ಹೆಂಡತಿಗಾದ ಅಪಮಾನ ತಾಳದೇ 40 ದಿನದಲ್ಲಿ ಒಬ್ಬನೇ ಬಾವಿ ತೋಡಿದ ಬಾಪುರಾವ್ ‘ಆಧುನಿಕ ದಶರಥ ಮಾಂಜಿ’ಯೇ ಸರಿ!

 

ಡಿಜಿಟಲ್ ಕನ್ನಡ ಟೀಮ್

ಹೆಂಡತಿ ಮೇಲಿನ ಪ್ರೀತಿಗೆ ತಾಜ್ ಮಹಲ್ ಕಟ್ಟಿದವ ಶಹಜಹಾನ್. ಹೆಂಡತಿ ಹೆರಿಗೆ ಸಮಯದಲ್ಲಿ ಮೃತ್ಯುವಾಗಿ ಪರಿಣಮಿಸಿದ ಬೆಟ್ಟವನ್ನು 22 ವರ್ಷಗಳ ಕಾಲ ಏಕಾಂಗಿಯಾಗಿ ಕುಟ್ಟಿ, ರಸ್ತೆ ಮಾಡಿದವ ದಶರಥ ಮಾಂಜಿ. ಅದೇ ರೀತಿ ಹೆಂಡತಿಗಾದ ಅಪಮಾನ ತಾಳಲಾರದೆ 40 ದಿನದಲ್ಲಿ ಬಾವಿ ನಿರ್ಮಿಸಿದವ ಬಾಪುರಾವ್ ತಾಂಜೆ. ಈತ ಮಹಾರಾಷ್ಟ್ರದ ದಿನಗೂಲಿ ನೌಕರನಾದರೂ ಸಾಧನೆಯಲ್ಲಿ ಶಹಜಹಾನ್, ದಶರಥ ಮಾಂಜಿ ಅವರ ಸಾಲಿಗೆ ಸೇರೋದ್ರಲ್ಲಿ ಅನುಮಾನವಿಲ್ಲ.

ಹೌದು, ಪ್ರಸ್ತುತ ದೇಶದ ಬಹುತೇಕ ಪ್ರದೇಶಗಳು ನೀರಿನ ಸಮಸ್ಯೆಗೆ ಸಿಲುಕಿದೆ. ಇಂತಹ ಪರಿಸ್ಥಿತಿಯಲ್ಲಿ ತನ್ನ ಹೆಂಡತಿಗಾದ ಅವಮಾನ ಸಹಿಸಲಾಗದೇ ಕೇವಲ 40 ದಿನಗಳಲ್ಲಿ ಏಕಾಂಗಿಯಾಗಿ 6 ಅಡಿ ಅಗಲ ಹಾಗೂ 15 ಅಡಿ ಆಳದ ಬಾವಿ ತೋಡಿ ಗಮನ ಸೆಳೆದಿದ್ದಾರೆ ತಾಂಜೆ.

ನೀರಿನ ತೀವ್ರ ಸಮಸ್ಯೆ ಎದುರಿಸಿದ ಮಹಾರಾಷ್ಟ್ರದ ಹಲವು ಪ್ರದೇಶಗಳ ಪೈಕಿ ವಶಿಮ್ ಜಿಲ್ಲೆಯ ಕಲಂಬೇಶ್ವರ ಹಳ್ಳಿಯೂ ಒಂದು. ಇಲ್ಲಿನ ಜನ ಕುಡಿವ ನೀರಿಗಾಗಿ ಕಿಲೋಮೀಟರ್ ದಾಟಿ ಹೋಗಬೇಕಿತ್ತು. ಹೀಗಿರುವಾಗ ಬಾಪುರಾವ್ ಹೆಂಡತಿ ಸಂಗೀತಾ ನೀರು ಸೇದಲು ಬಾವಿ ಮಾಲೀಕ ಬಳಿ ಅನುಮತಿ ಕೋರುತ್ತಾಳೆ. ಮಾನವೀಯತೆ ಇಲ್ಲದ ಮಾಲೀಕ ಸಂಗೀತಾಳಿಗೆ ಬೈದು ಕಳುಹಿಸುತ್ತಾನೆ. ತನ್ನ ಹೆಂಡತಿಯನ್ನು ಆತ ನಿಂದಸಿದ್ದು ತಾಂಜೆಯ ಆತ್ಮಾಭಿಮಾನವನ್ನು  ಕೆರಳಿಸುತ್ತದೆ. ಆಕೆಗಾದ ಅಪಮಾನ ಸಹಿಸಲಾಗದ ಬಾಪುರಾವ್ ತಕ್ಷಣವೇ ಬೇರೊಂದು ಬಾವಿ ತೋಡುವ ನಿರ್ಧಾರಕ್ಕೆ ಬರುತ್ತಾನೆ. ಸಲಕರಣೆಗಳನ್ನು ತಂದು ತೋಡಲಾರಂಭಿಸುತ್ತಾನೆ.

