ವ್ಯಾಮೋಹ ಬಿಡೋದೇ ತಾಯಿ ಖುಷಿಯಾಗಿರಬಹುದಾದ ಮಾರ್ಗ!

author-geetha ‘ಹ್ಯಾಪಿ ಮದರ್ಸ್ ಡೇ’

‘ಥ್ಯಾಂಕ್ಯೂ’

‘ಫೇಸ್ ಬುಕ್ಕಲ್ಲಿ ವಿಶ್ ಮಾಡಿ ಫೋಟೋ ಹಾಕಿದ್ದೇನೆ ನೋಡಿದ್ರಾ?’

‘ಹೂಂ.. ನೋಡಿದೆ..’

‘ನಮ್ಮಮ್ಮನಿಗೂ ವಿಶ್ ಮಾಡಿದೆ. ನೀವೂ ನನ್ನ ಅಮ್ಮನ ಹಾಗೆ. ಅದಕ್ಕೆ ನಿಮಗೂ ವಿಶ್ ಮಾಡ್ತಾ ಇದೀನಿ.’

‘ಥ್ಯಾಂಕ್ಸ್’.

ಫೋನ್ ಆಫ್ ಮಾಡಿ ಕುಳಿತೆ. ಫೇಸ್ ಬುಕ್ ಭರ್ತಿ ಅಮ್ಮ ಮಕ್ಕಳ ಫೋಟೋಗಳು ಕಣ್ಣಿಗೆ ತಂಪು.. ಒಳ್ಳೊಳ್ಳೆಯ ಕವನಗಳು, ಅಮ್ಮನ್ನ ಹೊಗಳುವ ವಾಕ್ಯಗಳು ಮನಸ್ಸಿಗೆ ಹಿತ.

‘ಮಾತೃದೇವೋಭವ’ ನಮ್ಮ ಸಂಸ್ಕೃತಿಯ, ನಮ್ಮ ವಿಚಾರದ ಮೂಲಮಂತ್ರ… ಸನ್ಯಾಸಿಯಾದವನು ಭವಬಂಧನದಿಂದ ಕಳಚಿಕೊಂಡವನಾದರೂ ತಾಯಿಗೆ ನಮಸ್ಕರಿಸುತ್ತಾನೆ. ವರ್ಷದಲ್ಲಿ ಒಂದು ದಿನ ಎಂದು ನಿಗದಿಪಡಿಸಬೇಕಿಲ್ಲ.. ಪ್ರತಿದಿನವೂ ತಾಯಿಯನ್ನು ಪೂಜಿಸಬೇಕು. ಎಂದು ಒಂದಷ್ಟು ಜನ ಭಕ್ತಿಯಿಂದ ಹೇಳಿದರೆ, ‘ತಂದೆತಾಯಿ ದೇವರಲ್ಲ’ ಎಂದು ನಮ್ಮ ಜೋಗಿ ಪುಸ್ತಕ ಬರೆಯುತ್ತಾರೆ. ಪೂಜಿಸಬೇಡಿ, ಪ್ರೀತಿಸಿ ಎಂದು ಟ್ಯಾಗ್ ಲೈನ್ ಬೇರೆ ಕೋಡುತ್ತಾರೆ.

ಪೂಜಿಸಲೂ ಬೇಡಿ, ಪ್ರೀತಿಸಲೂ ಬೇಡಿ.. ವೃದ್ಧಾಶ್ರಮಕ್ಕೆ ಓಡಿಸದೆ ಮನೆಯಲ್ಲಿ ಇಟ್ಟುಕೊಂಡು ನೋಡಿಕೊಳ್ಳಿ ಸಾಕು.. ಜವಾಬ್ದಾರಿ ಎಂದರೆ ಅದು ಎಂದು ಬುದ್ಧಿ ಹೇಳುವವರೂ ಇದ್ದಾರೆ.

ಆನೆ, ಹುಲಿ, ನಾಯಿ, ಬೆಕ್ಕು.. ಮರಿಗಳೊಂದಿಗೆ ಇರುವ ಫೋಟೋ ಹಾಕಿ ಹ್ಯಾಪಿ ಮದರ್ಸ್ ಡೇ ಅನ್ನುವವರೂ ಇದ್ದಾರೆ. ಆನೆ ಈಯುವ (ಮರಿ ಹಾಕುವ) ಎರಡು ನಿಮಿಷದ ವಿಡಿಯೋ ಹಾಕಿ, ನಿಮ್ಮನ್ನು ಹೆತ್ತ ತಾಯಿಯನ್ನು ಗೌರವಿಸಿ ಎಂದು ಉಧ್ಗರಿಸುವವರೂ ಇದ್ದಾರೆ.

