ಎಡಪಂಥೀಯ ಸಂಘಟನೆಯಿಂದ ಹೊರಬಂದ ವಿದ್ಯಾರ್ಥಿ ನಾಯಕ ದೂರಿದ್ದು ಅವಕಾಶವಾದಿ ರಾಜಕಾರಣವನ್ನು

ಡಿಜಿಟಲ್ ಕನ್ನಡ ಟೀಮ್

ಹೈದರಾಬಾದ್ ಸೆಂಟ್ರಲ್ ಯುನಿವರ್ಸಿಟಿಯಲ್ಲಿ ರೋಹಿತ್ ವೆಮುಲ ಸಾವಿಗೆ ನ್ಯಾಯ ದೊರಕಿಲ್ಲ ಎಂದು ಪ್ರತಿಭಟಿಸುತ್ತಿದ್ದ ಗುಂಪಿನಲ್ಲಿದ್ದ ರಾಜ್ ಕುಮಾರ್ ಸಾಹು ಎಂಬ ವಿದ್ಯಾರ್ಥಿ ಅಲ್ಲಿಂದ ಹೊರಬಂದು, ಎಡಪಂಥೀಯ ವಿದ್ಯಾರ್ಥಿ ಸಂಘಟನೆಯಾದ ಎಸ್ ಎಫ್ ಐಗೆ ರಾಜೀನಾಮೆ ನೀಡಿದ್ದಾರೆ.

‘ನಾಲ್ಕು ತಿಂಗಳ ಪ್ರತಿಭಟನೆ ನಂತರವೂ ರೋಹಿತ್ ಸಾವಿಗೆ ನ್ಯಾಯ ದೊರಕಿಸಲಾಗಲಿಲ್ಲ. ಇಡೀ ಪ್ರತಿಭಟನೆ ಕಾಂಗ್ರೆಸ್ ಮತ್ತು ಎಡಪಕ್ಷಗಳಿಂದ ಹಣಸಹಾಯವನ್ನು ಪಡೆಯಿತು. ಅವು ಅವಕಾಶವಾದಿ ಬಲಗಳಷ್ಟೆ. ಎಸ್ ಎಫ್ ಐ ವಿದ್ಯಾರ್ಥಿ ಸಂಘಟನೆ ಯಾವ ತತ್ವದ ಮೇಲೂ ನಿಂತಿಲ್ಲ. ಬದಲಿಗೆ ಅವಕಾಶವಾದಿತನವೇ ನೆಲೆಗೊಂಡಿದೆ’ ಎಂದೆಲ್ಲ ಆರೋಪಿಸಿದ್ದಾರೆ. ರಾಜ್ ಕುಮಾರ್ ಈ ಆರೋಪವು ರೋಹಿತ್ ವೆಮುಲ ಆತ್ಮಹತ್ಯೆ ಪತ್ರದ ಹೊಡೆದುಹಾಕಿದ
ಸಾಲುಗಳನ್ನು ನೆನಪಿಸುತ್ತದೆ. ಅದರಲ್ಲಿ ವಿದ್ಯಾರ್ಥಿ ಸಂಘಟನೆಯ ಕುರಿತು ಭ್ರಮನಿರಸನ ಹೊಂದಿದ್ದಾಗಿ ಬರೆದಿದ್ದು ಗಮನಾರ್ಹ.

ಇನ್ನು, ರಾಜಕೀಯ ಪಕ್ಷಗಳು ಈ ಸಾವನ್ನು ತಮ್ಮ ಲಾಭಕ್ಕೆ ಬಳಸಿಕೊಂಡಿದ್ದು ಸ್ಪಷ್ಟವೇ. ನಿರ್ಭಯಾ ಪ್ರಕರಣದಷ್ಟೇ ಕ್ರೂರವಾಗಿ ಕೇರಳದಲ್ಲಿ ಜಿಶಾ ಎಂಬ ದಲಿತ ಯುವತಿ ಅತ್ಯಾಚಾರ ಮತ್ತು ಹತ್ಯೆ ಆದಾಗ ರಾಹುಲ್ ಗಾಂಧಿಯವರಿಗೆ ಅಲ್ಲಿ ತೆರಳಲು ಪುರಸೊತ್ತಾಗಲಿಲ್ಲ. ಏಕೆಂದರೆ ಅದು ಕಾಂಗ್ರೆಸ್ ಆಡಳಿತದ ಪ್ರದೇಶ. ಹೊಸಹೀರೋ ಕನ್ಹಯ್ಯ, ಜಗತ್ತಿನ ಅಪಸವ್ಯಕ್ಕೆಲ್ಲ ಬಿಜೆಪಿ ಕಾರಣ ಅಂತ ಬೊಬ್ಬಿರಿಯುವ ಸಂದರ್ಭದಲ್ಲಿ, ಅಗಸ್ಟಾ ವೆಸ್ಟ್ಲ್ಯಾಂಡ್ ಬಗ್ಗೆ ಕೇಳಿದಾಗ- ತಾನು ಆ ಬಗ್ಗೆ ಮಾತಾಡುವ ಅಧಿಕಾರ ಹೊಂದಿಲ್ಲ ಎನ್ನುತ್ತಾನೆ.

ರೋಹಿತ್ ವೆಮುಲ ಕೊನೆಪತ್ರ ಓದಿದರೆ, ಆತನ ಸಾವಿಗೆ ಸ್ವಂತದ ಸಿದ್ಧಾಂತವಾದಿಗಳ ಕುರಿತಿದ್ದ ಭ್ರಮನಿರಸನವೇ ಕಾರಣ ಎಂಬುದು ಸ್ಪಷ್ಟವಾಗಿದ್ದಾಗಲೂ ಎಡಪಕ್ಷಗಳು ರಾಜಕೀಯ ತಾರಕಕ್ಕೇರಿಸಿದ್ದವು. ಈಗ ವೆಮುಲ ಧ್ವನಿಯನ್ನೇ ಅನುಸರಿಸಿ ಎಡಪಂಥೀಯ ಪಾಳೆಯದಲ್ಲಿ ಮತ್ತಷ್ಟು ಸ್ವರಗಳು ಕೇಳಿಬರುತ್ತಿರುವುದು ವಿಶೇಷ.

Leave a Reply