ತಾಂಜೆ ಕೋಪದಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದರೂ ಬಾವಿ ತೋಡಿದ ತಕ್ಷಣ ನೀರು ಸಿಗುತ್ತದೆ ಎಂಬ ಯಾವ ಭರವಸೆಯೂ ಇರಲಿಲ್ಲ. ಕಾರಣ ಈ ಹಿಂದೆ ಸುತ್ತಮುತ್ತಲ ಪ್ರದೇಶದಲ್ಲಿ ಮೂರು ಬಾವಿ ಹಾಗೂ ಒಂದು ಬೋರ್ ವೆಲ್ ಬತ್ತಿ ಹೋಗಿದ್ದವು. ಆದರೂ ತನ್ನ ನಿರ್ಧಾರ ಬದಲಿಸದ ತಾಂಜೆ ಬಾವಿ ತೋಡಲು ಆರಂಭಿಸಿದ. ತನ್ನ ಕುಟುಂಬದವರು ಸೇರಿದಂತೆ ಯಾರೊಬ್ಬರಿಂದಲೂ ಯಾವುದೇ ನೆರವು ಪಡೆಯದೆ ನಿತ್ಯ 6 ಗಂಟೆಗಳ ಕಾಲ ಅಗೆಯುತ್ತಾ ಹೋದ. 40 ದಿನಗಳ ನಂತರ ತನ್ನ ಪ್ರಯತ್ನದಲ್ಲಿ ಯಶಸ್ಸು ಕಂಡ.

ಇದೀಗ ತಾಂಜೆ ಸುತ್ತಮುತ್ತಲಿನವರ ಸಾಕಷ್ಟು ಪ್ರಶಂಸೆಗೆ ಪಾತ್ರನಾಗಿದ್ದಾನೆ. ಆತನ ಸಾಧನೆ ಬರೀ ಆತನ ಕುಟುಂಬಕ್ಕಷ್ಟೇ ಅಲ್ಲದೇ ನಿತ್ಯ ಕುಡಿವ ನೀರಿಗಾಗಿ ಕಿಲೋಮೀಟರ್ ಗಟ್ಟಲೆ ನಡೆಯಬೇಕಿದ್ದ ಗ್ರಾಮದ ಕೆಲವರಿಗೆ ಈಗ ಸನಿಹದಲ್ಲೇ ನೀರು ಸಿಗುವಂತಾಗಿದೆ. ತಾಂಜೆ ಈ ಸಾಧನೆಗೆ ತಹಶೀಲ್ದಾರ್, ಗ್ರಾಮಪಂಚಾಯ್ತಿ ಮುಖ್ಯಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ನೋಡಿದ ಖ್ಯಾತ ನಟ ನಾನಾ ಪಾಟೇಕರ್ ಶೀಘ್ರದಲ್ಲೇ ಆತನ ಭೇಟಿ ಮಾಡುವುದಾಗಿ ಹೇಳಿದ್ದಾರೆ.

‘ನಾವು ದಲಿತರು ಎಂದು ನಮ್ಮನ್ನು ಕೀಳಾಗಿ ನೋಡುತ್ತಾರೆ. ನನ್ನ ಹೆಂಡತಿಗೆ ಅಪಮಾನವಾದ ದಿನ ನಾನು ನೋವಿಂದ ಕಣ್ಣೀರಿಟ್ಟಿದ್ದೆ. ಇನ್ನು ಮುಂದೆ ಯಾರ ಬಳಿಯೂ ಬೇಡಬಾರದು ಎಂಬ ದಿಟ್ಟ ನಿರ್ಧಾರಕ್ಕೆ ಬಂದೆ. ನಂತರ ಬಾವಿ ತೋಡಲು ಆರಂಭಿಸಿದೆ. ನನ್ನ ಪ್ರಯತ್ನ ಸಫಲವಾಗಿದ್ದಕ್ಕೆ ದೇವರಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದು ತಾಂಜೆ ತಿಳಿಸಿದ್ದಾನೆ.

ಒಟ್ಟಿನಲ್ಲಿ ಛಲ ಮತ್ತು ಆತ್ಮಬಲದ ಮುಂದೆ ಸಾಧನೆ ಮಾಡಲಾಗದ್ದು ಏನೂ ಇಲ್ಲ ಎಂಬುದನ್ನು ಬಾಪುರಾವ್ ತಾಂಜೆ ಅನುಷ್ಠಾನದ ಮೂಲಕ ತೋರಿಸಿಕೊಟ್ಟಿದ್ದಾನೆ.

Leave a Reply