ಮನೆಯೆಂಬುದು ಗುಡಿಯಾದರೆ ಮಾತ್ರ ಮಕ್ಕಳು ದೇವರಂತಾದಾರು..

author-shamaಮೊದಲಿಂದಲೂ ಮಕ್ಕಳ ಬಗ್ಗೆ ವಿಶೇಷವಾದ ಮೋಹ ಮತ್ತು ಅವರ ಮನೋಲೋಕದ ಬಗ್ಗೆ ಕುತೂಹಲ ಇರಿಸಿಕೊಂಡ ನಾನು ಮಕ್ಕಳ ಒಡನಾಟ ಸಿಗುವ ಯಾವ ಕ್ಷಣವನ್ನೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಜತೆಗೆ ಮಕ್ಕಳ ಬಹಳಷ್ಟು ನಡವಳಿಕೆಗಳು ಅರಿವಿಲ್ಲದೇ ನನ್ನೊಳಗೆ ಸೇರಿಕೊಳ್ಳುತ್ತಿದ್ದವು. ಈ ಬೇಸಿಗೆ ರಜೆಯಲ್ಲಿ ಮತ್ತೆ ಮಕ್ಕಳೆಲ್ಲ ಮನೆಗೆ ಬಂದಿರುವ ಹೊತ್ತಿನಲ್ಲಿ ನನ್ನ ನೆನಪಿನ ತಿಜೋರಿಯಿಂದ ಒಂದಷ್ಟು ಘಟನೆಗಳನ್ನು ಹೆಕ್ಕಿ ನಿಮ್ಮ ಮುಂದಿಡಬೇಕೆನಿಸಿದೆ. ಎಲ್ಲವೂ ಪುಟ್ಟ ಮಕ್ಕಳಿಗೆ ಸಂಬಂಧಿಸಿದ ಘಟನೆಗಳೇ. ಇದು ಯಾವತ್ತಿನಂತಲ್ಲದ ಬೇರೆಯೇ ಪ್ರಸ್ತುತಿ. ಸುಮ್ಮನೇ ಓದಿಕೊಳ್ಳಿ. ಮನದೊಳಗೊಂದು ಮಂಥನವಾಗಲಿ.

ಘಟನೆ 1 : ಗೆಳತಿಯ ಎರಡು ಮಕ್ಕಳು ಮನೆಗೆ ಬಂದಿದ್ದರು. ತಂದಿಟ್ಟಿದ್ದ ಐಸ್ ಕ್ರೀಮಿತ್ತು. ಪುಟಾಣಿ ಕಪ್ ತುಂಬಿಸಿ ಕೊಟ್ಟರೆ “ಇನ್ನೂ ಹಾಕಿ, ಫುಲ್ ಹಾಕಿ, ಪಿಂಕ್ ಕಲರ್^ದು ಹಾಕಿ, ಹಸಿರಿಂದು ಹಾಕಿ” ಕೇಳುತ್ತಲೇ ಹೋದರು. “ಆವಾಗಷ್ಟೇ ಊಟ ಮುಗಿಸಿದ್ದ ಮಕ್ಕಳು ತಿನ್ನುವ ಖಾತ್ರಿ ನನಗಿರಲಿಲ್ಲ. “ಚೂರು ಹಾಕ್ತೀನಿ, ಮುಗಿದ ನಂತರ ಮತ್ತೆ ಹಾಕ್ತೀನಿ” ಎಷ್ಟು ಹೇಳಿದರೂ ಕೇಳದೆ ಹಾಕಿಸಿಕೊಂಡು ಕೊನೆಗೆ ಯಾವುದನ್ನೂ ಪೂರ್ತಿ ತಿನ್ನಲಾಗದೇ ಅರ್ಧಕ್ಕರ್ಧ ಹಾಗೇ ಬಿಟ್ಟಾಗ ನನ್ನ ಬಗ್ಗೇ ನಂಗೆ ಬೇಸರಾಗಿತ್ತು. ಸಂಜೆ ಕರ್ಕೊಂಡು ಹೋಗಲು ಬಂದಾಗ “ಯಾವಾಗ್ಲೂ ಹಂಗೇ ಕಣೇ, ಒಮ್ಮೊಮ್ಮೆ ಇವ್ರುಗಳು ಬಿಟ್ಟಿದ್ದೇ ಇನ್ನೆರಡು ಮಕ್ಕಳಿಗಾಗೋಷ್ಟು ಆಗತ್ತೆ” ಎಂದ ಅವರಮ್ಮನ ದನಿಯಲ್ಲಿ ಅದರ ಬಗ್ಗೆ ಎಳ್ಳಷ್ಟೂ ಪಶ್ಚಾತ್ತಾಪ ಕಾಣಿಸಿರಲಿಲ್ಲ. ಇವೆಲ್ಲವನ್ನೂ ನೋಡುತ್ತಿದ್ದ ನನ್ನ ಪುಟಾಣಿ ಅವತ್ತು ಮೊತ್ತ ಮೊದಲ ಬಾರಿಗೆ ರಾತ್ರಿ ಊಟದ ತಟ್ಟೆಯಲ್ಲಿ ಒಂದಷ್ಟನ್ನು ಹಾಗೇ ಬಿಟ್ಟು ಬೇಸಿನ್ ಗೆ ಹಾಕಿದ್ದಳು.

