ರಾಕಿ ಯಾದವನಂಥ ಗೂಂಡಾ ಮನೆತನದವರನ್ನಿಟ್ಟುಕೊಂಡು ಜಂಗಲ್ ರಾಜ್ ಅಲ್ದೇ ಮತ್ತೇನು ಸಾಧಿಸಿಯಾರು ನಿತೀಶ್?

ಡಿಜಿಟಲ್ ಕನ್ನಡ ಟೀಮ್

ಬಿಹಾರದ ಈ ಘನಂದಾರಿ ಮನೆತನದ ಕತೆಯನ್ನು ನೀವು ಒಪ್ಪಿಸಿಕೊಳ್ಳಬೇಕು. ಇದು ಆಡಳಿತಾರೂಢ ಜೆಡಿಯು ಪಕ್ಷಕ್ಕೆ ಸೇರಿದ ಕುಟುಂಬ. ನೇತಾರಿಕೆಯಲ್ಲಿರುವ ಅಪ್ಪ-ಅಮ್ಮಂದಿರ ಕುಡಿ ರಾಕಿ ಯಾದವ್ ಮಾಡಿದ ಮಹತ್ ಕಾರ್ಯವೇನು ಬಲ್ಲಿರೇನಯ್ಯ. ತನ್ನ ಕಾರನ್ನು ಓವರ್ ಟೇಕ್ ಮಾಡಿದ ಕಾರಣಕ್ಕೆ 19 ವರ್ಷದ ಹುಡುಗನನ್ನು ಮೊನ್ನೆ ಶನಿವಾರ ಗುಂಡಿಕ್ಕಿ ಕೊಂದ ಆರೋಪ ಈತನ ಮೇಲಿದೆ. ಮೇಲ್ನೋಟದ ಸಾಕ್ಷ್ಯಗಳೆಲ್ಲ ಈತ ಕೃತ್ಯ ಎಸಗಿರುವುದನ್ನು ಸಾಬೀತುಗೊಳಿಸುವಂತಿವೆ.

ಈ ರಾಕಿ ಯಾದವ್ ಪ್ರಕರಣದಲ್ಲಿ ಆತನ ಬಂಧನವಾಗಿ, ಆತನ ಮನೆತನದ ಮೇಲೆ ಬುಧವಾರ ದಾಳಿ ಆದಾಗ ಕಂಡಿದ್ದೇನು? ಆತನ ಎಂಎಲ್ಸಿ ತಾಯಿ ಮನೋರಮಾ ದೇವಿ ಬಳಿ ವಿದೇಶಿ ಮದ್ಯದ ಭರಪೂರ ದಾಸ್ತಾನು. ನಿಮಗೆ ಗೊತ್ತಿರಲಿ, ಬಿಹಾರವನ್ನು ಮದ್ಯಮುಕ್ತ ರಾಜ್ಯವೆಂದು ಘೋಷಿಸಿ, ಇದನ್ನು ಮೀರುವವರಿಗೆ ಶಿಕ್ಷೆಗಳನ್ನೂ ನಿತೀಶ್ ಸರ್ಕಾರ ತಿಂಗಳ ಹಿಂದಷ್ಟೇ ಘೋಷಿಸಿತ್ತು. ಈಗ ನೋಡಿದರೆ ಜೆಡಿಯುದಲ್ಲೇ ಶಿಕ್ಷೆಗೆ ಅರ್ಹರಾಗುವವರಿದ್ದಾರೆ.

