ತಪ್ಪು ನಕಾಶೆಗೆ ದಂಡವೆಂಬ ಸರ್ಕಾರಿ ಅಸ್ತ್ರ, ಗೂಗಲ್- ಫೇಸ್ಬುಕ್ ಗಳ ಕುರಿತು ಇತರ ರಾಷ್ಟ್ರಗಳ ಎಚ್ಚರಿಕೆ ಗಮನಿಸಿದರೆ ಭಾರತದ ಈ ನಡೆಗೆ ಭೇಷ್ ಅಂತೀರಿ!

ಡಿಜಿಟಲ್ ಕನ್ನಡ ವಿಶೇಷ
ಭಾರತದ ಮ್ಯಾಪ್ ತಪ್ಪಾಗಿ ಚಿತ್ರಿಸಿದರೆ 7 ವರ್ಷ ಜೈಲು, 100 ಕೋಟಿ ರುಪಾಯಿ ದಂಡ. ಇವಿಷ್ಟೆ ಸುದ್ದಿಯನ್ನು ಓದಿಕೊಂಡರೆ, ಇದೇನೋ ಭಾರೀ ಆಯ್ತಲ್ಲಪ್ಪ ಎನ್ನಿಸಬಹುದು. ಆದರೆ ಇದು ಗೂಗಲ್, ಟ್ವಿಟ್ಟರ್ ಹಾಗೂ ಇನ್ನಿತರೇ ತಂತ್ರಜ್ಞಾನ ದೈತ್ಯರನ್ನು ಗುರಿ ಮಾಡಿಕೊಂಡು ರೂಪುಗೊಳ್ಳುತ್ತಿರುವ ಕಾನೂನು ಎಂಬುದನ್ನು ಅರ್ಥ ಮಾಡಿಕೊಂಡಾಗ ಇದರ ದೂರದೃಷ್ಟಿ ಅರ್ಥವಾಗುತ್ತದೆ.

ಜಮ್ಮು-ಕಾಶ್ಮೀರದ ಅರ್ಧಭಾಗವನ್ನು ಪಾಕಿಸ್ತಾನದಲ್ಲಿ ತೋರಿಸುವುದು, ಅರುಣಾಚಲ ಪ್ರದೇಶದ ಕೆಲಭಾಗಗಳನ್ನು ಚೀನಾದಲ್ಲಿ ತೋರಿಸುವುದು ಇವೆಲ್ಲ ಗೂಗಲ್ ಮತ್ತು ಟ್ವಿಟ್ಟರ್ ಮಾಡುತ್ತಿದ್ದ ಚೇಷ್ಟೆಗಳು. ಇದರಿಂದ ಅವರಿಗೇನು ಲಾಭ ಎಂಬುದಕ್ಕಿಂತ, ತಾವು ಹೀಗೆ ಮಾಡಿ ದಕ್ಕಿಸಿಕೊಳ್ತೇವೆ- ನಿಮ್ಮನ್ನೇನು ಕೇಳೋದು ಎಂಬಂಥ ಸೊಕ್ಕೊಂದು ಅಲ್ಲಿ ಮನೆ ಮಾಡಿತ್ತು.

ಇದೀಗ ಕರಡು ರೂಪದಲ್ಲಿರುವ ‘ದ ಜಿಯೊಸ್ಪೇಶಿಯಲ್ ಇನ್ಫಾರ್ಮೇಷನ್ ರೆಗ್ಯುಲೇಷನ್ ಬಿಲ್ 2016’ ಸಂಸತ್ತಿನಲ್ಲಿ ಅನುಮೋದನೆಗೊಂಡು ಕಾನೂನಾಗಿ ಬಂದೊಡನೆ ಚಿತ್ರಣವೇ ಬೇರೆ ಆಗಲಿದೆ. ಕೇವಲ ತಪ್ಪಾದಾಗ ದಂಡ ಅಂತಲ್ಲ, ಮೂಲತಃ ಇಂಥ ಸೇವೆಗಳನ್ನು ಒದಗಿಸುವುದಕ್ಕೆ ಮೊದಲು ತಂತ್ರಜ್ಞಾನ ಕಂಪನಿಗಳು ಭಾರತ ಸರ್ಕಾರದಿಂದ ಪರವಾನಗಿ ಪಡೆಯಬೇಕಾಗುತ್ತದೆ.

