ಹೈಸ್ಕೂಲ್ ಮಕ್ಕಳಿಗೆ ಪಾಠ ಮಾಡೋ ಮೇಸ್ಟ್ರುಗಳೇ ಹೈಸ್ಕೂಲ್ ಮಟ್ಟದ ಪರೀಕ್ಷೇಲಿ ಫೇಲು! ಮಕ್ಕಳ ಸ್ಥಿತಿ ಆ ಸರಸ್ವತಿಗೇ ಪ್ರೀತಿ!!

Crossing out problems and writing solutions on a blackboard.

 

ಡಿಜಿಟಲ್ ಕನ್ನಡ ಟೀಮ್

ನಮ್ಮ ಮಕ್ಕಳು ಚೆನ್ನಾಗಿ ಓದಿ ವಿದ್ಯಾವಂತರಾಗ ಬೇಕು ಎಂಬುದು ಪ್ರತಿಯೊಬ್ಬ ಪೋಷಕರ ಮಹದಾಸೆ. ತಮ್ಮ ಹೊಟ್ಟೆಬಟ್ಟೆ ಕಟ್ಟಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರೋರ ಸಂಖ್ಯೆ ಕಡಿಮೆಯೇನೂ ಇಲ್ಲ. ತಮಗೆ ಕಷ್ಟ ಆದರೂ ಪರವಾಗಿಲ್ಲ, ತಮ್ಮ ಮಕ್ಕಳು ಉದ್ಧಾರ ಆಗಬೇಕು ಅಂತ ತಮ್ಮ ಇತಿಮಿತಿ ಮೀರಿ ಉತ್ತಮ ಶಾಲೆಗಳನ್ನು ಹುಡುಕಿ ಮಕ್ಕಳನ್ನು ಅಲ್ಲಿಗೆ ಸೇರಿಸುತ್ತಾರೆ. ಒಳ್ಳೆಯ ಶಿಕ್ಷಣ ಸಿಗುತ್ತೆ ಅಂತಾ.

ಆದರೆ ಇಲ್ಲೊಂದು ಯಡವಟ್ಟಿನ ವಿಷಯ ಇದೆ. ನಮ್ ಮಕ್ಕಳು ಕಲಿಯುವ ಶಾಲೆಯಲ್ಲಿ ಉತ್ತಮ ಶಿಕ್ಷಣ ಸಿಗುತ್ತೆ ಅಂತಾ ಅಂದುಕೊಂಡಿದ್ದರೆ, ಅದು ಶುದ್ಧ ಸುಳ್ಳು ಅಂತಿದೆ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ ಸಿ) ಶಿಕ್ಷಕರಿಗಾಗಿ ನಡೆಸಿರೋ ಪರೀಕ್ಷೆ. ಯಾಕಪ್ಪಾ ಅಂತಂದರೆ 10ನೇ ತರಗತಿ ಮಟ್ಟದ ಈ ಪರೀಕ್ಷೇಲಿ ಬರೋಬ್ಬರಿ ಶೇ. 70 ರಷ್ಟು ಶಿಕ್ಷಕರು ಜಸ್ಟ್ ಪಾಸ್ ಕೂಡ ಆಗಿಲ್ಲ!

ನಿಜಕ್ಕೂ ಇದು ಆಘಾತಕಾರಿ ಸಂಗತಿ ಅಲ್ವೇ..? ನಮ್ ಮಕ್ಕಳಿಗೆ ಪಾಠ ಮಾಡೋ ಮೇಷ್ಟ್ರುಗಳಿಗೆ ಎಸ್ಸೆಸ್ಸೆಲ್ಸಿ ಮಟ್ಟದ ಪರೀಕ್ಷೆ ಪಾಸು ಮಾಡಲು ಅಗಿಲ್ಲ ಅಂದ್ಮೇಲೆ ಅವರಿಂದ ಮಕ್ಕಳಿಗೆ ಎಂಥ ಶಿಕ್ಷಣ ಸಿಗುತ್ತಿರಬಹುದು? ಇದನ್ನು ಕಲ್ಪಿಸಿಕೊಂಡರೆ ಭಯ ಆಗುತ್ತೆ. ಐಐಎಸ್ಸಿ 2015 ರ ಜೂನ್ ನಿಂದ 2016 ರ ಮಾರ್ಚ್ ವರೆಗೂ ವಿಜ್ಞಾನ ಮತ್ತು ಗಣಿತ ವಿಷಯ ಕುರಿತು ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಪ್ರೌಢಶಾಲೆಗಳ 1313 ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ ಏರ್ಪಡಿಸಿತ್ತು. ಕೊನೆಯಲ್ಲಿ ಅವರಿಗೆ ಪರೀಕ್ಷೆಯನ್ನೂ ನಡೆಸಿತ್ತು. ಈ ಪರೀಕ್ಷೆಯಲ್ಲಿ ಬಹುತೇಕ ಶಿಕ್ಷಕರಿಗೆ ಶೇ. 35 ರಷ್ಟು ಅಂಕ ಪಡೆಯಲು ಸಾಧ್ಯವಾಗದೆ ದಬಾಕಿಕೊಂಡಿದ್ದಾರೆ.

