ಕ್ಯಾನ್ಸರ್ ಗೇ ಟಾಂಗ್ ಕೊಟ್ಟು ರಾಘವ್ ಚಂಡಾಕ್ ಐಸಿಎಸ್ಇ ಪರೀಕ್ಷೇಲಿ ಪಡೆದ ಮಾರ್ಕ್ಸ್ ಎಷ್ಟು ಗೊತ್ತಾ?!

ಡಿಜಿಟಲ್ ಕನ್ನಡ ಟೀಮ್

ಶಾಲೆ, ಟ್ಯೂಷನ್ – ಹೀಗೆ ಎಲ್ಲ ರೀತಿಯ ಸೌಕರ್ಯ ಇದ್ದರೂ ಸರಿಯಾಗಿ ಓದಿ ಪಾಸಾಗೋಕೆ  ಪರದಾಡೋರು ಸಾಕಷ್ಟಿದ್ದಾರೆ. ಆದರೆ, ಇಲ್ಲೊಬ್ಬ ಹುಡುಗ ಟ್ಯೂಷನ್ ವಿಚಾರ ಪಕ್ಕಕ್ಕಿರಲಿ, ಶಾಲೆಗೂ ಹೋಗಲಿಕ್ಕೆ ಆಗದವನು ಐಸಿಎಸ್ಇ ಪರೀಕ್ಷೆಯಲ್ಲಿ ಶೇ. 95.8 ರಷ್ಟು ಅಂಕ ಪಡೆದು ಎಲ್ಲರ ಹುಬ್ಬೇರಿಸಿದ್ದಾನೆ.

ಯೆಸ್, ಕೋಲ್ಕತಾ ಮೂಲದ 16 ವರ್ಷದ ರಾಘವ್ ಚಂಡಾಕ್ ಈ ಸಾಧನೆ ಮಾಡಿದ ಬುದ್ಧಿವಂತ ವಿದ್ಯಾರ್ಥಿ. ಈತ ಇತರರಂತೆ ಸಾಮಾನ್ಯ ವಿದ್ಯಾರ್ಥಿ ಅಲ್ಲ. ತನಗಿರುವ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರೋ ನತದೃಷ್ಟ. ಕಳೆದ ವರ್ಷ ಏಪ್ರಿಲ್ ನಿಂದ ಲಿಂಫೋಬ್ಲಾಸ್ಟಿಕ್ ಲುಕೇಮಿಯಾದಿಂದ ಬಳಲುತ್ತಿರುವ ಚಂಡಾಕ್ ಗೇ ಕೇವಲ ಎರಡು ತಿಂಗಳು ಮಾತ್ರ ಶಾಲೆಗೆ ಹೋಗಲು ಸಾಧ್ಯವಾಯಿತು.

ಆರಂಭದಲ್ಲೇ ಈತನ ಪರಿಸ್ಥಿತಿ ಬಗ್ಗೆ ಪೋಷಕರು ಶಾಲೆಗೆ ಮಾಹಿತಿ ನೀಡಿದರು. ಇದಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ ಶಾಲೆಯವರು, ‘ನೀವು ಆತನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಶಿಕ್ಷಣದ ಬಗ್ಗೆ ನಾವು ನೋಡಿಕೊಳ್ಳುತ್ತೇವೆ’ ಎಂದು ಪೋಷಕರಿಗೆ ಧೈರ್ಯ ತುಂಬಿದರು. ರಾಘವ್ ಮನೆಯಲ್ಲಿದ್ದುಕೊಂಡೇ ಬೇಕೆನಿಸಿದಾಗ ಯಾವುದೇ ಸಮಯದಲ್ಲೂ ಶಿಕ್ಷಕರಿಂದ ನೆರವು ಪಡೆಯುವ ಅವಕಾಶ ಕಲ್ಪಿಸಿಕೊಟ್ಟರು.

ಶಾಲೆಗೆ ಹೋಗುತ್ತಿದ್ದ ತನ್ನ ಸೋದರ ಸಂಬಂಧಿಯಿಂದ ಅಗತ್ಯ ನೋಟ್ಸ್ ಪಡೆಯುತ್ತಿದ್ದ ರಾಘವ್, ಚಿಕಿತ್ಸೆಯ ನಡುವೆಯೇ ಓದಿನತ್ತ ಗಮನ ಹರಿಸಿದ. ತನಗಿರುವ ಸಮಸ್ಯೆಯ ನಡುವೆಯೂ ರಾಘವ್ ಈ ರೀತಿ ವಿದ್ಯಾಭ್ಯಾಸ ಮುಂದುವರಿಸುತ್ತಾನೆ ಎಂಬ ಕಲ್ಪನೆ ಸ್ವತಃ ಆತನ ಕುಟುಂಬದವರಿಗೇ ಇರಲಿಲ್ಲ.

ಇಲ್ಲಿ ಮೆಚ್ಚಬೇಕಾದ್ದು ರಾಘವ್ ನ ಆತ್ಮಸ್ಥೈರ್ಯ. ತನಗಿರುವ ಕ್ಯಾನ್ಸರ್ ಬಗ್ಗೆ ಆತ ಹೆದರಲಿಲ್ಲ. ಅದರ ಬಗ್ಗೆ ಚಿಂತೆ ಮಾಡೋದು ಬಿಟ್ಟು ಓದಿನತ್ತ ಚಿತ್ತ ಕೇಂದ್ರೀಕರಿಸಿದ. ಟಾಟಾ ಮೆಡಿಕಲ್ ಸೆಂಟರ್ ನಲ್ಲಿ ಕಿಮೊಥೆರಪಿ ಮಾಡಿಸಿಕೊಳ್ಳಲು ಹೋದಾಗ ಸಿಕ್ಕ ಬಿಡುವಿನ ಸಮಯವನ್ನೂ ಆತ ವ್ಯಯ ಮಾಡದೇ ಓದಿನಲ್ಲಿ ಮಗ್ನನಾಗುತ್ತಿದ್ದ. ಆತನ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ಗರಿಷ್ಠ ಅಂಕ ಬಂದಿದೆ. ಇದು ಕಡಿಮೆ ಸಾಧನೆ ಅಲ್ಲ. ಸಣ್ಣಪುಟ್ಟ ಸಮಸ್ಯೆಯನ್ನೇ ನೆಪ ಮಾಡಿಕೊಂಡು ಓದಿನಿಂದ ಪಲಾಯನ ಮಾಡುವವರಿಗೆ ಈತ ನಿಜಕ್ಕೂ ಪ್ರೇರಕ ಶಕ್ತಿ.

ಫುಟ್ಬಾಲ್ ಪ್ರೇಮಿಯಾಗಿರುವ ರಾಘವ್ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯಲ್ಲಿ ವ್ಯಾಸಂಗ ಮಾಡುವ ಗುರಿ ಹೊಂದಿದ್ದಾನೆ. ಸಮಸ್ಯೆ ಯಾವುದಾದರೇನು? ಸಾಧಿಸುವ ಛಲ ಇರಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಅತನಿಗೆ ಶುಭವಾಗಲಿ ಎಂದು ಎಲ್ಲರೂ ಹಾರೈಸೋಣ.

Leave a Reply