ಕೇರಳವನ್ನು ಸೋಮಾಲಿಯಾಕ್ಕಿಂತ ಕಡೆ ಅಂತ ಅವಮಾನಿಸಿದರೇ ಪ್ರಧಾನಿ ನರೇಂದ್ರ ಮೋದಿ?

ಡಿಜಿಟಲ್ ಕನ್ನಡ ವಿಶೇಷ
ಕೇರಳ ವಿಧಾನಸಭೆ ಚುನಾವಣೆಯ ಪ್ರಚಾರಾಂದೋಲನದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೇರಳವನ್ನು ಸೋಮಾಲಿಯಾಕ್ಕೆ ಹೋಲಿಸಿರುವುದು ವಿವಾದವನ್ನೇ ಹುಟ್ಟುಹಾಕಿದೆ. ಹೀಗೆ ಕೇರಳದ ಅಭಿಮಾನವನ್ನು ಅವಮಾನಿಸಿರುವುದಕ್ಕೆ ಮೋದಿ ಕ್ಷಮೆಯಾಚಿಸಬೇಕು ಎಂದಿದ್ದಾರೆ ಮುಖ್ಯಮಂತ್ರಿ ಒಮನ್ ಚಾಂಡಿ.ಹಾಗಾದರೆ ಮೋದಿ ಬೇಜವಾಬ್ದಾರಿಯ ಹೇಳಿಕೆ ಕೊಟ್ಟರೇ? ಇದಕ್ಕೆ ಉತ್ತರ ದೊರಕಿಸಿಕೊಳ್ಳಬೇಕಿದ್ದರೆ ಕೇರಳವನ್ನು ಸೋಮಾಲಿಯಾಕ್ಕಿಂತ ಕಡೆ ಅಂತ ಹೇಳಿದ್ದು ಯಾವ ಅಂಶದಲ್ಲಿ ಅಂತ ಇಡಿ ಇಡಿಯಾಗಿ ಗಮನಿಸಬೇಕಾಗುತ್ತದೆ.

ಕಸದ ತೊಟ್ಟಿಯಲ್ಲಿ ಆಹಾರ ಹುಡುಕುತ್ತಿರುವ ಬಾಲಕರ ಕರುಣಾಜನಕ ಚಿತ್ರವೊಂದು ಮಾತೃಭೂಮಿ ಪತ್ರಿಕೆಯಲ್ಲಿ ನವೆಂಬರ್ ಸಂಚಿಕೆಯೊಂದರಲ್ಲಿ ಪ್ರಕಟವಾಗಿ ಭಾರಿ ಚರ್ಚೆಗೆ ಕಾರಣವಾಗಿತ್ತು. ನರೇಂದ್ರ ಮೋದಿ ಇದನ್ನು ಉದಾಹರಿಸುತ್ತಲೇ ಭಾಷಣ ಹೆಣೆದರು- ‘ಇಲ್ಲಿನ ಜನಜಾತಿ, ಅದರಲ್ಲೂ ವಿಶೇಷವಾಗಿ ಬುಡಕಟ್ಟು ಸಮುದಾಯದ ಮಂದಿ, ಸ್ವಾತಂತ್ರ್ಯ ಬಂದು 70 ವರ್ಷಗಳ ನಂತರವೂ ಎಡಪಕ್ಷ ಮತ್ತು ಕಾಂಗ್ರೆಸ್ ಗಳ ಆಡಳಿತದಲ್ಲಿ ಎಷ್ಟು ಕೆಟ್ಟ ಪರಿಸ್ಥಿತಿ ತಲುಪಿದ್ದಾರೆಂಬುದಕ್ಕೆ ಪತ್ರಿಕೆಯಲ್ಲಿ ಬಂದ ಚಿತ್ರವೇ ಸಾಕ್ಷಿ. ಇದು ಸೋಮಾಲಿಯಾಕ್ಕಿಂತ ಭೀಕರ ಸ್ಥಿತಿ’ ಎಂದುಬಿಟ್ಟರು ನರೇಂದ್ರ ಮೋದಿ.

