ಕುರಕಲು ಪದಾರ್ಥ ಮತ್ತು ಕಡುಬೇಸಿಗೆ ನಿಮ್ಮ ಕಿಡ್ನಿಯನ್ನು ಹೇಗೆ ಕೊಲ್ತವೆ ಗೊತ್ತೇ..?

Fast food concept with greasy fried restaurant take out as onion rings burger and hot dogs with fried chicken french fries and pizza as a symbol of diet temptation resulting in unhealthy nutrition.

ಡಿಜಿಟಲ್ ಕನ್ನಡ ವಿಶೇಷ
ಬೇರೆ ಬೇರೆ ಮಾಧ್ಯಮಗಳಲ್ಲಿ ಕಿಡ್ನಿಯ ಆರೋಗ್ಯಕ್ಕೆ ಸಂಬಂಧಿಸಿ ಪ್ರಕಟವಾಗಿರುವ ಎರಡು ವರದಿಗಳು ಆರೋಗ್ಯಕಾಳಜಿ ವಹಿಸುವವರ ದೃಷ್ಟಿಯಲ್ಲಿ ತುಂಬ ಗಮನಾರ್ಹ. ಜಂಕ್ ಫುಡ್ ಅಂತ ಕರೆಸಿಕೊಳ್ಳುವ ಬರ್ಗರ್, ಕರಿದ ಪದಾರ್ಥ, ಬಿಸ್ಕಿಟ್ಸ್ ಮತ್ತು ಬಣ್ಣದ ಪಾನೀಯಗಳ ಸೇವನೆಯಿಂದ ಕಿಡ್ನಿಗೆ ಸಕ್ಕರೆ ಕಾಯಿಲೆ ತರುವಷ್ಟೇ ಅಪಾಯ ಬರಲಿದೆ ಅಂತ ಅಧ್ಯಯನ ವರದಿಯೊಂದು ಸಾರಿದೆ.

ಯುಕೆಯ ಆಂಗ್ಲಿಯಾ ರಸ್ಕಿನ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಪ್ರಾಣಿಗಳ ಮೇಲೆ ಮಾಡಿರುವ ಸಂಶೋಧನೆಗಳ ಮೂಲಕ, ಜಂಕ್ ಫುಡ್ ಗಳಿಂದ ಮಾನವನ ಕಿಡ್ನಿ ಮೇಲೆ ಆಗಬಹುದಾದ ದುಷ್ಪರಿಣಾಮಗಳ ತರ್ಕ ಮಂಡಿಸಿದ್ದಾರೆ. ಎಕ್ಸ್ಪಿರಿಮಂಟ್ ಪಿಸಿಯಾಲಜಿ ಜರ್ನಲ್ ನಲ್ಲಿ ವಾದ ಮಂಡಿಸಿರುವ ಅವರು ಹೇಳಿರುವುದರ ಸಾರ ಇಷ್ಟು- ಟೈಪ್ 2 ಸಕ್ಕರೆ ಕಾಯಿಲೆಯಲ್ಲಿ ದೇಹವು ಸಾಕಷ್ಟು ಇನ್ಸುಲಿನ್ ಉತ್ಪಾದಿಸುವ ಶಕ್ತಿ ಕಳೆದುಕೊಳ್ಳುತ್ತದೆ.

ಇದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚು ಶೇಖರಗೊಳ್ಳುತ್ತ ಹೋಗುತ್ತದೆ. ಇದು ದೀರ್ಘಾವಧಿಯಲ್ಲಿ ಕಿಡ್ನಿ ಸೇರಿದಂತೆ ಹಲವು ಅಂಗಗಳಿಗೆ ತೊಂದರೆ ಉಂಟು ಮಾಡುತ್ತದೆ. ಹೀಗೆ ಟೈಪ್ 2 ಡಯಾಬಿಟೀಸ್ ಇರುವ ಪ್ರಾಣಿಗಳು ಮತ್ತು ಜಂಕ್ ಫುಡ್ ತಿನ್ನಿಸಿ ಬೆಳೆಸಿದ ಇಲಿಗಳ ನಡುವೆ ಹೋಲಿಕೆ ಮಾಡಿದಾಗ ಅವುಗಳ ರಕ್ತದಲ್ಲಿರುವ ಸಕ್ಕರೆ ಪ್ರಮಾಣ ಹಾಗೂ ಅದು ಕಿಡ್ನಿ ಮೇಲೆ ಸೃಷ್ಟಿಸಲಿರುವ ಒತ್ತಡ ಒಂದೇ ತೆರನಾಗಿತ್ತು. ಈ ಅಧ್ಯಯನದ ಹಿನ್ನೆಲೆಯಲ್ಲಿ ಕುರಕಲು ತಿಂಡಿ ಪ್ರಿಯರು ಬಾಯ್ಚಪಲ ಕಾಡಿದಾಗಲೆಲ್ಲ ಕಿಡ್ನಿ ನೆನಪು ಮಾಡಿಕೊಳ್ಳುವುದು ಒಳಿತು.