ಒಂದು ಮಾತ್ರ ನಿಜ. ವ್ಯಾಲಂಟೈನ್ಸ್ ಡೇಯನ್ನು ಮೀರಿಸಿತು ಮದರ್ಸ್ ಡೇ ಸಡಗರ. ತಾಯಿಯನ್ನು ನೋಡಿಕೊಳ್ಳಿ, ಅವಳಿಗೆ ಉಡುಗೊರೆ ಕೊಡಿ, ಅವಳನ್ನು ಡಿನ್ನರಿಗೆ ಕರೆದುಕೊಂಡು ಹೋಗಿ.. ಎಂದೆಲ್ಲಾ ಜಾಹಿರಾತುಗಳು ರಾರಾಜಿಸಿತು.

ನಮ್ಮ ದೇಶದಲ್ಲಿ ದೇಶವನ್ನು ಕುಡಿಯುವ ನೀರನ್ನು ತಾಯಿಗೆ ಹೋಲಿಸುತ್ತೇವೆ. ತಾಯಿಯನ್ನು ಪೂಜಿಸುತ್ತೇವೆ. ಧನವನ್ನು ಕೊಡುವವಳು ಲಕ್ಷ್ಮಿಮಾತೆ, ವಿದ್ಯೆಯನ್ನು ದಯಪಾಲಿಸುವವಳು ಶಾರದಾಮಾತೆ ಹಾಗೂ ಶಕ್ತಿಯನ್ನು ಕೊಡುವವಳು ಜಗನ್ಮಾತೆ. ದೇವರಲ್ಲಿ ತಾಯಿಯ ಸ್ವರೂಪ, ತಾಯಿಯಲ್ಲಿ ದೇವರು ಕಾಣುತ್ತೇವೆ. ಧರಣಿ ಕೂಡ ದೇವಿ ನಮಗೆ..

ಕುಪ್ರತ್ರೋ ಜಾಯೆತ್ ಕ್ವಚಿದಪಿ

ಕುಮಾತಾ ನ ಭವತಿ

ಕೊಟ್ಟ ಮಗನಿರಬಹುದಾಗಲಿ, ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ.

ನಾನು ಒಬ್ಬಳು ತಾಯಿ. ಈ ತಾಯಿಯೇ ದೇವರು ಎಂಬ ಕಿರೀಟದ ಭಾರದಿಂದ ಕುಸಿದು ಹೋಗಬಹುದಾದ ಪಾತ್ರವದು. ಹೊರೆ, ಭಾರ ತೆಗೆದಿಟ್ಟರೆ ದೈವಪಟ್ಟ ಕಳೆದು ಹೋಗುತ್ತದೆ ಎಂಬ ಸಂಕಟ!

ಗಂಡು, ಹೆಣ್ಣು ಇಬ್ಬರೂ ಜೀವನದಲ್ಲಿ ವಿವಿಧ ಪಾತ್ರಗಳನ್ನು, ಸ್ಥಾನಗಳನ್ನು ನಿಭಾಯಿಸಬೇಕು. ಹಾಗೆಯೇ ತಾಯಿ ಹಾಗೂ ತಂದೆಯ ಸ್ಥಾನ.

ಬಾಳಿಗೆ ಒಂದೇ ಮನೆ

ಬಾಳೆಗೆ ಒಂದೇ ಗೊನೆ

ಭೂಮಿಗೆ ದೈವ ಒಂದೆನೇ… ತಾಯಿ

ದಾರಿಗೆ ಒಂದೇ ಕೊನೆ

ರಾಗಿಗೆ ಒಂದೇ ತೆನೆ

ಸೃಷ್ಠಿಸೋ ಜೀವ ಒಂದೆನೇ.. ತಾಯಿ

ಹೀಗೇ ಹಾಡುಗಳನ್ನು ಬರೆದು ಅವಳನ್ನು ದೈವದ ಸ್ಥಾನದಲ್ಲಿ ಕೂರಿಸಿ ಕಟ್ಟಿ ಹಾಕಿ ಬಿಟ್ಟಿದ್ದಾರೆ.

