ಇರಾಕಿನಲ್ಲಿ ಉಗ್ರರ ಹಿಮ್ಮಟ್ಟಿಸಿ ಹೀರೋ ಆಯ್ತು ಅಲ್ಸೇಶಿಯನ್ ಮಿಲಿಟರಿ ನಾಯಿ!

ಡಿಜಿಟಲ್ ಕನ್ನಡ ಟೀಮ್
ಐಎಸ್ ಐಎಸ್ ಎಂಬ ಉಗ್ರ ಸಂಘಟನೆಯಿಂದ ಬಾಧಿತವಾಗಿರುವ ಇರಾಕಿನ ಉತ್ತರ ಭಾಗದಲ್ಲಿ ಅಮೆರಿಕ ಮತ್ತು ಬ್ರಿಟನ್ ಪಡೆಗಳು ಬೀಡು ಬಿಟ್ಟಿರುವುದು ಗೊತ್ತಲ್ಲ. ಕುರ್ದಿಶ್ ಗಡಿಯಲ್ಲಿ ತರಬೇತು ಮುಗಿಸಿ ಈ ಪಡೆ ವಾಪಸಾಗುತ್ತಿತ್ತು. ಆಗಲೇ ಏಕಾಏಕಿ 50 ಮಂದಿ ಉಗ್ರರ ಗುಂಪು ಇವರನ್ನು ಹಲವು ಕಡೆಗಳಿಂದ ಸುತ್ತುವರಿದುಬಿಟ್ಟಿದೆ. ಇವರೇನೂ ಸಂಘರ್ಷದ ಪ್ರದೇಶಕ್ಕೆ ಕಾರ್ಯಾಚರಣೆಗೆ ಅಂತ ತೆರಳಿದವರಾಗಿರಲಿಲ್ಲ. ತರಬೇತು ಮುಗಿಸಿ ಬೇಸ್ ಕ್ಯಾಂಪಿಗೆ ವಾಪಸಾಗುತ್ತಿದ್ದವರ ಮೇಲೆ ನಡೆದ ದಾಳಿಗೆ ಯುದ್ಧೋಪಾದಿಯಲ್ಲಿ ಪ್ರತಿಕ್ರಿಯಿಸುವ ತ್ವರಿತ ತಯಾರಿ ಇವರಲ್ಲಿದ್ದಿರಲಿಲ್ಲ. ತಿಂಗಳ ಹಿಂದೆ ನಡೆದ ಈ ಘಟನೆಯನ್ನು ಡೈಲಿ ಸ್ಟಾರ್ ಈಗ ವರದಿ ಮಾಡಿದೆ. ಬಹುಶಃ ಐಎಸ್ ಐಎಸ್ ಉಗ್ರರು ತಮ್ಮ ವ್ಯೂಹದಲ್ಲಿ ಯಶಸ್ವಿಯಾಗಿದ್ದರೆ ನಾಲ್ಕು ವಾಹನಗಳಲ್ಲಿದ್ದ ಎಲ್ಲ ಬ್ರಿಟಿಷ್- ಅಮೆರಿಕನ್ ಯೋಧರು ಸತ್ತ ಸುದ್ದಿಯನ್ನು ನಾವು ಓದಬೇಕಾಗಿತ್ತು.

ಆದರೆ… ಉಗ್ರರು ಹೆಂಗೆ ಸರ್ಪರೈಸ್ ದಾಳಿ ಮಾಡಿದ್ದರೋ, ಇತ್ತ ಪುಣ್ಯಕ್ಕೆ ಇವರ ಪಾಳೆಯದಲ್ಲೂ ಅಚ್ಚರಿ ಅಂಶವೊಂದಿತ್ತು. ಆ ಹೀರೋವೇ ಅಲ್ಸೇಶಿಯನ್ ಮಿಲಿಟರಿ ನಾಯಿ. ಅಮೆರಿಕದ ಯೋಧನೊಬ್ಬ ಇದರ ಕೊರಳಪಟ್ಟಿ ಬಿಚ್ಚಿ ಗುರಿ ತೋರಿಸಿದ್ದೇ ತಡ, ಅದು ಅತ್ಯಾವೇಶದಲ್ಲಿ ಉಗ್ರರ ನಡುವೆ ತೂರಿಕೊಂಡು ಹೋಗಿ ದಾಳಿ ನಡೆಸಿತು. ಒಬ್ಬ ಉಗ್ರನ ಮುಖ ಪರಚಿದ್ದಲ್ಲದೇ ಕುತ್ತಿಗೆಗೂ ಬಾಯಿ ಹಾಕಿತು. ಗುಂಡಿನ ಪ್ರತಿದಾಳಿಯನ್ನು ಸ್ವಲ್ಪಮಟ್ಟಿಗೆ ನಿರೀಕ್ಷಿಸಿದ್ದ ಯೋಧರಿಗೆ ಈ ಅಲ್ಸೇಶಿಯನ್ ಶ್ವಾನಾಸ್ತ್ರ ಮಾತ್ರ ಏಕ್ದಂ ದಿಗಿಲು ಹುಟ್ಟಿಸಿ ಹಿಮ್ಮೆಟ್ಟಿಸಿತು. ಯೋಧರು ಪೇರಿ ಕಿತ್ತರು!

ಮಿಲಿಟರಿ ನಾಯಿ ವಿಜಯದ ಅಭಿಮಾನದೊಂದಿಗೆ ಬಾಲ ಎತ್ತಿಕೊಂಡು ವಾಪಸಾಯಿತು. ನಾಲ್ಕೂ ವಾಹನಗಳಲ್ಲಿದ್ದ ಬ್ರಿಟನ್- ಅಮೆರಿಕಗಳ ಯೋಧರ ಪ್ರಾಣ ಉಳಿಯಿತು.

Leave a Reply