ಕುಸಿದ ಜೊಮಾಟೊ ಮೌಲ್ಯಮಾಪನ, ಆಹಾರಸೇವೆ ನವೋದ್ದಿಮೆಯ ಸಂಕಷ್ಟಗಳ ಪ್ರತಿಫಲನ

ಡಿಜಿಟಲ್ ಕನ್ನಡ ಟೀಮ್

ಹೊಸದರಲ್ಲಿ ಎಲ್ಲವೂ ಚೆನ್ನ. ಅಂತೆಯೇ ನವೋದ್ದಿಮೆಗಳ ಹೈಪಿಗೊಂದು ಕಾಲ, ಸಂಕಷ್ಟಕ್ಕೊಂದು ಕಾಲ. ವಿಶೇಷತಃ ಆಹಾರ ಸಂಬಂಧಿ ಸೇವಾ ನವೋದ್ದಿಮೆಗಳ ಸಂಕಷ್ಟಪರ್ವ ಆರಂಭವಾಗಿರುವಂತೆ ತೋರುತ್ತಿದೆ. ಇದಕ್ಕೂ ಮೊದಲು ಇ ಕಾಮರ್ಸ್ ನಲ್ಲಿ ಫ್ಲಿಪ್ ಕಾರ್ಟ್ ಮತ್ತು ಸ್ನ್ಯಾಪ್ ಡೀಲ್ ಗಳ ನಡುವಿನ ವಾಕ್ಸಮರ ಯಾವ ಹತಾಶೆಯ ಸಂಕೇತ ಎಂಬ ಬಗ್ಗೆ ಡಿಜಿಟಲ್ ಕನ್ನಡ ವಿಶ್ಲೇಷಿಸಿತ್ತು. ಇದೀಗ ಪ್ರಸಿದ್ಧ ಆಹಾರ ಸೇವೆಯ ನವೋದ್ದಿಮೆ ‘ಜೊಮಾಟೊ’ದ ಮೌಲ್ಯವನ್ನು ಎಚ್ ಎಸ್ ಬಿಸಿ ಸೆಕ್ಯುರಿಟೀಸ್ ಅಂಡ್ ಕ್ಯಾಪಿಟಲ್ ಮಾರ್ಕೆಟ್ ಬರೋಬ್ಬರಿ ಅರ್ಧದಷ್ಟು ಕಡಿಮೆ ಮಾಡಿದೆ.

ಅಂತರ್ಜಾಲ ಮೂಲಕ ಸಲ್ಲಿಸಿದ ಬೇಡಿಕೆ ಆಧಾರದಲ್ಲಿ ಆಯ್ದ ಹೋಟೆಲುಗಳ ಆಹಾರವನ್ನು ಮನೆಬಾಗಿಲಿಗೆ ತಲುಪಿಸುವ ಸೇವೆ ಒದಗಿಸುವ ಜೊಮಾಟೊ ಕಂಪನಿ ಮೌಲ್ಯವು 1 ಬಿಲಿಯನ್ ಡಾಲರ್ ಎಂದು ಅದರ ಪ್ರಮುಖ ಹೂಡಿಕೆದಾರ ಇನ್ಫೋ ಎಡ್ಜ್ ಇಂಡಿಯಾ ಮೌಲ್ಯಮಾಪನ ಮಾಡಿತ್ತು. ಇದನ್ನು 500 ಮಿಲಿಯನ್ ಡಾಲರ್ ಗಳಿಗೆ ಇಳಿಸಿದೆ ಎಚ್ ಎಸ್ ಬಿ ಸಿ. ಹೀಗೆ ಮೌಲ್ಯ ಇಳಿಸಿರುವುದಕ್ಕೆ ಎಚ್ ಎಸ್ ಬಿ ಸಿ ಕೆಲ ಕಾರಣಗಳನ್ನು ಕೊಟ್ಟಿದೆ. ಇ ಕಾಮರ್ಸ್ ಎದುರಿಸುತ್ತಿರುವ ಸವಾಲುಗಳೇ ಇಲ್ಲೂ ಪ್ರತಿಬಿಂಬಿತವಾಗಿವೆ.

