ಲೋಕಸಭೆ ಸುಗಮ ಕಲಾಪಕ್ಕೆ ಪ್ರಶಂಸೆ, ಆರ್ ಬಿಐ ಗವರ್ನರ್ ಆಗಲು ರಾಜನ್ ಅನರ್ಹ ಅಂದ್ರು ಸುಬ್ರಮಣಿಯನ್ ಸ್ವಾಮಿ, ಬೇರೆ ರಾಜ್ಯಗಳ ಚುನಾವಣೆಗೆ ಕರ್ನಾಟಕದ ಸಂಪತ್ತು ಬಳಕೆಯಂತೆ

ಡಿಜಿಟಲ್ ಕನ್ನಡ ಟೀಮ್

ಕಳೆದ ಎರಡು ವರ್ಷಗಳ ನರೇಂದ್ರ ಮೋದಿ ಸರ್ಕಾರದಲ್ಲಿ ಇದೇ ಮೊದಲ ಬಾರಿಗೆ ಲೋಕಸಭೆ ಕಲಾಪ ಯಾವುದೇ ಅಡೆತಡೆ ಇಲ್ಲದೇ ಸುಗಮವಾಗಿ ನಡೆದಿದೆ. ರಾಜ್ಯಸಭೆ ಕಲಾಪ ನಿಗದಿತ ವೇಳಾಪಟ್ಟಿಯಲ್ಲಿ ಶೇ.85ರಷ್ಟು ನಡೆದಿದೆ.

ಏ.25ರಿಂದ ಆರಂಭವಾದ ಲೋಕಸಭೆ ಅಧಿವೇಶನದಲ್ಲಿ 92 ಗಂಟೆ 21 ನಿಮಿಷಗಳ ಕಾಲ ಕಲಾಪ ನಡೆದಿದೆ. ನಿನ್ನೆ ಸಮಾರೋಪ ಭಾಷಣ ಮಾಡಿದ ಸ್ಪೀಕರ್ ಸುಮಿತ್ರಾ ಮಹಾಜನ್, ‘ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಲೋಕಸಭೆ ಕಲಾಪ ಗದ್ದಲದಿಂದ ಒಂದೇ ಒಂದು ಬಾರಿಯೂ ಮುಂದೂಡಿಕೆ ಆಗಲಿಲ್ಲ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ’ ಎಂದರು.

ರಿಸರ್ವ್ ಬ್ಯಾಂಕ್ ಗವರ್ನರ್ ಸ್ಥಾನಕ್ಕೆ ರಾಜನ್ ಅನರ್ಹ: ಸುಬ್ರಮಣಿಯನ್ ಸ್ವಾಮಿ

ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಸ್ಥಾನಕ್ಕೆ ರಘುರಾಮ್ ರಾಜನ್ ಅನರ್ಹ. ಅವರನ್ನು ಮತ್ತೆ ಚಿಕಾಗೊಗೆ ವಾಪಸ್ ಕಳುಹಿಸಬೇಕು ಎಂದು ರಾಜ್ಯಸಭೆಯ ಬಿಜೆಪಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.

ಹಣದುಬ್ಬರ ಇಳಿಕೆ ಮಾಡುವಲ್ಲಿ ಆರ್ ಬಿಐ ನೀತಿ ವಿಫಲವಾಗಿದೆ. ಬಡ್ಡಿದರ ಇಳಿಕೆ ವಿಷಯದಲ್ಲಿ ರಾಜನ್ ಬಿಗಿ ನಿಲುವೆ ಇದಕ್ಕೆ ಕಾರಣ. ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಳಕ್ಕೂ ಇದು ದಾರಿಮಾಡಿಕೊಟ್ಟಿದೆ ಎಂದರು.

ರಾಜ್ಯದ ಸಂಪತ್ತು ಬೇರೆ ರಾಜ್ಯಗಳ ಚುನಾವಣೆಗೆ ಬಳಕೆ: ಹೆಚ್ಡಿಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಸಂಪತ್ತು ಕೊಳ್ಳೆ ಹೊಡೆದು ಬೇರೆ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಾರ ಕಾರ್ಯಕ್ಕೆ ನೀಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಕೇರಳ ಸೇರಿದಂತೆ ನಾನಾ ರಾಜ್ಯಗಳ ವಿಧಾನಸಭೆ ಚುನಾವಣೆಗೆ ರಾಜ್ಯದ ಸಂಪತ್ತು ಬಳಕೆಯಾಗುತ್ತಿದೆ. ಇಡೀ ದೇಶದಲ್ಲಿ ಕರ್ನಾಟಕ ಕಾಂಗ್ರೆಸ್ ಗೆ ಅಧಿಕಾರವಿರುವ ದೊಡ್ಡ ರಾಜ್ಯ. ದೆಹಲಿ ವರಿಷ್ಠರು ರಾಷ್ಟ್ರದಲ್ಲಿ ಎಲ್ಲಿಯೇ ಚುನಾವಣೆ ನಡೆದರೂ ಇಲ್ಲಿನ ಸಂಪತ್ತಿಗೆ ಕೈ ಹಾಕುತ್ತಿದ್ದಾರೆ.

