಂದು ಚಾರ್ಜ್ ಶೀಟ್ ನಲ್ಲಿ ವಿವರಿಸಲಾಗಿದೆ.

Leave a Reply