ಘಟನೆ 2 : ಸುಮಾರು ಎರಡು ತಿಂಗಳು ಹಿಂದಷ್ಟೇ ಪರಿಚಯವಾಗಿದ್ದ ಗೆಳೆಯರ ಕೂಸು ಐಶ್ವರ್ಯ. ನಾನೇ ಅವರ ಮನೆಗೆ ಹೋಗಿ ಕರೆತಂದಿದ್ದೆ. ಊರಿಂದ ಬಂದ ಅಮ್ಮ ನಮ್ಮೂರಿನ ಯಾವುದೋ ತಿಂಡಿ ಮಾಡಿದ್ದರು. ಅವಳಿಗೆ ಮುಷ್ಟಿ ತುಂಬ ಬಡಿಸಲು ತಂದಿದ್ದರು. ಇನ್ನೂ ತಟ್ಟೆಗೆ ಬೀಳೋ ಮೊದಲೇ “ಅಜ್ಜಿ ಅಷ್ಟೊಂದು ಬೇಡ, ನಾನು ಫಸ್ಟ್ ಟೈಮ್ ತಿಂತಿದೀನಿ ಇದು. ಒಂಚೂರು ಹಾಕಿ. ತಿಂದು ನೋಡ್ತೀನಿ. ಇಷ್ಟ ಆದರೆ ಮತ್ತೆ ಕೇಳ್ತೀನಿ.” ಅವಳನ್ನ ಬಿಟ್ಟು ಬರುವವರೆಗೂ ಒಂದೂ ಮಾತಿಲ್ಲದೇ ಗಮನಿಸಿದ್ದ ಮಗಳು ವಿಶೇಷವೆಂದರೆ ನಾ ಏನೆಂದರೆ ಏನೂ ವಿವರಿಸದೇ ಇದ್ದಾಗ್ಯೂ ಮನೆಗೆ ಬಂದ ನಂತರ ಹೇಳಿದ್ದಳು “ಐಶು ಅಕ್ಕ ಗುಡ್ ಗರ್ಲ್ ಅಲ್ವಾಮ್ಮ ?”