ಸಿಂಪಲ್ಲಾಗಿ ಹೇಳ್ಬೇಕಂದ್ರೆ, ಈಗ ಯಾವ ಗೂಗಲ್ ಅರ್ಥ್, ಗೂಗಲ್ ಮ್ಯಾಪ್ ಸೇವೆಗಳನ್ನು ಗೂಗಲ್ ಯಾವುದೇ ಅನುಮತಿ ಹಂಗಿಲ್ಲದೇ ಭಾರತದಲ್ಲಿ ನೀಡುತ್ತಿದೆಯೋ ಅದಕ್ಕೆ ಲೈಸೆನ್ಸ್ ಪಡೆದುಕೊಳ್ಳಬೇಕು. ಇದೇನಿದು ಲೈಸೆನ್ಸ್ ರಾಜ್ ಅಂತ ಕಿರಿಕಿರಿಗೊಳ್ಳಬೇಡಿ. ಇದು ತುಂಬ ಮುಖ್ಯ. ಏಕೆಂದರೆ ಲಾಗಾಯ್ತಿನಿಂದಲೂ ನಾಲೆಡ್ಜ್ ಅನ್ನೋದೊಂದು ಅಸ್ತ್ರವಾಗಿಯೇ ಇದೆ. ಅದನ್ನು ನೀಡುವ ಸ್ಥಾನದಲ್ಲಿ ಯಾರಿದ್ದಾರೋ ಅವರು ನಮ್ಮ ಗ್ರಹಿಕೆಗಳನ್ನೇ ನಿಯಂತ್ರಿಸುವವರಾಗಿರುತ್ತಾರೆ. ಇವತ್ತು ನಗರ ಪ್ರದೇಶಗಳಲ್ಲಂತೂ ನಕಾಶೆ ತೂಗಿ ಹಾಕುವ ಕ್ರಮದಿಂದ ದೂರ ಬಂದದ್ದಾಗಿದೆ. ಎಲ್ಲ ಹುಡುಕಾಟಗಳೂ ಗೂಗಲ್ ನಲ್ಲಿಯೇ ಅಂತಿಮವಾಗುತ್ತವೆ. ಹೀಗಿರುವಾಗ, ಈಗೇನೋ ನಮಗೆ ಪಾಕ್ ಆಕ್ರಮಿತ ಜಮ್ಮು- ಕಾಶ್ಮೀರವನ್ನು ಕೈಬಿಟ್ಟಾಗ, ಇದೇನೋ ಭಾರತದ ತಲೆ ಭಣಗುಡುತ್ತಿದೆಯಲ್ಲ ಎಂಬ ಎಚ್ಚರಿಕೆ ಒಸರುತ್ತದೆ.

ಆದರೆ, ಇದನ್ನೇ ವರ್ಷಗಳ ಕಾಲ ಮುಂದುವರಿಸಿಕೊಂಡು ಹೋದರೆ ಗೂಗಲ್- ಟ್ವಿಟ್ಟರ್ ಗಳಿಗೆ ಹೊಂದಿಕೊಂಡಿರುವ ಒಂದು ಪೀಳಿಗೆ ಜಮ್ಮು-ಕಾಶ್ಮೀರ, ಅರುಣಾಚಲ ಪ್ರದೇಶಗಳೆಲ್ಲ ತಮ್ಮದಲ್ಲ ಎಂದುಕೊಂಡೇ ಬೆಳೆದುಬಿಡುವ ಅಪಾಯ ಉತ್ಪ್ರೇಕ್ಷೆಯದ್ದೇನೂ ಅಲ್ಲ. ಅಷ್ಟು ವರ್ಷಗಳಿಂದ ಗೂಗಲ್ ಅದನ್ನು ತಮ್ಮ ಪ್ರದೇಶವಾಗಿ ಚಿತ್ರಿಸಿರೋದೇ ಆ ಜಾಗ ನಮ್ಮದೆಂಬುದಕ್ಕೆ ಪುರಾವೆ ಅಂತ ಮುಂದೊಂದು ದಿನ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕ್-ಚೀನಾಗಳು ವಾದಿಸಿದರೂ ಅಚ್ಚರಿ ಏನಿಲ್ಲ. ಹಾಗೆಂದೇ, ಉಪಗ್ರಹಾಧರಿತವಾಗಿ ಇಂಥವೆಲ್ಲ ಮಾಹಿತಿಗಳನ್ನು ಒದಗಿಸುವ ಕಂಪನಿಗಳು ಮೊದಲು ನೋಂದಣಿ ಮಾಡಿಕೊಂಡು ಶುಲ್ಕ ತುಂಬಲಿ ಎಂಬ ತೀರ್ಮಾನಕ್ಕೆ ಬಂದಿದೆ ಸರ್ಕಾರ.