ದೈವ ಎಂದು ಕರೆದ ಮೇಲೆ ಮೌನವಾಗಿರಬೇಕು. ತ್ಯಾಗಮಯಿ ಎಂದು ಬಿರುದುಕೊಟ್ಟ ಮೇಲೆ ಸ್ವಂತಕ್ಕೆ ಯೋಚನೆ ಮಾಡುವುದು ಸ್ವಾರ್ಥವಾಗುತ್ತದೆ. ಹಾಗಾಗಿ ಬಿಟ್ಟುಕೊಟ್ಟು ಜೀವನ ನಡೆಸಿ, ಮಕ್ಕಳು ದೊಡ್ಡವರಾದ ಮೇಲೆ ಅನಾಥ ಪ್ರಜ್ಞೆ. ಆಗ ಪ್ರಲಾಪ ಶುರು. ನಾನು ಹೊತ್ತೆ.. ಒಂಬತ್ತು ತಿಂಗಳು ಹೊತ್ತೆ, ಎರಡು ದಿನ ನೋವು ತಿಂದು ಹೆತ್ತೆ. ರಾತ್ರಿ ನಿದ್ದೆಗೆಟ್ಟೆ, ನಾನು ತಿನ್ನದೇ ನಿನಗೆ ತಿನ್ನಿಸಿದೆ, ಕೆಲಸ ಬಿಟ್ಟೆ, ಹೀಗೇ ಉದ್ದಕ್ಕೆ ಮಾಡಿದ್ದರ, ಮಾಡಬೇಕು ಎಂದು ಅಂದುಕೊಂಡಿದ್ದರ ಬಗ್ಗೆ ಮಾತನಾಡುತ್ತಾ, ಚೆಂದ ಕೇಳಿಸಲು ಅದಕ್ಕೆ ಮತ್ತಷ್ಟು ಸಕ್ಕರೆ ಬೆರೆಸುತ್ತಾ (ಉಪ್ಪು! ಖಾರ!) ಮಕ್ಕಳನ್ನು ಒಂದು guilt tripಗೆ ಕಳುಹಿಸುವುದರಲ್ಲಿ ಸಂಪೂರ್ಣ ಯಶಸ್ವಿಯಾಗುತ್ತಾರೆ. ನಮ್ಮಮ್ಮ ತುಂಬಾ ಕಷ್ಟಪಟ್ಟಿದ್ದಾರೆ, ತ್ಯಾಗ ಮಾಡಿದ್ದಾರೆ, ನೋವು ಅನುಭವಿಸಿದ್ದಾರೆ… ಎಂದು ಮಕ್ಕಳು ಅನ್ನಬೇಕು ಎಂಬ ಆಸೆಯೇಕೆ? ದುಃಖದಲ್ಲಿ, ಕಷ್ಟದಲ್ಲಿ (ಅದನ್ನು ಪದೇ ಪದೇ ಹೇಳಿಕೊಳ್ಳುವುದರಲ್ಲಿ) ಸುಖವನ್ನು ಕಾಣುವವರನ್ನು ಕಂಡರೆ ಖೇದವಿದೆ.

ಬೈಯದೆ, ಹೊಡೆಯದೆ, ಕಿರುಚಾಡದೆ ಮಕ್ಕಳನ್ನು ಬೆಳೆಸಿದ ತಾಯಂದಿರು ಇದ್ದಾರೆ ಎಂದು ನಂಬುವುದು ಕಷ್ಟ. ನಾವು ಹಾಗೆ ಇದ್ದೆವು ಎಂದು ನಂಬಿಸಲು ಯಾಕೆ ಹೋಗಬೇಕು?

ನಮ್ಮ ಒಡಲಲ್ಲಿ ಮೂಡಿ, ಮಡಿಲಲ್ಲಿ ಬೆಳೆಯುವ ಮಕ್ಕಳ ಮೇಲೆ ವ್ಯಾಮೋಹ ಸಹಜ. ಪುಟ್ಟ ಮಗುವಿನ ಅಸಹಾಯಕತೆ ಹಾಗೂ ತಾಯಿಯ ಮೇಲೆ ಅವಲಂಬಿತವಾಗುವ ಅದರ ಅನಿವಾರ್ಯತೆ, ತಾಯಿ- ಮಗು ಸಂಬಂಧದ ಮೂಲ…

