ನಾಳೆ ಸಿಗಲ್ಲ ಎಸ್ಸೆಸ್ಸೆಲ್ಸಿ ಫಲಿತಾಂಶ, ಪನಾಮಾ ಪೇಪರ್ ನಲ್ಲಿ 2 ಸಾವಿರ ಭಾರತೀಯರು, 6 ಪ್ರಾದೇಶಿಕ ಭಾಷೆಗಳಲ್ಲಿ ನೀಟ್ ಪರೀಕ್ಷೆಗೆ ಮನವಿ, ಮೋದಿ ಪದವಿ ಅಧಿಕೃತ ಅಂತು ದೆಹಲಿ ವಿವಿ

ಡಿಜಿಟಲ್ ಕನ್ನಡ ಟೀಮ್

ನಾಳೆ ಫಲಿತಾಂಶ ಬರಲಿದೆ ಎಂದು ಕಾದುಕೂತಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಈಗ ನಿರಾಶೆ. ಅವರು ಇನ್ನಷ್ಟು ದಿನ ಕಾಯಬೇಕಿದೆ. ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಫಲಿತಾಂಶ ಮೇ 25 ರೊಳಗೆ ಪ್ರಕಟಿಸುವುದಾಗಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.

ಶಿಕ್ಷಣ ಇಲಾಖೆ ಅಧಿಕಾರಿಗಳು ಬುಧವಾರ ಫಲಿತಾಂಶ ಪ್ರಕಟಿಸುವುದಾಗಿ ಹೇಳಿದ್ದರು. ಆದರೆ  ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸಚಿವರು ಫಲಿತಾಂಶ ಮುಂದೂಡಿಕೆ ಬಗ್ಗೆ ಸುದ್ದಿಗಾರರಿಗೆ ತಿಳಿಸಿದರು. ಫಲಿತಾಂಶ ವಿಷಯದಲ್ಲಿ ಯಾವುದೇ ಗೊಂದಲ ಬೇಡ. ಮೌಲ್ಯಮಾಪನ ಈಗಾಗಲೇ ಮುಗಿದಿದೆ. ಮೇ 25ರ ಒಳಗೆ ದ್ವಿತೀಯ ಪಿಯುಸಿ ಹಾಗೂ ಅದಕ್ಕೂ ಮೊದಲು 10ನೇ ತರಗತಿ ಫಲಿತಾಂಶ ಪ್ರಕಟವಾಗಲಿದೆ ಎಂದರು.

ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಮೌಲ್ಯ ಮಾಪನ ವಿಳಂಬದಿಂದ ಫಲಿತಾಂಶವೂ ವಿಳಂಬವಾಗಿದೆ. ಇನ್ನುಮುಂದೆ ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ, ಅದನ್ನು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸಿ, ಏಳು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಪಡಿಸುವುದಾಗಿ ಸಚಿವರು ಎಚ್ಚರಿಸಿದರು.

ಪನಾಮಾ ಪೇಪರ್ಸ್: ಹೊಸ ಸೋರಿಕೆಯಲ್ಲಿ 2 ಸಾವಿರ ಭಾರತೀಯರು

ಪನಾಮ ಪೇಪರ್ಸ್ ಕುರಿತ ಹೊಸ ಮಾಹಿತಿಯನ್ನು ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಕೂಟ (ಐಸಿಐಜೆ) ಮಂಗಳವಾರ ಪ್ರಕಟಿಸಿದೆ. ಈ ಬಾರಿ 21 ಸ್ಥಳಗಳಲ್ಲಿ 2.14 ಲಕ್ಷ ವಿದೇಶಿ ರಹಸ್ಯ ಸಂಸ್ಥೆಗಳ ಸ್ಥಾಪನೆ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದು, ಆ ಪೈಕಿ ಭಾರತೀಯರ ಸಂಖ್ಯೆ 2 ಸಾವಿರ. ಭಾರತದ 22 ವಿದೇಶಿ ಸಂಸ್ಥೆಗಳು, 1046 ಅಧಿಕಾರಿಗಳು, 42 ಮಧ್ಯವರ್ತಿಗಳು ಹಾಗೂ 828 ವಿಳಾಸಗಳು ಈ ಮಾಹಿತಿಯಿಂದ ಬೆಳಕಿಗೆ ಬಂದಿದೆ.

6 ಪ್ರಾದೇಶಿಕ ಭಾಷೆಯಲ್ಲಿ ನೀಟ್ ಪರೀಕ್ಷೆ ನಡೆಸಲು ಕೇಂದ್ರ ಮನವಿ

ಏಕರೂಪ ವೈದ್ಯ ಶಿಕ್ಷಣ ಪ್ರವೇಶ ಪರೀಕ್ಷೆ ಪದ್ಧತಿ ನೀಟ್ ಅನ್ನು 6 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದೆ. ಸದ್ಯ ನೀಟ್ ಪರೀಕ್ಷೆಯನ್ನು ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಇದನ್ನು ತಮಿಳು, ತೆಲುಗು, ಮರಾಠಿ, ಅಸ್ಸಾಂ, ಬಂಗಾಲಿ ಮತ್ತು ಗುಜರಾತಿಗೂ ವಿಸ್ತರಿಸುವಂತೆ ಕೋರಿದೆ.

