ದಾರೀಲಿ ಸಿಕ್ಕವರಿಗೆ ಆಭರಣ ಬಿಚ್ಚಿಕೊಟ್ಟು, ಆಮೇಲೆ ಲಬೋ, ಲಬೋ ಅಂತ ಬಾಯಿ ಬಡಿದುಕೊಳ್ಳೋರು ಈ ಅಜ್ಜೀನಾ ನೋಡಿ ಕಲೀಬೇಕು!

AA8MCA An elderly lady with severe arthritis

ಡಿಜಿಟಲ್ ಕನ್ನಡ ಟೀಮ್

ವಯಸ್ಸಾದವರನ್ನು ಸುಲಭವಾಗಿ ಯಾಮಾರಿಸಿ ದರೋಡೆ ಮಾಡಬಹುದು ಎಂದು ಭಾವಿಸಿದ್ದ ಖದೀಮ ಅಲಿರಾಜಾ ಅಜೀಜ್ ಜಾಫರ್ ಎಂಬಾತನನ್ನು ಅಜ್ಜಿಯೊಬ್ಬರು ಬಜ್ಜಿ ಮಾಡಿದ ರೋಚಕ ಘಟನೆ ಮುಂಬೈನ ದಾದರ್ ಪ್ರದೇಶದಲ್ಲಿ ನಡೆದಿದೆ. 81 ವರ್ಷದ ಪುಷ್ಪಬೆನ್ ಭಲ್ಲಾ ಖದೀಮನಿಗೆ ಪಾಠ ಕಲಿಸಿದ ಕಿಲಾಡಿ ಅಜ್ಜಿ.

ನಗರ ಪ್ರದೇಶಗಳಲ್ಲಿ ಒಂಟಿ ಮಹಿಳೆಯರಿರುವ ಮನೆ ಕಳ್ಳಕಾಕರ ಗುರಿ ಎಂಬ ಅನೇಕ ಪ್ರಕರಣಗಳನ್ನು ನೋಡಿದ್ದೇವೆ. ಅದರಲ್ಲೂ ವಯಸ್ಸಾದ ಮಹಿಳೆಯರು ಖದೀಮರ ಫೇವರೆಟ್ ಟಾರ್ಗೆಟ್. ಅದೇ ರೀತಿ ಪುಷ್ಪಬೆನ್ ಅವರನ್ನು ದೋಚಲೆತ್ನಿಸಿದ ಜಾಫರ್ ಈಗ ಪೊಲೀಸರ ಅತಿಥಿ. ಈ ಪ್ರಕರಣದಲ್ಲಿ ಅಜ್ಜಿಯ ಧೈರ್ಯ ಹಾಗೂ ಜಾಣ್ಮೆ ನಿಜಕ್ಕೂ ಸ್ಫೂರ್ತಿದಾಯಕ. ಅಂದಹಾಗೆ ಈ ಅಜ್ಜಿ ಕಳ್ಳನಿಗೆ ಪಾಠ ಕಲಿಸಿದ್ದು ಹೇಗೆ ಗೊತ್ತೇ?

ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ತಮ್ಮ ಅಪಾರ್ಟ್ ಮೆಂಟ್ ನ ಮುಂದಿರುವ ಹನುಮ ದೇಗುಲಕ್ಕೆ ಒಂಟಿಯಾಗಿ ತೆರಳುತ್ತಿದ್ದ ಪುಷ್ಪಬೆನ್ ಅವರನ್ನು ಕಂಡ ಖದೀಮರ ಕಣ್ಣಿಗೆ ರಾಚಿದ್ದು ಆಕೆಯ ಕೈಯಲ್ಲಿದ್ದ ಚಿನ್ನದ ಬಳೆಗಳು. ಅದನ್ನ ದೋಚಬೇಕೆಂದು ತಂಡ ನಿರ್ಧರಿಸಿತು. ಅಪಾರ್ಟ್ ಮೆಂಟ್ ಗೇಟ್ ದಾಟುತ್ತಿದ್ದ ಆ ಅಜ್ಜಿ ಹತ್ತಿರ ಜಾಫರ್ ಬಂದ. ‘ನಾನು ಅಪರಾಧ ನಿಗ್ರಹ ದಳದ ಅಧಿಕಾರಿ. ಈ ಪ್ರದೇಶ ಸುರಕ್ಷಿತವಾಗಿಲ್ಲ. ಹೀಗಾಗಿ ನಿಮ್ಮ ಚಿನ್ನದ ಬಳೆಗಳನ್ನು ನನ್ನ ಬಳಿ ಕೊಡಿ. ನಾನು ಜೋಪಾನವಾಗಿಟ್ಟುಕೊಂಡು ವಾಪಸ್ ಕೊಡುತ್ತೇನೆ’ ಅಂದ. ಮಿಗಿಲಾಗಿ ಆಕೆಯನ್ನು ನಂಬಿಸಲು ನಕಲಿ ಗುರುತಿನ ಚೀಟಿಯನ್ನೂ ತೋರಿಸಿದ.