ಜೊಮಾಟೊ ತನ್ನ ಕಾರ್ಯಾಚರಣೆಗಳಲ್ಲಿ ಹಣ ಕಳೆದುಕೊಳ್ಳುತ್ತಿದೆ, ಆಹಾರ ವಲಯದಲ್ಲಿ ಇಂಥದೇ ಸೇವೆ ಒದಗಿಸುವ ಕಂಪನಿಗಳು ಹೆಚ್ಚಾಗಿ ಪೈಪೋಟಿ ಅತಿಯಾಗಿದೆ, ಜೊಮಾಟೊ ಜಾಹೀರಾತಿನ ಮೇಲೆ ಅವಲಂಬಿತವಾಗಿ ಹಣ ವ್ಯಯಿಸುತ್ತಿದೆ… ಹೀಗೆ ಹಲವು ಕಾರಣಗಳಿಂದ ಮೌಲ್ಯಮಾಪನದಲ್ಲಿ ಇದರ ಮೌಲ್ಯವನ್ನು ಎಚ್ ಎಸ್ ಬಿ ಸಿ ಕುಗ್ಗಿಸಿದೆ.

ಅಂಥದ್ದೇನಿಲ್ಲ… ಅತಿ ಶೀಘ್ರದಲ್ಲೇ ನಾವು ಲಾಭ ಕಾಣಲಿದ್ದೇವೆ ಅಂತ ತಕರಾರಿನ ಧ್ವನಿ ತೆಗೆದಿದೆ ಇನ್ಫೋ ಎಡ್ಜ್. ಅಂದಹಾಗೆ, ಬಿಸಿನೆಸ್ ಮಾಡೆಲ್ ಬಗ್ಗೆ ಪ್ರಶ್ನೆಗೆ ಒಳಗಾಗುತ್ತಿರುವುದು 2008ರಲ್ಲಿ ಸ್ಥಾಪಿತವಾದ ಒಂದು ಜೊಮಾಟೊ ಮಾತ್ರವೇ ಅಲ್ಲ. ಆಹಾರ ಸಂಬಂಧಿ ನವೋದ್ದಿಮೆಗಳಲ್ಲಿ ಎಲ್ಲೂ ಸಕ್ಸಸ್ ಸ್ಟೋರಿ ಕಾಣುತ್ತಿಲ್ಲ ಎಂಬುದೇ ಆತಂಕ- ಹತಾಶೆಗಳಿಗೆ ಕಾರಣ. ಡಿಸೆಂಬರ್ 2015ರಲ್ಲಿ ಇದೇ ಕ್ಷೇತ್ರದ ಫುಡ್ ಪಾಂಡಾ 300 ಜನರನ್ನು ತೆಗೆದಿತ್ತು. ಜೊಮಾಟೊದಲ್ಲಿ ಸಹ ಸುಮಾರು ಇದೇ ಸಂಖ್ಯೆಯ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಟೈನಿ ಓಲ್ ಕಂಪನಿಯಲ್ಲಿ 150 ಮಂದಿ ಕೆಲಸ ಕಳೆದುಕೊಂಡರು. ಅರ್ಥಾತ್.. ಈ ಕ್ಷೇತ್ರದಲ್ಲಿ ಎಲ್ಲರ ಬೆಲ್ಟುಗಳು ಟೈಟಾಗತೊಡಗಿವೆ. ಡ್ಯಾಜೊ, ಲಾಂಗರ್ ಎಂಬ ಕಂಪನಿಗಳೆಲ್ಲ ಆಗಲೇ ಮುಚ್ಚಿವೆ.

ಇವೆಲ್ಲ ಎಡವುತ್ತಿರುವುದೆಲ್ಲಿ ಎಂದು ವಿಶ್ಲೇಷಿಸಿದಾಗ ಹಲವು ಪಾಠಗಳು ಸಿಗುತ್ತವೆ. ಅವು ನವೋದ್ದಿಮೆಯ ಉತ್ಸಾಹದಲ್ಲಿರುವ ಇತರ ವಲಯಗಳಿಗೂ ಬೆಳಕು ತೋರಬಲ್ಲವೇನೋ. ಆಹಾರವನ್ನು ತಂತ್ರಜ್ಞಾನ ಸೇವೆ ಉಪಯೋಗಿಸಿಕೊಂಡು ಮನೆಗಳಿಗೆ ತಲುಪಿಸುವ ಈ ಉದ್ಯಮ ಮಾದರಿ ಜನರ ನಡುವೆ ನೆಲೆಯೂರುವುದಕ್ಕೆ ಕೆಲವು ಸಮಯ ತೆಗೆದುಕೊಳ್ಳುವುದು ಸಹಜ. ಹೀಗಿರುವಾಗ ಈ ಕಣದಲ್ಲಿ ಒಂದೆರಡು ಆಟಗಾರರು ಎಚ್ಚರಿಕೆಯ ದೀರ್ಘಾವಧಿ ಆಟಕ್ಕೆ ತೆರೆದುಕೊಂಡಿದ್ದರೆ ಸರಿ ಇರುತ್ತಿತ್ತೇನೋ. ಆದರೆ ಒಂದರ ಹಿಂದೊಂದು ಜೊಮಾಟೊದಂಥವೇ ತಲೆಎತ್ತಿ, ಗ್ರಾಹಕರನ್ನು ಹೊಸ ವ್ಯವಸ್ಥೆಗೆ ವ್ಯಾಪಕವಾಗಿ ಸಜ್ಜುಗೊಳಿಸುವುದಕ್ಕೆ ಮೊದಲೇ ಪೈಪೋಟಿ ತೆರೆದುಕೊಂಡಿತು. ಇದರಿಂದ ಡೆಲಿವರಿ ಸಮಯದಲ್ಲಿ ವಿಪರೀತ ವಿನಾಯತಿಗಳ ಮೂಲಕ ಗ್ರಾಹಕರನ್ನು ತಮ್ಮಲ್ಲಿ ಇರಿಸಿಕೊಳ್ಳುವ ಪ್ರಯತ್ನ ಶುರುವಾಯ್ತು.