ಮೋದಿ ಪದವಿ ಪ್ರಮಾಣ ಪತ್ರ ಅಧಿಕೃತ: ದೆಹಲಿ ವಿವಿ

ಪ್ರಧಾನಿ ನರೇಂದ್ರ ಮೋದಿ ಅವರ ಬಿಎ ಪದವಿ ಪ್ರಮಾಣ ಪತ್ರ ಅಧಿಕೃತ ಎಂದು ದೆಹಲಿ ವಿಶ್ವವಿದ್ಯಾಲಯ ಸ್ಪಷ್ಟಪಡಿಸಿದೆ. ಮಂಗಳವಾರ ಆಮ್ ಆದ್ಮಿ ಪಕ್ಷದ ನಾಯಕರು ಮೋದಿ ಅವರ ಬಿಎ ಪದವಿ ಪ್ರಮಾಣಪತ್ರ ಪರಿಶೀಲಿಸಲು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದರು. ದೆಹಲಿ ವಿವಿ ಈ ವಿಷಯದಲ್ಲಿ ಈವರೆಗೂ ವಹಿಸಿದ್ದ ಮೌನ ಮುರಿದಿದೆ. ‘ನಮ್ಮಲ್ಲಿರುವ ದಾಖಲೆ ಪ್ರಕಾರ ಪದವಿ ಪ್ರಮಾಣ ಪತ್ರ ಅಧಿಕೃತ. 1978 ರಲ್ಲಿ ಮೋದಿ ಪದವಿ ಪೂರ್ಣಗೊಳಿಸಿದ್ದು, 1979 ರಲ್ಲಿ ಪದವಿ ಪ್ರದಾನ ಮಾಡಿದ್ದೇವೆ’ ಎಂದು ವಿವಿ ರಿಜಿಸ್ಟ್ರಾರ್ ತರುಣ್ ದಾಸ್ ತಿಳಿಸಿದ್ದಾರೆ.

ಮೆಟ್ರೋ ನಿಲ್ದಾಣ ಬಳಿ ಕಾರ್ ಪಾರ್ಕಿಂಗ್ ವ್ಯವಸ್ಥೆ: ಜಾರ್ಜ್

ಮೆಟ್ರೋ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಕೆಲವು ನಿಲ್ದಾಣಗಳಲ್ಲಿ ಆಟೋಮೆಟಿಕ್ ಕಾರ್ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ಮೆಟ್ರೋ ನಿಲ್ದಾಣ ಸಮೀಪ ಖಾಸಗಿ ಸಹಭಾಗೀತ್ವದಲ್ಲಿ ಕಾರ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ಚೀನಾ ಮತ್ತು ಜಪಾನ್ ದೇಶಗಳಲ್ಲಿ ಇಂತಹ ವ್ಯವಸ್ಥೆ ಇದೆ. ಅದನ್ನು ಅನುಸರಿಸುವಂತೆ ಮೆಟ್ರೋ ಆಡಳಿತ ಮಂಡಳಿಗೆ ಆದೇಶಿಸಲಾಗಿದೆ. ಇದಕ್ಕಾಗಿ ಕಬ್ಬನ್ ಪಾರ್ಕ್ ಮತ್ತಿತರ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಸುದ್ದಿಗಾರರಿಗೆ ಮಂಗಳವಾರ ಹೇಳಿದರು.

ಇನ್ನುಳಿದಂತೆ ನೀವು ತಿಳಿಯಬೇಕಿರುವ ಇತರೆ ಸುದ್ದಿ ಸಾಲುಗಳು..

  • ಆಲ್ ಇಂಡಿಯಾ ಟೂರಿಸ್ಟ್ ಪರ್ಮಿಟ್ ಪಡೆದಿರುವ ಡೀಸೆಲ್ ಕ್ಯಾಬ್ ಗಳು ತಮ್ಮ ಪರವಾನಿಗೆ ಮುಕ್ತಾಯಗೊಳ್ಳುವವರೆಗೂ ದೆಹಲಿಯಲ್ಲಿ ಸಂಚರಿಸಬಹುದು ಎಂದು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಈ ಕ್ಯಾಬ್ ಗಳು ನ್ಯಾಯಯುತ ಬೆಲೆ ನಿಗದಿಪಡಿಸಬೇಕು ಎಂದೂ ಎಚ್ಚರಿಕೆ ನೀಡಿದೆ.
  • ಆಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಭಾರತೀಯ ವಾಯು ಸೇನೆ ಮಾಜಿ ಮುಖ್ಯಸ್ಥ ಎಸ್.ಪಿ ತ್ಯಾಗಿ ಹಾಗೂ ಮತ್ತಿಬ್ಬರನ್ನು ಸಿಬಿಐ ಮಂಗಳವಾರ ಮತ್ತೆ ವಿಚಾರಣೆಗೆ ಒಳಪಡಿಸಿದೆ.
  • ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಶಶಾಂಕ್ ಮನೋಹರ್ ರಾಜಿನಾಮೆ ನೀಡಿದ್ದಾರೆ. ಇದರ ಪೂರ್ಣ ಮಾಹಿತಿ ಇಲ್ಲಿ ಓದಿಕೊಳ್ಳಿ.

Leave a Reply