ಅಜ್ಜಿಗೆ ದೇಹವೇನೋ ಹಣ್ಣಾಗಿತ್ತು. ಆದರೆ ಬುದ್ಧಿ ಮಾತ್ರ ಪಾದರಸದಂತೆ ಚುರುಕು. ಯಾಕೋ ಇವಯ್ಯ ನಾಟಕ ಆಡ್ತಿದ್ದಾನೆ ಅಂತ ಆಕೆಗೆ ಅನುಮಾನ ಬಂತು. ‘ನೋಡಪ್ಪಾ, ನನಗೆ ನಿನ್ನ ಭದ್ರತೆನೂ ಬೇಡ. ಬಳೆ ರಕ್ಷಿಸಿಕೊಡೋದು ಬೇಡ. ನನ್ನನ್ನು ನಾನು ರಕ್ಷಣೆ ಮಾಡಿಕೊಳ್ಳಬಲ್ಲೆ. ಸುಮ್ಮನೆ ನನ್ನ ಪಾಡಿಗೆ ನನ್ನನ್ನ ಬಿಟ್ಟು ನಿನ್ನ ದಾರಿ ನೀನು ನೋಡಿಕೋ’ ಎಂದಳು. ತನ್ನ ದಾರಿ ಹಿಡಿದಳು. ಆದರೂ ಬಿಡದ ಜಾಫರ್ ಆಕೆಯ ಬೆನ್ನತ್ತಿದ. ಮತ್ತೆ ಓಲೈಸಲು ಪ್ರಯತ್ನಿಸಿದ. ಆಕೆ ಬಿಲ್ ಕುಲ್ ಜಗ್ಗದೇ ಹೋದಾಗ ಬಲವಂತವಾಗಿ ಬಳೆ ಕಿತ್ತುಕೊಳ್ಳಲು ಮುಂದಾದ. ಅದೇ ಸಮಯದಲ್ಲಿ ಅನತಿ ದೂರದಲ್ಲೇ ಟ್ಯಾಕ್ಸಿಯಲ್ಲಿ ಮತ್ತಿಬ್ಬರು ಈ ಖದೀಮನಿಗೆ ಕಾಯುತ್ತಿರುವುದನ್ನು ಗಮನಿಸಿದ ಪುಷ್ಟಬೆನ್, ನಡೆಯಲು ಬಳಸುತ್ತಿದ್ದ ಊರುಗೋಲಿನಿಂದ ಜಾಫರ್ ಗೆ ಬಾರಿಸಲು ಶುರುಮಾಡಿದರು. ಆಗ ಗದ್ದಲ ಏರ್ಪಟ್ಟು ಸುತ್ತಮುತ್ತಲಿದ್ದವರ ಗಮನ ಸೆಳೆಯಿತು. ಅವರೆಲ್ಲ ಹತ್ತಿರ ಬರುತ್ತಿದ್ದಂತೆ ಜಾಫರ್ ಪರಾರಿಯಾಗಲು ಯತ್ನಿಸಿದ. ಆದರೆ ಅದಕ್ಕೂ ಮೊದಲೇ ಆತನ ಕುತ್ತಿಗೆಪಟ್ಟಿಗೆ ಕೈ ಹಾಕಿದ ಜನ, ಹಿಗ್ಗಾಮುಗ್ಗಾ ಥಳಿಸಿದರು. ಇವರ ಟೆಲಿಫೋನ್ ಕರೆಗೆ ಓಡೋಡಿ ಬಂದ ಪೊಲೀಸರಿಗೆ ಆತನನ್ನು ಒಪ್ಪಿಸಿದರು.

ಡಬಲ್ ಮಾಡ್ಕೊಡ್ತೀನಿ ಅನ್ನೋ ಮಾಂತ್ರಿಕರಿಗೆ ಬೆಲೆಬಾಳುವ ಆಭರಣಗಳನ್ನು ಒಪ್ಪಿಸಿಯೋ, ಕಳ್ಳರಿದ್ದಾರೆ ಪೇಪರ್ ಗೆ ಸುತ್ತಿಕೊಡ್ತೀವಿ ಅನ್ನೋ ದಾರಿಹೋಕ ಕಳ್ಳರಿಗೆ ಒಡವೆ ಬಿಚ್ಚಿಕೊಟ್ಟು, ನಂತರ ಲಬೋ, ಲಬೋ ಅಂತ ಬಾಯಿ ಬಡಿದುಕೊಳ್ಳುವ ಆಸೆಬುರುಕರು ನಿಜಕ್ಕೂ ಈ ಅಜ್ಜಿಯಿಂದ ಪಾಠ ಕಲಿಯಬೇಕು.

Leave a Reply