ಪ್ರಧಾನಿ ಮೋದಿ ಶಿಕ್ಷಣ ಪ್ರಮಾಣಪತ್ರಗಳ ಬಹಿರಂಗ, ಅಲ್ಲೂ ತೆಗೆದಿದೆ ಕೇಜ್ರಿವಾಲ್ ಪಾರ್ಟಿ ‘ನಕಲಿ ರಾಗ’!

ಡಿಜಿಟಲ್ ಕನ್ನಡ ಟೀಮ್

ಪ್ರಧಾನಿ ನರೇಂದ್ರ ಮೋದಿ ಶಿಕ್ಷಣದ ಬಗ್ಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದರು. ಅವರ ವಿದ್ಯಾರ್ಹತೆ ಬಗ್ಗೆ ಒಂದಷ್ಟು ಅರೋಪಗಳನ್ನೂ ಮಾಡಿದ್ದರು.
ಅವರಿಗ್ಯಾಕೆ ಸಂಕಟ ಅಂತ ಇದೀಗ ಬಿಜೆಪಿ ಮುಖಂಡರು ಮೋದಿ ಅವರ ಶಿಕ್ಷಣಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ಮೋದಿ ಅವರು ಪಡೆದಿರುವ ದೆಹಲಿ ವಿಶ್ವವಿದ್ಯಾಲಯದ ಬಿಎ ಪದವಿ ಹಾಗೂ ಗುಜರಾತ್ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರ ವಿಷಯದ ಸ್ನಾತಕೋತ್ತರ ಪದವಿ ಪ್ರಮಾಣ ಪತ್ರದ ಪ್ರತಿಗಳನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನವದೆಹಲಿಯಲ್ಲಿ ಸೋಮವಾರ ಬಿಡುಗಡೆ ಮಾಡಿದ್ದಾರೆ. ಆ ಮೂಲಕ ಕೇಜ್ರಿವಾಲ್ ಎತ್ತಿದ್ದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ‘ಅರವಿಂದ ಕೇಜ್ರಿವಾಲ್ ಅವರು ನರೇಂದ್ರ ಮೋದಿ ಅವರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರ ಘನತೆಗೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ. ಈಗ ಕೇಜ್ರಿವಾಲ್ ಅವರು ಮೋದಿ ಅವರನ್ನಷ್ಟೇ ಅಲ್ಲ, ಇಡೀ ದೇಶದ ಜನತೆಯ ಬಳಿ ಕ್ಷಮೆ ಯಾಚಿಸಬೇಕು’ ಎಂದು ಅಮಿತ್ ಶಾ ಪ್ರಮಾಣ ಪತ್ರ ಬಿಡುಗಡೆ ನಂತರ ಆಗ್ರಹಿಸಿದ್ದಾರೆ.

ಆದರೆ ಇದಕ್ಕೆ ಕೇಜ್ರಿವಾಲ್ ಪಾರ್ಟಿ ಕೂಡ ಉತ್ತರ ಸಿದ್ಧ ಮಾಡಿಟ್ಟುಕೊಂಡಿತ್ತು ಎಂದು ಕಾಣುತ್ತದೆ. ತಕ್ಷಣವೇ ಈ ಬಗ್ಗೆ ಪ್ರತಿಕ್ರಿಯಿಸಿರುವ ಆಮ್ ಆದ್ಮಿ ನಾಯಕ ಅಶುತೋಷ್, ‘ಇವು ನಕಲಿ ದಾಖಲೆಗಳು. ಪ್ರಮಾಣ ಪತ್ರದಲ್ಲಿನ ಹೆಸರುಗಳು ತಾಳೆ ಆಗುತ್ತಿಲ್ಲ’ ಅಂತ ಮೊಸರಲ್ಲಿ ಕಲ್ಲು ಹುಡುಕಿದ್ದಾರೆ. ಪ್ರಮಾಣ ಪತ್ರ ಬಿಡುಗಡೆ, ವಾದ-ಪ್ರತಿವಾದ ಮುಂದುವರಿದಿದೆ.