ಘಟನೆ 3 : ರಜೆಯ ಮಜಾ ಸವಿಯುತ್ತ ಏಳೆಂಟು ಮಕ್ಕಳು ಒಟ್ಟಿಗೇ ಪಾರ್ಕಿಂಗ್ ಜಾಗದಲ್ಲಿ ಆಡುತ್ತಿದ್ದರು. ಯಾರೋ ಒಬ್ಬರ ಮನೆಯಿಂದ ಸರಬರಾಜಾದ ತಿಂಡಿ ಎಲ್ಲರ ಪಕ್ಕದಲ್ಲೂ ಪೇಪರ್ ಪ್ಲೇಟ್ ನಲ್ಲಿ ಘಮ ಘಮಿಸುತ್ತಿತ್ತು. ನಾನು ಗಾಡಿ ಪಾರ್ಕ್ ಮಾಡಿ ಒಳಗೆ ಬರೋ ಹೊತ್ತಿಗೆ ಇನ್ನೊಬ್ಬ ಪುಟಾಣಿ ಬಂದಿದ್ದ. ಎಲ್ಲರೂ ತಂತಮ್ಮ ತಿಂಡಿ ಪ್ಲೇಟನ್ನು ಹಾಗೇ ಹಿಂದಕ್ಕೆ ಸರಿಸುತ್ತಿದ್ದರೆ ಚಿರಂತ್ ಮಾತ್ರ “ಬಾರೋ ಈಗಿನ್ನೂ ವಿಶಾಲ್ ಅಮ್ಮ ತಿಂಡಿ ಕೊಟ್ಟು ಹೋದ್ರು. ಕರೆಕ್ಟ್ ಟೈಮಿಗೆ ಬಂದಿದೀಯ. ಬಾ ಕೂತ್ಕೋ ಶೇರ್ ಮಾಡ್ಕೊಳ್ಳೋಣ” ಕರೆದು ಪಕ್ಕದಲ್ಲಿ ಕೂರಿಸಿಕೊಂಡು ತನ್ನ ತಟ್ಟೆಯನ್ನು ಇಬ್ಬರ ನಡುವೆ ಇರಿಸಿದ್ದ.

ಘಟನೆ 4 : ನಾನೂ ಮಕ್ಕಳೂ ಸಂಜೆ  ವಾಕಿಂಗ್  ಮುಗಿಸಿ ಬರುತ್ತಿದ್ದೆವು. ಪಕ್ಕದ ಮನೆಯ ಹುಡುಗಿ ದಾರಿಯಲ್ಲಿ ಸಿಕ್ಕಿದವಳು ಹರಟೆ ಹೊಡೆಯುತ್ತಾ ಜತೆಗೆ ಬಂದಳು. ಮಾತಾಡುತ್ತ ಒಳ ಬಂದ ನನಗೆ ಬೇಸ್ ಮೆಂಟ್ ಗೇಟ್ ಹಾಕುವುದು ಗಮನಕ್ಕೇ ಬಂದಿರಲಿಲ್ಲ. ಗುಂಡಿ ಅದುಮಿ ಲಿಫ್ಟ್ ಕಾರ್ ಕೆಳಗೆ ಬರೋವರೆಗೂ ಕಾಯುತ್ತಿದ್ದಾಗ ಇದ್ದಕ್ಕಿದ್ದಂತೆ ಓಡಿದ ಮಗಳು ಗೇಟ್ ಮುಚ್ಚಿ ಬಂದಿದ್ದಳು. “Sorry” ಅಂದವಳು ಕೆನ್ನೆ ತಟ್ಟಿ ಮನೆಗೆ ಬಂದೆ. ಆದರೆ ಮನಸ್ಸು ಯೋಚನೆಗೆ ಬಿದ್ದಿದ್ದಂತೂ ಸತ್ಯ ಮತ್ತು ಅವತ್ತಿನಿಂದ ಇವತ್ತಿನ ವೆರೆಗೂ ನಾನು ಆ ತಪ್ಪು ಮಾಡಿಲ್ಲ.

