
ಬಸವ ಜಯಂತಿ ಅಂಗವಾಗಿ ಬೆಂಗಳೂರಿನ ಚಾಲುಕ್ಯ ವೃತ್ತದ ಬಳಿ ಇರುವ ಬಸವಣ್ಣ ಪ್ರತಿಮೆಗೆ ಸೋಮವಾರ ಗೌರವ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಮಹದೇವ ಪ್ರಸಾದ್, ಡಾ.ಜಿ.ಪರಮೇಶ್ವರ್ ಮತ್ತಿತರ ಕಾಂಗ್ರೆಸ್ ಮುಖಂಡರು
ಡಿಜಿಟಲ್ ಕನ್ನಡ ಟೀಮ್
ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಮೇ 11 ರಂದು ಪ್ರಕಟವಾಗಲಿದೆ. ಅಂದು ಮಧ್ಯಾಹ್ನ ಅಂತರ್ಜಾಲದಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದ್ದು, ಮೇ 12 ರಂದು ಎಲ್ಲ ಶಾಲೆಗಳಲ್ಲೂ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣದ ಮುಖ್ಯ ಕಾರ್ಯದರ್ಶಿ ಅಜಯ್ ಶೇಟ್ ಸೋಮವಾರ ತಿಳಿಸಿದ್ದಾರೆ.
ರಾಜ್ಯಾದ್ಯಂತ ಸುಮಾರು 8 ಲಕ್ಷ ವಿದ್ಯಾರ್ಥಿಗಳು 10 ನೇ ತರಗತಿ ಪರೀಕ್ಷೆ ಬರೆದಿದ್ದಾರೆ. ದ್ವಿತೀಯ ಪಿಯುಸಿ ಫಲಿತಾಂಶ ಮೇ 18 ಅಥವಾ 20 ರಂದು ಪ್ರಕಟಿಸಲು ಸಿದ್ಧತೆ ನಡೆದಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅವರು ಹೇಳಿದ್ದಾರೆ.
ರಾಹುಲ್ ಗಾಂಧಿಗೆ ಜೀವ ಬೆದರಿಕೆ, ಹೆಚ್ಚಿನ ಭದ್ರತೆಗಾಗಿ ಮನವಿ
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಚಿಂದಿ, ಚಿಂದಿಯಾಗಿ ಉಡಾಯಿಸುತ್ತೇವೆ ಎಂಬ ಬೆದರಿಕೆ ಪತ್ರ ಕೇಂದ್ರದ ಮಾಜಿ ಸಚಿವ ವಿ. ನಾರಾಯಣಸ್ವಾಮಿ ಅವರ ನಿವಾಸಕ್ಕೆ ಬಂದಿದೆ. ಮೇ 16 ರಂದು ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಮಂಗಳವಾರ ಪುದುಚೇರಿಯ ಕರೈಕಲ್ ಗೆ ಆಗಮಿಸಲಿದ್ದು, ಸಾರ್ವಜನಿಕ ಮೆರವಣಿಗೆಯಲ್ಲಿ ತೆರಳಿ ಭಾಷಣ ಮಾಡಲಿದ್ದಾರೆ. ಹಿಂದಿನ ಕಾಂಗ್ರೆಸ್ ಸರಕಾರದ ಹಲವು ನಿರ್ಧಾರಗಳಿಂದಾಗಿ ಇಲ್ಲಿನ ಬಂದರು ಪ್ರದೇಶದಲ್ಲಿ ಸರಕು ತುಂಬುವ ಕೆಲಸಗಾರರಿಗೆ ಸಾಕಷ್ಟು ಸಮಸ್ಯೆಯಾಗಿದೆ. ಅಲ್ಲದೆ ಹಲವು ಕೈಗಾರಿಕೆಗಳು ಮುಚ್ಚಿವೆ. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಬೆದರಿಕೆ ಪತ್ರದಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕೇಂದ್ರ ಗೃಹ ಇಲಾಖೆ ಸಂಪರ್ಕಿಸಿರುವ ಕಾಂಗ್ರೆಸ್ ಮುಖಂಡರು, ರಾಹುಲ್ ಗಾಂಧಿಗೆ ಹೆಚ್ಚಿನ ಭದ್ರತೆ ನೀಡುವಂತೆ ಮನವಿ ಮಾಡಿದ್ದಾರೆ.