ಯಾವುದಾದರೂ ವಿಷಯದ ಮೇಲೆ ರಾಜಕೀಯ ಮಾಡಲೇಬೇಕು ಅಂತ ಹೊರಟರೆ ಅದಕ್ಕೆ ಕೊನೆ, ಮೊದಲು ಎಂಬುದು ಇರುವುದಿಲ್ಲ. ಅವರೊಂದು ಹೇಳುತ್ತಾರೆ, ಇವರೊಂದು ಹೇಳುತ್ತಾರೆ. ಇದು ಹೀಗೆಯೇ ಮುಂದುವರಿಯುತ್ತದೆ. ಆದರೆ ಇಲ್ಲಿ ಗಮನಿಸಬೇಕಿರುವ ಸಂಗತಿ ಎಂದರೆ ಪ್ರಧಾನಿ ಮೋದಿ ಅವರಾಗಲಿ ಅಥವಾ ಸಾರ್ವಜನಿಕ ಜೀವನದಲ್ಲಿರುವ ಈ ದೇಶದ ಇನ್ನಾವುದೇ ವ್ಯಕ್ತಿಯಾಗಲಿ ಅಪೇಕ್ಷಣೀಯ ಎನ್ನಿಸಿದ ಸಂದರ್ಭದಲ್ಲಿ ತಮ್ಮ ವಿದ್ಯಾರ್ಹತೆ ಬಗ್ಗೆ ನೈಜ ಮಾಹಿತಿ ನೀಡುವುದು ಸರಿಯಾದ ಕ್ರಮ. ಆದರೆ, ಸಾಮಾನ್ಯ ಜನರಿಗೆ ತಮ್ಮ ನಾಯಕರಿಂದ ಬೇಕಿರುವುದು ಉತ್ತಮ ಆಡಳಿತ ಮತ್ತು ಕೆಲಸ. ಅದನ್ನು ಬಿಟ್ಟು ಅವನೇನು ಓದಿದ್ದಾನೆ, ಅವನೆಷ್ಟು ಪಂಡಿತ ಎಂಬುದನ್ನು ಎಂಬುದನ್ನು ನೋಡಲು ಹೋಗುವುದಿಲ್ಲ. ಅದರಿಂದ ಜನರಿಗೆ ಆಗಬೇಕಾದ್ದೂ ಏನೂ ಇಲ್ಲ. ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿ ವ್ಯವಸ್ಥೆಯ ದಾರಿ ತಪ್ಪಿಸಿದ್ದರೆ ಅದಕ್ಕವನು ಉತ್ತರದಾಯಿ ಆಗುತ್ತಾನೆ. ಆದರೆ ಅದ್ಯಾವುದೂ ಇಲ್ಲದಿರುವಾಗ ಒಬ್ಬ ವ್ಯಕ್ತಿಯ ಕಲಿಕೆ ವಿಷಯವನ್ನು ದೇಶದ ಸಮಸ್ಯೆ ಎಂಬಂತೆ ಬಿಂಬಿಸುತ್ತಿರುವುದರಿಂದ ಯಾರಿಗೂ ಲಾಭ ಇಲ್ಲ. ಕೇಜ್ರಿವಾಲ್ ಅವರಿಗಂತೂ ಏನೂ ಸಿಗುವುದಿಲ್ಲ.

ಏಕೆಂದರೆ ದೆಹಲಿ ಮತದಾರರು ಕೇಜ್ರಿವಾಲ್ ಅವರ ಐಐಟಿ ಸರ್ಟಿಫಿಕೇಟ್ ನೋಡಿ ಮತ ಹಾಕಿಲ್ಲ. ಅವರು ಚುನಾವಣೆಗೆ ಮುನ್ನ ನೀಡಿದ್ದ ಆಶೋತ್ತರಗಳನ್ನು ಈಡೇರಿಸಬೇಕು ಅಂತ ಆರಿಸಿ ಕಳುಹಿಸಿದ್ದಾರೆ. ಹೀಗಾಗಿ ಈ ವಿಷಯದಲ್ಲಿ ಕೇಜ್ರಿವಾಲ್ ಮತ್ತವರ ಪಾರ್ಟಿ ಅನಗತ್ಯ ಹಗ್ಗಜಗ್ಗಾಟ ಕೈಬಿಟ್ಟು ದೆಹಲಿಯಲ್ಲಿ ಆಗಬೇಕಿರುವ ಕೆಲಸಗಳತ್ತ ಗಮನ ಹರಿಸುವುದು ಉತ್ತಮವೇನೋ. ಮೋದಿ ಅವರ ವಿರುದ್ಧ ಅಸ್ತ್ರಪ್ರಯೋಗ ಮಾಡಲೇಬೇಕು ಎಂದಾದರೆ, ಅವರ ಆಡಳಿತ ವೈಖರಿ, ಮುರಿದ ಮಾತು, ಯೋಜನೆಗಳ ವೈಫಲ್ಯ – ಇಂತಹ ವಿಷಯಗಳನ್ನು ಕೈಗೆತ್ತಿಕೊಳ್ಳಬಹುದು. ಇದರಿಂದ ದೇಶಕ್ಕೂ ಒಳಿತಾಗುತ್ತದೆ, ಆ ಒಳಿತು ಮಾಡಿಸಿದ ಶ್ರೇಯಸ್ಸು ಇದೇ ಕೇಜ್ರಿವಾಲ್ ಅವರಿಗೇ ಸಲ್ಲುತ್ತದೆ.

Leave a Reply