2014-15 ರ ಅವಧಿಯಲ್ಲಿ ಸುಮಾರು 55 ಆಹಾರಸೇವೆಯ ನವೋದ್ದಿಮೆಗಳು ಸೇರಿ 2450 ಕೋಟಿ ರುಪಾಯಿಗಳನ್ನು ಎತ್ತಿದವು. ನೀವು ಕುಳಿತಲ್ಲೇ ನಿಮ್ಮ ಮೆಚ್ಚಿನ ರೆಸ್ಟೊರೆಂಟ್ ಆಹಾರವನ್ನು ನಮ್ಮ ಮೂಲಕ ನಿಮ್ಮಲ್ಲಿಗೆ ತರಿಸಿಕೊಳ್ಳಬಹುದು ಎಂಬ ಐಡಿಯಾವನ್ನು ಗ್ರಾಹಕನಿಗೆ ಆಪ್ಯಾಯವಾಗಿ ಮೊದಲು ಮನದಟ್ಟುಮಾಡಬೇಕಾದ ಸಂದರ್ಭದಲ್ಲೇ ವಹಿವಾಟು ಪೈಪೋಟಿ ಶುರುವಾಗಿಹೋಯಿತು. ವಿನಾಯತಿಗಳ ಅಬ್ಬರದಲ್ಲಿ ಲಾಭ ಹೇಗೆ ಸಾಧ್ಯ? ಹೀಗಾಗಿಯೇ 7 ವರ್ಷಗಳ ನಂತರವೂ 23 ಕೇಂದ್ರಗಳನ್ನು ಹೊಂದಿರುವ ಜೊಮಾಟೊದಂಥ ಕಂಪನಿಗೆ ಲಾಭ ಇನ್ನಷ್ಟೇ ಬರಬೇಕು ಎಂಬ ಸ್ಥಿತಿ ಇದೆ.

ಸಹಜವಾಗಿ ಸಾಲ ಕೊಟ್ಟವರು, ಹೂಡಿಕೆ ಮಾಡಿದವರ ಕಣ್ಣಲ್ಲಿ ಸ್ವಲ್ಪ ಶಂಕೆ- ಎದೆಗುದಿ ಕಾಣಿಸಿಕೊಂಡಿದೆ. ನಾವಂದುಕೊಂಡಷ್ಟು ಮೌಲ್ಯ ಇವುಗಳದ್ದಲ್ಲವೇನೋ ಎನ್ನಿಸತೊಡಗಿದೆ… ಜೊಮಾಟೊ ಈವರೆಗೆ 224 ಕೋಟಿ ರುಪಾಯಿ ಹೂಡಿಕೆ ಪಡೆದಿದೆ ಎಂಬಂಶವನ್ನು ಪುಳಕದಿಂದ ನೋಡಿಯಾಗಿತ್ತು. ಈಗ ಪೇ ಬ್ಯಾಕ್ ಟೈಮ್. ಹಣ ಎತ್ತಿದ್ದನ್ನೇ ಬೆರಗಿನಿಂದ ಕೊಂಡಾಡಿಕೊಂಡಿರುವ ಕಾಲ ಮುಗಿದು, ಪೇ ಬ್ಯಾಕ್ ಏನು ಅಂತ ವಿಚಾರಿಸುವ ಕಾಲ. ಹಾಗೆಂದೇ ಶುರುವಾಗಿದೆ ಯಾರ ವರ್ಥ್ ಎಷ್ಟು ಎಂಬ ಮೌಲ್ಯ ಸಂಘರ್ಷ.

Leave a Reply