ಸುದ್ದಿ ಸಂತೆ: ನಮ್ ದೇಶಕ್ಕೆ ಬೇಕಂತೆ 70 ಸಾವಿರ ಜಡ್ಜ್ ಗಳು, ಸ್ಟಿಂಗ್ ಆಪರೇಷನ್ ಗೆ ಸಿಕ್ಕಿಬಿದ್ರು ಮಾಜಿ ಸಿಎಂ ರಾವತ್, ಕಾರು ಹಿಂದಿಕ್ಕಿದ್ದವನ ಗುಂಡು ಹಾರಿಸಿ ಕೊಂದ ಎಂಎಲ್ಸಿ ಪುತ್ರ!

ಡಿಜಿಟಲ್ ಕನ್ನಡ ಟೀಮ್

ಭಾರತದಲ್ಲಿ ಈವರೆಗೂ ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥಗೊಳಿಸಲು 70 ಸಾವಿರ ಜಡ್ಜ್ ಗಳ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್ ಠಾಕೂರ್ ತಿಳಿಸಿದ್ದಾರೆ. ಭಾರತದಲ್ಲಿ ಜಡ್ಜ್ ಗಳ ಕೊರತೆ ಪ್ರಮಾಣದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅವರು, ನ್ಯಾಯ ಪಡೆಯುವುದು ಪ್ರತಿಯೊಬ್ಬ ನಾಗರೀಕನ ಮೂಲಭೂತ ಹಕ್ಕು. ಇದನ್ನು ನಿರಾಕರಿಸಲು ಸರ್ಕಾರಕ್ಕೆ ಸಾಧ್ಯವಿಲ್ಲ. ಆದಷ್ಟು ಬೇಗ ಜಡ್ಜ್ ಗಳ ನೇಮಕವಾಗಬೇಕು. ಸದ್ಯ 170 ಜಡ್ಜ್ ನೇಮಕದ ಪ್ರಸ್ತಾವ ಸರ್ಕಾರದ ಮುಂದಿದೆ ಎಂದು ಕಟಕ್ ನಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದರು.

ಮತ್ತೆ ಸಂಕಷ್ಟಕ್ಕೆ ಸಿಲುಕಿದ ಉತ್ತರಾಖಂಡ ಮಾಜಿ ಸಿಎಂ ಹರೀಶ್ ರಾವತ್

ಸುಪ್ರೀಂ ಕೋರ್ಟ್ ಸೂಚನೆಯಂತೆ ಮಂಗಳವಾರ ಬಹುಮತ ಸಾಬೀತು ಪ್ರಕ್ರಿಯೆ ವೇಳೆ ಬೆಂಬಲ ನೀಡಲು ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರು 12 ಶಾಸಕರಿಗೆ ಲಂಚ ನೀಡುವ ವಿಡಿಯೋ ಈಗ ಬಹಿರಂಗಗೊಂಡಿದೆ. ಆ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಸರ್ಕಾರ ಸ್ಥಾಪಿಸುವ ಯತ್ನದಲ್ಲಿರುವ ರಾವತ್ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಖಾಸಗಿ ಸುದ್ದಿ ವಾಹಿನಿಯೊಂದು ನಡೆಸಿದ ಸ್ಟಿಂಗ್ ಆಪರೇಷನ್ ನಲ್ಲಿ ಕಾಂಗ್ರೆಸ್ ಶಾಸಕ ಮದನ್ ಸಿಂಗ್ ಬಿಶು ಜತೆಗೆ ಕಾಣಿಸಿಕೊಂಡಿರುವ ರಾವತ್, ಕೆಲ ಶಾಸಕರಿಗೆ ₹ 25 ಲಕ್ಷ ರುಪಾಯಿ ಆಮೀಷ ಒಡ್ಡುತ್ತಿರುವುದು ಸೆರೆಯಾಗಿದೆ. ಈಗ ರಾವತ್ ಮತ್ತೊಂದು ವಿವಾದಕ್ಕೆ ಸಿಕ್ಕಿದ್ದಾರೆ.