ಉತ್ತರಾಖಂಡ 9 ಬಂಡಾಯ ಶಾಸಕರಿಗೆ ಸುಪ್ರೀಂ ಶಾಕ್, ರಾವತ್ ಹಾದಿ ಸುಗಮ
ಉತ್ತರಾಖಂಡದಲ್ಲಿ ಮಂಗಳವಾರ ನಡೆಯಲಿರುವ ಬಹುಮತ ಸಾಬೀತು ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ನ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಹಾದಿ ಸುಗಮವಾಗಿದೆ. ಅನರ್ಹಗೊಂಡಿರುವ 9 ಬಂಡಾಯ ಶಾಸಕರು ಮತ ಚಲಾಯಿಸುವಂತಿಲ್ಲ ಎಂದು ನೈನಿತಾಲ್ ಹೈಕೋರ್ಟ್ ನೀಡಿರುವ ತೀರ್ಪಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿರುವುದರಿಂದ ರಾವತ್ ನಿರಾಳರಾಗಿದ್ದಾರೆ.
ಈಗ 9 ಬಂಡಾಯ ಶಾಸಕರ ಅನರ್ಹತೆಯಿಂದ 70 ಸದಸ್ಯರ ವಿಧಾನಸಭೆ ಬಲ 61ಕ್ಕೆ ಇಳಿದಿದೆ. ಹೀಗಾಗಿ ಕಾಂಗ್ರೆಸ್ 31 ಮತ ಗಳಿಸಿದರೂ ಮತ್ತೆ ಸರ್ಕಾರ ರಚಿಸಬಹುದಾಗಿದೆ. ಬಿಎಸ್ಪಿಯ 2, ಉತ್ತರಾಖಂಡ ಕ್ರಾಂತಿ ದಳದ 1 ಮತ್ತು ಮೂವರು ಪಕ್ಷೇತರರ ಪೈಕಿ, ಕಾಂಗ್ರೆಸ್ 4 ಮತಗಳನ್ನು ಪಡೆಯುವುದು ಬಹುತೇಕ ಖಚಿತವಾಗಿದೆ. ಆದರೆ, ಈ ಹಂತದಲ್ಲಿ ತಮ್ಮದೇ ಪಕ್ಷದ 27 ಶಾಸಕರ ಪೈಕಿ ಯಾರೂ ಉಲ್ಟಾ ಹೊಡೆಯದಂತೆ ನೋಡಿಕೊಳ್ಳುವ ಅನಿವಾರ್ಯತೆ ಕೂಡ ಕಾಂಗ್ರೆಸ್ ಗೆ ಎದುರಾಗಿದೆ. ಒಂದು ವೇಳೆ ಕಾಂಗ್ರೆಸ್ ಬಹುಮತ ಸಾಬೀತು ಪಡಿಸಿದರೆ ಕೇಂದ್ರ ಸರಕಾರಕ್ಕೆ ತೀವ್ರ ಮುಖಭಂಗವಾಗಲಿದೆ.
ವೈದ್ಯ ಮತ್ತು ಎಂಜಿನಿಯರಿಂಗ್ ಶಿಕ್ಷಣ ಶುಲ್ಕದಲ್ಲಿ ಹೆಚ್ಚಳ
ಈ ವರ್ಷ ವೈದ್ಯ, ದಂತ ವೈದ್ಯ ಹಾಗೂ ಎಂಜಿನಿಯರಿಂಗ್ ಕೋರ್ಸ್ ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಶೇ. 10 ರಿಂದ 20 ರಷ್ಟು ಹೆಚ್ಚುವರಿ ಶುಲ್ಕ ಭರಿಸಬೇಕಾಗುವ ಸಾಧ್ಯತೆ ಇದೆ.
ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಸರ್ಕಾರದೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ, ಶೇ. 10 ರಿಂದ 30 ರಷ್ಟು ಶುಲ್ಕ ಹೆಚ್ಚಳದ ಪ್ರಸ್ತಾವನೆ ನೀಡಿದೆ. ಈ ಪ್ರಸ್ತಾವನೆಗೆ ವೈದ್ಯ ಮತ್ತು ಎಂಇನಿಯರಿಂಗ್ ಕಾಲೇಜು ನಡೆಸುತ್ತಿರುವ ಸಚಿವರು, ಆಡಳಿತ ಪಕ್ಷದ ಮುಖಂಡರು ಹಾಗೂ ಶಾಸಕರು ಸಹ ಪ್ರಭಾವ ಬೀರಿದ್ದಾರೆ. ಎಂಜಿನಿಯರಿಂಗ್ ಗೆ ಶೇ. 10 ಹಾಗೂ ವೈದ್ಯ ಶಿಕ್ಷಣಕ್ಕೆ ಶೇ. 20 ರಷ್ಟು ಶುಲ್ಕ ಹೆಚ್ಚಳ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಗೊತ್ತಾಗಿದೆ.