ಈ ಬಾರಿ ಎಲ್ಲರನ್ನೂ ಹೆದರಿಸುವಂಥ ಬೇಸಿಗೆ ಇದೆ. ದೇಹದಲ್ಲಿ ನೀರಿನಾಂಶ ಕೊರತೆ ಎಂಬುದು ಬಿರು ಬೇಸಿಗೆಯಲ್ಲಿ ನಮ್ಮೆಲ್ಲರನ್ನು ಕಾಡುವ ಸಮಸ್ಯೆ. ಬಿಸಿಗಾಳಿಗೆ ಒಡ್ಡಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಕಿಡ್ನಿಸ್ಟೋನ್ ಅರ್ಥಾತ್ ಕಿಡ್ನಿಯಲ್ಲಿ ಕಲ್ಲು ಬೆಳೆಯುವ ಸಮಸ್ಯೆ ಎಂದಿಗಿಂತ ಹೆಚ್ಚು ಎಂದು ಎಚ್ಚರಿಸುತ್ತಿದ್ದಾರೆ ವೈದ್ಯರು. ಈ ಸಂದರ್ಭದಲ್ಲಿ ಹೆಚ್ಚು ನೀರು ಕುಡಿಯುತ್ತ ದೇಹವನ್ನು ಒಣಗದಂತೆ ಇಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ನಮ್ಮ ಮೂತ್ರದಲ್ಲಿ ಕ್ಯಾಲ್ಶಿಯಂ ಮತ್ತು ಇತರ ಖನಿಜಾಂಶಗಳು ಬೇಗ ಹರಳುಗಟ್ಟಿಬಿಡುತ್ತವೆ. ಉಳಿದ ಸಮಯದಲ್ಲಿ 7 ಎಂಎಂ ಕಲ್ಲು ರೂಪುಗೊಳ್ಳಲು ಆರರಿಂದ ವರ್ಷ ತೆಗೆದುಕೊಂಡರೆ, ದೇಹ ಒಣಗಿಸುವ ಬೇಸಿಗೆಯಲ್ಲಿ ಈ ಪ್ರಕ್ರಿಯೆ ಬಹಳ ತ್ವರಿತ ಎನ್ನುತ್ತಿದ್ದಾರೆ ವೈದ್ಯರು. ಕೇವಲ ಕಿಡ್ನಿಸ್ಟೋನ್ ಮಾತ್ರವಲ್ಲ, ಈ ಬಿಸಿಲ ದಿನಗಳಲ್ಲಿ ಸಾಕಷ್ಟು ನೀರು ಕುಡಿಯದಿದ್ದರೆ ಕಿಡ್ನಿಗೆ ರಕ್ತಸಂಚಾರವಾಗುವುದರಲ್ಲೂ ವ್ಯತ್ಯಯಗಳುಂಟಾಗುತ್ತವೆ. ಹಾಗಂತ, ಹೇಗೂ ದೇಹವನ್ನು ನೀರಿನಾಂಶದಿಂದ ತುಂಬಿಸಿಟ್ಟರೆ ಸಾಕು ಅಂತ ಕಾರ್ಬೊಹೈಡ್ರೆಟ್ ಇರುವ ಯಾವ್ಯಾವುದೋ ತಂಪುಪಾನೀಯಗಳನ್ನು ಕುಡಿದರಾಗಲಿಲ್ಲ. ಅದು ಸಮಸ್ಯೆ ಶಮನಕ್ಕಿಂತ ಇನ್ನಷ್ಟು ಅಪಾಯಗಳನ್ನು ತಂದೊಡ್ಡುತ್ತದೆ. ಹೀಗಾಗಿ ಶುದ್ಧ ನೀರನ್ನು ಚೆನ್ನಾಗಿ ಕುಡೀರಿ ಎಂಬ ಸರಳ ಸೂತ್ರ ಮಾತ್ರ ಇಲ್ಲಿ ಉಪಯೋಗಕ್ಕೆ ಬರುತ್ತದಷ್ಟೆ.

‘ಇದು ಕಿಡ್ನಿಯ ವಿಷ್ಯ, ಹುಷಾರು ಶಿಷ್ಯ’ ಅಂತ ನೀವು ಆಪ್ತರ ನಡುವೆ ಹಂಚಿಕೊಳ್ಳಬೇಕಾದ
ಮಾಹಿತಿಗಳಿವು.

Leave a Reply