ಸಿದ್ದರಾಮಯ್ಯ ತಮ್ಮ ಕುರ್ಚಿ ಗಟ್ಟಿ ಮಾಡಿಕೊಳ್ಳಲು ವರಿಷ್ಠರ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ. ಇದಕ್ಕಾಗಿಯೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ 500 ಎಕರೆ ಭೂಮಿಯನ್ನು ರೀಡೂ ಮೂಲಕ ದಲ್ಲಾಳಿಗಳಿಗೆ ಬಿಟ್ಟುಕೊಟ್ಟಿದ್ದಾರೆ. ಸಂಪುಟದ ಅನುಮತಿ ಪಡೆಯದೇ ಲೋಕೋಪಯೋಗಿ ಇಲಾಖೆ 3500 ಕೋಟಿ ರೂ. ಕಾಮಗಾರಿಯನ್ನು 126 ತುಂಡು ಗುತ್ತಿಗೆಗಳಾಗಿ ವಿಂಗಡಿಸಲಾಗಿದೆ. ಜತೆಗೆ ಮೂಲ ದರಕ್ಕಿಂತ ಶೇ 10 ರಿಂದ 15 ರಷ್ಟು ಹೆಚ್ಚು ದರ ನಿಗದಿ ಮಾಡಲಾಗಿದೆ. ಇದು ಬರಿ ಸ್ಯಾಂಪಲ್. ಎಲ್ಲಾ ಇಲಾಖೆಗಳಲ್ಲೂ ಈ ರೀತಿಯ ಲೂಟಿ ನಿರಂತರವಾಗಿ ನಡೆಯುತ್ತಿದೆ. ಅದರಲ್ಲೂ ಬಿಡಿಎಯನ್ನು ಇದೇ ಉದ್ದೇಶಕ್ಕಾಗಿ ಸೀಮಿತಗೊಳಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ಫಲಾನುಭವಿಗಳ ಜತೆ ಸಿಎಂ ಸಂವಾದ

ಆಡಳಿತಕ್ಕೆ ಬಂದು ಮೂರು ವರ್ಷ ಪೂರೈಸಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ನಾನಾ ಯೋಜನೆಗಳ ಫಲಾನುಭವಿಗಳ ಜೊತೆ ‘ಜನಮನ’ ಕಾರ್ಯಕ್ರಮದಲ್ಲಿ ನೇರ ಸಂವಾದ ನಡೆಸಲಿದ್ದಾರೆ.

ಸಂವಾದದಲ್ಲಿ ಸಂಪುಟದ ಎಲ್ಲಾ ಸದಸ್ಯರು ಹಾಜರಿದ್ದು, ಜನರ ಮಾತು ಆಲಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ. ಶುಕ್ರವಾರ ಸಂಜೆ ನಾಲ್ಕು ಗಂಟೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದಲ್ಲಿ ಸರ್ಕಾರದ ಸಾಧನೆ ಪ್ರತಿಬಿಂಬಿಸಲು ನಡೆಯಲಿರುವ ಈ ಕಾರ್ಯಕ್ರಮಕ್ಕೆ ಎಲ್ಲ ಸಚಿವರ ಹಾಜರಿ ಖಡ್ಡಾಯ. ವಿವಿಧ ಯೋಜನೆಗಳ ಫಲಾನುಭವಿಗಳನ್ನು ಕರೆತರುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದ್ದು, ಫಲಾನುಭವಿಗಳು ತಮಗಾದ ಅನುಕೂಲಗಳ ಬಗ್ಗೆ ವಿವರಿಸಲಿದ್ದಾರೆ.

ರಿಂಗ್ ರೋಡ್ ಅಭಿವೃದ್ಧಿಗೆ ಅನುದಾನ ನೀಡಲು ಕೇಂದ್ರಕ್ಕೆ ಮನವಿ

ಬೆಂಗಳೂರಿನ ಹೊರ ವಲಯದ ಎಂಟು ಉಪನಗರಗಳನ್ನು ಸಂಪರ್ಕಿಸುವ 340 ಕಿ.ಮೀ. ಉದ್ದದ ಹೊರ ವರ್ತುಲ ರಸ್ತೆ ಅಭಿವೃದ್ಧಿ ಪಡಿಸಲು ಅನುದಾನ ನೀಡುವಂತೆ ರಾಜ್ಯ ಸರ್ಕಾರ, ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರು ನವದೆಹಲಿಯಲ್ಲಿ ಗುರುವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿದರು. ಬೆಂಗಳೂರಿನ ಹೊರ ವಲಯದ ರಾಮನಗರ, ಕನಕಪುರ, ನೆಲಮಂಗಲ, ಮಾಗಡಿ, ಆನೇಕಲ್, ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರವನ್ನು ಸಂಪರ್ಕಿಸುವ ಉಪನಗರ ಹೊರವರ್ತುಲ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸುವಂತೆ ಮನವಿ ಮಾಡಿದ್ದಾರೆ. 340 ಕಿ.ಮೀ. ಉದ್ದದ ಪೈಕಿ ಈಗಾಗಲೇ 110 ಕಿ.ಮೀ. ರಸ್ತೆ ಅಭಿವೃದ್ಧಿಯಾಗಿದೆ. ಉಳಿದ 230 ಕಿ.ಮೀ. ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

ಒಲಿಂಪಿಕ್ಸ್ ರಾಯಭಾರಿಯಾಗಲು ಎ.ಆರ್ ರೆಹಮಾನ್ ಒಪ್ಪಿಗೆ

ಮುಂಬರುವ ಪ್ರತಿಷ್ಠಿತ ರಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ರಾಯಭಾರಿಯಾಗಲು ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಗುರುವಾರ ಒಪ್ಪಿಗೆ ನೀಡಿದ್ದಾರೆ. ಕ್ರೀಡಾಕೂಟದಲ್ಲಿ ಅವರು ಭಾರತದ ನಾಲ್ಕನೇ ಭಾರತದ ರಾಯಭಾರಿಯಾಗಿದ್ದಾರೆ. ಈ ಮುನ್ನ ಬಾಲಿವುಡ್ ನಟ ಸಲ್ಮಾನ್ ಖಾನ್, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಒಲಿಂಪಿಕ್ಸ್ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ ತಮ್ಮ ಒಪ್ಪಿಗೆ ನೀಡಿದ್ದರು.

Leave a Reply