ರಾಜ್ಯದಲ್ಲಿ ಎಚ್1 ಎನ್1 ಭೀತಿ
ರಾಜ್ಯದಲ್ಲಿ ಮತ್ತೊಮ್ಮೆ ಎಚ್1 ಎನ್1 ಜ್ವರದ ಭೀತಿ ಎದುರಾಗಿದ್ದು, ರಾಜ್ಯದೆಲ್ಲೆಡೆ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ಸೂಚನೆ ನೀಡಿದೆ. ಬೀದರ್ ನಲ್ಲಿ ಎಚ್1 ಎನ್1 ಕಾಣಿಸಿಕೊಂಡ ಹಿನ್ನೆಲೆಯಲ್ಲಿ 1.50 ಲಕ್ಷ ಕೋಳಿಗಳನ್ನು ಕೊಲ್ಲಲಾಗಿದೆ.
ರಾಜ್ಯದ ರಮೇಶ್ ಜಿಗಜಿಗಣಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ?
ಕಾಂಗ್ರೆಸ್ ನಲ್ಲಿ ದಲಿತ ಮುಖ್ಯಮಂತ್ರಿ ಕೂಗು ಎದ್ದಿರುವ ಬೆನ್ನಲ್ಲೇ ಈ ಸಮುದಾಯದ ಮನ ಓಲೈಕೆಗೆ ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿದೆ. ಪರಿಣಾಮ ಬಿಜಾಪುರ ಸಂಸದ ರಮೇಶ್ ಜಿಗಜಿಗಣಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡುವ ಬಗ್ಗೆ ದೆಹಲಿ ಬಿಜೆಪಿ ವಲಯದಲ್ಲಿ ಚರ್ಚೆ ಆರಂಭವಾಗಿವೆ.
ಲಿಂಗಾಯತ ಸಮುದಾಯದ ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದು, ರಮೇಶ್ ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡುವ ಮೂಲಕ ಪರಿಶಿಷ್ಟ ಸಮುದಾಯದ ಮೇಲೆ ಪ್ರಭಾವ ಬೀರುವ ಪ್ರಯತ್ನ ಇದಾಗಿದೆ.
ಒಂದು ವೇಳೆ ಕಾಂಗ್ರೆಸ್ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದರೆ ಅಥವಾ ಮುಂದಿನ ವಿಧಾನಸಭೆ ಚುನಾವಣೆ ವೇಳೆ ದಲಿತರಿಗೆ ಮುಖ್ಯಮಂತ್ರಿ ಸ್ಥಾನದ ಭರವಸೆ ನೀಡಿದರೆ, ನಾವು ಈಗಾಗಲೇ ದಲಿತರಿಗೆ ಸ್ಥಾನಮಾನ ಕೊಟ್ಟಾಗಿದೆ ಎಂಬ ಸಂದೇಶ ರವಾನಿಸುವುದು ಬಿಜೆಪಿ ತಂತ್ರವಾಗಿದೆ.
ನಾಳೆ ಏಕಲವ್ಯ ಪ್ರಶಸ್ತಿ ಪ್ರದಾನ
ಕ್ರೀಡಾಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ 15 ಮಂದಿಗೆ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಏಕಲವ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. 2014ನೇ ಸಾಲಿಗೆ 15 ಮಂದಿ ಏಕಲವ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇವರಿಗೆ ಎರಡು ಲಕ್ಷ ರೂ. ನಗದು ಮತ್ತು ಪ್ರಶಸ್ತಿ ಫಲಕ ನೀಡಲಾಗುತ್ತಿದೆ.