ಘಟನೆ 4 : ಮೊನ್ನೆ ಕಸಿನ್ ಮಗಳು ಸಂಜನಾ ಒಂದಿಡೀ ದಿನ ಮನೆಯಲ್ಲಿದ್ದಳು. ಮನೆಯಲ್ಲಿ ಅಮ್ಮ ಇದ್ದ ಕಾರಣ ಅಡಿಗೆ ಉಸ್ತುವಾರಿ ಅವರದೇ ಆಗಿತ್ತು. ನಾಲ್ಕು ಜನ ಮೊಮ್ಮಕ್ಕಳು ಬಂದ ಖುಷಿಗೋ ಏನೋ ಎಕ್ಸ್ಟ್ರಾ ತಿಂಡಿಗಳು ಸಿದ್ಧವಾಗಿತ್ತು. ರಾತ್ರಿ ಊಟ ಮುಗಿಸಿಯೇ ವಾಪಸ್ ಮನೆಗೆ ಹೊರಟಾಗ ಮಗು ತಿರುಗಿ ಬಂದು “ಅಜ್ಜೀ ಊಟ, ಪಲ್ಯ, ತಿಂಡಿ ಎಲ್ಲಾ ಸೂಪರ್. ನಂಗೆ ಭಾಳ ಇಷ್ಟ ಆಯ್ತು. ಥಾಂಕ್ಯೂ ಅಜ್ಜಿ.” ಅಂದಾಗ ಅಮ್ಮನ ಮುಖದಲ್ಲಿ ಸಂತೃಪ್ತ ನಗು. ಈ ವರೆಗೂ ಒಂದಿನ ಅಮ್ಮನಿಗೆ ಇಂತದ್ದೊಂದು ಕೃತಜ್ಞತೆ ಹೇಳುವ ಕೆಲಸ ಮಾಡಿರದ ನನಗೆ ಮಗಳು ಹೊಸ ಪಾಠ ಕಲಿಸಿದ್ದಳು.

ಘಟನೆ 4 : ಗೆಳತಿ ಮನೆಗೆ ಹೋದಾಗ ಅಲ್ಲಿದ್ದ ದೊಡ್ಡದೊಂದು ಟೆಡ್ಡಿ ಸಹಜವಾಗಿ ಮಗಳಿಗೆ ಇಷ್ಟವಾಗಿತ್ತು. ಬೆಳಗ್ಗಿಂದ ಸಂಜೆ ವರೆಗೂ ಹೋದಲ್ಲೆಲ್ಲ ಅದನ್ನ ಕರ್ಕೊಂಡೇ ಹೋಗುತ್ತಿದ್ದಳು. ಮನೆಗೆ ಹೊರಡುವಾಗ ಟೆಡ್ಡಿಯನ್ನ ಅನಿವಾರ್ಯವಾಗಿ ಒಳಗೆ ಇಟ್ಟು ಬರಬೇಕಿತ್ತು. ಅಷ್ಟರಲ್ಲಿ ಬಂದ ಅವಳ ಮಗ ನಂದನ್ “ಅವಳು ಅದನ್ನ ಮನೆಗೆ ತೊಗೊಂಡು ಹೋಗ್ಲಿ” ಅಂದಿದ್ದ. “ಅದು ನಿನ್ನ ಫೇವರಿಟ್ ಟೆಡ್ಡಿ ಅಲ್ವಾ ಪರವಾಗಿಲ್ವಾ” ಖಾತ್ರಿ ಪಡಿಸಿಕೊಳ್ಳಲು ಕೇಳಿದರೆ “ಇರಲಿ ಪರವಾಗಿಲ್ಲ, ಅವ್ಳಿಗೆ ಜಾಸ್ತಿ ಇಷ್ಟ ಆಗಿದೆ. ಚೆನ್ನಾಗಿ ಇಟ್ಕೊಳ್ಳೋಕೆ ಹೇಳ್ತೀನಿ” ಅಂದು ತಾ ತೋರಿಸಿದ ಪ್ರೀತಿಯ ಆಳವನ್ನೇ ಅರಿಯದವನ ಥರ ಮುಗ್ಧವಾಗಿ ಒಳ ಹೋದ. ನಾವು ಗೆಳತಿಯರು ಇನ್ನೊಬ್ಬಳಿಗೆ ಇಷ್ಟವಾದ ನಮ್ಮ ಬಟ್ಟೆ, ವಾಚು, ಪುಸ್ತಕ ಕೊಡು ಕೊಟ್ಟುಕೊಳ್ಳುವುದು ಮಾಮೂಲಾಗಿತ್ತು. ಆದರೆ ಮಕ್ಕಳಿಂದ ನಾವಿದನ್ನು ನಿರೀಕ್ಷೆಯೇ ಮಾಡಿಲ್ಲದ ಹೊತ್ತಿನಲ್ಲಿ ಎತ್ತರ ಬೆಳೆದು ನಿಂತಿದ್ದ ನನ್ನ ಪುಟಾಣಿ ರಾಜಕುಮಾರ.