ಈ ವಿಷಯ ಕೇಳಿ ನಿಮಗೆ ಶಾಕ್ ಆಗಿದ್ದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ. ಹಾರ್ಟ್ ಅಟ್ಯಾಕ್ ಆಗದಿದ್ದರೆ ಅದು ನಮ್ಮೆಲ್ಲರ ಪುಣ್ಯ. ಪಾಠ ಮಾಡೋ ಶಿಕ್ಷಕರೇ ಈ ಗತಿಯಾದರೆ, ಅವರಿಂದ ಮಕ್ಕಳಿಗೆ ಯಾವ ಮಟ್ಟದ ಶಿಕ್ಷಣ ಸಿಗಲು ಸಾಧ್ಯ? ಕಷ್ಟು ಆದರೂ ಪೋಷಕರು ಜೀರ್ಣಿಸಿಕೊಳ್ಳಬೇಕಾದ ವಿಷಯ ಇದು. ಈ ಪರಿಸ್ಥಿತಿನಾ ಪೋಷಕರು, ಅವರಿಗಿಂತ ಮಿಗಿಲಾಗಿ ಶಿಕ್ಷಣ ಇಲಾಖೆ ಅರ್ಥಮಾಡಿಕೊಳ್ಳಬೇಕು. ಬೋಧಕರ ಗುಣಮಟ್ಟ ಸುಧಾರಣೆಗೆ ತಕ್ಣಣ ಕ್ರಮ ತೆಗೆದುಕೊಳ್ಳಬೇಕು. ಮೊದಲು ಅವರಿಗೆ ಕಲಿಸಿ, ನಂತರ ಅವರಿಂದ ಮಕ್ಕಳಿಗೆ ಕಲಿಸಬೇಕು. ಇಲ್ಲವಾದರೆ ರಾಜ್ಯದ ಶಿಕ್ಷಣ ವ್ಯವಸ್ಥೆ ಹಳ್ಳ ಹಿಡಿದು ಹೋಗುತ್ತದೆ.

ಈ ಬೃಹಸ್ಪತಿ ಶಿಕ್ಷಕರ ಬಗ್ಗೆ ಐಐಎಸ್ ಸಿ ಕಳೆದ ವಾರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಸರಕಾರಿ ಶಾಲೆಗಳ ಶಿಕ್ಷಕರ ಬೋಧನೆ ಸಾಮರ್ಥ್ಯ ಹಾಳಾಗಿ ಹೋಗಿದ್ದು, ಇದೇ ಸ್ಥಿತಿ ಮುಂದುವರಿದರೆ ಸರ್ಕಾರಿ ಶಾಲೆಗಳು ಅಪ್ರಸ್ತುತವಾಗುವ ದಿನಗಳು ಎದುರಾಗಲಿದೆ ಎಂಬ ಎಚ್ಚರಿಕೆಯನ್ನು ಆ ವರದಿಯಲ್ಲಿ ನೀಡಿದೆ.

ಶಿಕ್ಷಕರಿಗೆ ನಡೆಸಿದ ಪರೀಕ್ಷೆಯಲ್ಲಿ ಆಬ್ಜೆಕ್ಟೀವ್ ಮಾದರಿ ಪ್ರಶ್ನೆಪತ್ರಿಕೆ ಇತ್ತು. ಪರೀಕ್ಷೆ ಬರೆದವರ ಪೈಕಿ 900 ಶಿಕ್ಷಕರಿಗೆ ಗಣಿತದಲ್ಲಿ ಶೇ.30 ರಷ್ಟು ಹಾಗೂ ವಿಜ್ಞಾನದಲ್ಲಿ ಶೇ.28 ರಷ್ಟು ಅಂಕ ಗಳಿಸಲಷ್ಟೇ ಸಾಧ್ಯವಾಯಿತು. ಇದರಿಂದ ಹೌಹಾರಿ ಹೋದ ಆಯೋಜಕರು, ನಂತರ ಇವರಿಗೆ ಮತ್ತೊಂದು ಸುತ್ತು 10 ದಿನಗಳ ‘ಉತ್ತಮ ಯೋಜಿತ’ ತರಬೇತಿ ನೀಡಿದರು. ನಂತರ ಇವರ ಅಂಕ ಗಳಿಕೆ ಕ್ರಮವಾಗಿ ಶೇ. 74 ಮತ್ತು ಶೇ.80 ಕ್ಕೆ ಏರಿಕೆಯಾಯಿತು ಎಂದು ವರದಿ ವಿವರಿಸಿದೆ.

ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಲು ಹಲವು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇಂಥ ಶಿಕ್ಷಕರನ್ನು ಆಯ್ಕೆ ಮಾಡಿದವರು ಇನ್ನೆಂಥ ಬೃಹಸ್ಪತಿಗಳಿರಬಹುದು?  ಅವರಿಗೂ ತರಬೇತಿ ಅಗತ್ಯವಿದೆ ಅನ್ನಿಸುತ್ತದೆ. ಸರಕಾರಿ ಶಾಲೆಗಳಲ್ಲಿ ಕೆಲಸ ಸಿಗದವರು ಖಾಸಗಿ ಶಾಲೆಗಳಲ್ಲಿ ಶಿಕ್ಷಕರಾಗಿ ಹೋಗುತ್ತಾರೆ. ಅವರು ಯಾವ ಪರಿ ಪಾಠ ಮಾಡ್ತಿದ್ದಾರೋ ಆ ದೇವರೇ ಬಲ್ಲ. ಶಿಕ್ಷಕರ ಆಯ್ಕೆ ಪ್ರಕ್ರಿಯೆ ಸುಧಾರಿಸದಿದ್ದರೆ, ಶಿಕ್ಷಣ ಗುಣಮಟ್ಟವನ್ನು ಪಾತಾಳ ಗರಡಿ ಹಾಕಿ ಹುಡುಕುವ ಸ್ಥಿತಿ ಬರುವುದರಲ್ಲಿ ಅನುಮಾನವಿಲ್ಲ.

Leave a Reply