ಜೆಡಿಯು ಎಂಎಲ್ ಸಿ ಮಗನ ಕಾರು ಹಿಂದಿಕ್ಕಿದಕ್ಕೆ ಗುಂಡೇಟು

ಬಿಹಾರದ ಗಯಾದಲ್ಲಿ ಜೆಡಿಯು ನಾಯಕಿ, ವಿಧಾನ ಪರಿಷತ್ ಸದಸ್ಯೆ ಮನೋರಮಾದೇವಿ ಮಗ ಪ್ರಯಾಣಿಸುತ್ತಿದ್ದ ಕಾರನ್ನು ಹಿಂದಿಕ್ಕಿದ ಯುವಕನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಖ್ಯಾತ ಉದ್ಯಮಿಯ ಮಗ 19 ವರ್ಷದ ಆದಿತ್ಯ ಸಚ್ ದೇವ್ ಗುಂಡೇಟಿಗೆ ಬಲಿಯಾದ ದುರ್ಧೈವಿ. ಶನಿವಾರ ರಾತ್ರಿ ಸ್ನೇಹಿತರೊಂದಿಗೆ ಆದಿತ್ಯ ಪ್ರಯಾಣ ಮಾಡುತ್ತಿರುವಾಗ ಮನೋರಮಾದೇವಿ ಪುತ್ರ ರೋಕಿಯ ಕಾರನ್ನು ಹಿಂದಿಕ್ಕಿದ್ದಾರೆ. ಆಗ ರೋಕಿ ಹಾಗೂ ಆತನ ಭದ್ರತಾ ಸಿಬ್ಬಂದಿ ಆದಿತ್ಯ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದು, ಆದಿತ್ಯ ಸಾವನ್ನಪ್ಪಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಅಪಘಾತ: 14 ಸಾವು

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಜೋಗಿಂದರ್ ನಗರದಲ್ಲಿ ಬಸ್ ಪ್ರಪಾತಕ್ಕೆ ಉರುಳಿದ ಪರಿಣಾಮ 14 ಮಂದಿ ಸಾವನ್ನಪ್ಪಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ. 55 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಎಚ್ಆರ್ ಟಿಸಿ ಬಸ್ ಆಯ ತಪ್ಪಿ ಕಣಿವೆಗೆ ಬಿದ್ದಿತು. ಈ ಅಪಘಾತದಲ್ಲಿ 36 ಮಂದಿ ಗಾಯಗೊಂಡಿದ್ದಾರೆ. ಇವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನುಳಿದಂತೆ ತಿಳಿಯಬೇಕಿರುವ ಪ್ರಮುಖ ಸುದ್ದಿಸಾಲುಗಳು..

  • ಪ್ರಧಾನಿ ನರೇಂದ್ರ ಮೋದಿ ಅವರ ರಹಸ್ಯ ವಿಚಾರಗಳು ಗಾಂಧಿ ಕುಟುಂಬಕ್ಕೆ ಗೊತ್ತಿದೆ. ಆ ಕಾರಣದಿಂದಾಗಿಯೇ ಮೋದಿ ಆ ಕುಟುಂಬ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.
  • ಭಾರತದ ಭೂಪಟದಲ್ಲಿ ಬದಲಾವಣೆ ಮಾಡಿದರೆ ಕಠಿಣ ಶಿಕ್ಷೆ ನೀಡಲಾಗುವುದು ಎಂಬ ಕೇಂದ್ರ ಸರ್ಕಾರದ ಎಚ್ಚರಿಕೆಯ ನಂತರ ಗೂಗಲ್ ಮ್ಯಾಪ್ ಸೇರಿದಂತೆ ಇತರೆ ಜಾಲತಾಣಗಳಲ್ಲಿನ ತಪ್ಪನ್ನು ಸರಿ ಮಾಡಲಾಗಿದೆ. ಈ ಹಿಂದೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಹಾಗೂ ಅರುಣಾಚಲ ಪ್ರದೇಶವನ್ನು ಚೀನಾಗೆ ಸೇರಿಸಲಾಗಿತ್ತು. ಸರ್ಕಾರದ ಎಚ್ಚರಿಕೆ ನಂತರ ಈ ಪ್ರದೇಶಗಳು ಮತ್ತೆ ಭಾರತ ಭೂಪಟದಲ್ಲಿ ಸೇರಿವೆ.
  • ಆಗಸ್ಟಾ ವೆಸ್ಟ್ಲ್ಯಾಂಡ್ ಹಗರಣದಲ್ಲಿ ಕೈಜೋಡಿಸಿದ್ದವರಿಗೆ ಉತ್ತಮ ಸ್ಥಾನಮಾನ ನೀಡಲಾಗಿದೆ. ಕೆಲವರು ರಾಜ್ಯಪಾಲರಾದರೆ, ಮತ್ತೆ ಕೆಲವರು ರಾಯಭಾರಿಗಳಾಗಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕರ್ ಟೀಕಿಸಿದ್ದಾರೆ.

Leave a Reply