ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಶಶಾಂಕ್ ಮನೋಹರ್ ರಾಜಿನಾಮೆ ಕೊಟ್ಟಿದ್ದೇಕೆ? ಯಾರಾಗ್ತಾರೆ ಉತ್ತರಾಧಿಕಾರಿ?

Mumbai: BCCI President Shashank Manohar interacts with media after the AGM at the BCCI headquarters in Mumbai on Monday. PTI Photo by Shashank Parade(PTI11_9_2015_000098B)

ಡಿಜಿಟಲ್ ಕನ್ನಡ ಟೀಮ್

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಶಶಾಂಕ್ ಮನೋಹರ್ ರಾಜಿನಾಮೆ ನೀಡಿದ್ದಾರೆ. ಸದ್ಯದಲ್ಲೇ ಐಸಿಸಿಯ ಮೊದಲ ಸ್ವತಂತ್ರ ಮುಖ್ಯಸ್ಥ (ಚೇರ್ಮನ್) ರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಹೊಸ ಜವಾಬ್ದಾರಿ ಹಿನ್ನೆಲೆಯಲ್ಲಿ ಮನೋಹರ್ ರಾಜೀನಾಮೆ ನೀಡಿದ್ದಾರೆ.

ಕಳೆದ ಅಕ್ಟೋಬರ್ ನಲ್ಲಿ ಜಗಮೋಹನ್ ದಾಲ್ಮಿಯಾ ಅವರ ನಿಧನದಿಂದ ತೆರವಾದ ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ಶಶಾಂಕ್ ಮನೋಹರ್ ತುಂಬಿದ್ದರು. ಅಲ್ಲಿಂದ ಸುಮಾರು 8 ತಿಂಗಳ ಕಾಲ ಕಾರ್ಯ ನಿರ್ವಹಿಸಿದ್ದರು.

ಏನಿದು ಐಸಿಸಿ ಸ್ವತಂತ್ರ ಮುಖ್ಯಸ್ಥ ಸ್ಥಾನ?

ಯಾವುದೇ ರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿದ್ದರೂ ಐಸಿಸಿ ಮುಖ್ಯಸ್ಥ ಸ್ಥಾನದಲ್ಲೂ ಕಾರ್ಯ ನಿರ್ವಹಿಸಲು ಅವಕಾಶವಿತ್ತು. ಆದರೆ ಇದನ್ನು ತೆಗೆದು ಹಾಕಲಾಗಿದೆ. ವ್ಯಕ್ತಿಯೊಬ್ಬರು ಏಕಕಾಲದಲ್ಲಿ ಎರಡು ಹುದ್ದೆಗಳನ್ನು ಅಲಂಕರಿಸುವಂತಿಲ್ಲ. ಐಸಿಸಿ ಮುಖ್ಯಸ್ಥರಾದವರು ಈ ಅಧಿಕಾರವನ್ನು ಮಾತ್ರ ಹೊಂದಿರಬೇಕು ಎಂಬ ಬದಲಾವಣೆಯನ್ನು ಕಳೆದ ಫೆಬ್ರವರಿಯಲ್ಲಿ ನಡೆದ ಐಸಿಸಿ ಸಭೆಯಲ್ಲಿ ತರಲಾಗಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಆಡಳಿತ ಗುಣಮಟ್ಟ ವೃದ್ಧಿ, ವೈಯಕ್ತಿಕ ಹಿತಾಸಕ್ತಿ ನಿಯಂತ್ರಣ ಹಾಗೂ ಆಡಳಿತದಲ್ಲಿ ಪಾರದರ್ಶಕತೆ ಈ ಬದಲಾವಣೆ ಹಿಂದಿರುವ ಉದ್ದೇಶ.

ಆರಂಭದಲ್ಲಿ ಈ ಸ್ಥಾನಕ್ಕೆ ಬಿಸಿಸಿಐ ಮಾಜಿ ಅಧ್ಯಕ್ಷ ಶರದ್ ಪವಾರ್ ಹೆಸರು ಕೇಳಿಬಂದಿತ್ತು. ಆದರೆ ಈಗಾಗಲೇ ಮುಖ್ಯಸ್ಥ ಸ್ಥಾನದಲ್ಲಿರುವ ಶಶಾಂಕ್ ಮನೋಹರ್ ಅವರನ್ನೇ ಸ್ವತಂತ್ರ ಮುಖ್ಯಸ್ಥರಾಗಿ ಮುಂದುವರಿಸಲು ಮಂಡಳಿಯ ಎಲ್ಲ ಸದಸ್ಯರು ಒಪ್ಪಿಗೆ ನೀಡಿದರು. ಇದೇ ತಿಂಗಳು ಅಧಿಕೃತವಾಗಿ ಸ್ವತಂತ್ರ ಮುಖ್ಯಸ್ಥ ಸ್ಥಾನ ಅಲಂಕರಿಸಲಿರುವ ಮನೋಹರ್ ಐದು ವರ್ಷಗಳ ಅವಧಿಗೆ ಅಂದರೆ 2021 ರವರೆಗೂ ಮುಂದುವರಿಯಲಿದ್ದಾರೆ.

ಬಿಸಿಸಿಐ ಉತ್ತರಾಧಿಕಾರಿ ಯಾರು?

ಸದ್ಯ ತೆರವಾಗಿರುವ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಅಜಯ್ ಶಿರ್ಕೆ, ಆಂಧ್ರ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಜಿ.ಗಂಗರಾಜು ಹಾಗೂ ಕಾಂಗ್ರೆಸ್ ರಾಜ್ಯಸಭೆ ಸದಸ್ಯ ಹಾಗೂ ಐಪಿಎಲ್ ಕಮಿಷನರ್ ರಾಜೀವ್ ಶುಕ್ಲಾ, ಪ್ರಸ್ತುತ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ನಡುವೆ ಪೈಪೋಟಿ ಏರ್ಪಟ್ಟಿದೆ.

Leave a Reply