ಮ್ಯಾಚ್ ಫಿಕ್ಸಿಂಗ್ ನಲ್ಲಿ ಅಜರ್ ಕಳಕೊಂಡ ಬಜಾರ್ ಅವರ ಸಿನಿಮಾದಲ್ಲಾದರೂ ವಾಪಸ್ಸು ಬಂದೀತೇ..?

ಡಿಜಿಟಲ್ ಕನ್ನಡ ಟೀಮ್

ಮೊಹಮದ್ ಅಜರುದ್ದೀನ್, ಭಾರತ ಕ್ರಿಕೆಟ್ ಪ್ರಿಯರ ಮನಸಲ್ಲಿ ಅಚ್ಚಳಿಯದೇ ಉಳಿದಿರೋ ಹೆಸರು. ಮೈದಾನದ ಒಳಗೆ ಮತ್ತು ಹೊರಗೆ ಎರಡೂ ಕಡೆ ಎಲ್ಲ ರೀತಿಯ ಆಟಗಳಿಗೂ ಇವರು ಫೇಮಸ್. ಟೆಸ್ಟ್ ಕ್ರಿಕೆಟ್ ಆರಂಭದಲ್ಲೇ ಸತತ ಮೂರು ಶತಕ ಬಾರಿಸಿ ಎಲ್ಲರ ಹುಬ್ಬೇರಿಸಿದ್ದ ಅಜರ್ ಅವರ ಬ್ಯಾಟಿಂಗ್ ಶೈಲಿ ಕ್ರಿಕೆಟ್ ಜಗತ್ತಿನಾದ್ಯಂತ ಅಸಂಖ್ಯ ಅಭಿಮಾನಿ ಬಳಗವನ್ನು ಸೃಷ್ಟಿ ಮಾಡಿತ್ತು.

ಮೈದಾನದ ಒಳಗೆ ಉತ್ತಮ ಪ್ರದರ್ಶನ ಕೊಟ್ಟಷ್ಟೇ ಸಲೀಸಾಗಿ ಮೋಸದಾಟದ ವಿವಾದದಲ್ಲಿ ಆಜರ್ ಸಿಕ್ಕಾಕಿಕೊಂಡಿದ್ದರು. ಮೈದಾನದ ಹೊರಗೂ ಇವರು ‘ಅದ್ಭುತ ಕಲಾವಿದ’ರು. ಕಲರ್, ಕಲರ್ ಫುಲ್ ಜೀವನ. ಬೆಂಗಳೂರಲ್ಲಿ ನಟಿ ಸಂಗೀತಾ ಬಿಜಲಾನಿ ಜತೆ ವಾಕಿಂಗ್ ಹೋಗುವಾಗ ಚಿತ್ರ ಸೆರೆಹಿಡಿದ ಪ್ರೆಸ್ ಫೋಟೋಗ್ರಾಫರ್ ಮೇಲೆ ಕೈಎತ್ತಿ, ನಂತರ ಅದು ರಾದ್ಧಾಂತವಾದಾಗ ತಲೆ ತಗ್ಗಿಸಿದ್ದರು. ಹೀಗೆಲ್ಲ ಸದ್ದುಗದ್ದಲದ ಬದುಕಿನ ಏರಿಳಿತ ಕಂಡ ಇವರ ಮೇಲೆ ಬಾಲಿವುಡ್ ನಲ್ಲಿ ‘ಆಜರ್’ ಎಂಬ ಚಲನಚಿತ್ರ ನಿರ್ಮಾಣವಾಗಿದ್ದು, ನಾಳೆ ತೆರೆಗೆ ಬರುತ್ತಿದೆ. ಮ್ಯಾಚ್ ಫಿಕ್ಸಿಂಗ್ ಪ್ರಕರಣದ ಆರೋಪ ಸಾಬೀತಾಗಿ ಶಿಕ್ಷೆ ಅನುಭವಿಸಿದ ಅಜರುದ್ದೀನ್ ಅಲ್ಲಿ ಕಳೆದುಕೊಂಡಿದ್ದ ಮಾನ ಈ ಚಿತ್ರದ ಮೂಲಕ ಮರಳಿ ಬರುತ್ತದೆಯೇ ನೋಡಬೇಕು.