ಇಂಥ ಎಲ್ಲ ಹಿಟ್ ಅಂಡ್ ರನ್ ಕೇಸುಗಳಲ್ಲಾಗುವಂತೆ, ನಾಳೆ ಈ ರಾಕಿ ಯಾದವನೂ ತಾನು ಘಟನಾ ಸ್ಥಳದಲ್ಲಿರಲೇ ಇಲ್ಲ. ಗುಂಡು ಹಾರಿಸಿದವ ಇನ್ಯಾರೋ ಅಂತ ಬಚಾವೂ ಆಗಲು ಪ್ರಯತ್ನಿಸಿಯಾನು. ಆದರೆ ಈತನ ‘ಗನ್ ಪ್ರೀತಿ’ ಫೇಸ್ಬುಕ್ಕಿನ ಖಾತೆಯಲ್ಲಿ ಚೆನ್ನಾಗಿ ಜಾಹೀರಾಗಿದೆ. ಹೊಸ ಪಿಸ್ತೂಲಲ್ಲಿ ಗುರಿ ಸಾಧಿಸಿದೆ ಎಂಬ ಪೋಸ್ಟುಗಳು, ಎ.ಕೆ 47 ಗನ್ನು ರಾಶಿಯ ಫೋಟೋಗಳನ್ನು ಹಾಕಿ ಸಂಭ್ರಮಿಸುತ್ತಿರೋದು… ಈತನ ಫೇಸ್ಬುಕ್ ಖಾತೆಯಲ್ಲಿ ಇಂಥವೇ ದಂಡಿಯಾಗಿವೆ.

ಇದಕ್ಕೆ ಪೂರಕವಾಗಿ ಈತನ ತಂದೆಯೂ ಮಹಾನ್ ಚಾಲಾಕಿ. ಈತನ ತಂದೆ ಬಿಂದಿ ಯಾದವ್ 2010 ರ ಚುನಾವಣೆ ಸಂದರ್ಭದಲ್ಲಿ ಮಾವೋವಾದಿಗಳಿಗೆ ಪಿಸ್ತೂಲು, ಸ್ಫೋಟಕಗಳನ್ನು ಪೂರೈಸುತ್ತಿದ್ದ ಆರೋಪದಲ್ಲಿ ಬಂಧಿತನಾಗಿದ್ದ. 2005ರಲ್ಲಿ ಪಕ್ಷೇತರನಾಗಿ, 2010ರಲ್ಲಿ ಆರ್ ಜೆಡಿ ಪರ ವಿಧಾನಸಭೆಗೆ ಸ್ಪರ್ಧಿಸಿ ಸೋತವನೀತ.

ಇಂಥ ‘ದಿವ್ಯ ಮನೆತನದ’ ರಾಕಿ ಯಾದವ್ ತನಗೆ ಸಿಟ್ಟು ಬಂತೆಂಬ ಕಾರಣಕ್ಕೆ ಸೊಳ್ಳೆ ಹೊಡೆದಂತೆ ಮಾನವ ಜೀವವೊಂದನ್ನು ಇಲ್ಲವಾಗಿಸಿದ್ದಾನೆ. ಅತ್ತ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿ ಸ್ಥಾನದಲ್ಲಿ ವಿರಾಜಮಾನರಾಗಿರುವ ತೇಜಸ್ವಿ ಯಾದವ್ ಎಂಬ ಲಾಲು ಪುತ್ರರತ್ನ ಮೇಜು ಕುಟ್ಟಿ ಕುಟ್ಟಿ ಹೇಳ್ತಿದಾರೆ, ‘ಬಿಹಾರದಲ್ಲಿ ಜಂಗಲ್ ರಾಜ್ ಇಲ್ವೇ ಇಲ್ಲ. ಇಲ್ಲೇನಿದ್ರೂ ಕಾನೂನಿನ ರಾಜ್ಯ’ ಅಂತ. ಲಾಲೂನ ಆರ್ ಜೆಡಿಯಂತ ಮಹಾಭ್ರಷ್ಟರಿಗೆ ಹೆಚ್ಚು ಸೀಟು ಕೊಟ್ಟ ಅಲ್ಲಿನ ಜನತೆ ಈಗಲಾದರೂ ತಮ್ಮನ್ನು ತಾವು ಕೇಳಿಕೊಳ್ಳಬೇಕು- ನಮಗಿದು ಬೇಕಿತ್ತಾ? ಅಂತ…

Leave a Reply