ಎಂ.ಅರವಿಂದ್ (ಈಜು), ಆಕಾಶ್ ಆರಾಧ್ಯ (ರೋಲರ್ ಸ್ಕೇಟಿಂಗ್), ಡಾ.ಖ್ಯಾತಿ ಎಸ್.ವಖಾರ್ಯ (ಅಥ್ಲೆಟಿಕ್ಸ್), ಸುನ್ನುವಂಡ ಕುಶಾಲಪ್ಪ ಉತ್ತಪ್ಪ (ಹಾಕಿ), ಮಲ್ಲಪ್ರಭ ವೈ ಜಾದವ್ (ಜೂಡೋ), ಕೆ.ಟ್ವಿಶಾ (ಕಯಾಕಿಂಗ್ ಮತ್ತು ಕೆನೋಯಿಂಗ್), ಕೆ.ಪುರುಷೋತ್ತಮ್ (ರೈಫಲ್ ಶೂಟಿಂಗ್), ವಿನೀತ್ ಮ್ಯಾನ್ಯುಯಲ್ (ಬ್ಯಾಡ್ಮಿಂಟನ್), ಸುಷ್ಮಿತಾ ಪವಾರ್ (ಕಬಡ್ಡಿ), ಶರ್ಮಾದಾ ಬಾಲು (ಲಾನ್ ಟೆನ್ನಿಸ್), ಅರ್ಚನಾ ಗಿರೀಶ್ ಕಾಮತ್ (ಟೇಬಲ್ ಟೆನ್ನಿಸ್), ನಿಶಾ ಜೋಸೆಫ್ (ವಾಲಿಬಾಲ್), ಎನ್.ಲೋಕೇಶ್ (ಜಿಮ್ನಾಸ್ಟಿಕ್), ಲಕ್ಷ್ಮಣ್ ಸಿ.ಕುರಣಿ (ಸೈಕ್ಲಿಂಗ್), ಎಂ.ನಿರಂಜನ್ (ಪ್ಯಾರಾ ಈಜು) ಅವರಿಗೆ ಏಕಲವ್ಯ ಪ್ರಶಸ್ತಿ ನೀಡಲಾಗುತ್ತಿದೆ. ಹಿರಿಯ ತರಬೇತುದಾರರು ಮತ್ತು ಕ್ರೀಡಾಪಟುಗಳಿಗಾಗಿ ಜೀವಮಾನ ಪ್ರಶಸ್ತಿ ನೀಡಲಾಗುವುದು.
ಇನ್ನುಳಿದಂತೆ ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲುಗಳು..
- ಇತ್ತೀಚೆಗಷ್ಟೇ ಬಳಕೆದಾರರಿಗೆ ಕಾಲ್ ಬ್ಯಾಕ್, ವಾಯ್ಸ್ ಮೇಲ್ ಸೌಲಭ್ಯ ಕಲ್ಪಿಸುವುದಾಗಿ ತಿಳಿಸಿದ್ದ ವಾಟ್ಸಪ್, ಈಗ ವಿಡಿಯೋ ಕಾಲ್ ಸೌಲಭ್ಯವನ್ನು ಕಲ್ಪಿಸುವತ್ತ ಗಮನ ಹರಿಸುತ್ತಿದೆ.
- ಸದ್ಯ ತೆರವಾಗಿರುವ ಟೀಂ ಇಂಡಿಯಾ ಕೋಚ್ ಸ್ಥಾನದ ಆಯ್ಕೆ ಬಗ್ಗೆ ಬಿಸಿಸಿಐನಲ್ಲಿ ಚರ್ಚೆ ಆರಂಭವಾಗಿದ್ದು, ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ಮಾಜಿ ನಾಯಕ ಡೇನಿಯಲ್ ವೆಟೋರಿ ಅವರ ಹೆಸರನ್ನು ಶಿಫಾರಸ್ಸು ಮಾಡಿದ್ದಾರೆ.
- ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್ ನಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಇನ್ಫೋಸಿಸ್ ಫೌಂಡೇಷನ್ ಆರ್ಥಿಕ ನೆರವು ನೀಡಲು ಮುಂದಾಗಿದೆ. ಈ ಯೋಜನೆಗಾಗಿ ₹ 5 ಕೋಟಿ ಮೀಸಲಿಡಲಾಗಿದ್ದು, ಪ್ರತಿ ವರ್ಷ 50 ವಿದ್ಯಾರ್ಥಿಗಳಿಗೆ ನೆರವಾಗಲು ನಿರ್ಧರಿಸಲಾಗಿದೆ.
- ಅಗಸ್ಟಾ ವೆಸ್ಟ್ಲ್ಯಾಂಡ್ ಹಗರಣದ ಕುರಿತಂತೆ ರಾಜ್ಯಸಭೆಯಲ್ಲಿ ಇತ್ತೀಚೆಗೆ ಬಿಜೆಪಿ ಸದಸ್ಯ ಸುಬ್ರಹ್ಮಣ್ಯಸ್ವಾಮಿ ಅವರ ಹೇಳಿಕೆಗೆ ಪೂರಕವಾಗಿ ಯಾವುದೇ ದಾಖಲೆಗಳನ್ನು ಸ್ಪೀಕರ್ ಆಗಲಿ ಅಥವಾ ತಾವಾಗಲಿ ಅಧಿಕೃತಗೊಳಿಸಿಲ್ಲ ಎಂದು ಉಪಾಧ್ಯಕ್ಷ ಪಿ.ಜೆ ಕುರಿಯನ್ ತಿಳಿಸಿದ್ದಾರೆ.