ಇಲ್ಲಿ ಮತ್ತೊಂದು ವಿಷಯ. ಆಜರ್ ಅವರ ಬದುಕಿನಂತೆ ಈ ಚಿತ್ರ ಕೂಡ ವಿವಾದಕ್ಕೆ ಹೊರತಾಗಿಲ್ಲ. ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಅಜರುದ್ದೀನ್ ಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂಬಂತೆ ಸಿನಿಮಾದಲ್ಲಿ ಬಿಂಬಿಸಿರುವುದೂ ಸಾಕಷ್ಟು ವಿವಾದ ಸೃಷ್ಟಿಸಿದೆ. ವಿಚಾರಣೆಯಲ್ಲಿ ಸ್ವತಃ ಅಜರುದ್ದೀನ್ ಅವರೇ ತಪ್ಪೊಪ್ಪಿಕೊಂಡಿದ್ದಾರೆ. ಹೀಗಿರುವಾಗ ಚಿತ್ರದಲ್ಲಿ ಅವರಿಗೆ ಕ್ಲೀನ್ ಚಿಟ್ ನೀಡೋ ಪ್ರಯತ್ನ ಸರಿಯಲ್ಲ ಎಂದು ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐನ ನಿವೃತ್ತ ಎಸ್ಪಿ ಎಂ.ಎ ಗಣಪತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

1984 ರಿಂದ 2000 ವರೆಗೆ ಸುಮಾರು ಒಂದೂವರೆ ದಶಕಗಳ ಅಜರುದ್ದೀನ್ ಕ್ರಿಕೆಟ್ ವೃತ್ತಿ ಬದುಕು ಮ್ಯಾಚ್ ಫಿಕ್ಸಿಂಗ್ ನಿಂದ ಅಂತ್ಯವಾಗಿದ್ದು, ಭಾರತ ಕ್ರಿಕೆಟ್ ಅಭಿಮಾನಿಗಳಿಗೆ ಅದನ್ನು ಈಗಲೂ ಅರಗಿಸಿಕೊಳ್ಳುವುದು ಕಷ್ಟವಾಗಿದೆ. ಅಜರುದ್ದೀನ್ ಜೀವನಗಾಥೆಯ ನಾನಾ ಆಯಾಮಗಳ ಮೇಲೆ ಬೆಳಕು ಚೆಲ್ಲುವ ಯತ್ನ ಈ ಚಿತ್ರದಲ್ಲಿದೆ. ಬಾಲಿವುಡ್ ಕಿಸ್ಸರ್ ಬಾಯ್ ಇಮ್ರಾನ್ ಹಶ್ಮಿ ಅಜರ್ ಪಾತ್ರ ನಿರ್ವಹಿಸಿದ್ದು, ಪತ್ನಿಯರ ಪಾತ್ರವನ್ನು ಪ್ರಾಚಿ ದೇಸಾಯಿ ಮತ್ತು ನರ್ಗೀಸ್ ಫಖ್ರಿ ನಿಭಾಯಿಸಿದ್ದಾರೆ.

ಮೈದಾನದಲ್ಲಿ ಅಜರುದ್ದೀನ್ ಆಟ ಎಂಜಾಯ್ ಮಾಡಿದ್ದ ಅಭಿಮಾನಿಗಳು ತೆರೆ ಮೇಲೆ ಅಜರ್ ಆಗಿ ಬರುತ್ತಿರುವ ಇಮ್ರಾನ್ ಹಶ್ಮಿ ಆಟವನ್ನು ಹೇಗೆ ಸ್ವೀಕರಿಸುವರೋ ನೋಡಬೇಕು. ಈ ಚಿತ್ರದ ಟ್ರೇಲರ್ ಇಲ್ಲಿದೆ:

Leave a Reply