ಉತ್ತರಾಖಂಡ ವಿಶ್ವಾಸ ಮತಯಾಚನೆ ಗೆದ್ದ ಹರೀಶ್ ರಾವತ್, ನಾಳೆ ಸುಪ್ರೀಂ ಕೋರ್ಟ್ ನಲ್ಲಿ ಫಲಿಂತಾಶ ಪ್ರಕಟ

ಡಿಜಿಟಲ್ ಕನ್ನಡ ಟೀಮ್

ಉತ್ತರಾಖಂಡ ಪದಚ್ಯುತ ಮುಖ್ಯಮಂತ್ರಿ ಹರೀಶ್ ರಾವತ್ ವಿಧಾನಸಭೆ ವಿಶ್ವಾಸಮತ ಯಾಚನೆಯಲ್ಲಿ ಬಚವಾಗಿದ್ದು, ಫಲಿತಾಂಶ ನಾಳೆ ಪ್ರಕಟವಾಗಲಿದೆ.

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮಂಗಳವಾರ ಹರೀಶ್ ರಾವತ್ ನೇತೃತ್ವದ ಕಾಂಗ್ರೆಸ್ ಮಂಗಳವಾರ ವಿಶ್ವಾಸಮತ ಯಾಚಿಸಿದ್ದು, ಚಲಾವಣೆಯಾದ ಮತಗಳು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್ ಗೆ ರವಾನೆಯಾಗಿದೆ. ಬುಧವಾರ ಫಲಿತಾಂಶ ಹೊರಬೀಳಲಿದೆ.

ಹರೀಶ್ ರಾವತ್ 33 ಮತಗಳನ್ನು ಪಡೆದಿದ್ದು, ಬಿಜೆಪಿ ಕೇವಲ 28 ಮತ ಪಡೆದಿವೆ. ತಮಗೆ ಬಹುಮತ ಬಂದಿರುವುದು ಖಚಿತ ಎಂದು ವಿಶ್ವಾಸ ಮತಯಾಚನೆ ಬಳಿಕ ಕಾಂಗ್ರೆಸ್ ಹೇಳಿಕೊಂಡಿದೆ. ಈ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಧನಬಲ ಬಳಸಿ ಮೇಲುಗೈ ಸಾಧಿಸುವ ಪ್ರಯತ್ನ ನಡೆಸಿದೆ ಎಂದು ಬಿಜೆಪಿ ಆರೋಪಿಸಿದೆ.

70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಯಲ್ಲಿ ಕಾಂಗ್ರೆಸ್ ನ 9 ಬಂಡಾಯ ಸದಸ್ಯರು ಅನರ್ಹಗೊಂಡಿದ್ದರು. ಇವರು ಮತ ಚಲಾಯಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಇದರಿಂದಾಗಿ ವಿಧಾನಸಭೆ ಬಲ 61 ಕ್ಕೆ ಇಳಿದಿದ್ದು, ಕಾಂಗ್ರೆಸ್ ತನ್ನ 27 ಸದಸ್ಯರ ಜತೆಗೆ ಮೂವರು ಪಕ್ಷೇತರರು, ಉತ್ತರಾಖಂಡ ಕ್ರಾಂತಿ ದಳ ಹಾಗೂ ಬಿಎಸ್ಪಿಯ ತಲಾ 1 ಮತವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿತ್ತು.

ಒಟ್ಟಿನಲ್ಲಿ ಕಳೆದೊಂದು ತಿಂಗಳಿಂದ ಡೋಲಾಯಮಾನವಾಗಿದ್ದ ಬಹುಮತ ಸಾಧನೆ ಪ್ರಹಸನ ಅಂತಿಮ ಘಟ್ಟಕ್ಕೆ ಬಂದಿದ್ದು, ನಾಳೆ ಸುಪ್ರೀಂ ಕೋರ್ಟ್ ನಲ್ಲಿ ಫಲಿತಾಂಶ ಬಹಿರಂಗವಾಗುವ ಮೂಲಕ ಅಧಿಕೃತ ಅಂತ್ಯ ಕಾಣಲಿದೆ.

Leave a Reply