ಇದೇನು ಲೈಸೆನ್ಸ್ ರಾಜಾ ಎಂಬ ಅನುಮಾನ ಯಾರಿಗಾದರೂ ಇದ್ದರೆ, ಉದಾರವಾದಿ ಅಮೆರಿಕವು ಈಗ ತನ್ನದೇ ನೆಲದ ಫೇಸ್ಬುಕ್ ಕಂಪನಿಗೆ ಕೊಟ್ಟಿರುವ ನೋಟಿಸನ್ನು ಗಮನಿಸಬೇಕು. ಈಗೆರಡು ದಿನಗಳ ಹಿಂದೆ ಫೇಸ್ಬುಕ್ ವಿರುದ್ಧ ಆಪಾದನೆಯೊಂದು ಕೇಳಿ ಬಂದಿದೆ. ಅದೆಂದರೆ- ಫೇಸ್ಬುಕ್ ತೋರಿಸುವ ನ್ಯೂಸ್ ಟ್ರೆಂಡ್ ಗಳು ನಿಜಕ್ಕೂ ಹೆಚ್ಚು ಓದಿಸಿಕೊಂಡವೇ ಆಗಿರುತ್ತವೆ ಅಂತೇನಲ್ಲ; ಅಲ್ಲಿನವರ ಪೂರ್ವಾಗ್ರಹಗಳೂ ಟ್ರೆಂಡ್ ಆಯ್ಕೆಯಲ್ಲಿ ಪ್ರಭಾವ ಬೀರಿರುತ್ತವೆ ಅಂತ. ಈಗ ಅಮೆರಿಕ ಸೆನೆಟ್ ನ ವಾಣಿಜ್ಯ ಸಮಿತಿಯು ಮಾರ್ಕ್ ಜುಕರ್ ಬರ್ಗ್ ಗೆ ಕೆಲ ಪ್ರಶ್ನೆಗಳನ್ನು ಹೊತ್ತ ನೋಟೀಸ್ ನೀಡಿದೆ. ಫೇಸ್ಬುಕ್ ನಲ್ಲಿ ನ್ಯೂಸ್ ಟ್ರೆಂಡ್ ಆಯ್ಕೆ ಮಾಡುವ ವಿಧಾನ ಏನು, ಇದರಲ್ಲಿ ನಿಮ್ಮ ಕಂಪನಿಯವರೂ ಕೈಯಾಡಿಸಬಹುದು ಅಂತಾದರೆ ಅಂಥ ವ್ಯಕ್ತಿ ವಿರುದ್ಧ ಏನು ಕ್ರಮ ಕೈಗೊಳ್ಳಬಲ್ಲಿರಿ ಎಂದೆಲ್ಲ ಉತ್ತರ ಬಯಸಿದೆ.

ಇನ್ನೊಂದೆಡೆ ರಷ್ಯಾವಂತೂ ಗೂಗಲ್ ಅನ್ನು ಹತೋಟಿಯಲ್ಲಿಟ್ಟುಕೊಳ್ಳುವ ಯಾವ ಅವಕಾಶವನ್ನೂ ಕೈಚೆಲ್ಲಿಲ್ಲ. ಹಾಗೆಂದೇ ಅಲ್ಲಿ ಗೂಗಲ್ ಗಿಂತ ಯಾಂಡೆಕ್ಸ್ ಎಂಬ ಸ್ಥಳೀಯ ಅಂತರ್ಜಾಲ ಹುಡುಕಾಟ ವ್ಯವಸ್ಥೆಯೇ ಮಾರುಕಟ್ಟೆಯನ್ನು ಆಳುತ್ತಿದೆ. ಇದಕ್ಕೂ ಮೀರಿ ಸ್ಪುಟ್ನಿಕ್ಸ್ ಹೆಸರಲ್ಲಿ ಸರ್ಕಾರಿ ಹುಡುಕಾಟ ವ್ಯವಸ್ಥೆ ರೂಪಿಸುವ ಪ್ರಯತ್ನದಲ್ಲೂ ರಷ್ಯಾ ತೊಡಗಿಸಿಕೊಂಡಿದೆ.

ತಾನು ವೆಬ್ ತಾಣದಲ್ಲಿ ಅನುಮತಿ ಪಡೆದ ಸೇವೆಗಳನ್ನು ತನ್ನ ಆಂಡ್ರಾಯ್ಡ್ ವ್ಯವಸ್ಥೆಯಲ್ಲೂ ನುಗ್ಗಿಸುವ ಗೂಗಲ್ ಕ್ರಮವನ್ನು ರಷ್ಯಾದ ನ್ಯಾಯಾಲಯ ಪ್ರತಿಬಂಧಿಸಿದೆ. ಇದು ಏಕಸ್ವಾಮ್ಯಕ್ಕೆ ಕಾರಣವಾಗುತ್ತದೆಂಬ ತೀರ್ಪಿತ್ತಿದೆ. ಹೀಗಾಗಿ ಸ್ಮಾರ್ಟ್ ಫೋನ್ ಗಳಿಗೆ ಬೇರೆಯದೇ ಮಾರುಕಟ್ಟೆ ಯೋಜನೆಗಳನ್ನು ಹಮ್ಮಿಕೊಳ್ಳಬೇಕಾದ ಅನಿವಾರ್ಯತೆ ಗೂಗಲ್ ಗೆ ಬಂದೊದಗಿದೆ.

ಮಾಹಿತಿ ಮೂಲವಾಗಿರುವ ದೈತ್ಯ ತಂತ್ರಜ್ಞಾನ ಕಂಪನಿಗಳ ವಿಷಯದಲ್ಲಿ ಜಗತ್ತಿನ ಇತರ ರಾಷ್ಟ್ರಗಳ ನಡೆಯನ್ನು ಗಮನಿಸಿದಾಗ, ನಕಾಶೆ ವಿಷಯದಲ್ಲಿ ಭಾರತ ತಾಳುತ್ತಿರುವ ನೀತಿ ಹಾಗೂ ಆ ಮೂಲಕ ನೀಡುತ್ತಿರುವ ಸೂಚನೆ ತುಂಬ ಮುಖ್ಯ ಎಂದು ಮನದಟ್ಟಾಗುತ್ತದೆ.

Leave a Reply