ಮೊದಲೇ ಹೇಳಿದ ಹಾಗೆ ಇಲ್ಲಿನ ಯಾವ ಘಟನೆಗಳಿಗೂ ಮುನ್ನುಡಿಯಾಗಲೀ ವಿವರಣೆಯಾಗಲೀ ಬೇಕಿಲ್ಲ. ಮಕ್ಕಳು ಹೇಗೆ ನಮ್ಮ ಜೀನ್ಸ್ ನ ಮುಂದುವರಿಕೆಗಳೋ ಹಾಗೇ ಸಂಸ್ಕಾರ, ಸಂಸ್ಕೃತಿಗಳ ಹರಿಕಾರರು ಕೂಡ ಹೌದು. ಮಗುವೊಂದು ಬೆಳೆದು ‘ದೊಡ್ಡವ’ ಆಗುವ ಪ್ರಕ್ರಿಯೆಯಲ್ಲಿ ಏನೇನಾಗುತ್ತದೋ, ವಯಸ್ಸಿಗೆ ಬಂದ ನಂತರ ಏನಾಗಬಹುದೋ ಎಲ್ಲದರ ಹಿಂದಿರುವುದು ಮನೆಯೆಂಬ ಮೊದಲ ಪ್ರಪಂಚ ಅನ್ನೋದು ಮಾತ್ರ ಅಂದಿಗೂ, ಇಂದಿಗೂ ಮತ್ತು ಎಂದೆಂಗೂ ಪರಮ ಸತ್ಯ.

2 COMMENTS

  1. “ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ, ಗುಣವಿರುವ ಮನುಜರೆಲ್ಲಾ ಮಕ್ಕಳಂತೆ” ಈ ಹಾಡನ್ನು ಗುನುಗುವಂತಾಯಿತು. ಹೇಗೆ ಪ್ರತಿಯೊಂದು ನಡೆ ನುಡಿಯೋ ಬೆಳೆಯುವ ಮನಸ್ಸುಗಳ ಮೇಲೆ ಅಚ್ಚೊದಿಂತ ಪ್ರಭಾವ ಬೀರುತ್ತದೆ ಎಂಬುದನ್ನು ತಾವು ಹೇಳಿರುವ ಘಟನೆಗಳು ಓದುಗರಾದ ನಮ್ಮ ಮೇಲೂ ಪ್ರಭಾವ ಬೀರುವಂತಿವೆ.

    ತಾವು ಚಿಂತಿಸಲಿಕ್ಕೆ ತೆಗೆದುಕೊಳ್ಳುವ ವಿಚಾರಗಳು ಮತ್ತೊಮ್ಮೆ ಶ್ಲಾಘನೀಯವಾಗಿದೆ.

  2. ನೀವು ಹೇಳುವುದು ನಿಜ. ನಾವು ಯಾವಾಗಲೂ ಅನುಕರಣೀಯರಾಗಿರಬೇಕು

Leave a Reply