ನೇರ ನಗದು ವರ್ಗಾವಣೆಗೆ ಸಿಕ್ತು ಯಶಸ್ಸು.. ಆಹಾರ, ರಸಗೊಬ್ಬರ ಸಬ್ಸಿಡಿಗೂ ಸಿಗಲಿದೆ ಇದರ ಸವಲತ್ತು..

ಡಿಜಿಟಲ್ ಕನ್ನಡ ಟೀಮ್

ಫಲಾನುಭವಿಗಳಿಗೆ ನೇರವಾಗಿ ಸರ್ಕಾರದ ಸಬ್ಸಿಡಿ ಹಣ ತಲುಪಿಸುವ ‘ನೇರ ನಗದು ವರ್ಗಾವಣೆ ಯೋಜನೆ’ ಯಶಸ್ವಿಯಾಗಿದೆ. ಈ ಪ್ರಯೋಗದಿಂದ ಈವರೆಗೂ ಕೇಂದ್ರ ಸರ್ಕಾರದ ಬೊಕ್ಕಸದಲ್ಲಿ ಬರೋಬ್ಬರಿ ₹ 28 ಸಾವಿರ ಕೋಟಿ ಹಣ ಉಳಿತಾಯವಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ನಾನಾ ಕ್ಷೇತ್ರಗಳಿಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ.

ನೇರ ನಗದು ವರ್ಗಾವಣೆಯಿಂದ ನಕಲಿ ಫಲಾನುಭವಿಗಳ ನಿಯಂತ್ರಣ ಸಾಧ್ಯವಾಗಿದೆ. ಎಲ್ ಪಿಜಿ ಪಹಲ್ ಯೋಜನೆಯಲ್ಲಿ ಒಟ್ಟು 3.5 ಕೋಟಿ ನಕಲಿ ಫಲಾನುಭವಿಗಳನ್ನು ಕಿತ್ತು ಹಾಕಲಾಗಿದೆ. ಇದರೊಂದಿಗೆ 2014-15 ನೇ ಸಾಲಿನಲ್ಲಿ ₹ 14,672 ಕೋಟಿ ಉಳಿತಾಯವಾಗಿದೆ. ಎಂಜಿಎನ್ ಆರ್ಟಿಜಿಎಸ್ ನಲ್ಲಿ ಸುಮಾರು ₹ 3 ಸಾವಿರ ಕೋಟಿ ಅಂದರೆ ಶೇ. 10 ರಷ್ಟು ಉಳಿದಿದೆ. ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮ ಮೂಲಕ ಹಣ ಪಡೆಯುತ್ತಿದ್ದ 1.5 ಲಕ್ಷ ನಕಲಿ ಪಿಂಚಣಿದಾರರನ್ನು ತೆಗೆದು ಹಾಕಲಾಗಿದೆ.

ಈ ಯೋಜನೆಯ ಪ್ರಗತಿ ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಅಳವಡಿಕೆ ಕುರಿತು ಪ್ರಧಾನಿ ಮೋದಿ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ್ದರು. ಈ ಯಶಸ್ಸಿನ ನಂತರ ಆಹಾರ, ರಸಗೊಬ್ಬರ ಸಬ್ಸಿಡಿಗೂ ನೇರ ನಗದು ವರ್ಗಾವಣೆ ಯೋಜನೆ ತರಲು ಪ್ರಧಾನಿ ಮೋದಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈಗಾಗಲೇ ದೇಶದಲ್ಲಿ ಸುಮಾರು 1.6 ಕೋಟಿ ನಕಲಿ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದ್ದು, ಮುಂದಿನ ವರ್ಷ ಮಾರ್ಚ್ ವೇಳೆಗೆ ಆಧಾರ್ ಕಾರ್ಡ್ ಆಧಾರಿತ ಪಡಿತರ ಚೀಟಿ ವ್ಯವಸ್ಥೆ ಜಾರಿಗೆ ನಿರ್ಧರಿಸಲಾಗಿದೆ. ಹರ್ಯಾಣ ಒಂದೇ ರಾಜ್ಯದಲ್ಲಿ ಸುಮಾರು 6 ಲಕ್ಷ ಸೀಮೆಎಣ್ಣೆ ನಕಲಿ ಫಲಾನುಭವಿಗಳನ್ನು ರದ್ದುಪಡಿಸಿರುವುದರಿಂದ ₹ 600 ಕೋಟಿ ಉಳಿತಾಯವಾಗಿದೆ.  ಸೀಮೆಎಣ್ಣೆ ಸಬ್ಸಿಡಿಗೆ 11 ರಾಜ್ಯಗಳ 33 ಜಿಲ್ಲೆಗಳಲ್ಲಿ ಹಾಗೂ ರಸಗೊಬ್ಬರ ಸಬ್ಸಿಡಿಗೆ 20 ರಾಜ್ಯಗಳಲ್ಲಿ ಪ್ರಾಯೋಗಿಕ ಅಧ್ಯಯನ ನಡೆಸಲು ಸರ್ಕಾರ ಮುಂದಾಗಿದೆ.

Leave a Reply