ಖಂಡಿತ ಇದರಲ್ಲಿ ಉತ್ಪ್ರೇಕ್ಷೆ ಇದೆ. ಆದರೆ ಆತ್ಮಾವಲೋಕನಕ್ಕಂತೂ ಖಂಡಿತ ಅವಕಾಶವಿದೆ. ಏಕೆಂದರೆ ಕೇರಳದ ಬುಡಕಟ್ಟು ಸಮುದಾಯಗಳಾದ ಇರುಳ, ಮುದುಗ, ಕುರುಂಬೈನ್ ಅತ್ತಪಾಡಿ ಬುಡಕಟ್ಟು ಸಮುದಾಯಗಳು ತೀರ ಕೆಟ್ಟಸ್ಥಿತಿಯಲ್ಲೇ ಇವೆ ಎಂಬುದನ್ನು ಈಗ ಮೋದಿ ಮಾತಿಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಮತ್ತು ಎಡಪಕ್ಷಗಳೆರಡೂ ಅರ್ಥಮಾಡಿಕೊಳ್ಳಬೇಕು. ಕೇರಳದ ಬುಡಕಟ್ಟು ಸಮುದಾಯದಲ್ಲಿ ಶಿಶುಮರಣದ ಪ್ರಮಾಣ 1000ಕ್ಕೆ 60 ಇದೆ. ಈ ಬುಡಕಟ್ಟು ಸಮುದಾಯ ಹೊರತುಪಡಿಸಿದರೆ, ಒಟ್ಟಾರೆ ಕೇರಳದ ಶಿಶುಮರಣ ಪ್ರಮಾಣ 1000ಕ್ಕೆ 12. ಪಾಲಕ್ಕಾಡಿನಲ್ಲಿ 3 ವರ್ಷಗಳ ಅವಧಿಯಲ್ಲಿ ಎಸ್ಟಿ ಸಮುದಾಯದಲ್ಲಿ ಸತ್ತ ಶಿಶುಗಳ ಸಂಖ್ಯೆ 595.

ಆದರೆ… ಮೋದಿ ಹೇಳುವಂತೆ ಸೋಮಾಲಿಯಾಕ್ಕಿಂತ ಕೆಟ್ಟ ಪರಿಸ್ಥಿತಿ ಎಂಬುದು ಮಾತ್ರ ಜನರನ್ನು ದಿಗಿಲಿಗೆ ತಳ್ಳುವ ಉತ್ಪ್ರೇಕ್ಷೆ ಅಷ್ಟೆ. ಏಕೆಂದರೆ ವಿಶ್ವಬ್ಯಾಂಕ್ ದಾಖಲೆ ಪ್ರಕಾರ ಸೋಮಾಲಿಯಾದಲ್ಲಿ ಶಿಶುಮರಣ ಪ್ರಮಾಣ 1000ಕ್ಕೆ 85. ಇನ್ನು… ಅಂಕಿಅಂಶಗಳೆಂದರೆ ಬಿಕಿನಿ ಇದ್ದಂತೆ. ಎಲ್ಲವನ್ನೂ ತೆರೆದಿಟ್ಟಂತೆ ತೋರಿದರೂ ಮುಖ್ಯಭಾಗವನ್ನು ಮುಚ್ಚಿಡುತ್ತದೆ ಎಂಬ ಜೋಕೊಂದಿದೆ. ಅಂತೆಯೇ ನರೇಂದ್ರ ಮೋದಿಯವರೂ ಅಂಕಿಅಂಶಗಳನ್ನು ತಮಗೆ ಬೇಕಾದಂತೆ ಬಳಸಿಕೊಂಡಿದ್ದಾರೆ. ಕೇರಳದ ಎಸ್ಟಿ ಸಮುದಾಯದವರ ಸಮಸ್ಯೆಗಳಿಗೆ ಸ್ಪಂದಿಸಲೇಬೇಕಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಏಕೆಂದರೆ, ಪ್ರಧಾನಿ ಹಿಂದೊಮ್ಮೆ ಮುನ್ನಡೆಸಿದ್ದ ಗುಜರಾತ್ ರಾಜ್ಯದಲ್ಲಿ ಮಕ್ಕಳ ಅಪೌಷ್ಟಿಕತೆ ಪ್ರಮಾಣ ಹೆಚ್ಚಾಗಿದೆ ಎಂದು ವಿಶ್ವಸಂಸ್ಥೆಯ ವರದಿ ಬಂದಾಗ, ಅದು ಹಳೆ ಅಂದಾಜು ಎಂದು ಅಲ್ಲಿನ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅದನ್ನು ಪ್ರಕಟಿಸುವುದಕ್ಕೆ ನಿರ್ಬಂಧಿಸಿದರು.