ಮಗು ಕಣ್ಣರಳಿಸಿ ನಕ್ಕಾಗ, ಗುರುತು ಹಿಡಿದು ಕೈ ಚಾಚಿದಾಗ, ಮೊಲೆ ಕುಡಿದು ಒರಗಿದಾದ, ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಬಳಿ ಧಾವಿಸಿದಾಗ, ಕಣ್ಮರೆಯಾದಾಗ ಅತ್ತು ಹಠ ಹಿಡಿದಾಗ, ಕಂಡಾಗ ಒಡಿ ಬಂದು ಅಪ್ಪಿದಾಗ.. ಸಿಕ್ಕ ಆನಂದವನ್ನು, ತೃಪ್ತಿಯನ್ನು ಉಳಿಸಿಕೊಂಡು ಬಿಟ್ಟರೆ ಸಾಕು. ವೃದ್ಧಾಶ್ರಮದಲ್ಲಿಯೂ ಸುಖವಾಗಿ ಇರಬಹುದು.

Old age home! Senior citizens home! ಕನ್ನಡದಲ್ಲಿ ವೃದ್ಧಾಶ್ರಮ ಎಂದು ಯಾಕೆ ಕರೆದರೋ (ಅನುವಾದಿಸಿದರೋ) ಗೊತ್ತಿಲ್ಲ.. ಈ ಆಶ್ರಮ ಎಂಬ ಪದಕ್ಕೆ negative connotation ಇರುವುದರಿಂದ ಜನಕ್ಕೆ ಹಿಂಜರಿತ ಹೆಚ್ಚು. ವೃದ್ಧಾಶ್ರಮ ಪರ್ಯಾಯ ಪದ ಹುಡುಕಬೇಕು!

‘If you love, let go!’ ‘ಬಿಡುವುದರಲ್ಲಿ ಸುಖವಿದೆ’ ಎನ್ನುತ್ತಾರೆ. ಹಾಗೆಂದು ಊಟ ಬಿಟ್ಟು, ನೆಲದ ಮೇಲೆ ಮಲಗಿ, ಒಡವೆ ವಸ್ತ್ರ ಬಿಡಿ ಎಂದಲ್ಲ ಎಂಬುದು ನನ್ನ ಅನಿಸಿಕೆ. ವ್ಯಾಮೋಹ ಬಿಡಬೇಕು. ಬೆಳೆದ ಮಕ್ಕಳು ಸ್ವಂತಃ ನಿರ್ಧಾರ ತೆಗೆದುಕೊಳ್ಳಬಲ್ಲರು ಎಂದು ನಂಬಬೇಕು. ಶಕ್ತಿಯಿದ್ದಾಗ, ದುಡಿಯುತ್ತಿದ್ದಾಗ ಕಷ್ಟಕಾಲಕ್ಕೆ, ವೃದ್ಧಾಪ್ಯಕ್ಕೆ ಕೊಂಚ ಎತ್ತಿಟ್ಟು, ಕೂಡಿಟ್ಟು ಖರ್ಚು ಮಾಡಬೇಕು. ಮಾನಸಿಕವಾಗಿ ಗಟ್ಟಿಯಾಗಬೇಕು. ದುಡ್ಡಿಲ್ಲದಿದ್ದರೆ, ವೃದ್ಧ ತಂದೆ-ತಾಯಿಗೆ ತಿಂಗಳು, ತಿಂಗಳು ಮೈಂಟೇನೆನ್ಸ್ ಕೊಡಬೇಕು ಎಂದು ಕೋರ್ಟ್ ಮೂಲಕ ಆದೇಶ ತರಬಹುದು. ಆದರೆ, ಪ್ರೀತಿಸಬೇಕು ಎಂದು ಎಲ್ಲಿಂದ ಆದೇಶ ತರಲು ಸಾಧ್ಯ?

ಕಷ್ಟಪಟ್ಟರೆ, ತ್ಯಾಗ ಮಾಡಿದರೆ.. ಕರುಣೆ ಸಿಗುತ್ತದೆ. ಪ್ರೀತಿಸಿದರೆ ಪ್ರೀತಿ ಸಿಗುತ್ತದೆ. ಸ್ವಂತಿಕೆಯಿದ್ದರೆ as a bonus ಗೌರವವೂ ಇರುತ್ತದೆ.

‘ಹ್ಯಾಪಿ ಮದರ್ಸ್ ಡೇ.’

Leave a Reply