ಬೇರೆಯವರನ್ನು ಹಳಿಯುವುದಕ್ಕೆ ಅಂಕಿಅಂಶ ಬೇಕು ಎಂದಾದಾಗ, ತಮ್ಮ ವಿಷಯದಲ್ಲೇಕೆ ನಿರಾಕರಣೆ ಎಂಬ ಪ್ರಶ್ನೆಯೂ ಏಳುತ್ತದೆ. ಕೇರಳದಲ್ಲಿ ಅತಿಹೆಚ್ಚಿನ ನಿರುದ್ಯೋಗ ತಾಂಡವವಾಡುತ್ತಿದೆ ಅಂತ ಪ್ರಧಾನಿ ಹರಿಹಾಯ್ದಿದ್ದರಲ್ಲೂ ಸತ್ಯಾಂಶವಿದೆ. ಆದರೆ ಅದಷ್ಟೇ ಅಂಕಿಅಂಶ ತೋರಿಸಿ, ಉಳಿದಿದ್ದನ್ನು ನಿರ್ಲಕ್ಷಿಸಿದ್ದರಲ್ಲಿ ರಾಜಕೀಯ ಬುದ್ಧಿವಂತಿಕೆ ಇದೆ. 15 ವರ್ಷ ಮೀರಿದವರ ನಿರುದ್ಯೋಗ ಸರಾಸರಿ ಕೇರಳದಲ್ಲಿ 1000ಕ್ಕೆ 99. ರಾಷ್ಟ್ರೀಯ ಸರಾಸರಿ 38 ಮಾತ್ರ. ಆದರೆ, ಇನ್ನೊಂದು ಆಯಾಮವನ್ನೂ ಗಮನಿಸಬೇಕು. ಕೇರಳಿಗರೆಲ್ಲ ಗಲ್ಫ್ ಸೇರಿದಂತೆ ಇತರ ರಾಷ್ಟ್ರಗಳಿಗೆ ವಲಸೆ ಹೋಗಿ ಉದ್ಯೋಗ ಕಂಡುಕೊಂಡಿದ್ದಾರೆ. ವಿದೇಶದಿಂದ ಜಮೆಯಾಗುತ್ತಿರುವ ಆದಾಯದ ಪೈಕಿ ಸುಮಾರು ಶೇ. 40ರಷ್ಟು ಕೇರಳಕ್ಕೆ ಸಲ್ಲುತ್ತದೆ.

2015-16ರಲ್ಲಿ 1 ಲಕ್ಷ ಕೋಟಿ ರು ವಿದೇಶಿ ಮೂಲದ ಠೇವಣಿ ಕೇರಳದಲ್ಲಿ ಸಂದಾಯವಾಗಿದೆ. ಗುಜರಾತ್ ಅಸ್ಮಿತೆ ಅಂತ ತಾವು ಮುಖ್ಯಮಂತ್ರಿಯಾಗಿದ್ದಾಗ ಬೊಬ್ಬಿರಿಯುವ ಹಕ್ಕು ನರೇಂದ್ರ ಮೋದಿಯವರಿಗಿತ್ತು ಅಂತಾದರೆ ಕೇರಳದ ಆತ್ಮಾಭಿಮಾನದ ಬಗ್ಗೆ ಮಾತಾಡುವ ಹಕ್ಕು ಮುಖ್ಯಮಂತ್ರಿ ಚಾಂಡಿಗೂ ಇದೆ. ಆದರೆ ಈ ಸ್ಲೋಗನ್ ಗಳ ಉನ್ಮಾದದಲ್ಲಿ ಇಬ್ಬರೂ ಕೆಲವು ವಾಸ್ತವಗಳಿಗೆ ಬೆನ್ನು ತೋರುತ್ತಿದ್ದಾರೆ ಎಂಬುದು ಪರಾಮರ್ಶೆಗೆ ದಕ್ಕುವ ಸಂಗತಿ.

Leave a Reply